ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಅಸ್ಥಿರಕ್ಕೆ ಪ್ರತಿಪಕ್ಷಗಳ ಯತ್ನ: ಪ್ರಧಾನಿ

Last Updated 27 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಏರ್ ಇಂಡಿಯಾ ವಿಮಾನ: `ಸರ್ಕಾರವನ್ನು ಅಸ್ಥಿರಗೊಳಿಸುವ~ ಪ್ರಯತ್ನಗಳು ನಡೆಯುತ್ತಿವೆ. ಶೀಘ್ರ ಚುನಾವಣೆ `ಆಗಲೇಬೇಕೆಂದು~ ಪ್ರತಿಪಕ್ಷಗಳು ಅತಿಮುಂಚಿತವಾಗಿಯೇ ವಿಶ್ರಾಂತರಹಿತವಾಗಿವೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಂಗಳವಾರ ಆರೋಪಿಸಿದರು.

ಮಧ್ಯಂತರ ಚುನಾವಣೆ ನಡೆಯುವುದಿಲ್ಲ. ಕೇಂದ್ರ ಸರ್ಕಾರವು 5 ವರ್ಷದ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ನ್ಯೂಯಾರ್ಕ್‌ನಿಂದ ಫ್ರಾಂಕ್‌ಫರ್ಟ್ ಮಾರ್ಗವಾಗಿ  ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ನವದೆಹಲಿಗೆ ಆಗಮಿಸುವ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ಪ್ರತಿಪಕ್ಷಗಳು `ಅತಿ ಮುಂಚಿತವಾಗೇ ಚಡಪಡಿಸುತ್ತಿವೆ~. ಈ ಪಕ್ಷಗಳು ತಾಳ್ಮೆ ಕಲಿಯಬೇಕು ಎಂದರು.

2ಜಿ ತರಂಗಾಂತರ ಹರಾಜಿಗೆ ಆಗಿನ ಹಣಕಾಸು ಸಚಿವ ಚಿದಂಬರಂ ಸೂಕ್ತ ಕ್ರಮ ಕೈಗೊಳ್ಳಲಿಲ್ಲವೆಂಬ ಸಲಹೆ ನೀಡಿದ್ದ ಹಣಕಾಸು ಸಚಿವಾಲಯದ ಟಿಪ್ಪಣಿ ಹಿನ್ನೆಲೆಯಲ್ಲಿ ತಮ್ಮ ಸಂಪುಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಉಂಟಾಗಿಲ್ಲವೆಂದ ಪ್ರಧಾನಿ ಸಿಂಗ್, ಚಿದಂಬರಂ ಬಗ್ಗೆ ವಿಶ್ವಾಸವಿದೆ ಎಂದು ಸಮರ್ಥಿಸಿಕೊಂಡರು.

ಆದರೆ ಇತ್ತೀಚೆಗೆ ಬಹಿರಂಗಗೊಂಡ ಹಣಕಾಸು ಸಚಿವಾಲಯದ ಟಿಪ್ಪಣಿಯ ನಿಖರತೆಯನ್ನು ಅಕ್ಷರಶಃ ಅವರು ದೃಢಪಡಿಸಿದರು. 2007ರಲ್ಲಿ 2ಜಿ ತರಂಗಾಂತರ ಹಂಚಿಕೆಯಲ್ಲಿ ಏನು ನಡೆದಿದೆ ಎಂಬುದನ್ನು `ದಾಖಲಿಸುವುದೇ~ ಟಿಪ್ಪಣಿ ಉದ್ದೇಶ ಎಂದರು.

ತರಂಗಾಂತರ ಹಂಚಿಕೆ ಸಂಬಂಧಿಸಿದ ಸಚಿವರ ತಂಡ ರೂಪಿಸಿದ್ದ ನಿಯಮಾವಳಿಗಳನ್ನು ಬದಲಾಯಿಸಲು ತಾವು ಒಪ್ಪಿಕೊಂಡಿದ್ದು ನಿಜ ಎಂದ ಅವರು ಪರವಾನಗಿ ಮಾರಾಟದಲ್ಲಿ ದೂರಸಂಪರ್ಕ ಇಲಾಖೆಗೆ ಮುಕ್ತ ಅವಕಾಶ ನೀಡುವುದು ಇದರ ಉದ್ದೇಶವಾಗಿತ್ತು ಎಂದರು. ಅಲ್ಲದೆ ಆಗಿನ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಸಲಹೆ ಮೇರೆಗೇ ಈ ಒಪ್ಪಿಗೆ ನೀಡಿದ್ದಾಗಿ ತಿಳಿಸಿದರು.

ಯುಪಿಎ-2 ಸರ್ಕಾರವನ್ನು ಕಾಡುತ್ತಿರುವ 2ಜಿ ತರಂಗಾಂತರ ಹಂಚಿಕೆಯಲ್ಲಿ ಅವ್ಯವಹಾರ ಆರೋಪ ಮತ್ತು ಇತರ ಎಲ್ಲಾ ಹಗರಣಗಳು 2009ರ ಲೋಕಸಭಾ ಚುನಾವಣೆಗೆ ಮೊದಲೇ ನಡೆದಿವೆ. ಆದರೂ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಚುನಾವಣೆಯಲ್ಲಿ ಜಯಿಸಿದ್ದು ಇನ್ನೂ ಐದು ವರ್ಷ ಆಡಳಿತ ನಡೆಸಲು ಜನರಿಂದ ಮತ್ತೆ ಅಧಿಕಾರ ಪಡೆದುಕೊಂಡಿದೆ ಎಂದರು.

 ತಮ್ಮ  ಸರ್ಕಾರದ ಬಗ್ಗೆ ಗ್ರಹಿಕೆಯ ಸಮಸ್ಯೆ ಆಗಿರಬಹುದು ಎಂಬುದನ್ನು ಒಪ್ಪಿಕೊಂಡ ಅವರು ಇದನ್ನು ಸರಿಪಡಿಸುವ ಅಗತ್ಯ ಇದೆ ಎಂದರು.

`ಇತರ ಕೆಲವು ಶಕ್ತಿಗಳು ನಮ್ಮ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿವೆ~ ಎಂದರು. ಆದರೆ `ಇತರ ಶಕ್ತಿಗಳು~ ಯಾವುವು ಎಂಬುದನ್ನು ಅವರು ವಿಸ್ತರಿಸಿ ಹೇಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT