ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಬರೆಯ ಬಯಸುವ ಕನ್ನಡದ ಚರಮಗೀತೆ

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಸರ್ಕಾರದಲ್ಲಿರುವ ಅರ್ಥಾತ್ ಸರ್ಕಾರ ನಡೆಸುವ ಮಂದಿಯ ಇತರ ಅರ್ಹತೆಗಳು, ಯೋಗ್ಯತೆಗಳು ಏನೇ ಇರಬಹುದು. ಆದರೆ ಅವರು ತುಂಬಾ ಬುದ್ಧಿವಂತರು, ತುಂಬಾ ತಿಳಿದುಕೊಂಡವರು, ವಿಚಾರವಂತರು ಎಂದು ಭಾವಿಸಿದರೆ ತಪ್ಪಾದೀತು. ಅವರ ನಡುವೆ ಶಿಕ್ಷಣ ತಜ್ಞರಿಲ್ಲ, ಭಾಷಾ ತಜ್ಞರಿಲ್ಲ, ಮನಶ್ಶಾಸ್ತ್ರಜ್ಞರಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಶಿಕ್ಷಣ ತಜ್ಞರ, ಭಾಷಾ ತಜ್ಞರ, ಮನಶ್ಶಾಸ್ತ್ರಜ್ಞರ ಅಭಿಪ್ರಾಯವನ್ನು ತಿಳಿದುಕೊಳ್ಳುವ ತಾಳ್ಮೆ ಮತ್ತು ವಿವೇಕ ಇರುವವರು ಇದ್ದಾರೆಯೆ? ಈ ಪ್ರಶ್ನೆಗೆ ಅವರು ತೆಗೆದುಕೊಳ್ಳುವ ನಿರ್ಧಾರಗಳಲ್ಲೇ ಉತ್ತರವಿದೆ.

ಸರ್ಕಾರ ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ತೆರೆದರೆ ಆಗುವ ಪರಿಣಾಮಗಳೇನು ಎಂದು ಯೋಚಿಸೋಣ.

ಈಗ ಅಷ್ಟೊಂದು ಅನುಕೂಲಸ್ಥರು, ಶ್ರಿಮಂತರು ಅಲ್ಲದವರು ಕೂಡ ದುಬಾರಿ ಫೀಸು ತೆತ್ತು, ಅಷ್ಟೇ ದುಬಾರಿಯಾದ ಇತರ ವೆಚ್ಚಗಳನ್ನು ಕೂಡ ನರಳುತ್ತಾ ನಿಭಾಯಿಸಿಕೊಂಡು ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುವುದು ಕಾಣಬಹುದು.

ಅವರಲ್ಲನೇಕರು ಮನೆಗೆ ಹತ್ತಿರವಿರುವ ಕನ್ನಡ ಶಾಲೆಗೆ ಮಕ್ಕಳನ್ನು ಕಳಿಸದೆ ಮನೆಯಿಂದ 20-30 ಕಿಲೋಮೀಟರ್ ದೂರವಿರುವ ಇಂಗ್ಲಿಷ್ ಶಾಲೆಗೆ ಮಕ್ಕಳನ್ನು ಕಳಿಸುತ್ತಾರೆ. ಇದರ ಖರ್ಚಿನ ಹೊರೆಯ ಜೊತೆ ಬೇರೆ ಕಷ್ಟಗಳು ಕೂಡ ಇವೆ. ಮಗುವನ್ನು ಶಾಲೆಯಲ್ಲಿ ಬಿಟ್ಟು ಮತ್ತೆ ಕರೆದುಕೊಂಡು ಬರುವವರ  ಕಷ್ಟ ಮತ್ತು ಸಮಯ ನಷ್ಟ ಕೂಡ ಗಣನೀಯ. ಈ ಪ್ರಕ್ರಿಯೆ ಮಕ್ಕಳು ಕೇಜೀ ಶಾಲೆಗೆ ಹೋಗುವಲ್ಲಿಂದಲೇ ಆರಂಭವಾಗುತ್ತದೆ.

ಇವರೆಲ್ಲರೂ `ಯಾವಾಗ ಸರ್ಕಾರ ಇಂಗ್ಲಿಷ್ ಮೀಡಿಯಂ ಆರಂಭಿಸುತ್ತದೆ ಎಂದು ಕಾದು ಕುಳಿತಿದ್ದರೆ~ ಆಶ್ಚರ್ಯವಿಲ್ಲ. ಸ್ವಾಭಾವಿಕವಾಗಿಯೇ ಸರ್ಕಾರಿ ಶಾಲೆ  ಮಗುವಿನ ಮನೆಗೆ ಹತ್ತಿರವಿರುತ್ತದೆ. ಅಷ್ಟೇ ಸ್ವಾಭಾವಿಕವಾಗಿ ಶುಲ್ಕ ಕೂಡ ಕಡಿಮೆಯಾಗಿರುತ್ತದೆ ಎಂದು ನಂಬಬಹುದು. ಇದು ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಸುರಿಯಬೇಕಾದ ಮೊತ್ತದ ಅರ್ಧಕ್ಕಿಂತಲೂ ಕಡಿಮೆ ಇರಬಹುದು.

ಹೀಗಾದಾಗ ಸರ್ಕಾರಿ ಕನ್ನಡ ಶಾಲೆಗಳಿಗೆ ಹೋಗುವ ಮಕ್ಕಳು ಯಾರಿರಬಹುದು ಎಂಬ ಲೆಕ್ಕಾಚಾರವೇ ಬೇಡ. ಸರ್ಕಾರಿ ಕನ್ನಡ ಶಾಲೆಗಳು ಮುಚ್ಚಿ ಹೋಗಬಹುದು. ಸರ್ಕಾರ ಖಾಸಗಿ ಇಂಗ್ಲಿಷ್ ಶಾಲೆಗಳ ಕಟ್ಟಡಗಳ ಜೊತೆ ಹೋಲಿಸಲಾಗುವಂಥ ಕಟ್ಟಡಗಳನ್ನು ತನ್ನ ಇಂಗ್ಲಿಷ್ ಶಾಲೆಗಳಿಗಾಗಿ ನಿರ್ಮಿಸುವುದೆ ಎಂಬ ಪ್ರಶ್ನೆಗೆ ಉತ್ತರ ಇನ್ನಷ್ಟೇ ಸಿಗಬೇಕಾಗಿದೆ. ಹಾಗಾದರೆ, ಮುಚ್ಚಿಕೊಳ್ಳುವ ಈಗಿನ ಶಾಲಾ ಕಟ್ಟಡಗಳನ್ನು ಏನು ಮಾಡಬಹುದು? ಅವುಗಳನ್ನು ತನ್ನ ನೂರು ತರಹ ವ್ಯಾಪಾರ ವ್ಯವಹಾರ ಮತ್ತು ಅವ್ಯವಹಾರಗಳನ್ನು ನಡೆಸಲಿಕ್ಕಾಗಿ ಬಾಡಿಗೆಗೆ ಪಡೆಯಲು ವ್ಯಾಪಾರಿಗಳು ಉದ್ಯಮಿಗಳು ಸಿದ್ಧವಿರಬಹುದು. 

ಬೇರೆ ವಿಧಿ ಇಲ್ಲದಾಗಿ ಕನ್ನಡ ಶಾಲೆಗಳು ಮುಚ್ಚಿಕೊಂಡ ನಂತರ, ಈಗಾಗಲೇ ಕನ್ನಡ ಭಾಷೆಯನ್ನಾಡುವ ಜನರಿರುವ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಶಾಲಾ ಓದು ಪಡೆಯದಿರುವ ಹಳ್ಳಿಗರ ನಾಲಿಗೆಯ ಮೇಲೆ ಮಾತ್ರ ಕನ್ನಡ ಉಳಿಯಬಹುದು. ಹಳ್ಳಿಯ ಮಕ್ಕಳು ಸರ್ಕಾರಿ ಇಂಗ್ಲಿಷ್ ಶಾಲೆಗಳ ವಿದ್ಯಾರ್ಥಿಗಳಾಗಿ ಬದಲಾದ ನಂತರ ಕನ್ನಡದ ಮಕ್ಕಳು ಮನೆಯಲ್ಲಿ ಮತ್ತು ಹೊರಗೆ ಈ ಹಿಂದೆ ಆಡುತ್ತಿದ್ದಂಥ ಕನ್ನಡವನ್ನೇ ಆಡುತ್ತಾರೆ ಎಂದು ನಂಬಲಿಕ್ಕಾಗದು.

ಈಗಾಗಲೇ ಇಂಗ್ಲಿಷ್ ಶಾಲಾ ವಿದ್ಯಾರ್ಥಿಗಳು ಕನ್ನಡ ಭಾಷೆಯಿಂದ ಒಂದಷ್ಟು ದೂರ ಸರಿದಿದ್ದಾರೆ. ಕನ್ನಡ ಪುಸ್ತಕವನ್ನು ಕಂಡರಂತೂ ಮೂಗು ಮುರಿಯುತ್ತಾರೆ. ಸಕಲವನ್ನೂ ನೀಡುವ ಇಂಗ್ಲಿಷ್ ಸಿಕ್ಕಿದ್ದರಿಂದ ಈವರೆಗಿನ ಬದುಕಿನಲ್ಲಿದ್ದ ಬದುಕಿಗೆ ಸಹಜವಾದಂಥ ಸಾಮಾಜಿಕ-ಸಾಂಸ್ಕೃತಿಕ ಗುಣಗಳನ್ನು ಪೂರ್ಣವಾಗಿ ತ್ಯಜಿಸುತ್ತಾರೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಗೋರಿಗೆ ಇಷ್ಟು ಸಾಕಲ್ಲವೆ?

ಇಷ್ಟಕ್ಕೂ ಸರ್ಕಾರ ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ತೆರೆಯಬೇಕೆಂದು ನಿರ್ಧರಿಸಲು ಕಾರಣವೇನು? ಈಗ ಹಗಲು ದರೋಡೆ ಮಾಡುತ್ತಿರುವ ಖಾಸಗಿ ಇಂಗ್ಲಿಷ್ ಶಾಲೆಗಳಂತೆ ಸರ್ಕಾರವೂ ಕೋಟಿ ಕೋಟಿ ಹಣ ಮಾಡಬಹುದೆಂದೆ? ಇದರ ಮೂಲಕ ನಡೆಯುವ ವ್ಯವಹಾರದ ಜೊತೆಗಿನ ಅವ್ಯವಹಾರದ ಮೊತ್ತ ಎಷ್ಟು ಕೋಟಿಯಾಗಬಹುದು? ಈ ಮೂಲಕ ಒಬ್ಬಿಬ್ಬರಲ್ಲ, ಕೆಲವು ಲಕ್ಷ ಸರ್ಕಾರಿ ಮಂದಿ ಮತ್ತು ಸರ್ಕಾರೇತರ ಮಂದಿ ಕೋಟ್ಯಧಿಪತಿಗಳಾಗಬಹುದು ಎಂದು ನಾವು ಲೆಕ್ಕ ಹಾಕಬಹುದು.

ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಸರ್ಕಾರ (ಯಾವನೋ ಒಬ್ಬ ಮಂತ್ರಿ ಹೇಳಿದ್ದರೂ ಅದನ್ನು ಸರ್ಕಾರದಮಾತು ಎಂದೇ ಪರಿಭಾವಿಸಬೇಕಲ್ಲವೆ?) ನೀಡುವ ಆಕರ್ಷಕವಾದ ಕಾರಣವೆಂದರೆ, ನಿರುದ್ಯೋಗ ತೊಲಗುತ್ತದೆ ಎಂದು. ಸೋಮಾರಿಗಳು ಮತ್ತು ಕುಡುಕರಾದ ಅರೆ ಸೋಮಾರಿಗಳ ಹೊರತು ಉಳಿದೆಲ್ಲರ ನಿರುದ್ಯೋಗ ಈಗಾಗಲೇ ತೊಲಗಿದೆ. ಕರ್ನಾಟಕದ ನಗರ ಮತ್ತು ಹಳ್ಳಿಗಳಲ್ಲಿ ಯಾವುದೇ ಕಾರ್ಮಿಕರು ಸಿಗುತ್ತಿಲ್ಲ. ಆ ಕೆಲಸಕ್ಕೆ ಬಿಹಾರ ಮತ್ತು ಕೇರಳದಿಂದ ಜನ ಬರುತ್ತಿದ್ದಾರೆ.

ಕ್ರಮೇಣ, ಅವರು ಸಾಕಾಗಲಿಲ್ಲ ಎಂದಾದರೆ ಬಾಂಗ್ಲಾ ದೇಶದಿಂದಲೂ ಬರಬಹುದು. `ಬೆಂಗ್ಳೂರನ್ನು ಸಿಂಗಪುರ ಮಾಡುತ್ತೇವೆ~ ಎಂಬ ಸರ್ಕಾರಿ ಮಾತು ಹಳೆಯದಾಯಿತು. ಇನ್ನು ಕೇಳಿಸುವ ಮಾತು ಬಹುಶಃ `ಕರ್ನಾಟಕವನ್ನು ಸ್ವರ್ಗ ಮಾಡುತ್ತೇವೆ~  ಎಂದಾಗಿರಬಹುದು. ಒಂದು ದಿನ ನಾವು ಕತ್ತು ಹೊರಳಿಸಿದಲ್ಲೆಲ್ಲ ಅನ್ಯ ದೇಶೀಯರೇ ಕಾಣಿಸಿದರೆ, ಕಿವಿಗೆ ಅನ್ಯ ಭಾಷೆಯೇ ಕೇಳಿಸಿದರೆ, ಕರ್ನಾಟಕ ಸ್ವರ್ಗ ಆಯಿತು ಎಂದು ಭಾವಿಸಬಹುದು. ಸಕಲ ವಿದ್ಯಾವಂತರಿಗೂ ಆಫೀಸು ಮತ್ತು ಕಂಪೆನಿ ಉದ್ಯೋಗ ಎಂದಾದರೆ, ಕರ್ನಾಟಕದ ಸ್ವರ್ಗಕ್ಕಾಗಿ ಆಹಾರ ಬೆಳೆಯುವುದೆಲ್ಲಿ ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗುತ್ತದೆ.

ಉದ್ಯೋಗ ಸಿಗಲು ನಮ್ಮ ಯುವಕ ಯುವತಿಯರಿಗೆಲ್ಲ ಇಂಗ್ಲಿಷ್ ಬೇಕೇ ಬೇಕು, ಮತ್ತು ಅದು ಇಂಗ್ಲಿಷ್ ಮೀಡಿಯಂ ಶಾಲೆಗಳ ಮೂಲಕ ಮಾತ್ರ ಸಾಧ್ಯ ಎಂಬ `ಐಡಿಯಾ~  ಸರಕಾರದ ತಲೆಗೆ ಹೇಗೆ ಬಂತು? ಮೊಟ್ಟ ಮೊದಲು ಯಾವ ಮಂತ್ರಿ ಅಥವಾ ಸರ್ಕಾರಿ ಅಧಿಕಾರಿಯ ತಲೆಯಲ್ಲಿ ಬಂತು? `ರಿಪ್ ವ್ಯಾನ್ ವಿಂಕ್ಲ್~ ನಂತೆ ಆತ ಎಷ್ಟು ಕಾಲ ನಿದ್ರಿಸಿದ್ದ? ಅಥವಾ ಇನ್ನೂ ಪೂರ್ತಿ ಎಚ್ಚರಗೊಂಡಿಲ್ಲವೆ? 

ಉದ್ಯೋಗ ಸಿಗಲು ಈಗ ಇಂಗ್ಲಿಷ್‌ನ ಅಗತ್ಯ ಇಲ್ಲ. ನಾಲ್ಕೈದು ವರ್ಷಗಳ ನಂತರ ಈಗಿರುವಷ್ಟು ಅಗತ್ಯವೂ ಇರಲಾರದು. ಒಂದು ವೇಳೆ ಯಾವುದೋ ಉದ್ಯೋಗ ಪಡೆಯಲು ಯಾರಿಗೋ ಇಂಗ್ಲಿಷ್ ಬೇಕಾಗಿದೆ ಎಂದಾದರೆ ಅದನ್ನು ಆತ ಹೇಗಾದರೂ ಪಡೆದುಕೊಳ್ಳಬಲ್ಲ. ಈಗಾಗಲೇ ಅಮೆರಿಕೆ, ಇಂಗ್ಲೆಂಡಿಗೆ ಹೋಗಿರುವ ನಮ್ಮ ಪ್ರತಿಭಾವಂತರು ತಮ್ಮ ಪ್ರತಿಭೆ ಮತ್ತು ಐಕ್ಯೂ ಬಲದಿಂದ ಹೋದರೇ ಹೊರತು ಇಂಗ್ಲಿಷ್ ಕಲಿತುದರಿಂದ ಅಲ್ಲ. ಹಾಗೆ ಹೋದವರಲ್ಲಿ ಎಷ್ಟೋ ಮಂದಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಲ್ಲದವರೂ ಇದ್ದಾರೆ.

ಸರ್ಕಾರೀ ಇಂಗ್ಲಿಷ್ ಶಾಲೆಯನ್ನು ಕನ್ನಡದ ಗೋರಿ ಎಂದು ಭಾವಿಸಿದರೆ ತಪ್ಪಾಗಲಾರದು. ಹೇಗೆ ಎಂದು ವಿವರಿಸುವುದು ಅನಗತ್ಯ ಎನಿಸುತ್ತದೆ. ಹೇಗೆ ಎಂದು ಪ್ರತಿಯೊಬ್ಬ ಪ್ರಜ್ಞಾವಂತ ಕನ್ನಡಿಗನೂ ಅರ್ಥ ಮಾಡಿಕೊಳ್ಳಬಹುದು. ಮೊದಲು ಕನ್ನಡ ಪುಸ್ತಕದ ಸಾವು. ಜೊತೆಗೆ ಕನ್ನಡ ಸಂಸ್ಕೃತಿಯ ಸಾವು. ಇದು ಸ್ವಲ್ಪ ಉತ್ಪ್ರೇಕ್ಷೆಯ ಮಾತೆನಿಸಿದರೆ ಪರವಾಗಿಲ್ಲ,  ಆದರೆ ಸತ್ಯಕ್ಕೆ ಹತ್ತಿರ ಇದೆ. ಕನ್ನಡದ ಹಬ್ಬ ಮತ್ತು ಜಾತ್ರೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ 5% ಇರಬಹುದು. ಅದರಲ್ಲಿ ಎಲ್ಲಾ ಇದೆ ಎಂದು ಹಾಡಿ ಕುಣಿದು ಮುಂದಿನ ಎಪಿಕ್ಯೂರಿಯನ್ ತಲೆಮಾರು ಮತ್ತು ಇಂದಿನ ಎಪಿಕ್ಯೂರಿಯನ್ ಆರಾಮವಾಗಿರಬಹುದು. ಬದುಕಿಗೆ ಸಾಹಿತ್ಯ ಯಾಕೆ, ಓದದೆ ಬದುಕಲಿಕ್ಕಾಗುವುದಿಲ್ಲವೆ ಎಂದು ಕೇಳುವವರೂ ಯಾವ ಕಾಲಕ್ಕೂ ಇರುತ್ತಾರೆ. ಅವರ ಸಂಖ್ಯೆ ತುಂಬಾ ಹಿಗ್ಗುತ್ತದೆ ಅಷ್ಟೆ. ಸಾಹಿತ್ಯ ಅರ್ಥಾತ್ ಪುಸ್ತಕ ಯಾರಿಗೂ ಬೇಡ ಎಂದಾದರೆ, ಕನ್ನಡ ಪುಸ್ತಕ ಪ್ರಕಟಿಸುವ ಪ್ರಕಾಶಕರು ದಿಕ್ಕೆಟ್ಟಂತವರಾಗುತ್ತಾರೇನು? ಇಲ್ಲ. ಅವರು ಇಂಗ್ಲಿಷ್ ಕಾಮಿಕ್ಸ್ ಪ್ರಕಟಿಸುತ್ತಾರೆ.

ಐಟಿ ಮತ್ತು ಕಂಪ್ಯೂಟರ್ ಬಳಕೆ ಇರುವ ಯಾವ ಉದ್ಯೋಗಕ್ಕೆ ಇಂಗ್ಲಿಷ್ ಭಾಷೆಯ ಮೇಲೆ ಎಷ್ಟು ಪ್ರಭುತ್ವ ಬೇಕೋ ಅಷ್ಟು ಪ್ರಭುತ್ವಕ್ಕೆ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದಬೇಕಾಗಿಲ್ಲ. ಅವರು ಇಂಗ್ಲಿಷ್ ಕೆ.ಜಿ. ಶಾಲೆಯಲ್ಲಿ ಶಿಕ್ಷಣ ಪಡೆಯಬೇಕಾಗಿಲ್ಲ. ಅಷ್ಟೇ ಅಲ್ಲ, ಅವರಿಗೆ ಕೆ.ಜಿ. ಶಾಲೆ ಕೂಡ ಬೇಕಾಗಿಲ್ಲ. ಪ್ರಜ್ಞಾವಂತರಾದ, ಸದ್ಗುಣಿಗಳಾದ ತಾಯಿ ತಂದೆ ಮತ್ತು ಒಂದನೇ ತರಗತಿಯಿಂದ ಒಳ್ಳೆಯ ಶಿಕ್ಷಕರು ಸಿಕ್ಕಿದರೆ ಸಾಕು. ಕನ್ನಡ ಶಾಲೆಯಲ್ಲಿ ಈಗ ಕಲಿಯುವಂತೆ ಇಂಗ್ಲಿಷ್ ಭಾಷೆ ಕಲಿತರೆ ಸಾಕು.
(ನಿಮ್ಮ ಅನಿಸಿಕೆ editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT