ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲ ಇಲ್ಲ: ಕೇಜ್ರಿವಾಲ್ ಸ್ಪಷ್ಟನೆ

Last Updated 10 ಡಿಸೆಂಬರ್ 2013, 11:13 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅತ್ಯಂತ ಅಚ್ಚರಿ ಫಲಿತಾಂಶ ನೀಡಿರುವ ದೆಹಲಿಯಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯನ್ನು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌  ಮಂಗಳವಾರ ತಳ್ಳಿ ಹಾಕಿದ್ದಾರೆ. ಅಲ್ಲದೇ ಬಿಜೆಪಿ ಜೊತೆಗಿನ ‘ಸಖ್ಯ’ ಬಗ್ಗೆ ಮಾತನಾಡಿದ್ದ ಪಕ್ಷದ ಮುಖಂಡ ಪ್ರಶಾಂತ್‌ ಭೂಷಣ್‌ ನೀಡಿದ್ದ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

‘ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಪ್ರಶಾಂತ್‌ ಅವರು ಸೋಮವಾರ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಮತ’ ಎಂದು ಮಂಗಳವಾರ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ಬೆನ್ನಲ್ಲೆ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ. ಕಾಂಗ್ರೆಸ್‌ ಅಥವಾ ಬಿಜೆಪಿಗೆ ಬೆಂಬಲ ನೀಡದಿರಲು ಪಕ್ಷದ ಮುಖಂಡರು ಸಭೆಯಲ್ಲಿ ನಿರ್ಧರಿಸಿದ್ದಾರೆ.

ಜನಲೋಕಪಾಲ್‌ ಮಸೂದೆಯನ್ನು ಪಾಸ್‌ ಮಾಡುವುದಾಗಿ ಬಿಜೆಪಿ ಒಂದು ವೇಳೆ ಲಿಖಿತ ಭರವಸೆ ನೀಡಿದರೆ, ಆಮ್‌ ಆದ್ಮಿ ಪಕ್ಷ ಅವರಿಗೆ ಬೆಂಬಲ ನೀಡುವ ಬಗ್ಗೆ ಪರಿಗಣಿಸುವ ಸಾಧ್ಯತೆಗಳಿವೆ ಎಂದು ಭೂಷಣ್‌ ಸೋಮವಾರ ರಾತ್ರಿ ಸುದ್ದಿವಾಹಿಯೊಂದಕ್ಕೆ ತಿಳಿಸಿದ್ದರು.

ಸೋಮವಾರದ ಹೇಳಿಕೆಗೆ ಮಂಗಳವಾರ ಸ್ಪಷ್ಟೀಕರಣ ನೀಡಿರುವ ಖ್ಯಾತ ವಕೀಲರೂ ಆಗಿರುವ ಭೂಷಣ್, ‘ನಾನು ನಿನ್ನೆ ನೀಡಿದ್ದು ಸಾಂದರ್ಭಿಕ ಹೇಳಿಕೆ. ಒಂದು ವೇಳೆ ಬಿಜೆಪಿ, ಎಎಪಿಯಂತಾದರೆ ಮತ್ತು ಯಾವ ಉದ್ದೇಶಗಳಿಗಾಗಿ ಎಎಪಿ ಜನ್ಮ ತಳೆದಿದೆ ಮತ್ತು ಯಾವುದನ್ನು ಅದು ನಂಬಿದೆಯೊ ಅವುಗಳನ್ನು ಬಿಜೆಪಿ ಮಾಡಿದರೆ ನಾವು ಬೆಂಬಲ ನೀಡುವ ಬಗ್ಗೆ ಯೋಚಿಸುತ್ತೇವೆ ಎಂಬುದು ಅದರ ಅರ್ಥ. ಆದರೆ ಈ ಪಕ್ಷಗಳು ಎಂದಿಗೂ ಎಎಪಿಯಂತೆ ಆಗುವುದಿಲ್ಲವಾದ್ದರಿಂದ ಇದು ಸಾಧ್ಯವಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT