ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ: ಬೆಳಗಾವಿಗೆ ಸಿಕ್ಕ ಸುವರ್ಣ ಅವಕಾಶ

Last Updated 22 ಫೆಬ್ರುವರಿ 2011, 8:30 IST
ಅಕ್ಷರ ಗಾತ್ರ

ಬೆಳಗಾವಿ: ಮಾರ್ಚ್‌ನಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿ ಮಹಾನಗರಸಭೆಗೆ ಸಿಕ್ಕ ಸುವರ್ಣ ಅವಕಾಶ; ಅದನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ವಿಯಾಗಿರಿ ಎಂದು ಬೆಳಗಾವಿ ನಗರಾಡಳಿತಕ್ಕೆ ಸಚಿವ ಸುರೇಶ ಕುಮಾರ ಸೋಮವಾರ ಇಲ್ಲಿ ಸೂಚಿಸಿದರು.ಹಾಗೆಂದು ಇಂತಹ ಬೃಹತ್ ಸಮ್ಮೇಳನದ ಸಿದ್ಧತೆ ಸವಾಲಿನ ಕೆಲಸವಾಗಿದ್ದು, ಸಮ್ಮೇಳನಕ್ಕೆ ಬರುವ ಜನರಿಗೆ ಮೂಲಭೂತ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅದರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಆಯಕ್ತರಿಗೆ ಆದೇಶಿಸಿದರು.

ವಿಶ್ವ ಕನ್ನಡ ಸಮ್ಮೇಳನದ ಪೂರ್ವ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಸಭೆಯ ಆಯುಕ್ತರೊಂದಿಗೆ ವಿಡಿಯೋ ಕಾನ್ಫ್‌ರೆನ್ಸ್ ನಡೆಸಿದ ಅವರು, ನಗರವನ್ನು ಸ್ವಚ್ಛಗೊಳಿಸಬೇಕು. ಸಮ್ಮೇಳನಕ್ಕೆ ಬರುವ ಜನರಿಗೆ ಕುಡಿಯುವ ನೀರು ಸೇರಿದಂತೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ತಿಳಿಸಿದರು.

ಅಧಿಕಾರಿಗಳು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಕೆಲಸದ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಮಹಾನಗರಸಭೆ ಆಯುಕ್ತರು ಪ್ರತಿ ಸಂಜೆ ಪ್ರಗತಿ ಪರಿಶೀಲನೆ ನಡೆಸಬೇಕು. ಸಮ್ಮೇಳನದ ಸಂದರ್ಭದಲ್ಲಿ ಏರ್ಪಡಿಸಲಾಗುವ ಮೆರವಣಿಗೆಯ ದಾರಿಯಲ್ಲಿ ಹಾಗೂ ವೇದಿಕೆಗಳ ಹತ್ತಿರ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೊಬೈಲ್ ಟಾಯ್ಲೆಟ್ ಹಾಕಿಸಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಅವರು, ಸಮ್ಮೇಳನಕ್ಕೆ ಆಗಮಿಸುವ ಜನರಿಗೆ ಊಟ, ವಸತಿ, ಹಾಗೂ ಇತರೆ ಕಾಮಗಾರಿಗಳ ಕುರಿತು ಮಾಹಿತಿ ಪಡೆದು ಕೊಂಡರು. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಾವು ವಹಿಸಿಕೊಂಡ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು, ಫೆ. 22 ರಿಂದ 27ರವರೆಗೆ ಜಿಲ್ಲೆಯಾದ್ಯಂತ ನಡೆಯುವ ಕನ್ನಡ ನುಡಿ ತೇರಿನ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿ ಸಮ್ಮೇಳದ ಸಂದರ್ಭದಲ್ಲಿ ಹಿರಿಯ ಕವಿಗಳ ನುಡಿ ಮುತ್ತುಗಳನ್ನು ಪ್ರದರ್ಶಿಸಲು ಕ್ರಮ ತೆಗೆದುಗೊಳ್ಳುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಏಕರೂಪ ಕೌರ್ ಅವರು ಸಮ್ಮೇಳನದ ಸಿದ್ಧತೆಗಳ ಕುರಿತು ಸಚಿವರಿಗೆ ವಿವರ ನೀಡಿ ಬರುವ ಮಾರ್ಚ್ 5ರೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ. ನಗರದ 24 ವೃತ್ತಗಳ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು. ಪಾಲಿಕೆ ಆಯುಕ್ತರಾದ ಎಸ್.ಜಿ. ಪಾಟೀಲ ಉಪಸ್ಥಿತರಿದ್ದರು.

ವ್ಯಾಪಕ ಪ್ರಚಾರ: ಮನವಿ
ಬೆಳಗಾವಿ:
ವಿಶ್ವ ಕನ್ನಡ ಸಮ್ಮೇಳನದ ಕುರಿತು ವ್ಯಾಪಕ ಪ್ರಚಾರ ಉದ್ದೇಶದಿಂದ ವ್ಯಾಪಕ ಕ್ರಮ ಕೈಗೊಳ್ಳಬೇಕು ಎಂದು ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಸೋಮವಾರ ಇಲ್ಲಿ ಸೂಚಿಸಿದರು.ಬೆಳಗಾವಿ ವಿಭಾಗದಲ್ಲಿ ಬರುವ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಲು ಎಲ್ಲ ಜಿಲ್ಲೆಗಳ ಸಹಕಾರ ಅವಶ್ಯವಾಗಿದೆ, ಸಮ್ಮೇಳನಕ್ಕೆ ಲಕ್ಷಾಂತರ ಜನ ಬರುವ ಸಾಧ್ಯತೆ ಇರುವುದರಿಂದ ಪಕ್ಕದ ಜಿಲ್ಲೆಗಳಲ್ಲೂ ವಾಸ್ತವ್ಯದ ವ್ಯವಸ್ಥೆ ಮಾಡಬೇಕಾಗುತ್ತದೆ. ಇದರ ಜೊತೆಗೆ ಪ್ರತಿಯೊಂದು ಜಿಲ್ಲೆಯ ಜನರು ಸಮ್ಮೇಳನದಲ್ಲಿ ಭಾಗವಹಿಸಬೇಕಾಗಿದೆ. ಕಾರಣ ವಿಶ್ವಕನ್ನಡ ಸಮ್ಮೇಳನದ ಹೆಸರಿನಲ್ಲಿ ಕಾರ್ಯಕ್ರಮ, ಜಾಥಾ, ವಿಚಾರ ಸಂಕಿರಣಗಳನ್ನು ಏರ್ಪಡಿಸಿ ವ್ಯಾಪಕ ಪ್ರಚಾರ ನಡೆಸಬೇಕು ಎಂದು ಹೇಳಿದರು.

ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಆ ಬಗ್ಗೆಯೂ ಮಾಹಿತಿ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ವೈದ್ಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಎಂ. ವಿಠ್ಠಲಮೂರ್ತಿ, ಪ್ರಾದೇಶಿಕ ಆಯುಕ್ತ ಸಿ.ಎಂ. ಶಿರೋಳ, ಬೆಳಗಾವಿ ಜಿಲ್ಲಾಧಿಕಾರಿ ಡಾ. ಏಕರೂಪ್ ಕೌರ್ ಸೇರಿದಂತೆ 7ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT