ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳೀಕರಿಸಲಾಗದ ಹಲವು ಆಯಾಮಗಳು

ಚರ್ಚೆ
Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಚನ ಸಾಹಿತ್ಯದ ಬಗ್ಗೆ ಸತತವಾಗಿ ಲೇಖನಗಳು, ಪ್ರತಿಕ್ರಿಯೆಗಳು ಪ್ರಕಟವಾಗುತ್ತಿವೆ. ನಾನು ಕಂಡಂತೆ ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಇತ್ತೀಚೆಗೆ ಈ ರೀತಿಯ ಗಂಭೀರ ಚರ್ಚೆ ನಡೆದದ್ದೇ ಇಲ್ಲ. ಬಸವಲಿಂಗಪ್ಪನವರ `ಬೂಸಾ' ಪ್ರಕರಣದ ಸಂದರ್ಭದಲ್ಲಿ ನಡೆದ ಸಾಹಿತ್ಯದ ಚರ್ಚೆಯ ನಂತರದಲ್ಲಿ ಈ ರೀತಿ ನಡೆಯುತ್ತಿದೆ. ಇದಕ್ಕಾಗಿ `ಪ್ರಜಾವಾಣಿ' ಗೆ ನಮ್ಮ ವಂದನೆಗಳು.

ಈ ಸರದಿಯಲ್ಲಿ ವಿಜಯಕುಮಾರ್ ಬೋರಟ್ಟಿಯವರ ಲೇಖನ (ಏ. 11) ಸದುದ್ದೇಶದಿಂದ ಕೂಡಿರುವುದಾದರೂ ರಾಜಾರಾಮ ಹೆಗಡೆ, ಡಂಕಿನ್, ಬಾಲಗಂಗಾಧರ ಹಾಗೂ ಶಿವಪ್ರಕಾಶರು ಇತಿಹಾಸದ ಸಂಕೀರ್ಣತೆಯನ್ನು ಅರ್ಥೈಸುವುದರ ಜೊತೆಗೆ ತಿರುಚುವ ಪ್ರಯತ್ನ ಮಾಡಿದ್ದಾರೆ ಅನ್ನುವುದು ಒಪ್ಪಲಾಗದ ಮಾತು.

ಪ್ರತಿ ಯುಗವೂ, ಪ್ರತಿ ಕಾಲವೂ ಸಂದರ್ಭವಂಚಿತ ಹೊಸ ಹೊಸ ಮಾನದಂಡಗಳನ್ನು ರೂಪಿಸುತ್ತಾ ಸಾಗುತ್ತಿರುತ್ತದೆ. ಈ ಮಾನದಂಡಗಳಲ್ಲಿ ಯಾವುದು ಗಟ್ಟಿ, ಯಾವುದು ಪೊಳ್ಳು ಎಂಬುದನ್ನು ಕಾಲವೇ ನಿರ್ಧರಿಸುತ್ತದೆಯೇ ಹೊರತು ವ್ಯಕ್ತಿಗಳಲ್ಲ. ಇದರಿಂದಾಗಿಯೇ ಇಪ್ಪತ್ತನೇ ಶತಮಾನದಲ್ಲಿ ಬಂದ ನವ್ಯ, ನವ್ಯೋತ್ತರ ಚಿಂತನೆಯ ಜೊತೆಗೇ ಬಂದ ವಸಾಹತೋತ್ತರ ವಿಮರ್ಶೆ, ಸ್ತ್ರೀ ವಾದಿ ನೆಲೆಗಳಿಂದ ಹದಿನಾರನೇ ಶತಮಾನದಲ್ಲಿ ಬಂದ ವಿಲಿಯಂ ಷೇಕ್ಸ್‌ಪಿಯರ್‌ನಿಂದ ಹಿಡಿದು ಮೇರಿ ಶೆಲ್ಲಿಯ ಕೃತಿಗಳನ್ನು ಹೊಸ ಮಾನದಂಡಗಳಿಂದ ಒರೆ ಹಚ್ಚಲು ಸಾಧ್ಯ. ಈ ಕ್ರಿಯೆಯಿಂದ ಹೊಸ ಹೊಸ ಅಚ್ಚರಿಗೊಳಿಸುವ ಒಳನೋಟಗಳೂ ಹೊರಬರಲು ಸಾಧ್ಯ. ಈ ಮಾನದಂಡಗಳು ಇತ್ತೀಚೆಗೆ ಬಂದವು. ಆದ್ದರಿಂದ ಅವು ಹಿಂದಿನ ಸಾಹಿತ್ಯಕ್ಕೆ ಅಪ್ರಸ್ತುತ ಎನ್ನುವುದು ಬಾಲಿಶವಾದ ಪ್ರತಿಕ್ರಿಯೆ ಎಂದೆನಿಸುತ್ತದೆ.

`ವಚನ ಸಾಹಿತ್ಯ' ಸಾಮಾಜಿಕ ಚಳವಳಿಯೂ ಆಗಿತ್ತೇ ಇಲ್ಲವೇ ಅಥವಾ ಅದೂ ಕೂಡ ಕಾಲಾಂತರದಲ್ಲಿ ಪುರೋಹಿತಶಾಹಿ ಆಯಿತೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಹೆಸರಾಂತ ಚರಿತ್ರಕಾರರಾದ ದ್ವಿಜೇಂದ್ರ ನಾರಾಯಣ ಝಾರವರ `ಕನ್‌ಸ್ಟ್ರಕ್ಟಿಂಗ್ ಹಿಂದೂ ಐಡೆಂಟಿಟಿ' ಲೇಖನದಲ್ಲಿರುವ ಅಡಿಟಿಪ್ಪಣಿ ನಮ್ಮನ್ನು ಬೇರೆ ರೀತಿಯಲ್ಲಿಯೂ ಚಿಂತಿಸುವಂತೆ ಮಾಡುತ್ತಿದೆ. ಝಾರವರ ಪ್ರಕಾರ `ಹಿಂದೂ' ಎನ್ನುವುದೇ ಹತ್ತೊಂಬತ್ತನೆಯ ಶತಮಾನದ ನಂತರದಲ್ಲಿ - ಅಂದರೆ ಯೂರೋಪಿನ ರಿನೈಸಾನ್ಸ್ - ಪ್ರಾಟಸ್ಟೆಂಟ್ - ವಸಾಹತು ಚಿಂತನೆಯಿಂದ ಬಂದದ್ದು.

ಅದಿರಲಿ ಅವರು `ಹಿಂದೂ' ಬಗ್ಗೆ ಬರೆಯುತ್ತ `ವೀರಶೈವ' ಧರ್ಮ ಹಾಗೂ ಚಿಂತನೆಯ ಬಗ್ಗೆ ಅಡಿಟಿಪ್ಪಣಿಯಲ್ಲಿ ವೀರಶೈವ ಚಿಂತನೆ ಆದಿಯಲ್ಲಿ ವೇದಗಳನ್ನು ಅಲ್ಲಗಳೆಯಿತೆಂದೂ, ಬಿಜ್ಜಳನ ಆಸ್ಥಾನದಲ್ಲಿ ಬಸವ `ವೇದಾಂತ'ದ ಬಗ್ಗೆ ಪಂಡಿತನೊಬ್ಬ ಪರಿಚಯಗೊಳಿಸಿದನೆಂದು ಬಸವ ಪುರಾಣ ಉಲ್ಲೇಖಿಸುತ್ತದೆಂದು ತಿಳಿಸುತ್ತಾರೆ - ಆದಾಗ್ಯೂ ವೀರಶೈವರು ಈ ಚಳವಳಿಯ ನಂತರದಲ್ಲಿ ವರ್ಣಾಶ್ರಮ ಧರ್ಮವನ್ನು ಬೆಂಬಲಿಸಿದರೆಂದೂ ತಿಳಿಸುತ್ತಾರೆ. ಹದಿನಾಲ್ಕನೇ ಶತಮಾನದಲ್ಲಿದ್ದ ಭೀಮಕವಿ ಹಾಗೂ ಶ್ರೀಪತಿ ಪಂಡಿತರ ಕೃತಿಗಳಲ್ಲಿ ಇದು ಸ್ಪಷ್ಟವಾಗಿದೆ ಎಂದೂ ತಿಳಿಸುತ್ತಾರೆ. ಶ್ರೀಪತಿ ಪಂಡಿತನಂತು ವೈದಿಕ ಕರ್ಮಾಚರಣೆಗಳೂ ಹಾಗೂ ಜಾತಿ - ಸಂಬಂಧಿತ ಕರ್ಮ - ಆಚರಣೆಗಳೂ ಅವಶ್ಯವೆಂದೂ ತಿಳಿಸುತ್ತಾನೆ. ಜಾತಿ - ಸಂಬಂಧ ಕರ್ಮಾಚರಣೆಯ ಬಗ್ಗೆ ವೀರಶೈವ ಧರ್ಮದಲ್ಲಿ ನಂಬಿಕೆ ಇರುವವರಿಗೆ ನಂಬಿಕೆ ಅಗತ್ಯವೆಂದು `ಅವರ ಮೂಲಭೂತ ಕೃತಿ' ಯಾದ `ಲಿಂಗಧಾರಣ ಚಂದ್ರಿಕ' ಕೃತಿ ತಿಳಿಸುತ್ತದೆಂದೂ ಝಾ ತಿಳಿಸುತ್ತಾರೆ.

ಇದರ ಹಿನ್ನೆಲೆಯಲ್ಲಿ ವಚನ ಸಾಹಿತ್ಯ ಜಾತಿ ವಿರೋಧಿ ಅಲ್ಲ ಎನ್ನುವುದು ಈ ಚರ್ಚೆಯನ್ನು ಸರಳೀಕರಿಸಿ ಬಿಡುತ್ತದೆಯೇ ಎಂಬ ಪ್ರಶ್ನೆ ಏಳುತ್ತದೆ. ಅತ್ಯಂತ ಮಹತ್ವದ ಸಾಹಿತ್ಯವಾದ ವಚನ ಸಾಹಿತ್ಯವನ್ನು ಈ ಎಲ್ಲ ದೃಷ್ಟಿಕೋನಗಳಲ್ಲಿ ಯಾವುದನ್ನೂ ನಿಕೃಷ್ಟಗೊಳಿಸದೆ ನೋಡುವ ಅಗತ್ಯವಿದೆ.
- ಕೃಷ್ಣಮೂರ್ತಿ ಚಂದರ್
ಇಂಗ್ಲಿಷ್ ಉಪನ್ಯಾಸಕರು ಮೈಸೂರು ವಿ. ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT