ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ, ಜನಕ್ಕೆ ಆಭಾರಿ: ಕಮಲ್

ಕರ್ನಾಟಕದಲ್ಲಿ `ವಿಶ್ವರೂಪಂ'ಗೆ ಬೆಂಬಲ
Last Updated 9 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ನಾನು ಮಾಡಲು ಇಚ್ಛಿಸಿದ್ದು ಜನರಿಗೆ ಇಷ್ಟವಾಗುವ ಉತ್ತಮ ಚಿತ್ರವನ್ನು. ಈ ಬಗೆಯ ಗೊಂದಲ, ವಿವಾದಗಳ ಅಗತ್ಯವಿರಲಿಲ್ಲ. ಚಿತ್ರರಂಗದ ಸ್ನೇಹಿತರು, ಮಾಧ್ಯಮ ಮತ್ತು ಜನಸಾಮಾನ್ಯರು ನನ್ನ ಬೆಂಬಲಕ್ಕೆ ನಿಂತು ಅಭೂತಪೂರ್ವ ಪ್ರೀತಿ ಹರಿಸಿದ್ದಾರೆ. ಹೀಗಾಗಿ ಅದನ್ನು ಎದುರಿಸಲು ನನ್ನ ದನಿಗಿಂತ, ಪ್ರಭಾವಶಾಲಿ ದನಿ ಸಿಕ್ಕಿತು' ಎಂದು ನಟ ಕಮಲಹಾಸನ್ ಹೇಳಿದರು.

ವಿವಾದಿತ ಚಿತ್ರ `ವಿಶ್ವರೂಪಂ'ನ ಅಡೆತಡೆಯಿಲ್ಲದೆ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟ ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ಶನಿವಾರ ಬೆಂಗಳೂರಿಗೆ ಆಗಮಿಸಿದ್ದ ಅವರು, ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ವಿವಾದ ಹಾಗೂ ಮುಂದಿನ ನಡೆಯ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು.

`ವಿವಾದದಿಂದಾಗಿ ಚಿತ್ರ ಸಮಸ್ಯೆಗೆ ಸಿಲುಕಿದಾಗ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಭಯದ ವಾತಾವರಣದ ನಡುವೆಯೂ ರಕ್ಷಣೆ ನೀಡಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದವು. ಈ ಎರಡು ರಾಜ್ಯಗಳ ದಿಟ್ಟ ನಡೆ ನಂತರದ ದಿನಗಳಲ್ಲಿ ಇಡೀ ದೇಶಾದ್ಯಂತ ಚಿತ್ರ ಬಿಡುಗಡೆಗೆ ಸಹಕಾರಿಯಾಯಿತು ಎನ್ನುವುದನ್ನು ಮರೆಯುವುದಿಲ್ಲ' ಎಂದು ಅವರು ಹೇಳಿದರು.

`ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಂಬಿಕೆ ಇತ್ತು. ಅದಕ್ಕೆ ಧಕ್ಕೆಯಾದಾಗ ಚಿತ್ರರಂಗ ಮತ್ತು ಮಾಧ್ಯಮ ನನ್ನ ಬೆಂಬಲಕ್ಕೆ ಬರುತ್ತದೆ ಎಂಬ ಭರವಸೆ ಇತ್ತು. ಆದರೆ ಜನಸಾಮಾನ್ಯರೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ಪ್ರಶ್ನಿಸಿ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಊಹಿಸಿರಲಿಲ್ಲ. ಕಳೆದ ಮೂವತ್ತು ವರ್ಷಗಳಿಂದಲೂ ಇದೇ ರೀತಿಯ ಪ್ರೋತ್ಸಾಹ ಸಿಕ್ಕಿದೆ. ಈ ಋಣವನ್ನು ತೀರಿಸಲು ಸಾಧ್ಯವಿಲ್ಲ. ಉತ್ತಮ ಚಿತ್ರಗಳನ್ನು ನೀಡುವ ಮೂಲಕ ಋಣಭಾರ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ' ಎಂದರು.

ತಮಿಳುನಾಡಿನ ಪ್ರೇಕ್ಷಕರು ಇದುವರೆಗೆ ಆದ ನಷ್ಟವನ್ನು ತುಂಬಿಕೊಡುವಂತೆ ಉದ್ವೇಗದಿಂದ ಚಿತ್ರಮಂದಿರದತ್ತ ನುಗ್ಗುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ ಕಮಲ್, `ವಿಶ್ವರೂಪಂನ ಎರಡನೇ ಭಾಗದ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ' ಎಂದು ತಿಳಿಸಿದರು.
ವಿತರಕ ಎಚ್.ಡಿ. ಗಂಗರಾಜು ಮತ್ತು ರಾಜ್‌ಕಮಲ್ ಪ್ರೊಡಕ್ಷನ್‌ನ ಚಂದ್ರಹಾಸ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ದೃಶ್ಯಗಳಿಗೆ ಕತ್ತರಿ ಹಾಕಿಲ್ಲ
ಇಸ್ಲಾಂ ಧರ್ಮಕ್ಕೆ ಅವಹೇಳನೆ ಮಾಡುವ ಸನ್ನಿವೇಶಗಳು ಚಿತ್ರದಲ್ಲಿದ್ದು ಅವುಗಳಲ್ಲಿ ಏಳು ದೃಶ್ಯಗಳಿಗೆ ಕತ್ತರಿ ಹಾಕಲು ಕಮಲ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ `ಯಾವುದೇ ದೃಶ್ಯವನ್ನೂ ಕತ್ತರಿಸಿಲ್ಲ. ಕೆಲವು ಸಂಭಾಷಣೆ ಮತ್ತು ಹಿನ್ನೆಲೆ ಧ್ವನಿಗಳನ್ನು ಅಳಿಸಲಾಗಿದೆಯಷ್ಟೆ' ಎಂದು ಸ್ಪಷ್ಟಪಡಿಸಿದರು.

ಡಿಟಿಎಚ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವನ್ನು ಸಮರ್ಥಿಸಿಕೊಂಡ ಕಮಲ ಹಾಸನ್, `ಅದು ಸಿನಿಮಾ ಪ್ರದರ್ಶನಕ್ಕೆ ದೊರೆತಿರುವ ವಿಶಿಷ್ಟ ಮಾಧ್ಯಮ. ಹೊಸ ಪ್ರಯೋಗಕ್ಕೆ ಮಲ್ಟಿಪ್ಲೆಕ್ಸ್‌ಗಳು ವಿರೋಧ ವ್ಯಕ್ತಪಡಿಸಿದವು. ಇದರಿಂದ ನಿಜಕ್ಕೂ ತೊಂದರೆಗೆ ಒಳಗಾಗುವುದು ಪೈರಸಿ ಚಟುವಟಿಕೆಯಲ್ಲಿ ತೊಡಗುವವರು. ಮಲ್ಟಿಪ್ಲೆಕ್ಸ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಶ್ವರೂಪಂನ ಎರಡನೇ ಆವೃತ್ತಿಯನ್ನು ಡಿಟಿಎಚ್‌ನಲ್ಲಿ ಬಿಡುಗಡೆ ಮಾಡುತ್ತೇನೆ. ಇದು ಲಾಭ ತಂದುಕೊಡುತ್ತದೆಯೋ ಇಲ್ಲವೋ, ಆದರೆ ಹೆಚ್ಚು ಪ್ರಭಾವಶಾಲಿ ಮತ್ತು ಸಶಕ್ತ ತಂತ್ರಜ್ಞಾನವೆಂಬುದು ನಿಜ' ಎಂದರು.

ನಟ ರಮೇಶ್ ಅರವಿಂದ್ ಮಾತನಾಡಿ, `ವಿಶ್ವರೂಪಂ ಕೇವಲ ಚಿತ್ರವಲ್ಲ. ಚಿತ್ರರಂಗದಲ್ಲಿ ನಾವೆಲ್ಲಾ ಎದುರಿಸುತ್ತಿರುವ ಸಮಸ್ಯೆಗಳ ಸಂಕೇತ. ಸರ್ಕಾರದ ನಡವಳಿಕೆ, ಜನರ ಮನೋಭಾವ, ಸರಿತಪ್ಪುಗಳ ವಿಶ್ಲೇಷಣೆಯ ಕೇಂದ್ರಬಿಂದುವಾಗಿ ಅದು ಹೊರಹೊಮ್ಮಿದೆ. ವೈಯಕ್ತಿಕವಾಗಿ ಕಲಾವಿದನೊಬ್ಬನಿಗೆ ನೋವಾದಾಗ ಇತರೆ ಕಲಾವಿದರು, ಜನ ಹೇಗೆ ಸ್ಪಂದಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT