ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಲ್ ಇನ್‌ಸ್ಪೆಕ್ಟರ್ ಮೇಲೆ ಅಮಾನತುಗೊಂಡ ಸಿಪಿಐ ಹಲ್ಲೆ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಮಾನತುಗೊಂಡ ಸರ್ಕಲ್ ಇನ್‌ಸ್ಪೆಕ್ಟರ್ ಅಧಿಕಾರ ಉಸ್ತುವಾರಿ ವಹಿಸಿಕೊಡುವ ಸಂಬಂಧದಲ್ಲಿ ಮತ್ತೊಬ್ಬ ಸರ್ಕಲ್ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ಮಾಡಿದ ಘಟನೆ ಚಿಂತಾಮಣಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಚಿಂತಾಮಣಿ ನಗರ ಠಾಣೆಯ ಅಮಾನತುಗೊಂಡ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಎಸ್.ಸರ್ದಾರ್ ಹಲ್ಲೆ ಮಾಡಿದ ಆರೋಪಿ. ಚಿಂತಾಮಣಿ ಗ್ರಾಮಾಂತರ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ವೆಂಕಟಾಚಲಪತಿ ಹಲ್ಲೆಗೆ ಒಳಗಾದವರು. ಹಲ್ಲೆ ಮಾಡಿದ ಆರೋಪದ ಮೇಲೆ ಸರ್ದಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಎಂ.ಎಸ್.ಸರ್ದಾರ್ ಶುಕ್ರವಾರವಷ್ಟೇ ಅಮಾನತುಗೊಂಡಿದ್ದರು. ಅಮಾನತುಗೊಂಡ ಹಿನ್ನೆಲೆಯಲ್ಲಿ ನಗರ ಠಾಣೆಯ ಉಸ್ತುವಾರಿ ವಹಿಸಿಕೊಳಲು ವೆಂಕಟಾಚಲಪತಿ ಅವರಿಗೆ ಸೂಚಿಸಲಾಗಿತ್ತು.

ರೈಸ್‌ಪುಲ್ಲಿಂಗ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದ್ದ ಹಣ ಮತ್ತು ಶಸ್ತ್ರವನ್ನು ಕೂಡ ಸರ್ದಾರ್ ಅವರಿಂದ ಹಿಂಪಡೆದುಕೊಳ್ಳುವಂತೆ ಹೇಳಲಾಗಿತ್ತು.

`ಕೆಲ ದಿನಗಳ ಹಿಂದೆ ನಡೆದ ರೈಸ್‌ಪುಲ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದ್ದ ರೂ. 14 ಲಕ್ಷ ಹಣವನ್ನು ಸರ್ದಾರ್ ಇಲಾಖೆಗೆ ಒಪ್ಪಿಸದೆ ಮನೆಯಲ್ಲೇ ಇಟ್ಟುಕೊಂಡಿದ್ದರು.

ಹುದ್ದೆಯಿಂದ ಅಮಾನತುಗೊಂಡ ಹಿನ್ನೆಲೆಯಲ್ಲಿ ಹಣ, ಶಸ್ತ್ರವನ್ನು ಉಸ್ತುವಾರಿ ಇನ್‌ಸ್ಪೆಕ್ಟರ್‌ಗೆ ವಹಿಸಬೇಕಿತ್ತು. ಇದಕ್ಕೆಂದೇ ವೆಂಕಟಚಾಲಪತಿ ಅವರನ್ನು ಸರ್ದಾರ್ ಮನೆಗೆ ಕಳುಹಿಸಲಾಗಿತ್ತು. ಆದರೆ ಅಮಾನತು ಆದೇಶ ಬರುವವರೆಗೆ ಹಣ ಮತ್ತು ಶಸ್ತ್ರ ಒಪ್ಪಿಸುವುದಿಲ್ಲ ಎಂದು ಸರ್ದಾರ್ ಪಟ್ಟು ಹಿಡಿದಿದ್ದಾರೆ.

ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ~ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಬಾನೊತ್ `ಪ್ರಜಾವಾಣಿ~ಗೆ ತಿಳಿಸಿದರು.

`ಮಾತಿನ ಚಕಮಕಿ ತಾರಕಕ್ಕೇರಿದಾಗ ಸರ್ದಾರ್ ಅವರು ವೆಂಕಟಾಚಲಪತಿ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿ ನಡೆದ ಘಟನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್ ಅವರಿಗೆ ವಿವರಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಿದಾಗ, ಐದು ದಿನಗಳೊಳಗೆ ಹಣ ಮತ್ತು ಶಸ್ತ್ರವನ್ನು ಒಪ್ಪಿಸುವುದಾಗಿ ಸರ್ದಾರ್ ತಿಳಿಸಿದ್ದಾರೆ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT