ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನಾಧ್ಯಕ್ಷರ ಚಿಂತನಾ ಲಹರಿ

Last Updated 4 ಫೆಬ್ರುವರಿ 2011, 17:55 IST
ಅಕ್ಷರ ಗಾತ್ರ

ಪ್ರೀತಿ ಇಲ್ಲದ ಮೇಲೆ...
ನಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳಲ್ಲಿ ಕನ್ನಡ ಬೋಧನೆಗೆ ಅರ್ಹರಾದ ಶಿಕ್ಷಕರು ದೊರಕುತ್ತಿಲ್ಲ. ಹಿಂದೆ ಕನ್ನಡ ಅಥವಾ ಸಂಸ್ಕೃತ ಭಾಷೆಗಳಲ್ಲಿ ಒಂದು ಭಾಷೆಯನ್ನು  ಬೋಧಿಸುವುದಕ್ಕೆ ವಿಶಿಷ್ಟ ತರಬೇತಿ ಪಡೆದ ಶಿಕ್ಷಕರು ಇರುತ್ತಿದ್ದರು. ಅವರಿಂದ ಕನ್ನಡ ಅಥವಾ ಸಂಸ್ಕೃತ ಕಲಿತರೆ ಅಂಥ ವಿದ್ಯಾರ್ಥಿಗಳು, ಕಾಗುಣಿತದಲ್ಲಿ ಒಂದೂ ತಪ್ಪು ಮಾಡುತ್ತಿರಲಿಲ್ಲ. ವಾಚನವನ್ನು ಚೆನ್ನಾಗಿ ಕಲಿಯುತ್ತಿದ್ದರು. ಕಾವ್ಯಾಸ್ವಾದನೆಯ ಸುಖವನ್ನೂ ಅನುಭವಿಸುತ್ತಿದ್ದರು.

ಈಗಲಾದರೂ ನಮ್ಮಲ್ಲಿರುವ ಕನ್ನಡ ಶಿಕ್ಷಕರಲ್ಲಿ ಅರ್ಹರಾದವರನ್ನು ಆರಿಸಿ ಕನ್ನಡ ಬೋಧನೆಯಲ್ಲಿ ಸರಿಯಾದ ಮಾರ್ಗವನ್ನು ಕಲಿಸುವ ಶಿಬಿರಗಳನ್ನು ನಡೆಸಿ ಪ್ರತಿ ವರ್ಷವೂ ಕೊನೆಯ ಪಕ್ಷ 1000 ಶಿಕ್ಷಕರನ್ನು ಸಿದ್ಧಗೊಳಿಸಬೇಕು. ಇದು ನಡೆಯದೆ ಇದ್ದರೆ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ ಉಂಟಾಗುವುದಿಲ್ಲ. ಪ್ರೀತಿಯನ್ನು ಉಂಟು ಮಾಡುವ ಶಿಕ್ಷಕರ ಸಂಖ್ಯೆ ಬೆಳೆಯಬೇಕು. ಕನ್ನಡವನ್ನು ಐಚ್ಛಿಕವಾಗಿ, ಆಳವಾಗಿ ಅಭ್ಯಾಸ ಮಾಡಿದವರೇ ಕನ್ನಡ ಶಿಕ್ಷಕರಾಗಬೇಕು. ಶಿಕ್ಷಣ ಇಲಾಖೆಗೆ ಈ ಬಗ್ಗೆ ಎಚ್ಚರಿಕೆಯನ್ನು ನಾಡಿನ ಶಾಸಕರು ನೀಡಬೇಕು.

ಅಧಿಕಾರ ದಾಹ ಎಂಬ ದುರಂತ ನಾಟಕ
ಭಾರತದ ಸಂವಿಧಾನವು ಒಂದು ಉತ್ಕೃಷ್ಟ ರಾಜ್ಯ ಧರ್ಮಶಾಸ್ತ್ರದಂತೆ ಇದೆ ಎಂದು ಹೆಸರು ಪಡೆದಿದೆ. ಹೀಗಿದ್ದೂ ಅದನ್ನು ತಿರಸ್ಕರಿಸಿ ರಾಜಕೀಯ ಪಕ್ಷಗಳು ಅಧಿಕಾರ ದಾಹದಿಂದ ಕಚ್ಚಾಡುತ್ತಿವೆ. ಬಯ್ಗಳು ಅಸಮರ್ಥರ ಆಯುಧ. ಅದು ದುರ್ಬಲರು ಉಪಯೋಗಿಸುವ ಚುಚ್ಚುಗತ್ತಿ. ಅದನ್ನು ಉಪಯೋಗಿಸಬಾರದು.ಈ ಕಾದಾಟ ಪಕ್ಷದ್ವೇಷ ಅಥವಾ ಅಧಿಕಾರ ದಾಹ ಎಂಬ ಒಂದು ದುರಂತ ನಾಟಕವಾಗಿಬಿಟ್ಟಿದೆ. ದಿನಕ್ಕೊಂದು ದೃಶ್ಯ, ವಾರಕ್ಕೊಂದು ಅಂಕ ಎಂಬಂತೆ ಇದು ಮುಂದುವರೆದಿದೆ. ನಮಗೆ ಇದು ದುರಂತ. ಇತರ ಪ್ರಾಂತಗಳವರಿಗೆ ಪ್ರಹಸನ. ಹೀಗೆ ಇಮ್ಮುಖವಾದ ಈ ನಾಟಕವು ಇನ್ನೂ ಕ್ಲೈಮಾಕ್ಸ್ ಎಂಬ ಶಿಖರ ತಲುಪಿಲ್ಲ. ಇಷ್ಟರಲ್ಲೇ  ತಲುಪಬಹುದು. ಕನ್ನಡ ತಾಯಿ ಭುವನೇಶ್ವರಿ ನಮ್ಮ ನಾಯಕಮಣಿಗಳಾದ ಈ ರಾಜಕೀಯ ವ್ಯಕ್ತಿಗಳಿಗೆ ಸನ್ಮತಿಯನ್ನು ನೀಡಲಿ ಎಂದು ಪ್ರಾರ್ಥಿಸಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ಅಧಿಕಾರದ ಹುಚ್ಚು ದಾಹವನ್ನು ಬಿಟ್ಟು ನಾಡಿನ ಸೌಖ್ಯಕ್ಕೆ ದುಡಿಯುವ ಬುದ್ಧಿಯು ಬರಲಿ ಎಂದು ಹಾರೈಸೋಣ.

ಪ್ರಜೆಗಳಾದ ನಾವು ಇಂಥ ವರ್ಗದಿಂದ ಬೇರೆಯಾಗಿ
ತಲೆ ತುಂಬ ಕಲಿಯೋಣ
ತಲೆ ಎತ್ತಿ ನಡೆಯೋಣ
ತಲೆಬಾಗಿ ಬಾಳೋಣ
ಸಿರಿಗನ್ನಡಂ ಗೆಲ್ಗೆ

‘ಡಬ್ಬಿಂಗ್’ ನಿಜವಾದ ಕಲೆಯೇ ಅ
ಲ್ಲ!
ಕನ್ನಡ ಸಿನಿಮಾ ಪ್ರಪಂಚವನ್ನು ನೆನೆದಾಗ ಈ ಲೋಕಕ್ಕೇ ಅಪಾಯ ಸಂಭವಿಸುತ್ತ ಇರುವುದು ನನ್ನ ಗಮನಕ್ಕೆ ಬಂದಿದೆ. ಇಷ್ಟು ದಿನಗಳೂ ‘ಡಬ್ಬಿಂಗ್’ ಎಂಬ ಅವ್ಯವಹಾರದಿಂದ ದೂರವಾಗಿದ್ದು ಸುಖವಾಗಿದ್ದ ಪ್ರಪಂಚಕ್ಕೆ ಈಗ ‘ಡಬ್ಬಿಂಗ್’ ಮತ್ತೆ ನುಗ್ಗುವ ಪ್ರಯತ್ನ ಮಾಡುತ್ತಿದೆಯಂತೆ. ‘ಡಬ್ಬಿಂಗ್’ ನಿಜವಾದ ಕಲೆಯೇ ಅಲ್ಲ! ಅದು ಮತ್ತೆ ಕನ್ನಡ ಸಿನಿಮಾ- ದೂರದರ್ಶನಗಳಿಗೆ ತಲೆ ಹಾಕದಂತೆ ಕನ್ನಡಿಗರೆಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸುತ್ತೇನೆ.

ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಉಳಿಯುವುದೇ?
ಬೆಂಗಳೂರಿನಲ್ಲಿ ಕನ್ನಡ ಸಾಯುತ್ತಿದೆ ಎಂದು ಹೇಳುತ್ತಾರೆ. ಹಾಗೆ ಹೇಳುವವರಿಗೆ ಗ್ರಾಮೀಣ ಪ್ರದೇಶದಲ್ಲಿ ಅದು ಬದುಕಿ ಉಳಿಯುತ್ತದೆ ಎಂಬ ನಂಬಿಕೆಯಿದೆ. ಕನ್ನಡದ ರಾಜಧಾನಿಯಲ್ಲಿ ಕನ್ನಡ ಸತ್ತರೆ ಗ್ರಾಮೀಣ ಪ್ರದೇಶದಲ್ಲಿ ಉಳಿಯುತ್ತದೆಯೇ?

ತಮಿಳುನಾಡು ಮಾದರಿ
ಎಷ್ಟೇ ಭಾಷೆಗಳ ಜನ ಬೆಂಗಳೂರಿಗೆ ಬಂದು ಸೇರಿದರೂ ಆ ಭಾಷೆಯ ಜನರ ಮಕ್ಕಳಿಗೆ ವಿದ್ಯಾಭ್ಯಾಸ ಬೇಕು ತಾನೆ. ಅವರವರು ಸ್ವಂತ ಭಾಷೆಯ ಶಾಲೆಗಳನ್ನು ಮಾಡಿಕೊಂಡಿದ್ದಾರೆ. ಈ ಎಲ್ಲ ಶಾಲೆಗಳಲ್ಲಿ ಎಲ್ಲ ಮಕ್ಕಳು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಭಾಷೆಯಾಗಿ ಕಲಿಯಲೇಬೇಕೆಂಬ ಬಿಗಿಯಾದ ಕಾನೂನನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕು. ಇದು ಸಾಧ್ಯವಾದರೆ ಹತ್ತೇ ವರ್ಷಗಳಲ್ಲಿ ಎಲ್ಲ ಪರಕೀಯರ ಮಕ್ಕಳೂ ಕನ್ನಡಿಗರಾಗಿಬಿಡುತ್ತಾರೆ. ಇಂಥ ಪದ್ಧತಿಗೆ ಭಾರತದ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಒಪ್ಪಿಗೆ ನೀಡಿದೆ.

ಇಷ್ಟೆಲ್ಲ ಅವಕಾಶವಿದ್ದರೂ ನಾವು ಈ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತಿಲ್ಲ. ಬೆಂಗಳೂರಿನಲ್ಲಿ ಕನ್ನಡ ಉಳಿಯಬೇಕಾದರೆ ಮೊದಲು ಮಾಡಬೇಕಾದ ಕಾರ್ಯ ಇದು. ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರವು ಮಾಡಿರುವ ಕೆಲವು ಪ್ರಯತ್ನಗಳೂ ಸಫಲವಾಗಿವೆ. ನಾವೂ ಆ ಮಾರ್ಗವನ್ನೇ ಉಪಯೋಗಿಸಬೇಕು.

ಚೀನಿ ವಿಧಾನ
ಅಮೆರಿಕದಲ್ಲಿರುವ ಚೀನಾ ದೇಶಿಯರ ಮಕ್ಕಳಿಗೆ ಚೀನಾದ ಆಡಳಿತ ಭಾಷೆ ಮಂಡಾರಿನ್ ಭಾಷೆಯನ್ನು ಕಲಿಸಲಾಗುತ್ತಿದೆ. ಅಮೆರಿಕದ ಚೀನಿ ಶಾಲೆಗಳ ಕಿಂಡರ್‌ಗಾರ್ಟನ್ ಮತ್ತು ಮೊದಲ ತರಗತಿಯಲ್ಲಿ ಪಾಠದ ಮಾಧ್ಯಮವು ಚೀನಿ ಭಾಷೆಯಲ್ಲೇ ಇರುತ್ತದೆ. ಎರಡನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಲಿಸುತ್ತಾರೆ. ಆರನೆಯ ತರಗತಿಯವರೆಗೆ ಅರ್ಧ ಚೀನಿ, ಅರ್ಧ ಇಂಗ್ಲಿಷ್ ಭಾಷೆಯಲ್ಲಿ ಪಾಠಗಳಾಗುತ್ತವೆ.

ಪ್ರಾರಂಭದಲ್ಲಿ ಈ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡುವುದರಲ್ಲಿ ಹಿಂದೆ ಬಿದ್ದರೂ ಬರ ಬರುತ್ತಾ ಎರಡು ಭಾಷೆಗಳಲ್ಲೂ ಸ್ಪಷ್ಟವಾಗಿ ಪರಿಣಾಮದಾಯಕವಾಗಿ ಮಾತನಾಡುತ್ತಾರೆ. ಅಲ್ಲದೇ ಅವರ ಸೃಷ್ಟಿಶೀಲ ವ್ಯಕ್ತಿತ್ವ ಹೆಚ್ಚು ಪ್ರಭಾವಶಾಲಿಯಾಗಿ ಬೆಳಗುತ್ತದೆ.

ಇಂಥ ಶಾಲೆಗೆ ಪ್ರಾರಂಭದಲ್ಲಿ ಏಷ್ಯಾ ಖಂಡದವರು ಹೆಚ್ಚಾಗಿ ಸೇರುತ್ತಿದ್ದರು. ಈಗ ಅಮೆರಿಕನ್ನರು, ಬಿಳಿ ಮತ್ತು ಕರಿಯ ಜನ ಮತ್ತು ಸ್ಪೇನಿನವರು ಬಂದು ಸೇರುತ್ತಿದ್ದಾರೆ. ಹೀಗೆ ಚೀನಾ ಶಾಲೆಗಳು ಜನಪ್ರಿಯವಾಗಿವೆ. ಅಮೆರಿಕದ ಸರ್ಕಾರವು ಇಂಥ ಶಾಲೆಗಳಿಗೆ ಒಳ್ಳೆಯ ಅನುದಾನವನ್ನು ನೀಡುತ್ತಾ ಇದೆ. ಕನ್ನಡ ಜನರಿಗೂ ಇಂಗ್ಲಿಷ್ ಕಲಿಸುವ ಬಗ್ಗೆ  ಇದು ಮಾದರಿಯಾಗಿದೆ. ಕನ್ನಡವು ಎಲ್ಲ ಶಾಲೆಗಳಲ್ಲಿ ಹತ್ತನೆಯ ತರಗತಿಯವರೆಗೆ ಕಡ್ಡಾಯವಾಗುವುದಾದರೆ ಇಂಗ್ಲಿಷನ್ನು ಎರಡು ಮೂರನೆಯ ತರಗತಿಯಿಂದಲೇ ಕಲಿಸುವುದು ತಪ್ಪಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT