ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ರೇಖೆ ವಕ್ರರೇಖೆ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಮ್ಮ ನಿಜವಾದ ಊರು ಆಂಧ್ರಪ್ರದೇಶದ ಕಡಪ ಬಳಿಯ ಕಮಲಾಪುರಂ. ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದ ಅಪ್ಪ ಕುಷ್ಟಗಿ, ಕೊಪ್ಪಳ, ಸಂಡೂರು ಮುಂತಾದ ಕಡೆಗಳಲ್ಲಿ ಕೆಲಸ ಮಾಡಿದ್ದರು. ಹೀಗಾಗಿ ಚಿಕ್ಕಂದಿನಲ್ಲೇ ಹಲವು ಊರುಗಳ ಪರಿಚಯವಾಯಿತು.

ನಮ್ಮದೇನೂ ಕಲಾವಿದರ ಮನೆತನವಲ್ಲ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿದ್ದಾಗ ತಿಪ್ಪೇಸ್ವಾಮಿ ಎಂಬ ಕಲಾವಿದರ ಪರಿಚಯವಾಯಿತು. ಆತ ನನ್ನಕ್ಕನ ಕ್ಲಾಸ್‌ಮೇಟ್. ಅವರು ಅದ್ಭುತವಾಗಿ ಚಿತ್ರಗಳನ್ನು ಬರೆಯುತ್ತಿದ್ದರು. ಅವರು ಬರೆಯುವುದನ್ನು ಗಂಟೆಗಟ್ಟಲೆ ಸುಮ್ಮನೆ ಗ್ರಹಿಸುತ್ತಿದ್ದೆ.

ಸಂಡೂರು ಅದ್ಭುತವಾದ ನಿಸರ್ಗ ಪ್ರದೇಶ. ಎಂಥವರನ್ನೂ ಕವಿಯಾಗಿಸುವ ಶಕ್ತಿ ಅಲ್ಲಿನ ಮಣ್ಣಿಗೆ ಇದೆ. ಹತ್ತಿರದ ಕುಮಾರಸ್ವಾಮಿ ದೇವಸ್ಥಾನ, ಗಂಡಿ ನರಸಿಂಹಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಪುಟ್ಟದಾಗಿ ಭೂದೃಶ್ಯಗಳನ್ನು ಚಿತ್ರಿಸಲು ಕಲಿತೆ. ಹತ್ತನೇ ತರಗತಿ ಓದುತ್ತಿದ್ದಾಗ ವ್ಯಂಗ್ಯಚಿತ್ರಗಳು ಆಕರ್ಷಿಸಿದವು.
ಅಪ್ಪನಿಗೆ ಚಿತ್ರ ಬರೆಯುವುದು ಸುತರಾಂ ಇಷ್ಟವಿರಲಿಲ್ಲ.
 
ಬ್ರಶ್ ಹಿಡಿದು ಹಾಳಾಗಿ ಹೋಗ್ತೀಯಾ ಎಂಬ ಬೈಗುಳ. ಕಲೆಯನ್ನು ಅಕಾಡೆಮಿಕ್ ಆಗಿ ಅಧ್ಯಯನ ಮಾಡುವ ಆಸೆ ಈಡೇರಲಿಲ್ಲ. ನನಗಿಷ್ಟವಿಲ್ಲದಿದ್ದರೂ ಅಪ್ಪನ ಆಸೆಯಂತೆ ಕಡೆಗೆ ನಡೆದುಕೊಂಡೆ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಮೂರನೇ ರ‌್ಯಾಂಕ್‌ನೊಂದಿಗೆ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದೆ. ಆದರೆ ಅವರ ಕಣ್ತಪ್ಪಿಸಿ ಚಿತ್ರ ಬರೆಯುವ ಹುಚ್ಚು ಮಾತ್ರ ಹೋಗಲಿಲ್ಲ.

ಬಳ್ಳಾರಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ ಪುಣೆಯ ದೌಂಡ್‌ನಲ್ಲಿ ನನ್ನ ವೃತ್ತಿ ಜೀವನ ಆರಂಭವಾಯಿತು. ಮೂರು ವರ್ಷಗಳ ಕಾಲ ಅಲ್ಲಿನ ಕಂಪೆನಿಯೊಂದರಲ್ಲಿ ದುಡಿದೆ. ಪಶ್ಚಿಮ ಬಂಗಾಳಕ್ಕೆ ವರ್ಗವಾಗುವ ಸೂಚನೆಗಳು ಕಂಡುಬಂದಾಗ ಊರಿನ ನೆನಪಾಗಿ ಮತ್ತೆ ಮರಳಿದೆ.

ಅಲ್ಲಿಂದ ಮುಂದೆ ಬಳ್ಳಾರಿಯ ಉಕ್ಕಿನ ಕಂಪೆನಿಯೊಂದರಲ್ಲಿ ಕೆಲಸ. ಕಂಪೆನಿಯ ಮಾಲೀಕರಲ್ಲಿ ಒಬ್ಬರಾದ ಸಂಗೀತಾ ಜಿಂದಾಲ್ ನನ್ನ ಕಲಾಕಾರ್ಯವನ್ನು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸಿದರು. ಅವರ  ಆರ್ಟ್ ಇಂಡಿಯಾ ನಿಯತಕಾಲಿಕೆ ನಡೆಸುತ್ತಿದ್ದ ಸ್ಪರ್ಧೆಗಳಲ್ಲಿ ಎರಡು ಬಾರಿ ಬಹುಮಾನ ಪಡೆದೆ. ನಂತರ ಅದೇ ಸ್ಪರ್ಧೆಗೆ ತೀರ್ಪುಗಾರನಾಗಿ ಸೇವೆ ಸಲ್ಲಿಸಿದೆ.

ಬೆಂಗಳೂರಿನಲ್ಲಿ ಕಂಪೆನಿಯ ಕನ್ಸಲ್ಟೆಂಟ್ ಆಗಿ ದುಡಿಯುತ್ತಿದ್ದಾಗ ರೇಖಾರಾಣಿ ಹಾಗೂ ಪ್ರತಿಭಾ ನಂದಕುಮಾರ್ ಅವರ `ಮಕರಂದ~ ಪತ್ರಿಕೆಗೆ ಶೀರ್ಷಿಕೆಗಳನ್ನು ಬರೆದುಕೊಡುತ್ತಿದ್ದೆ. ಲಂಕೇಶ್ ಬಳಗದಿಂದ ಹೊರಬಂದ ಕೆಲ ಹಿರಿಯ ಪತ್ರಕರ್ತರ `ಈ ವಾರ~ ಕರ್ನಾಟಕ ಪತ್ರಿಕೆಗೂ ಕೆಲಸ ಮಾಡಿದೆ.

ಈ ಮಧ್ಯೆ ತೆಲುಗಿನ ಯಂಡಮೂರಿ ವೀರೇಂದ್ರನಾಥ್ ಹಾಗೂ ಮಲ್ಲಾದಿ ವೆಂಕಟಕೃಷ್ಣ ಮೂರ್ತಿ ಅವರ ಕೆಲವು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದೆ.

ಕಲಾವಿದನಾಗಬೇಕು ಎಂಬ ತುಡಿತ ನನ್ನನ್ನು ಮತ್ತೊಂದು ಹಾದಿಗೆ ಕೊಂಡೊಯ್ಯಿತು. ಕಾರ್ಖಾನೆ ಕೆಲಸವನ್ನು ತ್ಯಜಿಸಿದೆ. ಹೊಟ್ಟೆಪಾಡಿಗೆ ಕನ್‌ಸ್ಟ್ರಕ್ಷನ್ ಕಂಪೆನಿ ತೆರೆದು ಕಲೆಯನ್ನು ಇನ್ನಷ್ಟು ಧ್ಯಾನಿಸತೊಡಗಿದೆ.

ತೆಲುಗಿನ ವ್ಯಂಗ್ಯಚಿತ್ರಕಾರ ಬಾಪು ಹಾಗೂ ಮಯೂರ ಮಾಸಿಕದಲ್ಲಿ ರೇಖೆಗಳಲ್ಲಿ ಭೂದೃಶ್ಯಗಳನ್ನು ರಚಿಸುತ್ತಿದ್ದ ಕಮಲೇಶ್ ನನ್ನ ಗೆರೆಗಳಿಗೆ ಅಪಾರ ಸ್ಫೂರ್ತಿ ನೀಡಿದರು. ಜತೆಗೆ ಜಿ.ಕೆ. ಸತ್ಯ, ರಾ. ಸೂರಿ, ಪಿ. ಮಹಮದ್, ಚಂದ್ರನಾಥ ಆಚಾರ್ಯ, ಜೇಮ್ಸವಾಚ್, ಎಸ್.ವಿ. ಪದ್ಮನಾಭ, ಕರುಣಾಕರ್ ಮುಂತಾದ ಕಲಾವಿದರ ಒಡನಾಟ ಕಲೆಯ ಹಾದಿಯಲ್ಲಿ ಸಾಗುವಂತೆ ಹುರಿದುಂಬಿಸಿತು.

ವ್ಯಂಗ್ಯಚಿತ್ರಗಳ ಕಾರ್ಯಾಗಾರದಲ್ಲಿ ಸಿಗದ ಅನುಭವವನ್ನು ಈ ಕಲಾವಿದರ ಸಂಪರ್ಕ ದೊರಕಿಸಿಕೊಟ್ಟಿತು. ಚಿತ್ರಕ್ಕೆ ಎಂಥ ಕುಂಚ ಬಳಸಬೇಕು, ಕೃತಿಯ ಗಾತ್ರ ಎಷ್ಟಿರಬೇಕು ಎಂಬ ಸಣ್ಣ ಸಣ್ಣ ವಿವರಗಳೂ ಸಿಕ್ಕವು.

ಕಥೆಗಾರ ಜಯಂತ ಕಾಯ್ಕಿಣಿ ಆಗ ಸಾಂಸ್ಕೃತಿಕ ಮಾಸಿಕವೊಂದರ ಸಂಪಾದಕರಾಗಿದ್ದರು. ಅವರ ಪರಿಚಯವಾಗಿದ್ದು ಮತ್ತೊಬ್ಬ ಕಥೆಗಾರ, ನನ್ನ ಚಡ್ಡಿದೋಸ್ತು ವಸುಧೇಂದ್ರನಿಂದ. ಕಾಯ್ಕಿಣಿ ಪ್ರೋತ್ಸಾಹವನ್ನು ಎಂದಿಗೂ ಮರೆಯಲಾರೆ.

ಬಿದರಹಳ್ಳಿ ನರಸಿಂಹಮೂರ್ತಿ ಅವರ ಕತೆಯೊಂದರಲ್ಲಿ  ಭೂಮಿ ಮತ್ತು ತೀರ್ಥ ಪ್ರೀತಿಸಿ ಮದುವೆಯಾದರು ಎಂಬ ಸಾಲಿದೆ. ನಾನು ಸಾಂದರ್ಭಿಕ ಚಿತ್ರ ರಚಿಸಿದ ಮೊದಲ ಕತೆ ಅದು. ಅದರ ನೆನಪಿಗಾಗಿ ನನ್ನ ಮಗಳಿಗೆ ಭೂಮಿ ಎಂಬ ಹೆಸರಿಟ್ಟೆ.

ನನ್ನೆಲ್ಲ ಕೆಲಸಗಳಿಗೆ ಕನಸುಗಳಿಗೆ ಬೆಂಗಾವಲಾಗಿ ನಿಂತಿರುವುದು ಮಡದಿ ಶ್ಯಾಮಲಾ. ಕಾಲೇಜು ದಿನಗಳಲ್ಲಿ ಆಕೆ ಹಾಗೂ ನಾನು ಸಹಪಾಠಿಗಳು ಬೆಂಗಳೂರಿನಲ್ಲಿದ್ದಾಗ ಇಬ್ಬರ ನಡುವೆ ಪ್ರೇಮ ಚಿಗುರಿತು. ವೃತ್ತಿಯಲ್ಲಿ ವಾಸ್ತುಶಿಲ್ಪಿಯಾಗಿರುವ ಆಕೆಗೆ ನಾನು ಪೂರ್ಣಾವಧಿ ಪೇಂಟರ್ ಆಗಬೇಕೆಂಬ ಆಸೆ.

ಸದ್ಯಕ್ಕೆ ಚಲನಚಿತ್ರ ತಯಾರಕ ರಾಮ್ ಗೋಪಾಲ್‌ವರ್ಮರ  `ನಾ ಇಷ್ಟಂ~ ತೆಲುಗು ಕೃತಿಯನ್ನು ಕನ್ನಡಕ್ಕೆ ನನ್ನಿಷ್ಟ ಹೆಸರಿನಲ್ಲಿ ತರುತ್ತಿದ್ದೇನೆ. ಕ್ರಾಂತಿಕಾರಿ ಚೆಗ್ವೆರಾನ ಬದುಕನ್ನು ಕುರಿತ ಮೋಟರ್ ಸೈಕಲ್ ಡೈರೀಸ್ ಪುಸ್ತಕವನ್ನು ಅನುವಾದಿಸುವ ಸಂಬಂಧ ಚೆಗ್ವೆರಾ ಸಹೋದರಿ ಅಲಿಡಾ ಗ್ವೆರಾ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ.

ನನ್ನ ನಿಜವಾದ ಹೆಸರು ಸೃಜನ್ ಅಲ್ಲ. ಪಿ. ಶ್ರೀಕಾಂತ್, ಪುತ್ತೂರು ಶ್ರೀಕಾಂತ್ ಎಂಬ ಹೆಸರುಗಳಲ್ಲಿ ಚಿತ್ರ ಕಳಿಸಿದಾಗ ಪತ್ರಿಕೆಗಳಲ್ಲಿ ತಿರಸ್ಕೃತವಾಗುತ್ತಿದ್ದವು. ಆದರೆ ಸೃಜನ್ ಎಂಬ ಹೆಸರಿನಲ್ಲಿ ಬರೆದ ಚಿತ್ರಗಳು ಕ್ಲಿಕ್ ಆದವು. ಸೃಷ್ಟಿಶೀಲತೆಯನ್ನು ನೆನಪಿಗೆ ತರುತ್ತದೆಯಾದ್ದರಿಂದ ಅದೇ ಹೆಸರಿರಲಿ ಎಂದು ನಿರ್ಧರಿಸಿದೆ.

ರೇಖಾಚಿತ್ರಗಳಿಗೆ ಸಾಂದರ್ಭಿಕ ಮಹತ್ವವಿದೆ. ಆದರೆ ಶಾಶ್ವತತೆ ಇಲ್ಲ. ಹೀಗಾಗಿ ರೇಖಾಚಿತ್ರಗಳಿಗಿಂತ ಪೇಂಟಿಂಗ್ ಬಗ್ಗೆ ಈಗೀಗ ಹೆಚ್ಚು ಗಮನ ಹರಿಸುತ್ತಿದ್ದೇನೆ. ಪೇಂಟಿಂಗ್‌ನಲ್ಲಿ ಭಾವನೆಗಳನ್ನು ಢಾಳವಾಗಿ ಬಿಂಬಿಸಬಹುದು ಎಂಬ ನಂಬಿಕೆಯೂ ಇದರೊಂದಿಗೆ ಕೆಲಸ ಮಾಡುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT