ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಗೆಲುವಿನತ್ತ ಭಾರತದ ಚಿತ್ತ

ಕ್ರಿಕೆಟ್‌: ಇಂದು ಅಂತಿಮ ಏಕದಿನ ಪಂದ್ಯ, ಪ್ರಬಲ ಪೈಪೋಟಿಯ ನಿರೀಕ್ಷೆ
Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಯುವ ಆಟಗಾರರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯೊದಗಿಸಿರುವ ಏಕದಿನ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯ ಗುರುವಾರ ನಡೆಯಲಿದ್ದು, ಯುವರಾಜ್‌ ಸಿಂಗ್‌ ನೇತೃತ್ವದ ಭಾರತ ‘ಎ’ ಗೆಲುವಿನ ಹಾದಿಗೆ ಮರಳುವ ಪ್ರಯತ್ನ ನಡೆಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಮೂರು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ತಂಡ 77 ರನ್‌ಗಳ ಗೆಲುವು ಪಡೆದಿದ್ದರೆ, ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದ್ದ ವೆಸ್ಟ್‌ ಇಂಡೀಸ್‌ ‘ಎ’ 55 ರನ್‌ಗಳ ಜಯ ಸಾಧಿಸಿತ್ತು.

ಆದ್ದರಿಂದ ಮೂರನೇ ಏಕದಿನ ಪಂದ್ಯ ಯಾರ ಪಾಲಾಗಲಿದೆ ಎಂಬುದನ್ನು  ಊಹಿಸುವುದು ಕಷ್ಟ. ಉಭಯ ತಂಡಗಳೂ ಸರಣಿ ತನ್ನದಾಗಿಸಿಕೊಳ್ಳಬೇಕೆಂಬ ಛಲದಿಂದ ಹೋರಾಟ ನಡೆಸಲಿರುವ ಕಾರಣ ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.

ಮೊದಲ ಪಂದ್ಯದಲ್ಲಿ 123 ರನ್‌ ಗಳಿಸುವ ಮೂಲಕ ಯುವರಾಜ್‌ ಸಿಂಗ್‌ ‘ಹೀರೊ’ ಆಗಿ ಮೆರೆದಿದ್ದರೆ, ಎರಡನೇ ಪಂದ್ಯದಲ್ಲಿ ವಿಂಡೀಸ್‌ ತಂಡದ ಜೊನಾಥನ್‌ ಕಾರ್ಟರ್‌ ಆಕರ್ಷಕ 133 ರನ್‌ ಗಳಿಸಿ ಎಲ್ಲರ ಗಮನ ಸೆಳೆದಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಇವರಲ್ಲೊಬ್ಬರು ಮತ್ತೆ ಮಿಂಚುವರೇ ಅಥವಾ ಹೊಸ ‘ಹೀರೊ’ ಒಬ್ಬ ಎದ್ದು ಬರಲಿದ್ದಾನೆಯೇ ಎಂಬ ಕುತೂಹಲ ಉಂಟಾಗಿದೆ.

ಮೊದಲ ಹಣಾಹಣಿಯಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ್ದ ಭಾರತ ತಂಡ ಮಂಗಳವಾರ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಅನುಭವಿಸಿತ್ತು. ಬ್ಯಾಟಿಂಗ್‌, ಬೌಲಿಂಗ್‌ ಮಾತ್ರವಲ್ಲ, ಫೀಲ್ಡಿಂಗ್‌ನಲ್ಲೂ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆದ್ದರಿಂದ ಸೋಲಿನ ನಿರಾಸೆಯಿಂದ ಹೊರಬಂದು ಸಂಘಟಿತ ಪ್ರದರ್ಶನ ತೋರುವ ಸವಾಲು ‘ಯುವಿ’ ಬಳಗದ ಮುಂದಿದೆ.

ಈ ಪಂದ್ಯದಲ್ಲೂ ಕ್ರಿಕೆಟ್‌ ಪ್ರೇಮಿಗಳ ಗಮನ ಯುವರಾಜ್‌ ಮೇಲೆ ಹರಿಯಲಿದೆ. ಎರಡು ಪಂದ್ಯಗಳಿಂದ  ಒಟ್ಟು 163 ರನ್‌ ಕಲೆಹಾಕಿರುವ ಈ ಎಡಗೈ ಬ್ಯಾಟ್ಸ್‌ಮನ್‌ ಮತ್ತೆ ರನ್‌ ‘ಮಳೆ’ ಸುರಿಸುವರೇ ಎಂಬುದನ್ನು ನೋಡಬೇಕು. ರಾಷ್ಟ್ರೀಯ ತಂಡಕ್ಕೆ ಮರಳುವ ಪ್ರಯತ್ನದಲ್ಲಿರುವ ಯುವರಾಜ್‌ ತಮಗೆ ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ.

ರಾಬಿನ್‌ ಉತ್ತಪ್ಪ ಮತ್ತು ಉನ್ಮುಕ್ತ್‌ ಚಾಂದ್‌ ಅವರಿಂದ ತಂಡ ಉತ್ತಮ ಆರಂಭ ನಿರೀಕ್ಷಿಸುತ್ತಿದೆ. ಇವರು ಇನಿಂಗ್ಸ್‌ಗೆ ಭದ್ರ ಅಡಿಪಾಯ ಹಾಕುವಲ್ಲಿ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದರು. ಕೊಡಗಿನ ಬ್ಯಾಟ್ಸ್‌ಮನ್‌ನ ಸಾಮರ್ಥ್ಯದ ಬಗ್ಗೆ ಯಾರಿಗೂ ಅನು­ಮಾ­ನವಿಲ್ಲ. ಆದರೆ ‘ಅದೃಷ್ಟ’ ಮಾತ್ರ ಅವರ ಜೊತೆ­ಗಿಲ್ಲ. ಇಂದು ಅವರ ಬ್ಯಾಟ್‌ನಿಂದ ದೊಡ್ಡ ಮೊತ್ತ ಮೂಡಿಬರಲಿದೆಯೇ ಎಂಬುದನ್ನು ನೋಡಬೇಕು.

ಆತ್ಮವಿಶ್ವಾಸದಲ್ಲಿ ವಿಂಡೀಸ್‌: ಎರಡನೇ ಪಂದ್ಯದಲ್ಲಿ ದೊರೆತ ಗೆಲುವು ವಿಂಡೀಸ್‌ ತಂಡದ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ. ಆದ್ದರಿಂದ ಪ್ರವಾಸಿ ತಂಡದಿಂದ ಶ್ರೇಷ್ಠಮಟ್ಟದ ಆಟವನ್ನು ನಿರೀಕ್ಷಿಸಬಹುದು.

ಭಾರತದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ ಕಾರ್ಟರ್‌ ಈ ತಂಡದ ಬ್ಯಾಟಿಂಗ್ ವಿಭಾಗದ ಬಲ ಎನಿಸಿಕೊಂಡಿದ್ದಾರೆ. ನಾಯಕ ಕೀರನ್‌ ಪೊವೆಲ್‌, ಕರ್ಕ್‌ ಎಡ್ವರ್ಡ್ಸ್‌ ಮತ್ತು ಬಾನೆರ್‌ ಕೂಡಾ ಲಯ ಕಂಡುಕೊಂಡರೆ ಭಾರತಕ್ಕೆ ಅಪಾಯ ಖಚಿತ.

ಎರಡನೇ ಏಕದಿನ ಪಂದ್ಯದಲ್ಲಿ ವಿಂಡೀಸ್‌ ಬೌಲರ್‌ಗಳ ಪ್ರದರ್ಶನ ಸೊಗಸಾಗಿತ್ತು. ಸ್ಪಿನ್‌ ಹಾಗೂ ವೇಗದ ಬೌಲರ್‌ಗಳು ಶಿಸ್ತಿನ ದಾಳಿ ನಡೆಸುವ ಮೂಲಕ ಭಾರತದ ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕಕ್ಕೆ ಸವಾಲೊಡ್ಡಿದ್ದರು.

ತಂಡಗಳು
ಭಾರತ ‘ಎ’:
ಯುವರಾಜ್‌ ಸಿಂಗ್‌ (ನಾಯಕ), ಉನ್ಮುಕ್ತ್‌ ಚಾಂದ್‌, ರಾಬಿನ್‌ ಉತ್ತಪ್ಪ, ಬಾಬಾ ಅಪರಾಜಿತ್‌, ಕೇದಾರ್‌ ಜಾಧವ್‌, ನಮನ್‌ ಓಜಾ, ಯೂಸುಫ್‌ ಪಠಾಣ್‌, ಆರ್. ವಿನಯ್‌ ಕುಮಾರ್‌, ಜಯದೇವ್‌ ಉನದ್ಕತ್‌, ಸಿದ್ಧಾರ್ಥ್‌ ಕೌಲ್‌, ಸುಮಿತ್‌ ನರ್ವಾಲ್‌, ಶಹಬಾಜ್‌ ನದೀಮ್‌, ಮನ್‌ದೀಪ್‌ ಸಿಂಗ್‌, ರಾಹುಲ್‌ ಶರ್ಮ

ವೆಸ್ಟ್‌ ಇಂಡೀಸ್‌ ‘ಎ’: ಕೀರನ್‌ ಪೊವೆಲ್‌ (ನಾಯಕ), ವೀರಸ್ವಾಮಿ ಪೆರುಮಾಳ್‌, ರನ್ಸ್‌ಫರ್ಡ್‌ ಬೀಟನ್‌, ನಕರುಮ ಬಾನೆರ್‌, ಜೊನಾಥನ್‌ ಕಾರ್ಟರ್‌, ಶೆಲ್ಡನ್‌ ಕಾಟ್ರೆಲ್‌, ಮಿಗುಯೆಲ್‌ ಕಮಿನ್ಸ್‌, ನರಸಿಂಗ ದೇವ್‌ನಾರಾಯಣ್‌, ಕರ್ಕ್‌ ಎಡ್ವರ್ಡ್ಸ್, ಆಂಡ್ರೆ ಫ್ಲೆಚರ್‌, ಲಿಯೊನ್‌ ಜಾನ್ಸನ್‌, ನಿಕಿತಾ ಮಿಲ್ಲರ್‌, ಆಶ್ಲೆ ನರ್ಸ್‌, ಆಂಡ್ರ ರಸೆಲ್‌, ಡೆವೊನ್‌ ಥಾಮಸ್‌
ಪಂದ್ಯದ ಆರಂಭ: ಬೆಳಿಗ್ಗೆ 9.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT