ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ವಿಷ್ಣು ಭಟ್ಟ ಆಯ್ಕೆ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Last Updated 20 ಫೆಬ್ರುವರಿ 2013, 10:20 IST
ಅಕ್ಷರ ಗಾತ್ರ

ಮಡಿಕೇರಿ: ಕೂಡಿಗೆಯಲ್ಲಿ ಮಾರ್ಚ್ 2 ಮತ್ತು 3 ರಂದು ನಡೆಯುವ ಕೊಡಗು ಜಿಲ್ಲೆಯ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಿ.ವಿಷ್ಣು ಭಟ್ಟ ಅವರನ್ನು ಆಯ್ಕೆ ಮಾಡಲಾಗಿದೆ.

ನಗರದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಕಸಾಪ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸರ್ವಾನು ಮತದಿಂದ ಡಿ.ವಿಷ್ಣು ಭಟ್ಟರನ್ನು ಆಯ್ಕೆ ಮಾಡಲಾಯಿತು.

ಕಸಾಪ ಜಿಲ್ಲಾ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಕೂಡಿಗೆಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಜಿಲ್ಲಾ ಸಮ್ಮೇಳನಕ್ಕೆ ಕಾರ್ಯಕಾರಿ ಸಮಿತಿ ಸದಸ್ಯರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸಮ್ಮೇಳನ ಯಶಸ್ಸಿಗೆ ಶ್ರಮಿಸಬೇಕು ಎಂದು ಅವರು ಕೋರಿದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶ್ವೇತಾ ರವೀಂದ್ರ, ವಾಸು ರೈ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮುನೀರ್ ಅಹಮ್ಮದ್ (ಮಡಿಕೇರಿ), ಆನಂದತೀರ್ಥ ಭಾರದ್ವಾಜ್ (ಸೋಮವಾರ ಪೇಟೆ), ಜೆ.ಸಿ.ಶೇಖರ, ಕೆ.ಟಿ.ಬೇಬಿಮ್ಯೋಥ್ಯೂ, ಟಿ.ಜಿ.ಪ್ರೇಮ್‌ಕುಮಾರ್, ಶ್ರಿಧರ್ ಹೂವಳ್ಳಿ, ಮಣಜೂರು ಮಂಜುನಾಥ್, ಡೇನಿಸ್ ಡಿಸೋಜ ಹಾಜರಿದ್ದರು.

ಡಿ.ವಿಷ್ಣು ಭಟ್ಟರ ಕಿರು ಪರಿಚಯ
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ 35 ವರ್ಷಗಳ ಕಾಲ ಶಿಕ್ಷಕರಾಗಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಿ.ವಿಷ್ಣು ಭಟ್ಟ ಅವರು ಸಿದ್ದಾಪುರದಲ್ಲಿ ನಡೆದ ತಾಲ್ಲೂಕು ಕಸಾಪ 2ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆ ಗ್ರಾಮದ ಲಕ್ಷ್ಮಣ ಭಟ್ಟ, ಪಾರ್ವತಮ್ಮ ಅವರ ಹಿರಿಯ ಪುತ್ರರಾದ ವಿಷ್ಣು ಭಟ್ಟರಿಗೆ ಎಪ್ಪತ್ತು ವರ್ಷ ವಯಸ್ಸಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಡಿ.ವಿಷ್ಣು ಭಟ್ಟರ ಪತ್ನಿ ವಿಜಯ ಅವರು ಸಹ ಸಾಹಿತಿ.

ಡಿ.ವಿಷ್ಣು ಭಟ್ಟ ಅವರ ಕೃತಿಗಳು- ಪೂರ್ಣವಿರಾಮ, ವಿಚಿತ್ರಾ, ದರ್ಪಣ, ದಾಹ, ಆಶಾಭಂಗ, ಕನಕಾಂಗಿ, ಕಾಲಚಕ್ರ, ಮೋಹದ ಮರೆಯಲ್ಲಿ ಇವು ಕಾದಂಬರಿಗಳು, ಮಹಾನಾರಿ ನಾಳಾಯನಿ, ಚಂದ್ರಗುಪ್ತ ಮೌರ್ಯ ಕನ್ನಡ ಇವು ಮಹಾಕಾವ್ಯಗಳು.

ಶಕುಂತಳೆಯ ಬಾಲ್ಯ, ಊರ್ವಶಿ- ಪುರೂರವ ಖಂಡ ಕಾವ್ಯಗಳು, ಸಂತರಾಮದಾಸ (ಹಿಂದಿ), ರಾಣಿಸಂಯೋಗಿತಾ (ಏಕಾಂಕ ನಾಟಕ) ನಾಟಕಗಳು, ಓಂಕಾರವೈಭವ, ಜಗದ್ಗುರು ಭಾರತ, ದುರ್ಗಾರಾಧನೆ, ಪಾಥೇಯಗಳು ಮತ್ತಿತರರ ಧಾರ್ಮಿಕ ಚಿಂತನೆಗಳು ಹೀಗೆ 18ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT