ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಒಪ್ಪಿದರೆ ಸರ್ಕಾರಿ ವಾಹಿನಿ ಸ್ಥಾಪನೆ - ಕೆ.ಜಿ. ಬೋಪಯ್ಯ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯ ಸರ್ಕಾರ ಒಪ್ಪಿದರೆ ಲೋಕಸಭೆ ಮಾದರಿಯಲ್ಲಿ ರಾಜ್ಯ ವಿಧಾನಸಭೆ ಮತ್ತು ಪರಿಷತ್ತಿನ ಕಾರ್ಯಕಲಾಪಗಳನ್ನೂ ಸರ್ಕಾರಿ ವಾಹಿನಿ (ಚಾನೆಲ್) ಮೂಲಕವೇ ಪ್ರಸಾರ ಮಾಡಲಾಗುವುದು~ ಎಂದು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಬುಧವಾರ ಇಲ್ಲಿ ತಿಳಿಸಿದರು.

`ನಾಲ್ಕೈದು ವರ್ಷಗಳ ಹಿಂದೆಯೇ ಈ ರೀತಿಯ ವ್ಯವಸ್ಥೆ ಜಾರಿಗೆ ಲೋಕಸಭೆ ಸಚಿವಾಲಯ ದೇಶದ ಎಲ್ಲ ರಾಜ್ಯಗಳಿಗೂ ಪತ್ರ ಬರೆದು ಸಲಹೆ ಮಾಡಿತ್ತು. ಅದರ ಆಧಾರದ ಮೇಲೆಯೇ ರಾಜ್ಯ ವಿಧಾನ ಮಂಡಲದ ಸಚಿವಾಲಯ ಸಮಿತಿಯನ್ನೂ ರಚಿಸಿತ್ತು. ಈ ಸಮಿತಿ ಕೊಟ್ಟಿರುವ ವರದಿ ಪ್ರಕಾರ ಪ್ರತ್ಯೇಕ ಚಾನೆಲ್ ಸ್ಥಾಪನೆಗೆ 25 ಕೋಟಿ ರೂಪಾಯಿ ಬೇಕಾಗುತ್ತದೆ. ಇದನ್ನು ಸರ್ಕಾರ ಕೊಡಲು ಒಪ್ಪಿದರೆ ಅದು ಜಾರಿಗೆ ಬರುತ್ತದೆ. ಇಲ್ಲದಿದ್ದರೆ, ಖಾಸಗಿ ಚಾನೆಲ್‌ಗಳಿಗೂ ಪ್ರವೇಶ ಅವಕಾಶ ಇರುವ ಈಗಿನ ವ್ಯವಸ್ಥೆಯೇ ಮುಂದುವರಿಯಲಿದೆ~ ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು.

`ಸದನದಲ್ಲಿ ಬ್ಲೂಫಿಲಂ ನೋಡಿದ ಪ್ರಕರಣ ಬೆಳಕಿಗೆ ಬಂದ ಕಾರಣಕ್ಕೆ ಖಾಸಗಿ ಚಾನೆಲ್‌ಗಳಿಗೆ ನಿರ್ಬಂಧ ಹೇರಲಾಗುತ್ತಿದೆ ಎನ್ನುವುದು ಸುಳ್ಳು. ಈ ರೀತಿಯ ಪ್ರಸ್ತಾವ ನಾಲ್ಕೈದು ವರ್ಷಗಳಿಂದಲೇ ಇದ್ದು, ಅದರ ಜಾರಿಗೆ ಸರ್ಕಾರ ಮುಂದಾದರೆ ಅದನ್ನು ಸಹಜವಾಗಿಯೇ ಒಪ್ಪಬೇಕಾಗುತ್ತದೆ~ ಎಂದು ಅವರು ಹೇಳಿದರು.

ನಿಯಮ ಬದಲಿಗೆ ಕ್ರಮ: ವಿಧಾನಮಂಡಲದ ಅಧಿವೇಶನ ನಡೆಸುವ ಸಂಬಂಧ ರೂಪಿಸಿಕೊಂಡಿರುವ ನಿಯಮಾವಳಿಗಳನ್ನು ಬದಲಿಸುವ ಅಗತ್ಯ ಇದ್ದು, ಈ ಕುರಿತು ಕ್ರಮ ತೆಗೆದುಕೊಳ್ಳಲು ಸಮಿತಿಯನ್ನೂ ರಚಿಸಲಾಗಿದೆ. ಹಲವು ವರ್ಷಗಳ ಹಿಂದೆಯೇ ಸಮಿತಿ ರಚಿಸಿದ್ದರೂ ನಿಯಮಗಳನ್ನು ಬದಲಿಸುವ ಕೆಲಸ ಇನ್ನೂ ಆಗಿಲ್ಲ. ಈಗ ಅದಕ್ಕೆ ಸ್ವಲ್ಪ ಚುರುಕು ಮುಟ್ಟಿಸಲಾಗುವುದು ಎಂದು ಹೇಳಿದರು.

`ಇತ್ತೀಚಿನ ಎಲ್ಲ ವಿದ್ಯಮಾನಗಳನ್ನೂ ಗಮನದಲ್ಲಿ ಇಟ್ಟುಕೊಂಡು ಕೆಲವು ಕಟ್ಟುಪಾಡುಗಳನ್ನು ಹಾಕಿಕೊಳ್ಳಬೇಕಾಗಿದೆ. ತಾಂತ್ರಿಕವಾಗಿಯೂ ಬಹಳಷ್ಟು ಸುಧಾರಣೆಯಾಗಿದ್ದು, ಅವೆಲ್ಲಕ್ಕೂ ಹೊಂದಿಕೊಳ್ಳುವ ಹಾಗೆ ನಿಯಮಗಳನ್ನು ರೂಪಿಸಬೇಕಾಗಿದೆ. ಹಳೇ ನಿಯಮಗಳನ್ನೇ ಇಟ್ಟುಕೊಂಡು ಸದನ ನಡೆಸುವುದು ಕಷ್ಟ~ ಎಂದರು.

ಸಾಮರ್ಥ್ಯ ಹೆಚ್ಚಳ: 2ಜಿ ಮತ್ತು 3ಜಿ ತರಂಗಾಂತರ ವ್ಯವಸ್ಥೆ ಜಾರಿಯಾದ ನಂತರ ವಿಧಾನಸಭೆಯಲ್ಲಿ ಅಳವಡಿಸಿರುವ `ಜಾಮರ್~ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಜಾಮರ್ ಇದ್ದರೂ ಮೊಬೈಲ್ ಫೋನ್‌ಗಳು ಸದ್ದು ಮಾಡುತ್ತಿವೆ. ಹೀಗಾಗಿ ಜಾಮರ್‌ನ ಸಾಮರ್ಥ್ಯ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಕುರಿತ ಕಡತಕ್ಕೂ ಸಹಿ ಮಾಡಲಾಗಿದೆ ಎಂದರು.

ಬ್ಲೂಫಿಲಂ ಪ್ರಕರಣ: ಬ್ಲೂ ಫಿಲಂ ಪ್ರಕರಣ ಕುರಿತ ತಮ್ಮ ನೋಟಿಸ್‌ಗೆ ಉತ್ತರ ನೀಡಲು ಮೂವರು ಶಾಸಕರಿಗೂ ಗುರುವಾರದವರೆಗೆ ಸಮಯಾವಕಾಶ ನೀಡಲಾಗಿದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ವಿವರಣೆ ನೀಡದಿದ್ದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು.

ಈ ಪ್ರಕರಣ ಕುರಿತು ತನಿಖೆ ಮಾಡಲು ಸದನದ ವಿಚಾರಣಾ ಸಮಿತಿಯನ್ನು ಗುರುವಾರ ರಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬ್ಲೂಫಿಲಂ ಪ್ರಕರಣ ಕುರಿತು ತನಿಖೆ ನಡೆಸುವಂತೆ ಕೋರ್ಟ್ ಆದೇಶ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

`ಬ್ಲೂ ಫಿಲಂ~ ವಿವಾದ : 27ಕ್ಕೆ ವಿಚಾರಣೆ

ಸದನದಲ್ಲಿ `ಬ್ಲೂ ಫಿಲಂ~ ವೀಕ್ಷಿಸಿದ ವಿವಾದದಲ್ಲಿ ಸಿಲುಕಿರುವ ಮಾಜಿ ಸಚಿವರಾದ ಲಕ್ಷ್ಮಣ ಸವದಿ ಹಾಗೂ ಸಿ.ಸಿ.ಪಾಟೀಲ್ ಮತ್ತು ಅವರಿಗೆ ಈ ಅಶ್ಲೀಲ ದೃಶ್ಯ ರವಾನೆ ಮಾಡಿರುವ ಆರೋಪ ಹೊತ್ತ ಕೃಷ್ಣ ಪಾಲೆಮಾರ್ ಅವರ ವಿರುದ್ಧ ತನಿಖೆ ನಡೆಸಲು ವಿಧಾನಸೌಧ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇವರ ವಿರುದ್ಧ ತನಿಖೆ ನಡೆಸುವಂತೆ ನಗರದ 8ನೇ ಎಸಿಎಂಎಂ ಕೋರ್ಟ್ ಈ ಪೊಲೀಸರಿಗೆ ಆದೇಶಿಸಿತ್ತು. ಆದರೆ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಕೋರ್ಟಿಗೆ ವರದಿ ನೀಡಿದ್ದಾರೆ. ವಕೀಲ ಧರ್ಮಪಾಲ ಗೌಡ ಅವರು ಸಲ್ಲಿಸಿರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿತ್ತು.
 
ಆದರೆ ಈ ದೂರು ದಾಖಲು ಮಾಡುವ ಮುನ್ನ ದೂರುದಾರರು ಸ್ಪೀಕರ್ ಅವರ ಅನುಮತಿ ಪಡೆದಿಲ್ಲ ಎನ್ನುವುದು ಪೊಲೀಸರ ವಾದ. ಈ ಸಂಬಂಧ ಅವರು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದರ ವಿಚಾರಣೆ ಇದೇ 27ರಂದು ಕೋರ್ಟ್ ಮುಂದೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT