ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಹಂತಕನಿಗೆ ಗಲ್ಲು

20 ಮಹಿಳೆಯರನ್ನು ಕೊಂದ ಮೋಹನ್‌ಗೆ ಮೂರು ಪ್ರಕರಣದಲ್ಲಿ ನೇಣು
Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಂಗಳೂರು: ಸೈನೈಡ್‌ ತಿನ್ನಿಸಿ 20 ಮಹಿಳೆಯರ ಸರಣಿ ಕೊಲೆ ನಡೆಸಿದ ಆರೋಪ ಎದುರಿ­ಸುತ್ತಿರುವ ಶಿಕ್ಷಕ ಮೋಹನ್‌ಕುಮಾರ್‌ ಎಂಬಾ­ತ­­ನಿಗೆ ಇಲ್ಲಿನ ನಾಲ್ಕನೇ ಹೆಚ್ಚು­ವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶನಿವಾರ ಮೂರು ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿದೆ.

ಇವು ಅಪರೂಪದಲ್ಲಿ ಅಪರೂಪದ ಪ್ರಕರಣಗಳು ಎಂದು ನ್ಯಾಯಾಧೀಶ ಬಿ.ಕೆ.ನಾಯಿಕ ಅಭಿಪ್ರಾಯ­ಪಟ್ಟಿದ್ದಾರೆ.

ಹೈಕೋರ್ಟ್‌ ಈ ಶಿಕ್ಷೆಯನ್ನು ದೃಢೀಕರಿಸಿದ ನಂತರ ಅಪರಾಧಿಯನ್ನು ನೇಣುಗಂಬಕ್ಕೆ ಏರಿಸಲಾಗುತ್ತದೆ.

ಬಂಟ್ವಾಳ ತಾಲ್ಲೂಕಿನ ಬರಿಮಾರು ಗ್ರಾಮದ ಅನಿತಾ (22), ವಾಮದ ಪದವು ಗ್ರಾಮದ ಕೋಡಂ­ಬೆಟ್ಟುವಿನ ಲೀಲಾ (32) ಹಾಗೂ ಸುಳ್ಯ ತಾಲ್ಲೂಕಿನ ಪೆರ್ವಾಜೆ ಗ್ರಾಮದ ಸುನಂದಾ (28) ಕೊಲೆ ಪ್ರಕರಣಗಳಲ್ಲಿ ಬಂಟ್ವಾಳ ತಾಲ್ಲೂಕಿನ ಕನ್ಯಾನದ ಶಿಕ್ಷಕ ಮೋಹನ ಕುಮಾರ್‌ ಅಪರಾಧಿ. ಅದಕ್ಕಾಗಿ ಅವನನ್ನು ಗಲ್ಲಿಗೆ ಏರಿಸಬೇಕು ಎಂದು ನ್ಯಾಯಾಧೀಶರು 125 ಪುಟಗಳ ಸುದೀರ್ಘ ಆದೇಶದಲ್ಲಿ ತಿಳಿಸಿದ್ದಾರೆ. ಆತನ ವಿರುದ್ಧ ದಾಖಲಾಗಿರುವ ಇನ್ನೂ 17 ಮಹಿಳೆ­ಯರ ಕೊಲೆ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ವಂಚನೆ, ದೇಹಸಂಬಂಧ: ‘ಸರ್ಕಾರಿ ನೌಕರಿಯ­ಲ್ಲಿ­ದ್ದೇನೆ’ ಎಂದು ಹೇಳಿಕೊಂಡು, ಸುಳ್ಳು ಹೆಸರಿನಲ್ಲಿ ಪರಿಚ­ಯಿಸಿಕೊಳ್ಳುತ್ತಿದ್ದ ಮೋಹನ್‌, ಬಡ ಕುಟುಂಬದ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಅವರನ್ನು ಮದುವೆಯಾಗುವುದಾಗಿ ನಂಬಿಸಿ ದೂರದ ಊರಿಗೆ ಕರೆದೊಯ್ದು ಅಲ್ಲಿನ ವಸತಿಗೃಹಗಳಲ್ಲಿ ಬಲಾ
ತ್ಕಾ­ರವಾಗಿ ಲೈಂಗಿಕ ಕ್ರಿಯೆ ನಡೆಸು­ತ್ತಿದ್ದ. ಬಳಿಕ ಗರ್ಭಧಾರಣೆ ತಡೆ­ಯುವ ಔಷಧಿ ಎಂದು ಸೈನೈಡ್‌ ತಿನಿಸಿ ಕೊಲೆ ಮಾಡುತ್ತಿದ್ದ. ಎಲ್ಲಾ ಪ್ರಕರಣಗಳಲ್ಲೂ ಮಹಿಳೆಗೆ ಸೈನೈಡ್‌ ತಿನ್ನಿಸಲು ಬಳಸುತ್ತಿದ್ದುದು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳನ್ನೇ. ನಿಲ್ದಾಣದ ಶೌಚಾಲಯದಲ್ಲಿ ಮಹಿಳೆ ಸೈನೈಡ್‌ ಸೇವಿಸಿ ಮೃತಪಟ್ಟಿದ್ದು ಖಚಿತಪಟ್ಟ ಬಳಿಕ ವಸತಿಗೃಹಕ್ಕೆ ತೆರಳಿ ಆಕೆಯ ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಿದ್ದ.

ಶಿಕ್ಷೆಯಾದ ಮೂರು ಪ್ರಕರಣ­ಗಳಲ್ಲೂ ಮೋಹನ ಅತ್ಯಾಚಾರ ಮತ್ತು ಕೊಲೆ ನಡೆಸಿರುವುದು ಸಾಂದರ್ಭಿಕ ಸಾಕ್ಷ್ಯಗಳಿಂದ ಸಾಬೀತಾಗಿತ್ತು.

ಗಲ್ಲು ಶಿಕ್ಷೆ ಮಾತ್ರವಲ್ಲದೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ 5 ರಿಂದ 10 ವರ್ಷಗಳ  ಕಠಿಣ ಶಿಕ್ಷೆ,ರೂ 38 ಸಾವಿರ ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಸಂತ್ರಸ್ತ ಕುಟುಂಬ­ಗಳಿಗೆ ಪಾವತಿ­ಸಬೇಕು’ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

ನಿರ್ದಯಿ: ‘ಪೊಲೀಸರು ಹಾಜರು­ಪಡಿಸಿದ ಆಭರಣ­ಗಳನ್ನು ಸಾಲ ಮಾಡಿ ಖರೀದಿಸಿದ್ದೆ ಎಂದು ವಾದಿಸುವ ಮೂಲಕ ಅಪರಾಧಿಯು ನ್ಯಾಯಾಲಯದ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ. ತನ್ನನ್ನೇ ನಂಬಿ ಬಂದ ಮಹಿಳೆಯರ ಅತ್ಯಾಚಾರ ನಡೆಸಿದ್ದಲ್ಲದೇ,ಕಣ್ಮುಂ­ದೆಯೇ ಅವರು ನರಳಿ ಸತ್ತ ಬಳಿಕವೂ ಅವರ ಆಭರ­ಣಗಳನ್ನು ದೋಚಿದ್ದಾನೆ. ಮತ್ತೆ ಮತ್ತೆ ನಿರ್ದಯವಾಗಿ ಕೊಲೆಗಳನ್ನು ಮುಂದುವರಿಸಿದ್ದಾನೆ. ಇವೆಲ್ಲ ಪೂರ್ವ ನಿಯೋಜಿತವೇ ಹೊರತು ಪರಿಸ್ಥಿತಿಯ ಒತ್ತಡದಿಂದ ಸಂಭವಿಸಿದವುಗಳಲ್ಲ. ಇಂಥ ಅಪರಾಧಿಗೆ ರಿಯಾಯಿತಿ ತೋರಿಸಿದರೆ ನ್ಯಾಯಾಲಯದ ಮೇಲಿನ ನಂಬಿಕೆಗೂ ಕುತ್ತು ಬರಬಹುದು. ಹಾಗಾಗಿ ಆತನಿಗೆ ಮರಣ ದಂಡನೆಯೇ ಸೂಕ್ತ’ ಎಂದು ನ್ಯಾಯಾಧೀಶರು  ಅಭಿಪ್ರಾಯಪಟ್ಟಿದ್ದಾರೆ.

ಅಪರಾಧಿ ಮುಖದಲ್ಲಿ ನಗು
ನ್ಯಾಯಾಧೀಶರು ಗಲ್ಲು ಶಿಕ್ಷೆ ಪ್ರಕಟಿಸು­ವಾಗಲೂ ಅಪರಾಧಿ ಮೋಹನ ಸ್ವಲ್ಪವೂ ವಿಚಲಿತನಾಗಲಿಲ್ಲ. ‘ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದು ಆತ ಮಾಧ್ಯ­ಮದವರಿಗೂ ನಗುಮೊಗದಿಂದಲೇ ಉತ್ತರಿಸಿದ. ಆದೇಶ ಪ್ರಕಟಿಸುವಾಗ ಆತನ ಕುಟುಂಬಸ್ಥರು ಯಾರೂ ಕೋರ್ಟ್‌ನಲ್ಲಿ ಹಾಜರಿರಲಿಲ್ಲ.

ಒಂದೇ ದಿನ ಮೂರು ನೇಣು ಶಿಕ್ಷೆ
‘ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಒಂದೇ ದಿನ, ಒಬ್ಬನೇ ಆರೋಪಿಗೆ 3 ಪ್ರತ್ಯೇಕ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿ­ರುವುದು ಇದೇ ಮೊದಲು. ಒಬ್ಬನೇ ವ್ಯಕ್ತಿ ಮೇಲೆ 20 ಪ್ರತ್ಯೇಕ  ಕೊಲೆ ಪ್ರಕರಣಗಳು ಎಲ್ಲೂ ಇಲ್ಲ’ ಎಂದು ಸಂತ್ರಸ್ತರ ಪರ ವಾದ ಮಂಡಿಸಿದ್ದ ವಿಶೇಷ ಸರ್ಕಾರಿ ವಕೀಲ ಚೆಯ್ಯಬ್ಬ ಬ್ಯಾರಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಕರುಣೆಗೆ ಅರ್ಹನಲ್ಲ
ವೃದ್ಧ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ತನ್ನನ್ನೇ ಅವಲಂಬಿಸಿರುವುದರಿಂದ ಶಿಕ್ಷೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಅಪರಾಧಿ  ಮನವಿ ಮಾಡಿಕೊಂಡಿದ್ದಾನೆ. ಆದರೆ, ಆತ ಕರುಣೆಗೆ ಅರ್ಹನಲ್ಲ.

ನ್ಯಾಯಾಧೀಶ ಬಿ.ಕೆ. ನಾಯಿಕ

ನಿಬ್‌ ಮುರಿದ ನ್ಯಾಯಾಧೀಶರು
ಅಪರಾಧಿಗೆ ಗಲ್ಲುಶಿಕ್ಷೆ ನೀಡುವ ಆದೇಶಕ್ಕೆ ಸಹಿ ಹಾಕಿದ ಬಳಿಕ ನ್ಯಾಯಾಧೀಶ ನಾಯಿಕ ಅವರು ಪೆನ್ನಿನ ನಿಬ್‌ ಮುರಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT