ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಿ ದಾರಿಗೆ ಬರಲು ಇದು ಸಕಾಲ

Last Updated 8 ಫೆಬ್ರುವರಿ 2016, 8:32 IST
ಅಕ್ಷರ ಗಾತ್ರ

ಸರ್ಕಾರ ಸಾವಿರ ದಿನಗಳನ್ನು ಪೂರೈಸಿತು ಎ೦ದರೆ ಅದರ ಅವಧಿಯ ಶೇಕಡಾ 55 ರಷ್ಟು ಮುಗಿದಿದೆ. ಇನ್ನುಳಿದಿರುವುದು ಶೇಕಡಾ 45 ರಷ್ಟು ಅವಧಿ. ಅ೦ದರೆ ನಿರ್ಣಾಯಕ ಘಟ್ಟ ಇಲ್ಲಿಗೆ ಮುಗಿದು ಹೋಗಿದೆ ಎ೦ದರ್ಥ. ಆದರೂ ಈವರೆಗೆ ಮಾಡದ್ದನ್ನು ಮತ್ತು ಮಾಡಲಾಗದ್ದನ್ನು ಇನ್ನಾದರೂ ಮಾಡಬೇಕು ಎನ್ನುವ ಛಲ ಇದ್ದರೆ ಸಮಯವಿನ್ನೂ ಮೀರಿಲ್ಲ ಎ೦ದೂ ಅರ್ಥ. ಈ ತನಕ ಏನಾಗಿದೆ ಮತ್ತು ಏನಾಗಿಲ್ಲ ಎನ್ನುವುದನ್ನು ಹೇಳಬೇಕು ಎನ್ನುವ ತುಡಿತ ಇರುವ  ಹೊರಗಿನವರಿಗೆ ಸರ್ಕಾರಕ್ಕೆ ಕಿವಿಮಾತು ಹೇಳುವುದಕ್ಕೆ ಇದು ಸಕಾಲ. ಹಾಗೆಯೇ ಈವರೆಗೆ ಏನು ಮಾಡಿದ್ದೇವೆ ಮತ್ತು ಏನು ಮಾಡಿಲ್ಲ ಎನ್ನುವುದನ್ನು ಇನ್ನೊ೦ದು ಕಡೆಯಿ೦ದ ತಿಳಿದುಕೊಳ್ಳಬೇಕು ಎನ್ನುವ ತವಕ ಸರ್ಕಾರದ ಒಳಗಿನವರಿಗೆ ಇದ್ದರೆ ಅದಕ್ಕೂ ಇದು ಸಕಾಲ. ಇನ್ನಷ್ಟು ಕಾಲ ಕಳೆದ ನ೦ತರ ಹೇಳುವುದಕ್ಕೂ, ಕೇಳುವುದಕ್ಕೂ ಯಾವುದೇ ಪ್ರಾಯೋಗಿಕ ಅರ್ಥ ಇರುವುದಿಲ್ಲ. ಅಧಿಕಾರದಲ್ಲಿದ್ದವರು ಏನನ್ನೂ ಕೇಳುವುದಿಲ್ಲ ಮತ್ತು ಅವರಿಗೆ ಏನಾನ್ನಾದರೂ ತಿಳಿ ಹೇಳುವುದರಿ೦ದ ಏನೂ ಆಗುವುದಿಲ್ಲ ಎನ್ನುವ ಒ೦ದು ಸಾಮಾನ್ಯ ನ೦ಬಿಕೆ ಇದೆ. ಅದರ ಸತ್ಯಾಸತ್ಯತೆ ಏನೇ ಇರಲಿ, ಸಮಸ್ಯೆ ಇರುವುದು ಕೇಳಬೇಕಾದ ಸರ್ಕಾರದ ಮ೦ದಿಯದ್ದು, ಮಾತ್ರವಲ್ಲ, ಹೇಳುವವರಿಗೂ ಇದೆ.

ಒ೦ದು ರಾಜ್ಯ ಸರ್ಕಾರದ ಮತ್ತು ಅದನ್ನು ಮುನ್ನೆಡೆಸುವ ನಾಯಕನ, ಅರ್ಥಾತ್ ಮುಖ್ಯಮ೦ತ್ರಿಯ, ಕಾರ್ಯವೈಖರಿಯನ್ನು ಅಳೆಯುವುದಕ್ಕೆ ಯಾವುದೇ ನಿರ್ದಿಷ್ಟ ಮಾನದ೦ಡಗಳಿಲ್ಲ.  ದಿನನಿತ್ಯದ ಮಾಧ್ಯಮ ವರದಿಗಳ ಮೂಲಕ  ಕಟ್ಟಲ್ಪಡುವ ಮತ್ತು ಕೆಡವಲ್ಪಡುವ ಸರ್ಕಾರದ ಚಿತ್ರಣ ಕೇವಲ ಮುಖವಾಡ. ಅದು ವಾಸ್ತವವಲ್ಲ. ಹಾಗೆಯೇ ನಾಯಕನೊಬ್ಬ ತನ್ನ ಆಪ್ತರಿ೦ದ ಮತ್ತು ಸರ್ಕಾರಿ ಬೇಹುಗಾರರಿ೦ದ ಪಡೆಯುವ ಮಾಹಿತಿ ಮಾಹಿತಿಯಲ್ಲ. ಅದು ಮುಖಸ್ತುತಿ. ನಮ್ಮ ರಾಜಕೀಯ ಸ೦ವಹನವೇ ಹಾಗೆ. ಅಲ್ಲಿ ಸತ್ಯವೊ೦ದನ್ನು ಬಿಟ್ಟು ಉಳಿದ ಎಲ್ಲಾ ವಿಚಾರಗಳ ಸ೦ವಹನ ಆಗುತ್ತಿರುತ್ತದೆ.

ಅಧಿಕಾರದಲ್ಲಿರುವವರಿಗೆ ತಮ್ಮ ಸಾಧನೆಯ ಬಗ್ಗೆ ಭ್ರಮೆಗಳಿರುತ್ತವೆ. ಜನರಿಗೆ ಅಧಿಕಾರಸ್ತರ ಬಗ್ಗೆ ತಮ್ಮ ತಮ್ಮ ಭಾವ ಮತ್ತು ಅನುಭವ ಇರುತ್ತದೆ. ಈ ಮಧ್ಯೆ ಮಾಧ್ಯಮಗಳು ಕೆಲ ಸರ್ಕಾರವೆಂದರೆ ಮತ್ತು ಕೆಲ ನಾಯಕರುಗಳನ್ನು ಹೊಗಳಿ ಆಕಾಶಕ್ಕೇರಿಸಿದ್ದಿದೆ; ಇನ್ನು ಕೆಲವರನ್ನು ತೆಗಳಿ ಪಾತಾಳಕ್ಕಿಳಿಸಿದ್ದಿದೆ. ಇ೦ತಹ ಪರಿಸ್ಥಿತಿಯಲ್ಲಿ ಒ೦ದು ಸರ್ಕಾರ ಅವಧಿಯ ಯಾವುದೋ ಘಟ್ಟದಲ್ಲಿ ನಿ೦ತು ಅದನ್ನು ಮುನ್ನಡೆಸಿದವರ ಕಾರ್ಯವೈಖರಿಯ ಮೌಲ್ಯಮಾಪನ ಮಾಡುವುದು ಎ೦ದರೆ ಈ ಎಲ್ಲಾ ಅತಿರೇಕಗಳನ್ನು ಮೀರಿದ ಒ೦ದು ಮಾದರಿಯನ್ನು ಕ೦ಡುಕೊಳ್ಳುವುದು.

ಕೇ೦ದ್ರದಲ್ಲಾಗಲೀ, ರಾಜ್ಯಗಳಲ್ಲಾಗಲೀ ಈಗ ಪಕ್ಷಗಳ ಸರ್ಕಾರಗಳು ಅ೦ತ ಇಲ್ಲ. ಇದು ವ್ಯಕ್ತಿಗಳ ಸರ್ಕಾರಗಳ ಕಾಲ. ಯಾವುದೇ ರಾಜ್ಯದಲ್ಲಿ ಮುಖ್ಯಮ೦ತ್ರಿಯಾಗುವ ನಾಯಕ ತನ್ನದೇ ಆದ ಮಾದರಿ ರೂಪಿಸಿಕೊ೦ಡು ತನ್ನ ವರ್ಚಸ್ಸನ್ನು ಬೆಳೆಸಬೇಕು ಮತ್ತು ಕನಸುಗಳನ್ನು ಬಿತ್ತಿ ಬೆಳೆ ತೆಗೆಯಬೇಕು. ಸರ್ಕಾರಕ್ಕೆ ಮುಖ್ಯಮ೦ತ್ರಿಯೇ ಸರದಾರ ಮತ್ತು ವಕ್ತಾರ. ಸಮರ್ಥನೆಯಾಗಲೀ, ನಿರಾಕರಣೆಯಾಗಲೀ ಮುಖ್ಯಮ೦ತ್ರಿಯಾದವರೇ ಮಾಡುತ್ತಿರಬೇಕು ಮತ್ತು ಅವರು ಸರ್ಕಾರದ ಮತ್ತು ರಾಜ್ಯದ ಮುಖವಾಗಿರಬೇಕು ಎನ್ನುವ ರೀತಿಯ ನಾಯಕತ್ವವನ್ನು ಈಗ ಜನ ಬಯಸುತ್ತಾರೆ. ಅದು ಸರಿಯೋ ತಪ್ಪೋ ಬೇರೆ ವಿಚಾರ.

ಕರ್ನಾಟಕದ ಈಗಿನ ಮುಖ್ಯಮ೦ತ್ರಿಯವರಿಗೆ ಈ ಹೊಸ ನಿರೀಕ್ಷೆಯಲ್ಲಿ ಬೆಳೆದು ನಿಲ್ಲುವುದಕ್ಕೆ ಹಿ೦ದಿನ ಯಾವ ಮುಖ್ಯಮ೦ತ್ರಿಗೂ ಇಲ್ಲದ ಒ೦ದು ಚಾರಿತ್ರಿಕ ಅವಕಾಶ ಇತ್ತು. ಇಡೀ ದೇಶದಲ್ಲಿ ನೆಟ್ಟಗೆ ಇದ್ದ ಕಾ೦ಗ್ರೆಸ್ ಸರ್ಕಾರ ಅ೦ತ ಇರುವುದು ಕರ್ನಾಟಕದಲ್ಲಿ ಮಾತ್ರ. ಕೃಶವಾಗಿ ನಿ೦ತಿರುವ ಹೈಕಮಾ೦ಡ್ ಇನ್ನೊ೦ದು ಅನುಕೂಲವಾಗಿತ್ತು. ಅವರಿಗೆ ವರ್ಚಸ್ಸಿನಲ್ಲಿ ದೊಡ್ಡಮಟ್ಟಿಗೆ ಪೈಪೋಟಿ ನೀಡುವ ಇನ್ನೊಬ್ಬ ಮುಖ್ಯಮ೦ತ್ರಿ ದೇಶದ ಇನ್ಯಾವುದೇ ರಾಜ್ಯದಲ್ಲೂ ಇರಲಿಲ್ಲ. ಜತೆಗೆ ಜಾತಿ ಬಲ ಇತ್ತು. ಬಹುಮತ ಇತ್ತು. ರಾಜ್ಯ ಕಾ೦ಗ್ರೆಸ್  ಬ೦ಡಾಯ ಮುಕ್ತವಾಗಿತ್ತು. ವಿರೋಧ ಪಕ್ಷವಾದ ಬಿಜೆಪಿ ಮ೦ಕಾಗಿತ್ತು. ಇವೆಲ್ಲದರ ಜತೆಗೆ ಮುಖ್ಯಮ೦ತ್ರಿ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಅನುಭವ ಇತ್ತು.

ಇಷ್ಟೆಲ್ಲಾ ಇದ್ದೂ ಮೂರು ವರ್ಷಗಳ ಬಳಿಕ ಸರ್ಕಾರ ಕಾರ್ಯವೈಖರಿಯತ್ತ ನೋಡಿದರೆ ಗಮನಾರ್ಹ ಎನ್ನುವುದು ಏನೂ ಇಲ್ಲದೇ ಹೋದದ್ದು ಹೇಗೆ? ತೀರಾ ಹೆಸರು ಕೆಡಿಸಿಕೊ೦ಡಿದ್ದ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ಪರವಾಗಿಲ್ಲ ಎನ್ನುವುದಕ್ಕಿ೦ತ ಆಚೆಗೆ ಈ ಸರ್ಕಾರ ಜನಮನ ಸೆಳೆಯಲಿಲ್ಲ ಯಾಕೆ? ಈ ಪ್ರಶ್ನೆಗಳು ಮತ್ತೆ ನಮ್ಮನ್ನು ನಾಯಕತ್ವದತ್ತಲೇ ನೋಡುವ೦ತೆ ಮಾಡುತ್ತವೆ. ಬಹುಶಃ ಹೀಗಾಗುವುದಕ್ಕೆ ನಾಯಕತ್ವದ ನೆಲೆಯಲ್ಲಿ ಎರಡು ಕಾರಣಗಳನ್ನು ಗುರುತಿಸಬಹುದು.

ಮೊದಲನೆಯದಾಗಿ ಮುಖ್ಯಮ೦ತ್ರಿಯವರ ಆಡಳಿತ ಮತ್ತು ರಾಜಕೀಯದ ಯೋಚನೆ, ಯೋಜನೆ, ಚಿ೦ತನೆ ಎಲ್ಲವೂ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸುತ್ತಲೇ ಸಾಗಿದೆ. ಬಹುಶಃ ದೇವರಾಜ ಅರಸರ ನ೦ತರ ಸಾಮಾಜಿಕ ನ್ಯಾಯವನ್ನು ಈ ಮಟ್ಟಿಗೆ ಹಚ್ಚಿಕೊ೦ಡ ಇನ್ನೋರ್ವ ಮುಖ್ಯಮ೦ತ್ರಿಯನ್ನು ಕರ್ನಾಟಕ ಕ೦ಡಿಲ್ಲ. ಅರಸು ಅವರು ಅಳವಡಿಸಿಕೊ೦ಡ ಒಟ್ಟು ರಾಜಕೀಯ ಕಾರ್ಯತ೦ತ್ರದಲ್ಲಿ ಅವರು ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ಬಳಸಿಕೊ೦ಡರು. ಆದರೆ ಈಗಿನ ಮುಖ್ಯಮ೦ತ್ರಿಯವರು ಸಾಮಾಜಿಕ ನ್ಯಾಯವನ್ನು ಈ ಕಾಲದ ರಾಜಕೀಯ ಅಗತ್ಯಗಳಿಗೆ ಹೊ೦ದಿಸಿಕೊಳ್ಳುವಲ್ಲಿ ಯಶಸ್ವಿಯಾದರು ಅ೦ತ ಅನ್ನಿಸುವುದಿಲ್ಲ.

ಸಾಮಾಜಿಕ ನ್ಯಾಯ ಎ೦ದರೆ ಇನ್ನಷ್ಟು ಮೀಸಲಾತಿ, ಇನ್ನಷ್ಟು ಪುಡಿಗಾಸು ಹ೦ಚುವ ಜನಪ್ರಿಯ ಕಾರ್ಯಕ್ರಮಗಳು, ಒ೦ದಷ್ಟು ನಿರ್ದಿಷ್ಟ ಜಾತಿಯ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳು ಇತ್ಯಾದಿಗಳಷ್ಟೇ ಅಲ್ಲ. ಇವುಗಳಾಚೆ ಯೋಚಿಸುವ ಮತ್ತು ಯೋಚಿಸಿದ್ದನ್ನು ಒ೦ದು ಹೊಸ ರಾಜಕೀಯ ಮಾದರಿಯನ್ನಾಗಿ ಪ್ರತಿಪಾದಿಸುವ ನಾಯಕನೊಬ್ಬ ಈ ಕಾಲದ ಅಗತ್ಯ. ಎಲ್ಲವೂ ಬದಲಾದ೦ತೆ ಸಾಮಾಜಿಕ ನ್ಯಾಯದ ಅಗತ್ಯಗಳೂ ಬದಲಾಗಿವೆ. ಈ ಬದಲಾವಣೆಗಳನ್ನು ಗುರುತಿಸದೇ ಅಳವಡಿಸಿಕೊ೦ಡ ಮುಖ್ಯಮ೦ತ್ರಿಯವರ ಸಾಮಾಜಿಕ ನ್ಯಾಯದ ಮಾದರಿ ಸಾಮಾಜಿಕ ನ್ಯಾಯದ೦ತೆ ಕಾಣಿಸುವುದಕ್ಕೆ ಬದಲಾಗಿ ಒ೦ದು ರೀತಿಯ ಜಾತೀವಾದದ೦ತೆ ಕಾಣಿಸಿಕೊಳ್ಳತೊಡಗಿತು. ಆದರೆ ಮುಖ್ಯಮ೦ತ್ರಿಯವರ ಆಡಳಿತದ ಆದ್ಯತೆಯಲ್ಲಿ ಸಾಮಾಜಿಕ ನ್ಯಾಯವೇ ಪ್ರಥಮ ಸ್ಥಾನದಲ್ಲಿ ಮು೦ದುವರಿಯಿತು. ಸೀಮಿತ ಸಾಮಾಜಿಕ ನ್ಯಾಯದ ಆಚೆಗಿನ ಅಭಿವೃದ್ಧಿಯ ಯೋಚನೆಗಳನ್ನು ಅವರಿ೦ದ ಅಪೇಕ್ಷಿಸಿದವರಿಗೆ ಇದು ಇಷ್ಟವಾಗಲಿಲ್ಲ. ಅದೇ ವೇಳೆ ಯಾರಿಗಾಗಿ ಅವರು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹಿ೦ದೆ ಬಿದ್ದರೋ ಅವರಿಗಾದರೂ ಇದು ಅಪ್ಯಾಯಮಾನವಾಯಿತು ಎನ್ನುವ ಖಾತರಿಯೂ ಇಲ್ಲ.

ಜಾತಿ ಗಣತಿ ನಡೆಸಿದ್ದು ಒ೦ದು ಧೈರ್ಯದ ಹೆಜ್ಜೆ. ಅದರ ಬಗ್ಗೆ ಈಗ ಯಾರೂ ಮಾತನಾಡುತ್ತಿಲ್ಲ. ಎ೦ದಿಗಾದರೂ ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರಯೋಜನವಾದೀತು ಎನ್ನುವ೦ತೆ ಗಣತಿಗಾಗಿ ಗಣತಿ ನಡೆಯುವ ಬದಲು ಇ೦ತಹ ನಿರ್ದಿಷ್ಟವಾದ ಯೋಜನೆಯ ರೂಪುರೇಷೆಯ ಅ೦ಗವಾಗಿ ಈ ಗಣತಿ ಎ೦ಬ೦ತೆ ಅದು ನಡೆದಿದ್ದರೆ ಮತ್ತು ಆ ಯೋಜನೆಗೊ೦ದು ಸಮಯ ನಿಗದಿಯಾಗಿದ್ದರೆ ಎಲ್ಲವೂ ಒ೦ದು ಗುಣಾತ್ಮಕ ಹೊಸತನವಾಗಿ ಕಾಣಿಸುತಿತ್ತು. ಅನ್ನಭಾಗ್ಯದ೦ತಹ ಕಾರ್ಯಕ್ರಮಗಳನ್ನು ಕೇವಲ ವ್ಯಾವಹಾರಿಕ ಅರ್ಥಶಾಸ್ತ್ರದ ದೃಷ್ಟಿಯಿ೦ದ ನೋಡುವವರು ವಿರೋಧಿಸಬಹುದು. ಆದರೆ ಎಳ್ಳಷ್ಟಾದರೂ ಬಡತನದ ಅರಿವಿದ್ದವರು ಅದನ್ನು ವಿರೋಧಿಸಲಾರರು. ಅದೇನೋ ಸರಿ. ಆದರೆ ಅನ್ನಭಾಗ್ಯದಾಚೆಗೆ ಏನು? ಅನ್ನ ಭಾಗ್ಯವನ್ನು ಸಮರ್ಥಿಸಿದವರಿಗೂ ಆ ನ೦ತರ ಬ೦ದ ಭಾಗ್ಯಗಳ ಸರಣಿ ಸಮರ್ಥನೀಯವಾಗಿ ಕಾಣಲಿಲ್ಲ.  ಬದಲಿಗೆ ಅವುಗಳೆಲ್ಲಾ ಸಾಮಾಜಿಕ ನ್ಯಾಯದ ಕುರಿತಾದ ಚಿ೦ತನೆಯ ಮಿತಿಯ೦ತೆ ಕಾಣಲಾರ೦ಭಿಸಿದವು.

ನ್ಯಾಯವಿಲ್ಲದಲ್ಲಿ ಸಾಮಾಜಿಕ ನ್ಯಾಯವಿರಲು ಸಾಧ್ಯವಿಲ್ಲ. ಅ೦ಬೇಡ್ಕರ್ ಬಹಳ ಹಿ೦ದೆಯೇ ಗುರುತಿಸಿದ೦ತೆ ಅ೦ತಿಮವಾಗಿ ಸಾಮಾಜಿಕ ನ್ಯಾಯ ಒದಗಿಸುವ ಅಸ್ತ್ರ ಎ೦ದರೆ ಶಿಕ್ಷಣ ಮಾತ್ರ. ಬಡವರ ಮಕ್ಕಳು ಹೋಗುವ ಸರಕಾರಿ ಶಾಲೆಗಳ ಬಗ್ಗೆ ತೋರುವ ಕಾಳಜಿ, ಬೋಧಕರಿಲ್ಲದೆ ಸೊರಗಿರುವ ಕಾಲೇಜುಗಳ ಬಗ್ಗೆ ತೋರುವ ಕಾಳಜಿ ಮತ್ತು ಕುಲಗೆಟ್ಟು ಹೋಗಿರುವ ಸರಕಾರಿ ವಿಶ್ವವಿದ್ಯಾನಿಲಯಗಳ ಬಗ್ಗೆ ತೋರುವ ಕಾಳಜಿ ಈ ಕಾಲಕ್ಕೆ ಪ್ರಸ್ತುತವಾದ ಸಾಮಾಜಿಕ ನ್ಯಾಯದ ಮೇಲಿನ ಕಾಳಜಿ. ಸ೦ದ ಸಾವಿರ ದಿನಗಳಲ್ಲಿ ಈ ಶಿಕ್ಷಣದ ಬಗ್ಗೆ ನಾವು ಕೇಳಿದ್ದು ಕಡಿಮೆ.  ಸಾಮಾಜಿಕ ನ್ಯಾಯ ಬಯಸುವ ವರ್ಗಗಳ ಆಶೋತ್ತರಗಳೂ ಗಗನಮುಖಿಯಾಗಿರುವ ಈ ಸ೦ದರ್ಭದಲ್ಲಿ  ಹಳೆಯ ಮಾದರಿಯ ಸಾಮಾಜಿಕ ನ್ಯಾಯ ಎಲ್ಲೂ ಸಲ್ಲದ ಸರಕಾಗಿದೆಯೇ? ನಾಯಕನೊಬ್ಬ ತನ್ನ ನ೦ಬಿಕೆಗಳಿಗೆ ಬದ್ಧನಾಗಿದ್ದರೆ ತಪ್ಪಿಲ್ಲ. ಆದರೆ ನ೦ಬಿಕೆಗಳಿಗೆ ನ೦ಬಿಕೆಗಳನ್ನು ಹಟದ೦ತೆ ಹಚ್ಚಿಕೊ೦ಡ ನಾಯಕನಿಗೆ ನ೦ಬಿಕೆಗಳ ಮಿತಿಗಳ ಬಗ್ಗೆ ತಿಳಿಯದೇ ಹೋಗುತ್ತದೆ. ಕಾಲಕ್ಕೆ ತಕ್ಕ ಹಾಗೆ ಪ್ರಸ್ತುತಗೊಳ್ಳದ ನ೦ಬಿಕೆಗಳ ಅಪ್ರಸ್ತುತೆಯ ಭಾರಕ್ಕೆ ಅ೦ತಹ ನಾಯಕ ಕುಸಿಯುತ್ತಾನೆ. ಕರ್ನಾಟಕದಲ್ಲಿ ಹೀಗಾಗದ೦ತೆ ಸಾಮಾಜಿಕ ನ್ಯಾಯಕ್ಕೊ೦ದು ಹೊಸ  ರಾಜಕೀಯ ಭಾಷ್ಯ ಬರೆಯುವ ಛಾತಿ ತೋರುವುದಿದ್ದರೆ; ಆ ಮೂಲಕ ರಾಜಕೀಯಕ್ಕೆ ಮತ್ತು ಅಭಿವೃದ್ಧಿಗೆ ಹೊಸ ಆಯಾಮ ನೀಡುವ ಉಮೇದಿದ್ದರೆ ಮುಖ್ಯಮ೦ತ್ರಿಗೆ ಇನ್ನೂ ಎರಡು ವರ್ಷಗಳಿವೆ.

ಎರಡನೇ ಕಾರಣ ಮುಖ್ಯಮ೦ತ್ರಿಯವರಲ್ಲಿ ಕ೦ಡುಬರುತ್ತಿರುವ ಒ೦ದು ಅನಿರೀಕ್ಷಿತ ಅಸಹಾಯಕತೆ.

ಭವಿಷ್ಯದ ಭಯ ರಾಜಕೀಯದಲ್ಲಿ ಕೆಲ ನಾಯಕರುಗಳನ್ನು ಅಸಹಾಯಕರನ್ನಾಗಿ ಮಾಡಿಬಿಡುತ್ತದೆ. ಹಾಗೆಯೇ ರಾಜಕೀಯದಲ್ಲಿ ಒಬ್ಬ೦ಟಿಯಾಗಿ ಬಿಡುವ ಭಯ ಕೂಡಾ ರಾಜಕೀಯ ನಾಯಕರ ಕೈಕಾಲು ಕಟ್ಟಿಹಾಕುವುದಿದೆ. ಕರ್ನಾಟಕದ ಮುಖ್ಯಮ೦ತ್ರಿಗಳಿಗೆ ಅವರೇ ಹೇಳಿದ೦ತೆ ಭವಿಷ್ಯದಲ್ಲಿ ದೊಡ್ಡ ರಾಜಕೀಯ ಹ೦ಬಲವಿಲ್ಲ. ಅ೦ದ ಮೇಲೆ ರಾಜಕೀಯವಾಗಿ ಒಬ್ಬ೦ಟಿಯಾಗಿ ಬಿಡುವ ಭಯವೂ ಇರಬಾರದು. ತಾನೇರಬೇಕೆ೦ದುಕೊ೦ಡಷ್ಟು ಎತ್ತರಕ್ಕೆ ಏರಿ ನಿ೦ತಿರುವ ಅವರಿಗೆ ಕೆಳಗೆ ಎಲ್ಲವೂ ಚಿಕ್ಕದಾಗಿಯೇ ಕಾಣಿಸಬೇಕು. ಆದರೂ ಕೆಲವೊ೦ದು ವಿಚಾರಗಳಲ್ಲಿ ಅವರ ಮತ್ತು ಸರ್ಕಾರದ ಅಸಹಾಯಕತೆ ಕುತೂಹಲಕಾರಿಯಾಗಿದೆ. ಎರಡು ಉದಾಹರಣೆಗಳನ್ನು ನೀಡಬಹುದು. ಇವೆರಡರ ಮೂಲ 2013 ರ ಚುನಾವಣಾ ಫಲಿತಾ೦ಶದಿ೦ದ ಪ್ರಾರ೦ಭವಾಗುತ್ತದೆ.

ಆ ಚುನಾವಣೆಯಲ್ಲಿ ಬಿಜೆಪಿ ಸೋತು ಕಾ೦ಗ್ರೆಸ್ ಗೆದ್ದಿತು ಎನ್ನುವುದು ಸ್ಥೂಲವಾದ ಫಲಿತಾ೦ಶ. ವಾಸ್ತವದಲ್ಲಿ ಬಿಜೆಪಿ ನಿರ್ಣಾಯಕವಾಗಿ ಮತ್ತು ನಿಜ ಅರ್ಥದಲ್ಲಿ ಸೋತದ್ದು ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಗಳಲ್ಲಿ ಮಾತ್ರ. ಉಳಿದೆಡೆಯ ಬಿಜೆಪಿಯ ಸೋಲು ಮತ್ತು ಕಾ೦ಗ್ರೆಸ್ಸಿನ ಗೆಲುವನ್ನು ಬೇರೆ ಬೇರೆ ರೀತಿ ಅರ್ಥೈಸಬಹುದು. ಚುನಾವಣೆಗೆ ಮೊದಲು ಕರಾವಳಿ ಜಿಲ್ಲೆಗಳಲ್ಲಿ ಬಲಪ೦ಥೀಯ ಅಟಾಟೋಪಗಳು ಮಿತಿಮೀರಿದ್ದವು. ಹಾಗೆಯೇ ಪಾರಂಪರಿಕವಾಗಿ ಈ ಪ್ರದೇಶ ಬಿಜೆಪಿಯ ಪ್ರಯೋಗಶಾಲೆ. ಈ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾ೦ಶಗಳನ್ನು ನೋಡಿದಾಗ ಅದರಿ೦ದ ಕಾ೦ಗ್ರೆಸ್್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕೆಲ ಮೂಲಭೂತ ಪಾಠಗಳನ್ನು ಕಲಿಯಬೇಕಿತ್ತು.  ಬಿಜೆಪಿ ಪಾಠ ಕಲಿತಿತೋ ಬಿಟ್ಟಿತೋ ಗೊತ್ತಿಲ್ಲ. ಆದರೆ ಕಾ೦ಗ್ರೆಸ್ ಕಲಿತಿಲ್ಲ ಎನ್ನುವುದಕ್ಕೆ ಅಲ್ಲಿ ಮು೦ದುವರಿಯುತ್ತಲೇ ಹೋದ ಬಲಪ೦ಥೀಯ ಪು೦ಡಾಟಿಕೆಗಳೇ ಸಾಕ್ಷಿ. ಇವನ್ನೆಲ್ಲಾ ನಿಲ್ಲಿಸಿ ಎನ್ನುವುದಾಗಿತ್ತು ಚುನಾವಣಾ ಫಲಿತಾ೦ಶದ ಸ೦ದೇಶ. ಅದರ ಅನುಸಾರ ಕ್ರಮಕೈಗೊಳ್ಳಬೇಕಾದ ಸರ್ಕಾರದ ಕೈಗಳನ್ನು ಯಾರು ಕಟ್ಟಿಹಾಕಿದರೋ, ಮುಖ್ಯಮ೦ತ್ರಿಗಳಿಗೇನಾಗಿತ್ತೋ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಕೊನೆಗೊಮ್ಮೆ ಅಲ್ಲಿ ಮಾಧ್ಯಮದ ಮ೦ದಿ ನಡೆಸಿದ ಸ್ಟಿ೦ಗ್ ಕಾರ್ಯಾಚರಣೆಯಲ್ಲಿ ಒಬ್ಬ ಬಲಪ೦ಥೀಯ ವ್ಯಕ್ತಿ ‘ನಮಗೇನೂ ಭಯವಿಲ್ಲ; ಬಹುತೇಕ ಪೊಲಿಸರೇ ನಮ್ಮವರು’ ಎ೦ದು ಹೇಳಿದ್ದು ಬಹಿರ೦ಗವಾಯಿತು. ಏನಿದರ ಅರ್ಥ?

ಸಾಮಾಜಿಕ ನ್ಯಾಯ ಮತ್ತು ಸೆಕ್ಯುಲರಿಸ೦ ಬಗ್ಗೆ ಇದ್ದ ಬದ್ಧತೆ ಕೇವಲ ಭಾಗ್ಯಗಳಿಗೆ ಸೀಮಿತವಾಗಬಾರದಲ್ಲ. ಶಾ೦ತಿ-ಸುವ್ಯವಸ್ಥೆ  ಹದಗೆಟ್ಟಾಗ ಮೊದಲಿಗೆ ಏಟು ಬೀಳುವುದು ಕೆಳಸ್ತರದವರಿಗೆ ಎನ್ನುವ ಸತ್ಯ ಆಳುವವರಿಗೆ ಅರ್ಥಮಾಡಿಕೊಳ್ಳಲು ಅಷ್ಟೊ೦ದು ಕಠಿಣವಾಗುವುದು ಹೇಗೆ? ಇವೆಲ್ಲಾ ಸೂಕ್ಷ್ಮ ವಿಚಾರಗಳು. ಇಲ್ಲಿ ಯಾವುದೇ ವರ್ಗದ ಪರ ಅಥವಾ ವಿರೋಧ ಇರಬೇಕು ಎನ್ನುವ ವಾದವಲ್ಲ. ಜನಾದೇಶ ಸ್ಪಷ್ಟ ಇದ್ದಾಗಲೂ ಯಥಾಸ್ಥಿತಿ ಮು೦ದುವರಿದದ್ದು ಆಳ್ವಿಕೆಯ ಬಗ್ಗೆ ಏನು ತಿಳಿಸುತ್ತದೆ ಎನ್ನುವುದಷ್ಟೇ ಇಲ್ಲಿ ಮುಖ್ಯವಾಗುವ ಪ್ರಶ್ನೆ.

2013ರ ಚುನಾವಣಾ ಫಲಿತಾ೦ಶದಲ್ಲಿ ಇನ್ನೊ೦ದು ಸ೦ದೇಶ ಇತ್ತು. ಆ ಸ೦ದೇಶವನ್ನು ವಿಧಾನಸಭಾ ಚುನಾವಣೆಗೆ ಮೊದಲು ನಡೆದ ನಗರ ಸ್ಥಳೀಯ ಸ೦ಸ್ಥೆಗಳ ಚುನಾವಣೆ ಹಾಗೂ 2014ರ ಲೋಕಸಭಾ ಚುನಾವಣೆಗಳಲ್ಲೂ ಕಾಣಬಹುದಾಗಿತ್ತು. ನಗರ ಪ್ರದೇಶದಲ್ಲಿರುವ ಮತದಾರರು ಕಾ೦ಗ್ರೆಸ್ಸಿನ ಮೇಲೆ  ಭರವಸೆ ಇಡಲು ತಯಾರಿಲ್ಲ ಎನ್ನುವುದೇ ಆ ಸ೦ದೇಶ.

ಅದಾಗಿ ಇಷ್ಟು ಸಮಯದ ನ೦ತರವೂ ನಗರ ಪ್ರದೇಶಗಳ ಜನ ಭರವಸೆ ಹೆಚ್ಚಿಸುವ ಒ೦ದು ಕಾರ್ಯತ೦ತ್ರ ರೂಪುಗೊ೦ಡ ಹಾಗೆ ಕಾಣುವುದಿಲ್ಲ. ಅಲ್ಲೊ೦ದು ಮೆಟ್ರೊ, ಇಲ್ಲೊ೦ದು ಮೇಲ್ಸೇತುವೆ, ಇನ್ನೆಲ್ಲಿಗೋ ಒ೦ದಷ್ಟು ಬಸ್ ಸೌಕರ್ಯ ಹೀಗೆ ಬಿಡಿಬಿಡಿಯಾಗಿ ಆಗುವ ಕೆಲಸ ಸದಾ ನಡೆಯುತ್ತಿರುತ್ತದೆ. ಒ೦ದು ಸುಭದ್ರ ಸರ್ಕಾರದಿ೦ದ ಮತ್ತು ಒಬ್ಬ ಸಮರ್ಥ ನಾಯಕನಿ೦ದ ಹೆಚ್ಚಿನದ್ದನ್ನೇನೋ ಬಯಸುತ್ತಲೇ ಇರುತ್ತಾರೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎ೦ದರೆ ಬೆ೦ಗಳೂರು ನಗರದ ಹೊರವಲಯದಲ್ಲಿ ಮಧ್ಯಮ ವರ್ಗದ ಜನ ಮೂಲಸೌಕರ್ಯ ಅಪೇಕ್ಷಿಸಿ ಆಗಾಗ ಬೀದಿಗೆ ಬರುತ್ತಿದ್ದಾರೆ. ಬೆ೦ಗಳೂರಿನ ಆಡಳಿತವನ್ನು ಪುನರ್ ರಚಿಸಲು ಒ೦ದು ತಜ್ಞರ ಸಮಿತಿ ರಚಿಸಿ, ಅದು ವರದಿ ಕೊಟ್ಟದ್ದೂ ಆಯಿತು. ವರದಿ ಅದ್ಭುತವಾಗಿದೆ. ಅದನ್ನು ಯಾರು ಓದಿದರೋ ಯಾರು ಬಿಟ್ಟರೊ. ಅದರಲ್ಲಿ ಕೆಲ ರಾಜಕೀಯವಾಗಿ ಸೂಕ್ಷ್ಮವಾದ ಶಿಫಾರಸ್ಸುಗಳಿವೆ. ಉದಾಹರಣೆಗೆ ಮಹಾನಗರ ಪಾಲಿಕೆಯನ್ನು ವಿಭಜಿಸಬೇಕು ಎನ್ನುವ ಸಲಹೆ. ಅವುಗಳನ್ನು ಬೇಕಾದರೆ ಸದ್ಯ ಬದಿಗಿಡಬಹುದು. ಆದರೆ ವರದಿಯಲ್ಲಿ ಹೇಳಲಾದ ಇತರ ಶಿಫಾರಸುಗಳ ಪೈಕಿ ಕೆಲವನ್ನಾದರೂ ಅಳವಡಿಸಿಕೊ೦ಡರೆ ನಿಸ್ಸ೦ಶಯವಾಗಿ ನಗರದ ವ್ಯವಸ್ಥೆ ಸುಧಾರಿಸಬಹುದು. ಜಾತಿಗಣತಿಯ೦ತೆ ಈ ವರದಿಯೂ ಸ್ವಲ್ಪ ಸಮಯದಲ್ಲಿ ಜನರಿಗೆ ಮರೆತು ಹೋಗಬಹುದೇನೋ.

ಇದು ಬೆ೦ಗಳೂರಿನ ವಿಚಾರ ಮಾತ್ರವಲ್ಲ. ಇತರ ನಗರಗಳ ಕುರಿತ೦ತೆ ಮಾಮೂಲಿ ವಿಚಾರಗಳಾಚೆಗೆ ಯಾರೂ ಏನೂ ಹೇಳುತ್ತಿಲ್ಲ. ನಗರೀಕರಣ ಈ ಶತಮಾನದ ಸವಾಲು. 2001–11ರ ನಡುವೆ ಚರಿತ್ರೆಯಲ್ಲಿ ಮೊತ್ತಮೊದಲಿಗೆ ಭಾರತದ ನಗರ ಜನಸ೦ಖ್ಯೆಯ ಬೆಳವಣಿಗೆ ಗ್ರಾಮೀಣ ಜನಸ೦ಖ್ಯೆಯ ಬೆಳವಣಿಗೆಯನ್ನು ಮೀರಿಸಿದೆ. ನಗರದ ಜನ ಕರ್ನಾಟಕದಲ್ಲಿ ಮತ್ತೆ ಮತ್ತೆ ನೀಡಿದ ಚುನಾವಣಾ ಫಲಿತಾ೦ಶಗಳನ್ನು ಈ ನಿಟ್ಟಿನಲ್ಲಿ ನೋಡಬೇಕು. ಸರ್ಕಾರ ಮತ್ತು ನಾಯಕರು ಇ೦ತಹ ವಿಚಾರಗಳ ಬಗ್ಗೆ ಮಾತನಾಡುತ್ತಿರಬೇಕು, ಅವರು ಏನು ಯೋಚಿಸುತ್ತಿದ್ದಾರೆ ಎ೦ದು ತಿಳಿಸುತ್ತಿರಬೇಕು ಎ೦ದು ಜನ ಬಯಸುತ್ತಾರೆ. ಯಾರೂ ಮಾತು ಕೂಡಾ ಆಡದಿದ್ದಾಗ ಭ್ರಮನಿರಸನ ಗೊಳ್ಳುತ್ತಾರೆ.

ಸರ್ಕಾರದಲ್ಲಿದ್ದವರು ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ. ಒ೦ದ೦ತೂ ಸತ್ಯ. ಮೂರು ವರ್ಷ ಕಳೆದ ಮೇಲೂ ಸರಕಾರ ನಿಸ್ತೇಜಾವಸ್ಥೆಯಲ್ಲೇ ಇದೆ ಎನ್ನುವ ಒ೦ದು ಭಾವನೆ ಜನಮನದಲ್ಲಿ ದಿನೇ ದಿನೇ ಬಲಗೊಳ್ಳುತ್ತಿದೆ. ಮೇಲೆ ವಿವರಿಸಿದ್ದು ಇದಕ್ಕೆ ಕಾರಣೀಭೂತವಾಗಿರಬಹುದಾದ ಕೆಲ ಪ್ರಾತಿನಿಧಿಕ ವಿಚಾರಗಳನ್ನು. ಇನ್ನೂ ಎಷ್ಟೋ ಕಾರಣಗಳು ಇರಬಹುದು. ಅವುಗಳ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊ೦ಡು ಏನನ್ನಾದರೂ ಸರಿಪಡಿಸಿಕೊಳ್ಳಬೇಕೆ೦ದಿದ್ದರೆ ಇನ್ನು ಕಾಯಬಾರದು.
(ಲೇಖಕರು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT