ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್.ಎಂ.ವಿ. ಜೀವನ ಸಾಧನೆಯ ಪ್ರದರ್ಶನ ಅನಾವರಣ

Last Updated 12 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸರ್.ಎಂ.ವಿಶ್ವೇಶ್ವರಯ್ಯ ಅವರು ಬರೀ ಎಂಜಿನಿಯರ್ ಆಗಿರದೇ ಒಬ್ಬ ದೂರದೃಷ್ಟಿಯುಳ್ಳ ಮೇಧಾವಿಯಾಗಿದ್ದರು~ ಎಂದು ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ವಿ.ಎಸ್.ರಾಮಮೂರ್ತಿ ತಿಳಿಸಿದರು.

ಸರ್.ಎಂ.ವಿಶ್ವೇಶ್ವರಯ್ಯ ಅವರ 150ನೇ ಜನ್ಮದಿನದ ಅಂಗವಾಗಿ ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು ತನ್ನ ಸಂಗ್ರಹಾಲಯದಲ್ಲಿ ಶುಕ್ರವಾರದಿಂದ ಆರಂಭಿಸಿದ ವಿಶ್ವೇಶ್ವರಯ್ಯ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಮೇಡ್ ಇನ್ ಇಂಡಿಯಾ~ ಆಗಿದ್ದ ಅವರು, ತಮ್ಮ ಊರು ಮುದ್ದೇನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೆಂಗಳೂರು ಹಾಗೂ ಪುಣೆಯಲ್ಲಿ ಉನ್ನತ ಶಿಕ್ಷಣ ಪೂರೈಸಿ ಮರಳಿ ಬೆಂಗಳೂರಿಗೆ ಬಂದು ಎಂಜಿನಿಯರಿಂಗ್ ವೃತ್ತಿ ಆರಂಭಿಸಿದರು. ಈ ಅವಧಿಯಲ್ಲೇ ಹಲವಾರು ಪ್ರಥಮಗಳನ್ನು ಸಾಧಿಸಿದ ಅವರು, ಇಂದಿನ ಎಂಜಿನಿಯರ್‌ಗಳಿಗೆ ಮಾದರಿಯಾಗಿದ್ದಾರೆ. ಕೃಷ್ಣರಾಜಸಾಗರ ಅಣೆಕಟ್ಟು ಅವರ ಮುಂದಾಲೋಚನೆಯ ಪ್ರತೀಕವಾಗಿದೆ~ ಎಂದು ಶ್ಲಾಘಿಸಿದರು.

ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಮಂಡಳಿಯ ಮಹಾ ನಿರ್ದೇಶಕ ಜಿ.ಎಸ್.ರೌಟೆಲಾ ಮಾತನಾಡಿ, `ದೇಶದ ವಿವಿಧೆಡೆಗಳಲ್ಲಿರುವ ಮಂಡಳಿಯ ವಿಜ್ಞಾನ ಕೇಂದ್ರಗಳಲ್ಲಿ ಹಿರಿಯ ವಿಜ್ಞಾನಿಗಳಾದ ಜಗದೀಶ್ ಚಂದ್ರ ಬೋಸ್, ಎಸ್.ಚಂದ್ರಶೇಖರ, ಹೋಮಿ ಜಹಾಂಗೀರ್ ಬಾಬಾ ಅವರ ಜನ್ಮದಿನದ ಅಂಗವಾಗಿ ಅವರ ಜೀವನ ಮತ್ತು ಸಂಶೋಧನೆಗಳ ಮೇಲೆ ಬೆಳಕು ಚೆಲ್ಲುವ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇದೀಗ ವಿಶ್ವೇಶ್ವರಯ್ಯ ಅವರ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ~ ಎಂದು ಹೇಳಿದರು.

ಧಾರವಾಡ, ಪಿಲಿಕುಳ ಕೇಂದ್ರಗಳು ಈ ವರ್ಷ ಆರಂಭ:
ಮಂಡಳಿಯು ರಾಜ್ಯ ಸರ್ಕಾರದ ಸಹಯೋಗದಲ್ಲಿ ಧಾರವಾಡ ಮತ್ತು ಮಂಗಳೂರು ಸಮೀಪದ ಪಿಲಿಕುಳದ ಬಳಿ ನಿರ್ಮಿಸುತ್ತಿರುವ ವಿಜ್ಞಾನ ಕೇಂದ್ರಗಳನ್ನು ಈ ವರ್ಷವೇ ಉದ್ಘಾಟಿಸಿ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ರಾಜ್ಯದಿಂದ ಇನ್ನೂ 8 ಕೇಂದ್ರಗಳನ್ನು ಸ್ಥಾಪಿಸಲು ಬೇಡಿಕೆ ಬಂದಿದ್ದು, ಈಗಾಗಲೇ ಮೈಸೂರಿನಲ್ಲಿ ಕೇಂದ್ರದ ನಿರ್ಮಾಣ ಸಾಗಿದೆ. ಆದ್ಯತೆಯ ಮೇಲೆ ಉಳಿದ ಕೇಂದ್ರಗಳನ್ನು ನಿರ್ಮಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೌಟೆಲಾ ವಿವರಿಸಿದರು.

ವಿಶ್ವೇಶ್ವರಯ್ಯ ಅವರ ಸಂಬಂಧಿಗಳಾದ ಶಕುಂತಲಾ ಕೃಷ್ಣಮೂರ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಸತೀಶ್ ಮೋಕ್ಷಗುಂಡಂ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಸ್ತುಸಂಗ್ರಹಾಲಯದ ನಿರ್ದೇಶಕ ಶಿವಪ್ರಸಾದ್ ಖೆಣೆದ, `ಈ ವಸ್ತು ಪ್ರದರ್ಶನಕ್ಕಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ, ನವದೆಹಲಿಯಲ್ಲಿ ವಿವಿಧ ಇಲಾಖೆಗಳು, ಸಂಸ್ಥೆಗಳು ಹಾಗೂ ವಿಶ್ವೇಶ್ವರಯ್ಯ ಅವರ ಕುಟುಂಬದವರನ್ನು ಭೇಟಿಯಾಗಿ ವಸ್ತುಗಳನ್ನು ಸಂಗ್ರಹಿಸಲಾಗಿದೆ~ ಎಂದರು.

ಸರ್ ಎಂ.ವಿಶ್ವೇಶ್ವರಯ್ಯ ಅವರ ವಸ್ತು ಪ್ರದರ್ಶನವನ್ನು ಮ್ಯೂಸಿಯಂನಲ್ಲಿ ವಿಶೇಷವಾಗಿ ರೂಪಿಸಲಾದ ಜಾಗದಲ್ಲಿ ಅಳವಡಿಸಲಾಗಿದ್ದು, ಇದಕ್ಕೆ ಪ್ರತ್ಯೇಕ ಶುಲ್ಕವನ್ನೇನೂ ಕೊಡಬೇಕಾಗಿಲ್ಲ. ಮ್ಯೂಸಿಯಂ ಪ್ರವೇಶ ಶುಲ್ಕ ಹಿರಿಯರಿಗೆ ರೂ 20, ವಿದ್ಯಾರ್ಥಿಗಳಿಗೆ ರೂ 10 (ಶಾಲೆಯ ಅಧಿಕೃತ ಪತ್ರ ತರಬೇಕು). ಸಮಯ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರವೇಶಕ್ಕೆ ಮುಕ್ತವಾಗಿರುತ್ತದೆ. 

ಸರ್ ಎಂ.ವಿಶ್ವೇಶ್ವರಯ್ಯ ವಿಶ್ವದಲ್ಲಿ...!
ಬೆಂಗಳೂರು: ಸರ್ ಎಂ.ವಿಶ್ವೇಶ್ವರಯ್ಯ ಅವರಿಗೆ ನೀಡಲಾದ ಭಾರತರತ್ನ ಪದಕ. ಕೈಸರ್ ಎ ಹಿಂದ್ ಪದಕಗಳನ್ನು ನೋಡಿದ್ದೀರಾ? ಕೆಆರ್‌ಎಸ್ ಅಣೆಕಟ್ಟನ್ನು ಕಟ್ಟುವಾಗ ಸೆರೆ ಹಿಡಿಯಲಾದ ಛಾಯಾಚಿತ್ರಗಳನ್ನು ವೀಕ್ಷಿಸಿದ್ದೀರಾ? ಅವರು ಬಳಸುತ್ತಿದ್ದ ಟೈಪ್ ರೈಟರ್, ಮಸಿ ಕುಡಿಕೆ, ಪೆನ್ನು, ದಿವಾನರಾಗಿದ್ದಾಗ ಬಳಸುತ್ತಿದ್ದ ಗೌನು, ಧರಿಸುತ್ತಿದ್ದ ಕನ್ನಡಕ ಉಹೂಂ ನೋಡಿರಲಿಕ್ಕಿಲ್ಲ ಅಲ್ಲವೇ?

ಹಾಗಿದ್ದರೆ ನಗರದ ಕಸ್ತೂರಬಾ ರಸ್ತೆಯ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬನ್ನಿ. ಅಲ್ಲಿ ಈ ಎಲ್ಲ ಅಪರೂಪದ ವಸ್ತುಗಳು ಲಭ್ಯವಿವೆ. ಅಲ್ಲದೇ ವಿಶ್ವೇಶ್ವರಯ್ಯ ಅವರ ಧ್ವನಿ ಮುದ್ರಿಕೆ, ವಿಡಿಯೊ, ಅವರ ಕುರಿತು ಜಯಚಾಮರಾಜ ಒಡೆಯರ್, ಕೃಷ್ಣರಾಜ ಒಡೆಯರ್, ಮಹಾತ್ಮ ಗಾಂಧಿ, ಡಾ.ಬಾಬು ರಾಜೇಂದ್ರ ಪ್ರಸಾದ್, ಜಿ.ಡಿ.ನಾಯ್ಡು, ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಸರ್ ಮಿರ್ಜಾ ಇಸ್ಮಾಯಿಲ್, ಜವಹರಲಾಲ್ ನೆಹರು ಅವರು ಆಡಿರುವ ಮೌಲಿಕ ಮಾತುಗಳು ಇವರ ಭಾವಚಿತ್ರಗಳನ್ನು ಹೊಂದಿದ ಮೂರ್ತಿಗಳನ್ನು ಸೆನ್ಸರ್ ತಂತ್ರಜ್ಞಾನದ (ರೇಡಿಯೊ ಫ್ರಿಕ್ವೆನ್ಸಿ ಐಡಿಂಟಿಫಿಕೇಷನ್ ಫ್ರೀಕ್ವೆನ್ಸಿ-ಆರ್‌ಎಫ್‌ಐಡಿ) ಸಹಾಯದಿಂದ ಒಂದು ನಿಗದಿತ ಸ್ಥಳದಲ್ಲಿಟ್ಟಾಗ, ಪರದೆಯ ಮೇಲೆ ಅವರ ಹೇಳಿಕೆಗಳು ಭಾವಚಿತ್ರದೊಂದಿಗೆ ಬಿತ್ತರಗೊಳ್ಳುತ್ತವೆ.

ಜೊತೆಗೆ ಎಂಜಿನಿಯರಿಂಗ್ ತಂತ್ರಜ್ಞಾನ ಸೇರಿದಂತೆ ಹಲವು ಸಾಮಾನ್ಯ ಜ್ಞಾನದ ಬಗೆಗಿನ ಕ್ವಿಜ್ ಆಟವನ್ನೂ ವಿದ್ಯಾರ್ಥಿಗಳು ಆಡಬಹುದಾಗಿದೆ. ಕೆಆರ್‌ಎಸ್‌ನ ಪ್ರತಿಕೃತಿಯನ್ನು ಅಳವಡಿಸಲಾಗಿದ್ದು, ಬಟನ್ ಅದುಮಿದರೆ ಕ್ರೆಸ್ಟ್ ಗೇಟ್‌ಗಳು ತೆರೆದು ನೀರು ಚಿಮ್ಮುವ ವ್ಯವಸ್ಥೆಯನ್ನು ಸೃಷ್ಟಿಸಲಾಗಿದೆ.

ಗಣ್ಯರೊಂದಿಗೆ ಎಂ.ವಿ. ಅವರ ಅಪರೂಪದ ಛಾಯಾಚಿತ್ರಗಳು, ಮಹಾರಾಷ್ಟ್ರದ ಸುಕ್ಕೂರಿನಲ್ಲಿ ಮಿಲಿಟರಿ ಪಡೆಗೆ ನೀರು ಪೂರೈಕೆ ಮಾಡಲು ಇವರು ರೂಪಿಸಿದ (ನದಿ ನೀದಿನ ಆಳದಿಂದ ನೀರೆತ್ತುವುದು) ಕಲೆಕ್ಟರ್ ವೆಲ್ ಸೇರಿದಂತೆ ಹಲವು ಉಪಕರಣಗಳು ನೋಡುಗರ ಗಮನ ಸೆಳೆಯುತ್ತವೆ. ಬನಾರಸ್ ಹಿಂದೂ ವಿ.ವಿ ಮತ್ತು ಮುಂಬೈನ ವಿ.ವಿಯೊಂದರಲ್ಲಿ ಅವರು ಮಾಡಿದ ಘಟಿಕೋತ್ಸವದ ಮುದ್ರಿತ ಪ್ರತಿಗಳು, ವಿವಿಧ ಗಣ್ಯರಿಗೆ ಬರೆದ ಪತ್ರಗಳು ಲಭ್ಯವಿವೆ.

ಡೆಕ್ಕನ್ ಹೆರಾಲ್ಡ್‌ನಲ್ಲಿ ವರದಿ: ವಿಶ್ವೇಶ್ವರಯ್ಯ ಅವರಿಗೆ ನೂರು ವರ್ಷ ತುಂಬಿದಾಗ ಅವರು ಕೈಮುಗಿಯುತ್ತಿರುವ ಬೃಹತ್ ಭಾವಚಿತ್ರ `ಡೆಕ್ಕನ್ ಹೆರಾಲ್ಡ್~ನಲ್ಲಿ ಪ್ರಕಟವಾಗಿದ್ದು ಸೇರಿದಂತೆ, ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದಾಗ ಮಾಡಿದ ಭಾಷಣದ ವಿವರಗಳ ಪತ್ರಿಕಾ ವರದಿಗಳ ತುಣುಕುಗಳು ಇಲ್ಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT