ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ: ನೆಲದ ಸವಾಲುಗಳಿಗೆ ಉತ್ತರವಾಗಲಿ

Last Updated 20 ಜನವರಿ 2011, 19:30 IST
ಅಕ್ಷರ ಗಾತ್ರ

ಭಾಷೆ, ಸಾಹಿತ್ಯ, ಸಂಪ್ರದಾಯ, ಪರಂಪರೆಯ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸಮ್ಮೇಳನದಂತಹ ಜಾತ್ರೆ, ಹಬ್ಬಗಳು ಸರ್ಕಾರದ ನೇತೃತ್ವದಲ್ಲಿ ನಡೆಯುತ್ತವೆ ಎಂದಾಗ ಇದನ್ನೇ ಹೊಂಚುಹಾಕಿ ಕಾಯುವ ಅವಕಾಶವಾದಿಗಳು ಜಾಸ್ತಿಯಾಗುತ್ತಾರೆ. ಸರ್ಕಾರವಾದರೂ ಇಂಥವರನ್ನೇ ಅವಲಂಬಿಸಿರುತ್ತದೆ. ಈ ಎರಡೂ ಕಡೆಯ ಅವಕಾಶವಾದಿಗಳಿಂದ ಆಗುವ ಅನಾಹುತ ಎದುರಿಸಬೇಕಾದದ್ದು ಉಳಿದವರ ಪಾಲಿಗೆ ಸೇರಿದ್ದು. ಮಾರ್ಚ್‌ನಲ್ಲಿ ಬೆಳಗಾವಿಯಲ್ಲಿ  ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದಲ್ಲಿಯೂ ಇಂಥ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ.

ಭಾಷೆ, ಸಾಹಿತ್ಯ, ಸಂಸ್ಕೃತಿಯ ಹೆಸರಿನಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು ಜಾತ್ರೆ, ಹಬ್ಬದ ವಾತಾವರಣದ ಗುಂಗಿನಲ್ಲಿರುವುದರಿಂದ ಸಂಪ್ರದಾಯ, ಪರಂಪರೆ, ಇತಿಹಾಸದ ವೈಭವೀಕರಣವೇ ಪ್ರಾಮುಖ್ಯತೆ ಪಡೆದುಕೊಂಡಿರುತ್ತದೆ. ಇಲ್ಲಿ ನೆಲದ ಸಂಸ್ಕೃತಿಯನ್ನು ಹೊತ್ತು ಒಂದು ಹೊತ್ತಿನ ಅನ್ನಕ್ಕೆ ಗತಿಯಿಲ್ಲದೆ ತಿರುಗುವ ಬೆವರು ಸಂಸ್ಕೃತಿಯ ಮನುಷ್ಯರ ಬಗ್ಗೆ ಇಂಥ ಹಬ್ಬಗಳಲ್ಲಿ ಯೋಚನೆಯೇ ಬರುವುದಿಲ್ಲ. ಬಂದರೂ ಅದು ಮೊಸಳೆ ಕಣ್ಣೀರು.

ನೆಲದ ಸಂಸ್ಕೃತಿಯನ್ನು ಕಟ್ಟಿಕೊಂಡು ತಿರುಗುವವರ ಬದುಕಿನ ಅವಕಾಶದ ಬಗ್ಗೆ ಯೋಚಿಸಲು ಮುಂದಾದಾಗ ಮಾತ್ರ ಆಚರಿಸುವ ಹಬ್ಬಕ್ಕೆ, ಜಾತ್ರೆಗಳಿಗೆ ಅರ್ಥ ಲಭಿಸುತ್ತದೆ. ಕನ್ನಡದ ಬದುಕನ್ನು, ನೆಲದ ಸೊಬಗನ್ನು ಗಡಿ ಜಿಲ್ಲೆ ಬೆಳಗಾವಿ ಮೂಲಕ ವಿಶ್ವಕ್ಕೆ ಸಾರಲು ಹೊರಟಿರುವ ವಿಶ್ವಕನ್ನಡ ಸಮ್ಮೇಳನ ಕನ್ನಡ ಭಾಷೆ- ಸಂಸ್ಕೃತಿಯ ಪರಂಪರೆಯ ವೈಭವೀಕರಣಕ್ಕೆ ಮಾತ್ರ ಸೀಮಿತಗೊಳ್ಳಬಾರದು.

ಕಳೆದ ಎರಡು ದಶಕಗಳಿಂದ ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ನೂತನ ಬಂಡವಾಳಶಾಹಿ ಜಾಗತಿಕ ನೀತಿಗಳಿಂದಾಗಿ ಪ್ರಾದೇಶಿಕ ಭಾಷೆ - ಸಂಸ್ಕೃತಿಗಳು ತಲ್ಲಣಗೊಂಡಿರುವಂತೆ ಕನ್ನಡ ಭಾಷೆ - ಸಂಸ್ಕೃತಿಯು ಇದರಿಂದ ಹೊರತಾಗಿ ಉಳಿದಿಲ್ಲ. ಮೊದಲಿನಿಂದಲೂ ಅನ್ಯಭಾಷೆಯ ದಾಳಿಗಳನ್ನು ಎದುರಿಸುತ್ತ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತ ಬಂದಿರುವ ‘ಕನ್ನಡ’ ಇಂದು ಜಾಗತಿಕ ಮಟ್ಟದಲ್ಲಿ ಸೆಣಸಾಡಿ ತನ್ನ ನೆಲೆಯನ್ನು ಉಳಿಸಿಕೊಳ್ಳಬೇಕಾದ ಸಾಹಸದಲ್ಲಿ ತೊಡಗಿದೆ.

ಇದಕ್ಕೆ ಸ್ಥಳೀಯ ರಾಜಕೀಯ ಹಿತಾಸಕ್ತಿಗಳು, ಪಟ್ಟಭದ್ರ ಶಕ್ತಿಗಳು ಕೇವಲ ಬಾಯಿಮಾತಿನಲ್ಲಿ ಕನ್ನಡದ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡುತ್ತ ಎದೆಯಲ್ಲಿ ಚೂರಿ ಇರಿಯುವ ಕೃತ್ಯ ಬಹಿರಂಗವಾಗಿಯೇ ನಡೆಸಿರುವುದು ಗೊತ್ತಿರುವ ಸಂಗತಿ. ಕನ್ನಡ ಭಾಷೆ, ಸಂಸ್ಕೃತಿಯ ಇತಿಹಾಸವನ್ನು ಹಾಡಿಹೊಗಳುವ ಈ ಹಿತಾಸಕ್ತಿಗಳಿಗೆ ಕನ್ನಡವನ್ನು ಕಡ್ಡಾಯವಾಗಿ ಆಡಳಿತ ಭಾಷೆಯನ್ನಾಗಿಸುವ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಆದ್ಯತೆ ಒದಗಿಸುವ, ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ಕನ್ನಡ ನೆಲದಲ್ಲಿ ನೆಲೆ ಒದಗಿಸುವ ಕಾಳಜಿಗಳಿಗೆ ಇದುವರೆಗಿನ ಯಾವ ಸರ್ಕಾರವೂ ರಚನಾತ್ಮವಾಗಿ ಸ್ಪಂದಿಸಿಯೇ ಇಲ್ಲ.

ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಕನ್ನಡ ಬದುಕಿಗೆ ಇಚ್ಛಾಶಕ್ತಿ ತೋರ್ಪಡಿಸದ ಸರ್ಕಾರಗಳು ಕನ್ನಡ ತೇರು ಎಳೆಯುವುದಕ್ಕೆ, ಸಮ್ಮೇಳನಗಳ ಜಾತ್ರೆಗಳನ್ನು ಮಾಡುವುದಕ್ಕೆ ಮುಂದಾಗುತ್ತವೆ. ಹಾಗಂತ ಇವುಗಳನ್ನು ಮಾಡಬಾರದಂತಲ್ಲ. ಕನ್ನಡತ್ವದ ನಿಜಸ್ಥಿತಿಯ ಜಾಗೃತಿಯ ದೃಷ್ಟಿಯಿಂದ ಮೆರವಣಿಗೆ ಮಾಡುವುದು, ಕನ್ನಡ ಪರಂಪರೆಯನ್ನು ಸ್ಪರ್ಶಿಸಿ ಮುಂದೂಡುವುದಕ್ಕೆ ಜಾತ್ರೆ, ಹಬ್ಬ, ಸಮ್ಮೇಳನಗಳನ್ನು ಅತ್ಯವಶ್ಯವಾಗಿ ಮಾಡಲೇಬೇಕಾಗುತ್ತದೆ.

ಆದರೆ, ಕನ್ನಡ ಬದುಕನ್ನು ಗಟ್ಟಿಗೊಳಿಸುವ ರಾಜಕೀಯ ಬಲವಾದ ಇಚ್ಛಾಶಕ್ತಿಯನ್ನು ತೋರಿಸುವ ಆದ್ಯ ಕರ್ತವ್ಯ ಮೊದಲು ಆಗಬೇಕಾಗುತ್ತದೆ. ಅಂದಾಗ ಮಾತ್ರ ಎಳೆಯುವ ತೇರಿಗೆ ಗೌರವ ಲಭಿಸುತ್ತದೆ. ಮಾಡುವ ಜಾತ್ರೆಗೆ ಮೆರಗು ಸಿಗುತ್ತದೆ. ಈ ಮೂಲಭೂತ ಕರ್ತವ್ಯದಿಂದ ದೂರ ಸರಿದು ಕೇವಲ ಮೆರವಣಿಗೆಯಲ್ಲಿ ತೊಡಗಿದರೆ ಯಾರದೋ ದುಡ್ಡಿನಲ್ಲಿ ಮತ್ತಾರದೋ ಜಾತ್ರೆ ಮಾಡಿದಂತಾಗುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವುದಕ್ಕಿಂತ ಕನ್ನಡನಾಡಿನಲ್ಲಿ ರಾಜ್ಯವಾಳುತ್ತಿರುವ ಸರ್ಕಾರಕ್ಕೆ ಎಚ್ಚರಿಕೆ ಮೂಡಿಸುವುದು ಹೆಚ್ಚು ಅಗತ್ಯವಿದೆ. ಸರ್ಕಾರಗಳು ಕನ್ನಡ ಬದುಕಿನ ಪರ ರಚನಾತ್ಮಕ  ಕಾರ್ಯಕ್ರಮಗಳನ್ನು ಮುತುವರ್ಜಿಯಿಂದ ಹಮ್ಮಿಕೊಂಡಾಗ ಕನ್ನಡಿಗರು ಸಹಜವಾಗಿಯೇ ಕನ್ನಡದತ್ತ ಒಲಿಯುತ್ತಾರೆ.

ನೂತನ ಬಂಡವಾಳಶಾಹಿ ವ್ಯವಸ್ಥೆಯ ಕೈಗೊಂಬೆಯಾಗಿ ಕುಣಿಯುತ್ತಿರುವ ಸರ್ಕಾರಗಳಿಗೆ ಕನ್ನಡದ ಕನಸು ಕಾಣುವುದೇ ಅಪರಾಧ ಪ್ರಜ್ಞೆಯಾಗಿ ಕಾಡುತ್ತಿದೆ. ನಾಡಿನ ಹಿತಾಸಕ್ತಿಯನ್ನು ಕಾಯುವ ಸರ್ಕಾರ ಕನ್ನಡದಲ್ಲಿ ಕನಸು ಕಾಣುವುದನ್ನು ಮೊದಲು ಮಾಡಬೇಕಾಗಿದೆ. ಅಧಿಕೃತ ಹಾಗೂ ಅನಧಿಕೃತವಾಗಿ ಕನ್ನಡನಾಡಿನ ಅನ್ನ ತಿಂದು ಕನ್ನಡ ನೆಲಕ್ಕೆ ದ್ರೋಹ ಬಗೆಯುವ ಅಧಿಕಾರಿಗಳಿಗೆ ಜನತೆ ಮತ್ತು ರಾಜಕೀಯ ಶಕ್ತಿಗಳು ಕನ್ನಡದ ಸರಿಯಾದ ಪಾಠವನ್ನು ಮೊದಲು ಕಲಿಸಿ ಕನ್ನಡ ಆಡಳಿತ ಭಾಷೆಯನ್ನಾಗಿ ಮಾಡಬೇಕಾಗಿದೆ. ರಾಜಕೀಯ ಹಿತಾಸಕ್ತಿಗಳನ್ನು ಚಿವುಟಿ ಹಾಕುವ ಹುನ್ನಾರಗಳು ಸಾರ್ವಜನಿಕ ಆಡಳಿತ ವ್ಯವಸ್ಥೆಯ ಕಿರೀಟ ಸ್ಥಾನದಲ್ಲಿ ವ್ಯವಸ್ಥಿತವಾಗಿ ನಡೆಯುವುದನ್ನು ಬಗ್ಗು ಬಡಿಯಬೇಕಾಗುತ್ತದೆ.

ಒಂದು ಭಾಷೆ ಸಾವಿನ ಕದ ತಟ್ಟುತ್ತಿದ್ದರೆ ಆ ಭಾಷೆಯನ್ನಾಡುವ ಜನರ ಸಂಸ್ಕೃತಿ ಸಾವಿನ ಬೆನ್ನೇರುತ್ತದೆ. ಅಂಥ ದುರಂತ ಸ್ಥಿತಿ ಕನ್ನಡಕ್ಕೆ ಬಂದಿಲ್ಲ ಎಂದರೂ  ವ್ಯವಸ್ಥೆಯ ಇಂದಿನ ಮನೋಧರ್ಮ ಮತ್ತು ಧೋರಣೆಗಳನ್ನು ಗಮನಿಸಿದರೆ ಮುಂದೆ ಒಂದು ದಿನ ಈ ಪರಿಸ್ಥಿತಿ ಬರಬಹುದು ಎಂಬ ವೇದನೆಯ  ಧ್ವನಿ ಕನ್ನಡಿಗರ  ಒಡಲಾಳದಿಂದ ಹೊಮ್ಮುತ್ತಿದೆ. ಇಂಥ ಅನಾಹುತಗಳಿಗೆ ಅವಕಾಶ ನೀಡದೆ, ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಹೊಸ ಹುಮ್ಮಸ್ಸನ್ನು ಪಡೆದುಕೊಳ್ಳುವ ನೆಲದ ಅವಶ್ಯಕತೆಗೆ ತಕ್ಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಆದ್ಯ ಕರ್ತವ್ಯವಾಗಿದೆ.

ಕನ್ನಡ ಭಾಷೆಯನ್ನು ಹೆಚ್ಚು ವ್ಯಾವಹಾರಿಕಗೊಳಿಸುವುದರ ಜೊತೆಗೆ ಶೈಕ್ಷಣಿಕವಾಗಿ ಗಂಭೀರವಾಗಿ ಪರಿಗಣಿಸಬೇಕಾಗಿದೆ. ನೂತನ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ವ್ಯಾಪಾರೀಣಕರಣಗೊಂಡಿರುವಾಗ ಖಾಸಗಿ ಸಂಸ್ಥೆಗಳದೇ ದರ್ಬಾರು. ಈ ವ್ಯವಸ್ಥೆಗೆ ನೆಲ, ಜಲ, ಭಾಷೆ, ಸಂಸ್ಕೃತಿಯ ಬಗ್ಗೆ ಯಾವುದೇ ಕಾಳಜಿ ಬೇಕಾಗಿಲ್ಲ.  ಈ ವರ್ತನೆಗೆ ಸರ್ಕಾರ ಜಾಣ ಮೌನ ವಹಿಸುವುದರ ಮೂಲಕ ಕನ್ನಡ ವಿರೋಧಿ ನಿಲುವುಗಳಿಗೆ ಸಮ್ಮತಿ ಸೂಚಿಸುತ್ತಿದೆ. ಇದು ಮೊದಲು ನಿಲ್ಲಬೇಕು.

ಕನ್ನಡ ನಾಡಿನಲ್ಲಿ  ನಡೆಯುತ್ತಿರುವ ಯಾವುದೇ ಭಾಷೆಯ ಎಲ್ಲ ಶಾಲೆ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಓದುವಂತಾಗಬೇಕು. ಆಂಗ್ಲ ಮಾಧ್ಯಮ ಶಾಲಾ- ಕಾಲೇಜುಗಳಲ್ಲಿ ಕನ್ನಡ ಭಾಷಾ ಅಧ್ಯಯನದ ಅಸಡ್ಡೆಯ ಮನೋವೃತ್ತಿಯ ಮೇಲೆ ನಿಯಂತ್ರಣ ಸಾಧಿಸಬೇಕಾಗಿದೆ.

ಪ್ರಾಥಮಿಕ ಹಂತದಿಂದ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಿಗೂ ಇಂಗ್ಲಿಷ್ ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ವ್ಯವಸ್ಥೆ ಮಾಡಬೇಕಾಗಿದೆ. ವೈದ್ಯಕೀಯ, ಎಂಜನಿಯರಿಂಗ್, ವ್ಯವಹಾರಿಕ- ವ್ಯವಸ್ಥಾಪನಾ ಅಧ್ಯಯನ, ಗಣಕೀಕರಣ, ಹೀಗೆ ಯಾವುದೇ ಕೋರ್ಸ್‌ಗಳು ಕನ್ನಡ ಮಾಧ್ಯಮದಲ್ಲಿಯೂ ಲಭಿಸುವ ಸುವರ್ಣಾವಕಾಶ ಕನ್ನಡದ ಮಕ್ಕಳಿಗೆ ದೊರೆಯುವಂತೆ ಸೂಕ್ತ ಕಾನೂನು ತಿದ್ದುಪಡಿ ಆಗಬೇಕಾಗಿದೆ.

ವಿಜ್ಞಾನ, ತಂತ್ರಜ್ಞಾನ ಯಾವುದೇ ವೃತ್ತಿಪರ ಕೋರ್ಸುಗಳ ಪಠ್ಯಕ್ರಮ ಕನ್ನಡದಲ್ಲಿಯೇ ಲಭಿಸುವಂತಾಗಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗಾವಕಾಶಗಳು ಕಡ್ಡಾಯವಾಗಿ ದೊರೆಯುವಂತೆ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಬೇಕಾದ ಅವಶ್ಯಕತೆಯಿದೆ. ಕನ್ನಡ ಬದುಕು ಉಳಿದು, ಸಮೃದ್ಧಗೊಂಡು ವಿಶ್ವದ ವೇದಿಕೆಯ ಮೇಲೆ ಮೆರೆಯಬೇಕಾದರೆ ಇವೆಲ್ಲವೂ ನೆರವೇರಲೇಬೇಕಾಗಿದೆ. ಕೇವಲ ಸಮ್ಮೇಳನ ಮಾಡಿದರೆ ಕನ್ನಡ ವಿಶ್ವಕ್ಕೆ ಎದೆಯೊಡ್ಡಲು ಸಾಧ್ಯವಾಗುವುದಿಲ್ಲ.

ಇಂದು ಎದುರಾಗಿರುವ ಕನ್ನಡ ನೆಲದ ಸವಾಲುಗಳಿಗೆ ಉತ್ತರ ಹುಡುಕುವ ಹಾಗೂ ಕಾರ್ಯಪ್ರವೃತ್ತಗೊಳಿಸುವ ಪ್ರಯತ್ನಗಳು ವಿಶ್ವಕನ್ನಡ ಸಮ್ಮೇಳನದ ವೇದಿಕೆಯ ಮೂಲಕ ನಡೆದರೆ ಸಮ್ಮೇಳನಕ್ಕೆ ನಿಜವಾದ ಅರ್ಥ ಬರುತ್ತದೆ. ನಾಡಿನ ಬುದ್ದಿವಂತರೆನಿಸಿಕೊಂಡವರು ಸರ್ಕಾರದ ತುತ್ತೂರಿ ಊದುವ ಅವಕಾಶವಾದಿತನದಿಂದ ಹೊರ ಬಂದು ಇಂಥ ವೇದಿಕೆಗಳ ಮೂಲಕ ಗಟ್ಟಿಯಾದ ಧ್ವನಿಹೊರಡಿಸಲಿ. ವಿಶ್ವಕನ್ನಡ ಸಮ್ಮೇಳನಕ್ಕೆ ಜನ ಯಾರದೋ ಮೆರವಣಿಗೆ ವೀಕ್ಷಿಸಲು ಆಗಮಿಸುವುದಿಲ್ಲ ಎಂಬ ಪ್ರಾಥಮಿಕ ಪ್ರಜ್ಞೆಯೊಂದಿಗೆ ಸಮ್ಮೇಳನದ ವೇದಿಕೆ ಸಿದ್ಧಗೊಳ್ಳಬೇಕಾದ ಅವಶ್ಯಕತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT