ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್, ಮುಂದಿನ ಕುರ್ಚಿ ಇನ್ನು ಖಾಲಿ, ಖಾಲಿ

Last Updated 29 ಜೂನ್ 2012, 9:05 IST
ಅಕ್ಷರ ಗಾತ್ರ

“ಬದುಕು ಎಂದರೆ ಹೋರಾಟ. ಹೋರಾಟ ಎಂದರೆ ಬದುಕು ಎನ್ನುವಷ್ಟು ಎರಡಕ್ಕೂ ಅನ್ಯೋನ್ಯ ಸಂಬಂಧ. ಹೊರಗಿನಿಂದ ದೇಹದ ಮೇಲೆ ದಾಳಿಯಿಡುವ ರೋಗಾಣುಗಳ ವಿರುದ್ಧ ಮೊದಲ ಹೋರಾಟ. ನಂತರ ವಿದ್ಯೆ ಸಂಪಾದಿಸಲು, ನೌಕರಿ ಗಿಟ್ಟಿಸಲು, ಸಾಮಾಜಿಕ ನ್ಯಾಯ ಗಿಟ್ಟಿಸಲು, ಅಧಿಕ ಸಂಬಳ ಪಡೆಯಲು, ದಾಸ್ಯ ವಿಮೋಚನೆ ಹೊಂದಲು.. ಒಂದಲ್ಲ, ಎರಡಲ್ಲ, ಹತ್ತು ಕಾರಣಗಳಿಗಾಗಿ ಹನ್ನೊಂದು ಹೋರಾಟಗಳು... ಇದನ್ನು ನೆನೆದುಕೊಂಡೆ ದಾಸವರೇಣ್ಯರು ಹಾಡಿರಬೇಕು: `ಅನುಗಾಲವೂ ಚಿಂತೆ ಮನುಜಂಗೆ~ ಎಂದು.

“ಬವಣೆಯುಂಟೆಂದು ಬದುಕನ್ನು ಬಿಸುಡಲಾದೀತೆ? `ತಲ್ಲಣಿಸದಿರು ಕಂಡ್ಯ ತಾಳು ಮನವೆ~ ಎಂದು ಸಂತೈಸುವ ಸಂತ ಕನಕದಾಸರು ನುಡಿಯುವಂತೆ ಬದುಕಿಗೆ ತಾಳ್ಮೆಬೇಕು. ಅದಕು ಇದಕು ಎಲ್ಲದಕು ತಲ್ಲಣಗೊಳ್ಳುವುದು ಸಲ್ಲ. ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರ ಎಂದು ದೃಢ ನಂಬಿಕೆಯಿಂದ ಬದುಕಿಗೆ ಒಂದು ನೆಲೆ ಸಿಗುವುದರಲ್ಲಿ ಸಂಶಯವಿಲ್ಲ ಎಂದು ಬೇರೆ ಹೇಳಬೇಕಿಲ್ಲ. ಬದುಕು ನಮಗೆ ಸಿಗುವ ಏಕಮೇವ ಅವಕಾಶ. ಸಾವು ಖಂಡಿತ.

ಮೃತನಿಗೆ ಪುನರ್ಜನ್ಮ ಇದೆಯೋ, ಇಲ್ಲವೋ? ಈಗ ದೊರೆತ ದೇಹೇಂದ್ರಿಯ ಮರಳಿ ಸಿಗಲಾರದು ಎಂಬುದು ಮಾತ್ರ ನಿಶ್ಚಿತ. ಮಹಾಚೇತನ ಕಾರ್ಲೈಲ್‌ನ ಮಾತು ತುಂಬಾ ಮನನೀಯ, ಸದಾ ಸ್ಮರಣೀಯ. `ನಾನೀ ಲೋಕದಲ್ಲಿ ಸಾಗುತ್ತಿರುವುದು ಇದೊಂದೇ ಬಾರಿ. ಒಳ್ಳೆಯ ಕಾರ್ಯ ಎಸಗುವುದಾಗಲಿ, ಮಾನವರಿಗೆ, ಅನ್ಯ ಪ್ರಾಣಿಗಳಿಗೆ ದಯೆ ತೋರುವುದಾಗಲಿ, ಸೇವೆ ಗೈಯುವುದಾಗಲಿ, ಅದನ್ನು ನಾನು ಇಂದೇ ನೆರವೇರಿಸುವುದು. ಅದನ್ನು ದುರ್ಲಕ್ಷಿಸುವುದು ಹೊಲ್ಲ. ಮುಂದೂಡುವುದೂ ಸಲ್ಲ. ಏಕೆಂದರೆ, ಈ ಪ್ರಪಂಚದಲ್ಲಿ ನಾನು ಕ್ರಮಿಸುವುದು ಇದೊಂದೇ ಬಾರಿ!~

...ಹೀಗೆ ಬರೆದರು ಪ್ರೊ. ಶ್ರೀನಿವಾಸ ಭಗವಂತರಾವ್ ತೋಫಖಾನೆ! ಮಾಣಿಕ್ಯಗಳನ್ನೇ ಉದುರಿಸುತ್ತಿದ್ದ ಅವರ ಮಾತಿನಲ್ಲಿ ಮಾಣಿಕ್ಯಗಳನ್ನೇ ಜೋಡಿಸುತ್ತಿದ್ದ ಅವರ ಬರವಣಿಗೆಯಲ್ಲಿ ಇಂತಹ ಸಾವಿರಾರು ಸಾಲುಗಳನ್ನು, ನುಡಿಗಟ್ಟುಗಳನ್ನು, ಉದ್ಧರಣಗಳನ್ನು, ಪದ-ವಚನ- ಸುಭಾಷಿತಗಳನ್ನು ನಾವು ಆಲಿಸುತ್ತಿದ್ದೆವು, ಓದುತ್ತಿದ್ದೆವು.

ತುಂಬ ಶಿಸ್ತಿನ-ಲವಲವಿಕೆಯ-ಅತ್ಯಂತ ಉಲ್ಲಾಸದ ಬದುಕನ್ನೇ ರೂಢಿಸಿಕೊಂಡಿದ್ದ ತೋಫಖಾನೆಯವರು, ಈಗೊಂದು 20 ದಿನಗಳ ಹಿಂದೆ ಹೃದಯ ತೊಂದರೆಯೆಂದು ಆಸ್ಪತ್ರೆಯಲ್ಲಿ 5 ದಿನ ಕಳೆದು, ಮನೆಗೆ ಬಂದು 15 ದಿನ ತಮ್ಮೆಲ್ಲ ಆಪ್ತರನ್ನು-ಬಂಧುಗಳನ್ನು ಮಲಗಿದ್ದಲ್ಲಿಂದಲೇ ಮಾತನಾಡಿಸಿ `ಮತ್ತೆ ಬಾ~ ಎಂದು ಎಲ್ಲರಿಗೂ ಹೇಳಿ ಕಳುಹಿಸುತ್ತಿದ್ದವರು, ಗುರುವಾರ ಮಧ್ಯಾಹ್ನ ಒಂದೂವರೆ ಸುಮಾರಿಗೆ ಅವರೇ ಮತ್ತೆಂದೂ ಬಾರದಂತೆ ಹೋಗಿಬಿಟ್ಟರು. ಹೋದ ತೋಫಖಾನೆಯವರೇನೋ ಹೋದರು. ಆದರೆ, ಬಂಡಿಯಷ್ಟು ನೆನಪುಗಳನ್ನು ಉಳಿಸಿಬಿಟ್ಟಿದ್ದಾರೆ.

ಈಗ ಮೂರು ದಿನಗಳಿಂದ ಅವರು ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಜೋರಾಗಿ ಉಸಿರೆಳೆದುಕೊಳ್ಳುತ್ತಾ ಮಲಗಿದ್ದರು. ದೈಹಿಕವಾಗಿ ಹಾಸಿಗೆ ಮೇಲೆ ಪವಡಿಸಿದ್ದರೂ ಮಾನಸಿಕವಾಗಿ ತುಂಬಾ ಜಾಗೃತವಾಗಿ ಉಲ್ಲಸಿತರಾಗಿಯೇ ಇದ್ದರು. ಈಗ ನಾಲ್ಕು ದಿನಗಳ ಹಿಂದೆ ಅಂಗಡಿ ಮುಚ್ಚಿ ಅವರ ಮನೆಗೆ ಹೋಗಿ, ಅವರ ಹಾಸಿಗೆ ಬಳಿ ನಿಂತು `ನಾನು ಸರ್~ ಎಂದೆ. `ಓ, ಸುಬ್ರಹ್ಮಣ್ಯ ಬಾ, ಬಾ. ಸರಿಯಾದ ಟೈಮಿಗೇ ಬಂದಿ ಬಾ. ಅಂಗಡಿ ಬಂದ್ ಮಾಡಿ ಬಂದಿಯಾ? ನೋಡು, ಮಲಕೊಂಡಲ್ಲೇ ತಲಿತುಂಬ ಬಹಳಷ್ಟು ವಿಚಾರಗಳು ತುಂಬಿ ಬಿಟ್ಟಾವ. ಜೀವ ಮತ್ತು ಮೃತ್ಯು! ಪ್ರಕೃತಿ ನಮಗ ಜೀವ ಕೊಟ್ಟಂಗ ಮೃತ್ಯುವನ್ನೂ ಕೊಡ್ತದ. ಪ್ರಕೃತಿಗೆ ವಿರುದ್ಧವಾಗಿ ಹೋಗೋ ಮನುಷ್ಯಾ ಮೃತ್ಯುವನ್ನು ಜಯಿಸಲಿಕ್ಕೆ ಪ್ರಯತ್ನ ಪಡ್ತಾನ. ಆದರ ಆಗೂದಿಲ್ಲ. ಬ್ಹಾಳ ಅಂದರ ಅಂವ ಸಾವನ್ನ ಮುಂದೂಡ್ತಾನ ಅಷ್ಟ. ತನ್ನ ಕೆಲಸ ತಾ ಮಾಡ್ಲಿಕ್ಕೆ ಪ್ರಕೃತಿಗೆ ಬಿಟ್ರ ಅದು ಆ ಕೆಲಸಾನ ಸರಿಯಾಗೇ ಮಾಡ್ತದ. ಸಾವನ್ನು ಮುಂದೂಡೋ ಹಟಕ್ಕೆ ಬಿದ್ದ ಮಾನವ ಜನಸಂಖ್ಯೆ ಹೆಚ್ಚು ಮಾಡ್ತಾ ಇದ್ದಾನ.

ಹಂಗ ಆಹಾರ! ಆಹಾರ ಸೇವನೆಗೂ ಒಂದು ನಿಸರ್ಗದತ್ತ ಕ್ರಮ ಇರ‌್ತದ. ಅದನ್ನ ಬಿಟ್ಟು ನೋಡಿಲ್ಲೆ ನನ್ನ ಆಹಾರದ ಕ್ರಮ ಹೆಂಗ ಮಾಡ್ಯಾರ~ ಎಂದು ಹೇಳುವಾಗ ನಡುನಡುವೆ ಸಂಸ್ಕೃತ ಸುಭಾಷಿತಗಳನ್ನು ಉದ್ಧರಿಸುತ್ತಿದ್ದರು. `ಇಂಥಾ ವಿಚಾರಗಳನ್ನು ನಾ ಮಾತಾಡ್ತ ಹೋಗ್ತೀನಿ. ನೀನು ರೆಕಾರ್ಡ್ ಮಾಡಿದರ ಆರೆಂಟು ಲೇಖನಗಳು ಆಗ್ತಾವ.~ `ಈಗ ಮಾಡ್ಲೇನು ಸರ್?~ ಎಂದು ಕೇಳಿದಾಗ, “ಈಗ ಗಂಟಲ ಕ್ಲಿಯರ್ ಇಲ್ಲಲೊ, ನಾಳೆ ನಾಡ್ದ ಯಾವಾಗರ ಮಾಡು. ಕ್ಲಿಯರ್ ಆಗಿ ಮಾತಾಡ್ತೇನಿ~ ಅಂದ್ರು. ಆ ಮಾರನೇ ದಿನ ಬೆಳಿಗ್ಗೆ ಮತ್ತೆ ಹೋಗಿ ಧ್ವನಿ ಪರಿಚಯ ಮಾಡಿಕೊಂಡಿದ್ದೇ ತಡ `ಓ ಸುಬ್ರಹ್ಮಣ್ಯ ಬಾ ಬಾ~ ಎಂದರು. ಜೊತೆಗೆ ತಾವರಗೇರಿ ಇದ್ದುದನ್ನು ಹೇಳಿದಾಕ್ಷಣ `ಓ ಶರದ್ ಹೇಗಿದ್ದೀರಿ? ಸರಯೂ ಹೆಂಗಿದ್ದಾರ. ಸಂಕೇತ್ ಏನಂತಾನ?~ ಎಂದೆಲ್ಲ ಅವರ ಪರಿವಾರವನ್ನು ವಿಚಾರಿಸಿಕೊಂಡರು. `ನೋಡು, ನಾವು ಸಾಲ್ಯಾಗಿದ್ದಾಗ ಕೇಳುತ್ತಿದ್ದರು- ಯಾವ ಪ್ರಾಣಿ ಬೆಳಿಗ್ಗೆ ನಾಲ್ಕು ಕಾಲು ಮೇಲೆ ನಡೀತದ, ಮಧ್ಯಾಹ್ನ ಎರಡು ಕಾಲು ಮೇಲೆ ಮತ್ತ ಸಂಜಿಮುಂದ ಮೂರು ಕಾಲು ಮೇಲೆ ನಡೀತದ? ನಾವು ತಲಿ ಕೆಡಿಸ್ಕೋತಿದ್ವಿ. ಈಗ ಗೊತ್ತಾಗ್ತದ. ನಾನು ಎಂದೂ ಕೋಲು ಹಿಡಿದು ನಡೋದವಲ್ಲ. ಈಗ ಎದ್ದಮ್ಯಾಲೆ ಕೋಲು ಹಿಡಕೊಂಡು ನಡಿಬೇಕಾಗ್ತದೋ ಏನೋ? ಮನುಷ್ಯಾ ಕೂಸಿದ್ದಾಗ ಅಂಬೆಗಾಲು - ಅಂದ್ರ ನಾಲ್ಕು ಕಾಲು, ಮುಂದ ಎರಡು ಕಾಲು, ಮುಪ್ಪು ಬಂದಾಗ ಕೋಲು -ಅಂದ್ರ ಮೂರು ಕಾಲು ಆಯ್ತಲ?~

`ಸರ್, ನೀವು ಲಗೂ ಆರಾಮಾಗ್ತೀರಿ ಸರ್, ನಿಮ್ಮ ಕವನ ಸಂಕಲನ ಡಿಟಿಪಿ ಆಗೇದ. ಇನ್ನೊಂದು - ರಾಜರತ್ನಂ ಶೈಲಿಯ ಪದ್ಯಗಳನ್ನು ಸ್ಕ್ಯಾನ್ ಮಾಡಿ ನಿಮ್ಮ ಹಸ್ತಾಕ್ಷರದ್ದೇ ಪುಸ್ತಕ ಮಾಡಬೇಕಲ ಸರ್. ಅದು ಇಲ್ಲೇ ಅದ. ಅದನ್ನ ಆಮೇಲೆ ಒಯ್ತೀನಿ ಸರ್~ ಎಂದೆ.

`ಸುಬ್ರಹ್ಮಣ್ಯ, ಅದು ಒಳಗ ಕಪಾಟಿನ್ಯಾಗ ಅದ ತೊಗೊ. ಅದನ್ನು ಮಾಡಿಬಿಡು. ಕಾರ್ಯಕ್ರಮ ಮಾಡಿಬಿಡ್ರಿ. ನಾನು ಇಲ್ಲೇ ಇದ್ದು ಸೂಕ್ಷ್ಮ ಮನಸಿನಿಂದ ಗ್ರಹೆಸ್ತೀನಿ. ನನ್ನ ಸಲುವಾಗಿ ಕಾಯಬ್ಯಾಡ್ರಿ. ಮಾಡಿಬಿಡ್ರಿ ಕಾರ್ಯಕ್ರಮ~ ಅಂದರು.

ತುಂಬ ದುಃಖದಿಂದಲೇ ಹೊರಬಂದಿದ್ದೆ. ತೋಫಖಾನೆ ಅವರ ಸ್ಫೂರ್ತಿಯ ಮಾತುಗಳನ್ನು ಮನದಾಳದಿಂದ ಉಕ್ಕಿ ಬರುವ ಅವರ ಪ್ರೀತಿಯ ಮಾತುಗಳನ್ನು, ಅವರ ಸ್ನೇಹ ಬಳಗದ ಎಲ್ಲರೂ ಕಂಡುಂಡವರೇ. ಯಾರೊಬ್ಬರ ಕುರಿತೂ ಕಹಿ ಮಾತುಗಳನ್ನು ಎಂದಿಗೂ ಆಡಿದವರಲ್ಲ. ಬೆಳಿಗ್ಗೆ 6.30ಕ್ಕೆ ಆಕಾಶವಾಣಿಯ ಚಿಂತನ ಕೇಳಿದ ತಕ್ಷಣ, ಬಲ್ಲವರಾಗಿದ್ದರೆ ಫೋನ್ ಮಾಡಿ ಹೇಳಿಬಿಡುವುದು - ಬ್ಹಾಳ ಚೊಲೊ ಬಂತು, ಕೇಳಿ ನನಗ ... ಅದ ನೆನಪಿಗೆ ಬಂತು - ಬಾ ಅಲಾ ಮನಿಕಡೆ, ಬಂದ್‌ಹೋಗು.~ ಒಂಬತ್ತೂವರೆಗೆ ಆ ದಿನದ ಪತ್ರಿಕೆಯನ್ನು ಓದಿಸಿಕೊಂಡು ಅವರಿವರಿಗೆ ಫೋನ್ ಮಾಡಿ `ನಿಮ್ ಕಲರ್ ಫೋಟೋ ಬಂದದಲಾ... ಕಾರ್ಯಕ್ರಮದ ಪೂರ್ತಿ ರಿಪೋರ್ಟ್ ಹಾಕ್ಯಾರ, ಚೊಲೊ ಹಾಕ್ಯಾರ... ನಾಳೆ ಆ ಕಾರ್ಯಕ್ರಮ ಅದ ಅಲಾ ನಾ ಬರ‌್ತೀನಿ~ ಎಂದು ಹೇಳುತ್ತಿದ್ದರು.

ಕಳೆದ ಮೂವತ್ತು, ಮೂವತ್ತೈದು ವರ್ಷಗಳಿಂದಲೂ ಎರಡು ಕಣ್ಣುಗಳಿರದಿದ್ದರೂ ಅವರ ಲವಲವಿಕೆಯ ಬದುಕಿಗೆ ಅಚ್ಚುಕಟ್ಟಾದ ಜೀವನ ಕ್ರಮಕ್ಕೆ ಎಂದಿಗೂ ಚ್ಯುತಿ ತಂದುಕೊಂಡವರಲ್ಲ. `ನಮಸ್ಕಾರ ಸರ್~ ಎಂಬಷ್ಟರಿಂದಲೇ ಅಂತಹವರ ಹೆಸರು ಹೇಳಿ ಮಾತಾಡಿಸುವ ಅವರ ಪರಿ ತುಂಬಾ ಆಶ್ಚರ್ಯ ಎನಿಸುತ್ತಿತ್ತು. ಬೆಳಗಿನ ಹತ್ತು ಗಂಟೆ ಸುಮಾರಿಗೆ ಶುಭ್ರ ಮತ್ತು ಚೊಕ್ಕ ಪೋಷಾಕಿನಲ್ಲಿ ತಮ್ಮ ಕಾಯಂ ಕುರ್ಚಿ ಮೇಲೆ ಆಸೀನರಾಗಿರುತ್ತಿದ್ದರು. ಧ್ವನಿ ಗುರುತಿಸಿ ಪ್ರೀತಿಯಿಂದ ಬರಮಾಡಿಕೊಂಡು ಮಾತಾಡಿಸುತ್ತ, ನಡುನಡುವೆ ಬರುವ ಫೋನು ಕರೆಗಳಿಗೆ  `ಡಾಕ್ಟರ್ ಮಧ್ಯಾಹ್ನ ಒಂದು ಗಂಟೆಗೆ ಮನ್ಯಾಗ ನೋಡ್ತಾರ. ಸಾಯಂಕಾಲ ಆರರ ಮ್ಯಾಲೆ ದವಾಖಾನಿಗೆ ಹೋಗ್ತಾರ. ನಿಮಗ ಹೆಂಗ್ ಅನುಕೂಲವೋ ಹಂಗ ಮಾಡ್ರಿ~ ಎಂದು ಸೂಚನೆಕೊಟ್ಟು ಮತ್ತೆ ಮಾತು ಮುಂದುವರಿಸುತ್ತಿದ್ದರು. ನಮ್ಮ ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯ ಅತ್ಯಂತ ದೊಡ್ಡ ಆಧಾರ ಸ್ತಂಭದಂತಿದ್ದ ಪ್ರೊ. ಶ್ರೀನಿವಾಸ ತೋಫಖಾನೆ ಪ್ರತಿ ಕಾರ್ಯಕ್ರಮದ ನಂತರ ಅತ್ಯುತ್ತಮ ಫೀಡ್‌ಬ್ಯಾಕ್ ಕೊಡುತ್ತಿದ್ದರು.

ಎಲ್ಲ ಕಾರ್ಯಕ್ರಮಕ್ಕೂ ತಪ್ಪದೆ ಬರುತ್ತಿದ್ದ ಅವರಿಗೆ ಮುಂದಿನ ಸಾಲಿನ ಎದುರಿನ ಕುರ್ಚಿಯೇ ಕಾಯಂ. 15 ನಿಮಿಷ ಮೊದಲೇ ಆಗಮಿಸುತ್ತಿದ್ದ ಅವರಿಗೆ ಎಲ್ಲರೂ ನಮಸ್ಕಾರ ಹೇಳುತ್ತಿದ್ದರೆ ಅವರ ಹೆಸರು ಹಿಡಿದು `ಹೆಂಗಿದ್ದೀರಿ~ ಎಂದು ಕೇಳುತ್ತಿದ್ದರು.

ಈಗ 25 ದಿನಗಳ ಹಿಂದೆ ನಮ್ಮ ವೇದಿಕೆಗೆ ಬರೆದುಕೊಟ್ಟಿದ್ದ 17 ಸಾವಿರ ರೂಪಾಯಿಗಳ ಚೆಕ್ಕೇ ಅವರು ಕೊನೆಯದಾಗಿ ಸಂದಾಯ ಮಾಡಿದ್ದೆಂದು ಕಾಣುತ್ತದೆ. ಈಗೇನಿದ್ದರೂ ನಮ್ಮ ಕಾರ್ಯಕ್ರಮದಲ್ಲಿ ಆ ಮುಂದಿನ ಅವರ ಕುರ್ಚಿ ಖಾಲಿ. ಆ ಖಾಲಿ ಕುರ್ಚಿಯ ತುಂಬೆಲ್ಲ ಅವರ ನೆನಪು. ಅದ ಸ್ಫೂರ್ತಿ, ಹಾಸ್ಯ, ಲವಲವಿಕೆ, ಅಧ್ಯಯನ, ಚರ್ಚೆ, ವಿದ್ವತ್ತುಗಳನ್ನೆಲ್ಲ ಆಧ್ಯಾತ್ಮದ ಚೀಲದಲ್ಲಿ ಕಟ್ಟಿಕೊಟ್ಟಂತಹ ಅವರದೊಂದು ನೆನಪು ಮಾತ್ರ. ಕನ್ನಡಕ್ಕೆ ಎಂಟು ಜ್ಞಾನಪೀಠ, ಒಂದು ಸರಸ್ವತಿ ಸಮ್ಮಾನ ಅಷ್ಟೇ ಏಕೆ, ಇನ್ನೂ ಹತ್ತಾರು ಇಂಥವನ್ನು ತರುವವರು ಬಂದಾರು. ಆದರೆ, ಮುಂದೆಯೂ ಈ ನೆಲದಲ್ಲಿ ಮತ್ತೊಬ್ಬ ಶ್ರೀನಿವಾಸ ತೋಫಖಾನೆ ಹುಟ್ಟಲಾರನಲ್ಲ ಎಂಬುದೇ ಅತ್ಯಂತ ನೋವಿನ ಸಂಗತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT