ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಗೆಲುವಿನ ಸವಿಗನಸಿನಲ್ಲಿ ದೋನಿಪಡೆ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೊಹಾಲಿ: ಅದೃಷ್ಟದ ತಾಣ ಮೊಹಾಲಿಯ ಕ್ರಿಕೆಟ್ ಅಂಗಳದಲ್ಲಿ  ಮತ್ತೊಂದು ಸವಿನೆನಪಿನ ಕ್ಷಣವನ್ನು ದಾಖಲಿಸುವ ಸವಿಗನಸಿನಲ್ಲಿ ಟೀಮ್ ಇಂಡಿಯಾದ ಯುವಪಡೆ ತೇಲಾಡುತ್ತಿದೆ!2011ರ ಐಸಿಸಿ ವಿಶ್ವಕಪ್‌ನ ರೋಚಕ ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತದ ಸಾಧನೆಯ ನೆನಪಿನ `ಹಸಿರು~ ಹೊದ್ದು ನಳನಳಿಸುತ್ತಿರುವ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಗುರುವಾರ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಪಂದ್ಯ ಗೆಲ್ಲುವ ಕನಸು ಈಗ ಎಲ್ಲರ ಕಣ್ಣಲ್ಲೂ ತೇಲುತ್ತಿದೆ.

ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯವನ್ನು ಮಹೇಂದ್ರಸಿಂಗ್ ದೋನಿ ಬಳಗ ಗೆದ್ದುಬಿಟ್ಟರೆ ಸರಣಿ ಗೆಲುವಿನ ವಿಜಯೋತ್ಸವವನ್ನು ಆಚರಿಸಲು ಪಂಜಾಬಿಗಳು ಸಿದ್ಧರಾಗಿದ್ದಾರೆ. ದೀಪಾವಳಿಗೆ ನಾಲ್ಕು ದಿನ ಮುನ್ನವೇ ಪಟಾಕಿ ಹಾರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿಗಳಿಬ್ಬರೂ ಬಂದು ಕುಳಿತು ವಿಶ್ವಕಪ್ ಸೆಮಿಫೈನಲ್ ವೀಕ್ಷಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಇಲ್ಲಿಯ ಕ್ರಿಕೆಟ್‌ಪ್ರೇಮಿಗಳಿಗೆ, ಆ ಪಂದ್ಯದ ಗೆಲುವಿನ ರೂವಾರಿ ಸಚಿನ್ ತೆಂಡೂಲ್ಕರ್, ಪಂಜಾಬಿ ಪುತ್ರರಾದ ಯುವರಾಜ್ ಸಿಂಗ್, ಹರಭಜನ್‌ಸಿಂಗ್ ಈ ಪಂದ್ಯದಲ್ಲಿ ಇಲ್ಲವಲ್ಲ ಎನ್ನುವ ಬೇಸರ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಹುಡುಗರ ಸಾಧನೆಯನ್ನು ನೋಡಿರುವ ಇಲ್ಲಿಯ ಕ್ರಿಕೆಟ್‌ಪ್ರೇಮಿಗಳು ಸರಣಿ ಗೆಲುವಿಗೆ `ಭಾಂಗ್ರಾ~ ನೃತ್ಯ ಮಾಡಲು ಸಿದ್ಧರಾಗಿದ್ದಾರೆ.

1993ರಿಂದ ಒಟ್ಟು 19 ಏಕದಿನ ಪಂದ್ಯಗಳಿಗೆ ವೇದಿಕೆಯಾಗಿರುವ ಈ ಮೈದಾನದಲ್ಲಿ ಭಾರತ ಇದುವರೆಗೆ 10 ಪಂದ್ಯಗಳನ್ನು ಆಡಿದೆ. ಅದರಲ್ಲಿ ಆರು ಪಂದ್ಯಗಳನ್ನು ಗೆದ್ದು, ನಾಲ್ಕರಲ್ಲಿ ಸೋತಿದೆ. ಆದರೆ ಇಂಗ್ಲೆಂಡ್ ಇದೇ ಮೊದಲ ಬಾರಿಗೆ  ಇಲ್ಲಿ ಅದೃಷ್ಟವನ್ನು ಪಣಕ್ಕೊಡ್ಡಲಿದೆ.
 
(2005ರಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಟೆಸ್ಟ್ ಪಂದ್ಯ ಆಡಿತ್ತು. ಅದರಲ್ಲಿ ಭಾರತ 9 ವಿಕೆಟ್‌ಗಳಿಂದ ಗೆದ್ದಿತ್ತು). ಬ್ಯಾಟಿಂಗ್ ವಿಕೆಟ್ ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಇಲ್ಲಿ ನಡೆದ ಒಟ್ಟು ಆರು ಪಂದ್ಯಗಳಲ್ಲಿ ತಂಡದ ಸ್ಕೋರು 300ರ ಗಡಿ ದಾಟಿದೆ.

2007-08ರಲ್ಲಿ ಭಾರತವು ನೀಡಿದ್ದ 321 ರನ್ನುಗಳ ಗುರಿಯನ್ನು ಬೆನ್ನಟ್ಟಿದ್ದ  ಪಾಕಿಸ್ತಾನ ಯೂನಿಸ್ ಖಾನ್ ಶತಕದ ನೆರವಿನಿಂದ ಗೆದ್ದಿತ್ತು. ಆದರೆ ಈ ಪಂದ್ಯದಲ್ಲಿ ಈ ಪಿಚ್ ಸ್ಪೋರ್ಟಿಂಗ್ ವಿಕೆಟ್ ಆಗಲಿದೆ ಎಂದು ಪಿಚ್ ಕ್ಯೂರೇಟರ್ ದಲ್ಜೀತ್‌ಸಿಂಗ್ ಸ್ಪಷ್ಟಪಡಿಸುತ್ತಾರೆ.    

ಬದಲಾವಣೆ ಇಲ್ಲ: ಕಳೆದ ಎರಡು ಪಂದ್ಯಗಳಲ್ಲಿ ಆಡಿದ ತಂಡವೇ ಇಲ್ಲಿಯೂ ಕಣಕ್ಕಿಳಿಯುವುದು ಬಹುತೇಕ ಖಚಿತ. ಆದರೆ ಇಂಗ್ಲೆಂಡ್‌ನ ಅಲಿಸ್ಟರ್ ಕುಕ್ ಬಳಗದಲ್ಲಿ ಕೆಲವು ಬದಲಾವಣೆಯ ನಿರೀಕ್ಷೆ ಇದೆ. ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲು ಇಯಾನ್ ಬೆಲ್ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ದೆಹಲಿ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಬಂದಿದ್ದ ಕೆವಿನ್ ಪೀಟರ್ಸನ್ ಈ ಬಾರಿಯೂ ಅದೇ ಕ್ರಮಾಂಕದಲ್ಲಿ ಆಡಿದರೆ, ಜೊನಾಥನ್ ಟ್ರಾಟ್ ಮತ್ತೆ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆಯುತ್ತಾರೆ. ಆದರೆ ಆರಂಭಿಕ ಬ್ಯಾಟ್ಸ್‌ಮನ್ ನಾಯಕ ಕುಕ್ ಮತ್ತು ಕೀಸ್ವೆಟರ್ ಇದುವರೆಗೂ ಸಫಲರಾಗದೇ ಇರುವುದು ತಂಡಕ್ಕೆ ಉತ್ತಮ ಆರಂಭ ಸಿಗುತ್ತಿಲ್ಲ

ತಂಡದೊಂದಿಗೆ ಬಂದಿದ್ದ ವೇಗದ ಬೌಲರ್ ಕ್ರಿಸ್ ವೋಕ್ಸ್ ತೊಡೆಯ ಮಾಂಸಖಂಡದಲ್ಲಿ ಆಗಿರುವ ಗಾಯದಿಂದ ಸ್ವದೇಶಕ್ಕೆ ಹಿಂತಿರುಗಿದ್ದಾರೆ. ಅವರಿಗೆ ಕಳೆದ ಎರಡೂ ಪಂದ್ಯಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದರಿಂದಾಗಿ  ಈ ಪಂದ್ಯದಲ್ಲಿಯೂ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವ ಅವಕಾಶ ಇಂಗ್ಲೆಂಡ್‌ಗೆ ತಪ್ಪಿದೆ. ಮುಂಬೈ ಪಂದ್ಯಕ್ಕೆ ವೋಕರ್ ಬದಲಿಗೆ ಗ್ರಹಾಂ ಓನಿಯನ್ ಬಂದು ಸೇರಿಕೊಳ್ಳಲಿದ್ದಾರೆ.

ಭಾರತಕ್ಕೂ ಉತ್ತಮ ಆರಂಭದ ಸಮಸ್ಯೆಯಿದೆ. ಪಾರ್ಥಿವ್ ಪಟೇಲ್ ಮತ್ತು ಅಜಿಂಕ್ಯ ರಹಾನೆ `ಸೆಟ್~ ಆಗಿಬಿಟ್ಟರೆ ಮುಂದಿನ ಕಾರ್ಯ ಸುಲಭ. ದೆಹಲಿಯಲ್ಲಿ ಅಜೇಯ ಶತಕ ಹೊಡೆದ ವಿರಾಟ್ ಕೊಹ್ಲಿ ಮೊಹಾಲಿಯ ನೆಟ್ಸ್ ನಲ್ಲಿ ಕೋಚ್ ಡಂಕನ್ ಫ್ಲೆಚರ್ ಜೊತೆಗೆ ಸಮಾಲೋಚನೆಯಲ್ಲಿ ಹೆಚ್ಚು ಹೊತ್ತು ಕಳೆದರು.

ನಾಲ್ಕು ವಿಕೆಟ್ ಪಡೆದು ಸಂಭ್ರಮಿಸಿದ್ದ ಕರ್ನಾಟಕದ ವಿನಯಕುಮಾರ್ ಬಹಳ ಹೊತ್ತು ಬೌಲಿಂಗ್ ಅಭ್ಯಾಸ ನಡೆಸಿದರು. ಅವರಿಗೆ ಎಸ್. ಅರವಿಂದ್ ಮತ್ತು ಆರ್. ಅಶ್ವಿನ್ ಕೂಡ ಸಾಥ್ ನೀಡಿದರು. ನೆಟ್ಸ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಮತ್ತು ಬೌಲರ್  ಪ್ರವೀಣಕುಮಾರ್ ಇರಲಿಲ್ಲ. ಹೋಟೆಲ್‌ನಲ್ಲಿಯೇ ವಿಶ್ರಾಂತಿ ಪಡೆದರು. 

ವಿಶ್ವಕಪ್ ನಂತರ ತವರು ನೆಲದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಸರಣಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ದೋನಿ ಬಳಗ ಬುಧವಾರ ರಾತ್ರಿ ಸರಣಿ ವಿಜಯದ ಕನಸು ಕಾಣುತ್ತ ಮಲಗಿದರೆ, ಇಂಗ್ಲೆಂಡ್ ಸರಣಿ ಸೋಲು ತಡೆಯುವ ತಂತ್ರ ಯೋಚಿಸುತ್ತಿತ್ತು.

ಪಂದ್ಯದ ಆರಂಭ: ಮಧ್ಯಾಹ್ನ 2.30.

ನೇರಪ್ರಸಾರ: ನಿಯೊ ಕ್ರಿಕೆಟ್  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT