ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗಳ್ಳನ ಮೇಲೆ ಗುಂಡು ಹಾರಿಸಿ; ಬಂಧನ

Last Updated 6 ಜನವರಿ 2012, 19:45 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ವೇಳೆ ಬೆನ್ನಟ್ಟಿದ ಪೊಲೀಸರನ್ನು ಚಾಕುವಿನಿಂದ ಇರಿಯಲು ಯತ್ನಿಸಿದ ಸರಗಳ್ಳನ ಮೇಲೆ ಎಸ್‌ಐ ಒಬ್ಬರು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿರುವ ಘಟನೆ ಬನಶಂಕರಿಯ ಸೇವಾಕ್ಷೇತ್ರ ಆಸ್ಪತ್ರೆ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಬಿಡದಿಯ ಮಾನಗಾನಹಳ್ಳಿಯ ರವಿ (27) ಬಂಧಿತ ಆರೋಪಿ. ಕಾಲಿಗೆ ಗುಂಡೇಟು ಬಿದ್ದು ಗಾಯಗೊಂಡಿರುವ ಆತನನ್ನು ಮೊದಲು ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆ ನಂತರ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

`ಮಮತಾ ಎಂಬುವರು ಸೇವಾಕ್ಷೇತ್ರ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ಸಂಜೆ ನಿಂತಿದ್ದ ವೇಳೆ ಅಲ್ಲಿಗೆ ಬಂದ ರವಿ ಹಾರೋಹಳ್ಳಿ ವಿಳಾಸ ಕೇಳಿದ್ದಾನೆ. ವಿಳಾಸ ಹೇಳುವಾಗ ಮಮತಾ ಅವರ ಚಿನ್ನದ ಸರ ಕಿತ್ತು ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಮಮತಾ ಜೋರಾಗಿ ಕೂಗಿದ್ದನ್ನು ಕೇಳಿಸಿಕೊಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ~  ಎಂದು ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

`ಅದೇ ಬಡಾವಣೆಯಲ್ಲಿ ಗಸ್ತಿನಲ್ಲಿದ್ದ ಬನಶಂಕರಿ ಪೊಲೀಸ್ ಠಾಣೆಯ ಎಸ್‌ಐ ಧರ್ಮೇಂದ್ರ, ಕಾನ್‌ಸ್ಟೇಬಲ್‌ಗಳಾದ ಗುರುರಾಜ ಮತ್ತು ಪ್ರಸನ್ನ ಅವರಿಗೆ ನಿಯಂತ್ರಣ ಕೊಠಡಿಯಿಂದ ಮಾಹಿತಿ ಸಿಕ್ಕಿದೆ. ಕೂಡಲೇ ಮೂವರೂ ರವಿಯನ್ನು ಬೆನ್ನಟ್ಟಿ ಆತನನ್ನು ಸಿಬ್ಬಂದಿ ಹಿಡಿದು ಕೊಂಡಿದ್ದಾರೆ. ಈ ಸಂದರ್ಭದಲ್ಲಿ ರವಿ ಚಾಕುವಿನಿಂದ ಗುರುರಾಜ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಅಪಾಯದ ಮುನ್ಸೂಚನೆ ಅರಿತ ಧರ್ಮೇಂದ್ರ ಆರೋಪಿ ಕಾಲಿಗೆ ಒಂದು ಗುಂಡು ಹಾರಿಸಿದ್ದಾರೆ~ ಎಂದು ಅವರು ಮಾಹಿತಿ ನೀಡಿದ್ದಾರೆ.

`ರವಿಯ ಮಂಡಿಯ ಕೆಳಗೆ ಗುಂಡು ಹೊಕ್ಕಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ಅಪಾಯದಿಂದ ಪಾರಾಗಿದ್ದಾನೆ. ಮಾನಗಾನಹಳ್ಳಿಯ ಆತ ಚಿಕ್ಕಕಲ್ಲಸಂದ್ರದಲ್ಲಿ ನೆಲೆಸಿದ್ದ. ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ. ಈ ಹಿಂದೆ ಆತ ಈ ರೀತಿ ಕೃತ್ಯ ಎಸಗಿರುವ ಬಗ್ಗೆ ತನಿಖೆ ನಡೆಸಲಾಗುತ್ತದೆ~ ಎಂದು ಸೋನಿಯಾ ನಾರಂಗ್ ಹೇಳಿದರು.

ಗಾಂಜಾ ಮಾರಾಟ: ಬಂಧನ
ಕಾಟನ್‌ಪೇಟೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸೈಯದ್ ವಾಸೀಂ (26) ಎಂಬಾತನನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಕಾಟನ್‌ಪೇಟೆಯ ನಿವಾಸಿಯಾದ ಸೈಯದ್ ನಾಲಬಂದವಾಡಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಯಿತು. ಆರೋಪಿಯಿಂದ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಹತ್ತು ಕೆ.ಜಿ. ಗಾಂಜಾ ಮತ್ತು ಸಾವಿರದ ಇನ್ನೂರು ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಗಾಂಜಾವನ್ನು ಸಣ್ಣ ಪೊಟ್ಟಣಗಳಲ್ಲಿ ತುಂಬಿ ನೂರು ರೂಪಾಯಿಗೆ ಆತ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಐಎಡಿಬಿ ಅಧಿಕಾರಿ ಬಂಧನ
ಕಾಮಗಾರಿಯೊಂದರ ಗುತ್ತಿಗೆ ಆದೇಶ ನೀಡಲು ಗುತ್ತಿಗೆದಾರರಿಂದ ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಬೆಂಗಳೂರು ವಲಯ ಕಚೇರಿಯ ಅಭಿವೃದ್ಧಿ ಅಧಿಕಾರಿ ಸೈಯದ್ ಇಫ್ತಿಕಾರ್ ಅಹಮ್ಮದ್‌ರನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಸಿವಿಲ್ ಕಾಮಗಾರಿಗಳ ಗುತ್ತಿಗೆದಾರರಾಗಿರುವ ಅರಮನೆ ಗುಟ್ಟಹಳ್ಳಿಯ ನಿವಾಸಿಗಳಾದ ಷಣ್ಮುಗಂ ಮತ್ತು ಶೇಖರ್ ಸಹೋದರರು ಕೆಐಎಡಿಬಿಯಲ್ಲಿ ಐದು ಕೋಟಿ ರೂಪಾಯಿ ಮೊತ್ತದ ಕಾಮಗಾರಿಯೊಂದರ ಟೆಂಡರ್ ಪಡೆದಿದ್ದರು. ಈ ಸಂಬಂಧ ಕಾರ್ಯಾದೇಶ ಪಡೆಯಲು ಮಂಡಳಿಯ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿದಾಗ ರೂ 1 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ನೃಪತುಂಗ ರಸ್ತೆಯಲ್ಲಿರುವ ಕೆಐಎಡಿಬಿ ವಲಯ ಕಚೇರಿಗೆ ಹಣ ತಂದು ನೀಡುವಂತೆ ಆರೋಪಿ ಅಧಿಕಾರಿ ಸೂಚಿಸಿದ್ದರು. ಅದರಂತೆ ಶುಕ್ರವಾರ ಮಧ್ಯಾಹ್ನ ಷಣ್ಮುಗಂ ಹಣ ತಲುಪಿಸಿದರು. ಈ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಇಫ್ತಿಕಾರ್ ಅಹಮ್ಮದ್ ರನ್ನು ಬಂಧಿಸಿದರು. ಪ್ರಾಥಮಿಕ ತನಿಖೆ ಪೂರ್ಣಗೊಳಿಸಿ ನಗರದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.

ಲಾರಿ ಡಿಕ್ಕಿ- ಸಾವು: ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬರು ತೀವ್ರ ಗಾಯಗೊಂಡಿರುವ ಘಟನೆ ಲಗ್ಗೆರೆ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಪಾರ್ವತಿ ನಗರದ ನಿವಾಸಿ ಹರೀಶ್(25) ಮೃತಪಟ್ಟವರು. ತೀವ್ರವಾಗಿ ಗಾಯಗೊಂಡಿದ್ದ ಶ್ರೀನಿವಾಸ್ (26) ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂರು ಯುವಕರು ಲಗ್ಗೆರೆಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ರಸ್ತೆಯ ಬದಿಯಲ್ಲಿ ಮಾತನಾಡುತ್ತಾ ನಿಂತಿದ್ದರು. ಚಾಲಕನ ನಿರ್ಲಕ್ಷ್ಯದಲ್ಲಿ ಬಂದ ಮಣ್ಣಿನ ಲಾರಿಯೊಂದು ಇವರಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಕಾರ್ತಿಕ್ ಇಬ್ಬರನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ವೈದ್ಯರು ಹರೀಶ್ ಮೃತಪಟ್ಟಿರುವುದನ್ನು ಖಚಿತ ಪಡಿಸಿದರು.

ಚಾಲಕ ಪರಾರಿಯಾಗಿದ್ದು, ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT