ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ- ರಾಜ್ಯಪಾಲರ ವಿವಾದ ತಾರಕಕ್ಕೆ : ಬೀದಿಗೆ ಬಂತು ಸಂಘರ್ಷ

Last Updated 24 ಡಿಸೆಂಬರ್ 2010, 7:00 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ನಡುವಿನ ಸಂಘರ್ಷ, ಪತ್ರ ಸಮರ ತಾರಕಕ್ಕೆ ಏರಿದ್ದು, ರಾಜ್ಯಪಾಲರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಪತ್ರ ಬರೆಯಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯಪಾಲರಿಗೆ ಸಾಥ್ ನೀಡಿವೆ. ಸೂಕ್ತ ದಾಖಲೆಗಳು ಇರುವುದರಿಂದಲೇ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಸಮರ್ಥಿಸಿಕೊಂಡಿವೆ.

ಬಿಜೆಪಿ ಮುಖಂಡ ವಾಮನಾಚಾರ್ಯ ಅವರು ಬೆಂಗಳೂರಿನಲ್ಲಿ ರಾಜ್ಯಪಾಲರ ವಿರುದ್ಧ ‘ಆರೋಪಪಟ್ಟಿ’ ಬಿಡುಗಡೆ ಮಾಡಿದರೆ, ಬಳ್ಳಾರಿಯಲ್ಲಿ ಸಚಿವ ಜನಾರ್ದನ ರೆಡ್ಡಿ ರಾಜ್ಯಪಾಲರನ್ನು ‘ಬ್ರೋಕರ್’ ಎಂದು ಟೀಕಿಸಿದರು. ರಾಜ್ಯಪಾಲರು ತಮ್ಮನ್ನು ಕಚೇರಿ ಅಧೀಕ್ಷಕರೆಂದು ಭಾವಿಸಿದ್ದಾರೆ. ಈ ರಾಜ್ಯದ ಮಂತ್ರಿಗಳು ಅವರಿಗೆ ಗುಮಾಸ್ತರಂತೆ ಕಾಣಿಸುತ್ತಿರಬೇಕು ಎಂದು ಸಚಿವ ಸುರೇಶ್‌ಕುಮಾರ್ ಚಿಕ್ಕಮಗಳೂರಿನಲ್ಲಿ ಹೀಯಾಳಿಸಿದರು. ಈ ಎಲ್ಲ ಬೆಳವಣಿಗೆಗಳಿಂದ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ವಿವಾದ ಗೊಂದಲಮಯವಾಗಿ ಪರಿಣಮಿಸಿದೆ.

ಮುಖ್ಯಮಂತ್ರಿಗಳು ಕಾನೂನು ಬಾಹಿರವಾಗಿ ಕೃಷಿ ಭೂಮಿ ಹೊಂದಿರುವುದು ಮತ್ತು ಗಣಿಧಣಿ ಸಚಿವರು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ನೀಡಿರುವ ಉತ್ತರ ತಮಗೆ ಸಮಾಧಾನ ತಂದಿಲ್ಲ. ಸಂಪುಟದಲ್ಲಿನ ಭ್ರಷ್ಟ ಸಚಿವರ ಪಟ್ಟಿ ನೀಡಲು ತಾವು ಸಿದ್ಧ ಎಂದು ರಾಜ್ಯಪಾಲರು ಘೋಷಿಸಿದ ಬೆನ್ನಲ್ಲೆ, ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಭಾರದ್ವಾಜ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಮೊಯಿಲಿ ಭೇಟಿ: ಈ ಪತ್ರ ಸಮರದ ಬೆನ್ನಲ್ಲೇ ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅವರು ಗುರುವಾರ ದಿಢೀರನೇ ಭಾರದ್ವಾಜ್ ಅವರನ್ನು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಸಮಾಲೋಚನೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಯಾವ ಕಾರಣಕ್ಕೆ ಅವರು ಭೇಟಿಯಾಗಿದ್ದರು ಎಂಬುದು ಗೊತ್ತಾಗಿಲ್ಲವಾದರೂ, ಇಬ್ಬರ ನಡುವೆ ಪ್ರಸಕ್ತ ರಾಜಕೀಯ ಬೆಳವಣಿಗೆ, ಭೂ ಹಗರಣಗಳ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ.

‘ಆಯಾ ರಾಜ್ಯದ ಸಚಿವರ ಹಗರಣಗಳನ್ನು ಬಹಿರಂಗಪಡಿಸುವಂತೆ ದೇಶದಲ್ಲಿರುವ ರಾಜ್ಯಪಾಲರಲ್ಲಿ ಯಾರಿಗಾದರೂ ಸೂಚಿಸಿದ್ದೀರಾ? ಯಾರ ಅಣತಿ ಮೇರೆಗೆ ರಾಜ್ಯಪಾಲರು, ತಮ್ಮ ಬಳಿ ಸಚಿವರ ಹಗರಣಗಳ ದಾಖಲೆಗಳಿವೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಶುಕ್ರವಾರ ರಾಷ್ಟ್ರಪತಿಗೆ ಪತ್ರ ಬರೆದು ಕೇಳುತ್ತೇನೆ’ ಎಂದು ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ಹೇಳಿದರು.

ಮೊಯಿಲಿ ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿರುವುದಕ್ಕೆ ಕೆಂಡಾಮಂಡಲವಾಗಿರುವ ಯಡಿಯೂರಪ್ಪ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ಮೇರೆಗೆ ಮೊಯಿಲಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಮೊಯಿಲಿ ನೀಡಿರುವ ಮಾಹಿತಿಗಳನ್ನು ಆಧರಿಸಿಯೇ ಕರ್ನಾಟಕದ ಬಗ್ಗೆ ಸೋನಿಯಾ ಗಾಂಧಿ ಹಗುರವಾಗಿ ಮಾತನಾಡಿದ್ದಾರೆ ಎಂದು ದೂರಿದರು.

ಮೊಯಿಲಿ ಕೇಂದ್ರದದಲ್ಲಿ ಸಚಿವರಾಗಿದ್ದು, ಆ ಸ್ಥಾನಕ್ಕೆ ಶೋಭೆ ತರುವ ರೀತಿಯಲ್ಲಿ ವರ್ತಿಸಬೇಕು. ಚುನಾವಣೆ ಸಂದರ್ಭದಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸುವುದು ಸರಿ ಅಲ್ಲ ಎಂದು ತೀಕ್ಷ್ಣವಾಗಿ ಹೇಳಿದ ಅವರು, ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಈ ಎಲ್ಲ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸುವ ಇಂಗಿತ ವ್ಯಕ್ತಪಡಿಸಿದರು.

ರಾಯಚೂರು ವರದಿ: ಸರ್ಕಾರದಲ್ಲಿ ಅಕ್ರಮ, ಅವ್ಯವಹಾರ ನಡೆದ ಬಗ್ಗೆ ರಾಜ್ಯಪಾಲರಿಗೆ ದಾಖಲೆಗಳೊಂದಿಗೆ ದೂರು ಸಲ್ಲಿಕೆಯಾಗಿದ್ದರೆ ಅಂಥ ದಾಖಲೆಗಳನ್ನು ಕಾನೂನುಬದ್ಧವಾಗಿ ಸರ್ಕಾರಕ್ಕೆ ಕಳುಹಿಸಿಕೊಡಲಿ ಎಂದು ಯಡಿಯೂರಪ್ಪ ಸವಾಲು ಹಾಕಿದರು.

‘ಅದು ಅವರ ಕರ್ತವ್ಯ ಕೂಡಾ ಹೌದು. ಸಾಂವಿಧಾನಿಕವಾಗಿ ರಾಜ್ಯದ ಮುಖ್ಯಸ್ಥರಾಗಿರುವ ಅವರು ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವುದು ಆ ಹುದ್ದೆಗೆ ಘನತೆ ತರುವಂಥದ್ದಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಬಿಜೆಪಿ ‘ಆರೋಪಪಟ್ಟಿ’: ‘ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎನ್ನುವುದಕ್ಕೆ ಸೂಕ್ತ ದಾಖಲೆಗಳು ಇದ್ದಲ್ಲಿ ಆ ದಾಖಲೆಗಳನ್ನು ಮುಂದಿಟ್ಟುಕೊಂಡು ಲೋಕಾಯುಕ್ತ ಅಥವಾ ನ್ಯಾಯಾಲಯದತ್ತ ಮುಖ ಮಾಡಲಿ, ಅದನ್ನು ಬಿಟ್ಟು ಬೆದರಿಕೆ ಹಾಕುವ ಅಗತ್ಯ ಇಲ್ಲ’ ಎಂದು ಬಿಜೆಪಿ ರಾಜ್ಯಪಾಲರಿಗೆ ತಿರುಗೇಟು ನೀಡಿದೆ.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ವಾಮನಾಚಾರ್ಯ, ‘ಭ್ರಷ್ಟಾಚಾರದ ಕುರಿತು ದಾಖಲೆಗಳು ರಾಜ್ಯಪಾಲರ ಬಳಿ ಇದ್ದಲ್ಲಿ, ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅವರಿಗೆ ಸಾಕಷ್ಟು ಮಾರ್ಗಗಳಿವೆ. ಆದರೆ ಅವರು ಕೇವಲ ಆಪಾದನೆಗಳನ್ನು ಮಾಡುತ್ತ ಸಂಶಯದ ವಾತಾವರಣ ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು.

‘ರಾಜ್ಯಪಾಲರು ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಆಗ್ರಹಿಸಿ ಪಂಚಾಯಿತಿ ಚುನಾವಣೆಗಳು ಮುಗಿದ ನಂತರ ಪಕ್ಷದ ಕೆಲವು ರಾಷ್ಟ್ರೀಯ ನಾಯಕರು ಮತ್ತು ರಾಜ್ಯದ ಮುಖಂಡರು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದರು.

ರಾಜ್ಯಪಾಲರಾಗಿ ಭಾರದ್ವಾಜ್ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ ಎಂದ ಅವರು, ‘ಸಾಮಾನ್ಯ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿದ್ದ, ದ್ವಿತೀಯ ದರ್ಜೆಯಲ್ಲಿ ಪದವಿ ಪಡೆದಿರುವ ಡಾ.ಎಚ್. ಮಹೇಶಪ್ಪ ಅವರನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಿದರು. ಅವರ ವಿರುದ್ಧ ವಿಚಾರಣೆ ನಡೆಸದಂತೆ ರಕ್ಷಣೆ ನೀಡಿದರು. ಇದು ಕೂಡ ಭ್ರಷ್ಟಾಚಾರವೇ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಬೊಫೋರ್ಸ್ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಒಟ್ಟಾವಿಯೋ ಕ್ವಟ್ರೋಚಿಗೆ ಹಿಂದೆ ಲಂಡನ್ ಬ್ಯಾಂಕ್‌ನಿಂದ 10 ಲಕ್ಷ ಡಾಲರ್ ಮತ್ತು 30 ಲಕ್ಷ ಯೂರೋ ಹಣ ಹಿಂಪಡೆಯಲು ಅಂದು ಕೇಂದ್ರ ಕಾನೂನು ಸಚಿವರಾಗಿದ್ದ ಭಾರದ್ವಾಜ್ ಅವರು ಅನುಮತಿ ನೀಡಿದ್ದರು. ಅಲ್ಲದೆ, ಕ್ವಟ್ರೋಚಿ ಮೇಲೆ ಇಂಟರ್‌ಪೋಲ್ ಹೊರಡಿಸಿದ್ದ ರೆಡ್ ಕಾರ್ನರ್ ನೋಟಿಸ್ ಹಿಂಪಡೆಯುವಲ್ಲಿಯೂ ಭಾರದ್ವಾಜ್ ಅವರ ಕೈವಾಡವಿದೆ’ ಎಂದು ಆರೋಪಿಸಿದರು.

ಚುನಾವಣೆ ಮುಗಿಯುತ್ತಿದ್ದಂತೆ ಭಾರದ್ವಾಜ್ ವಿರುದ್ಧ ಹಠಾವೊ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗ ವರದಿ: ರಾಜ್ಯಪಾಲರೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯಪಾಲರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ತಮಗೂ ಈ ಬಗ್ಗೆ ಸಂಶಯ ಮೂಡುತ್ತಿದೆ ಎಂದು ದೂರಿದರು.

ರಾಜ್ಯಪಾಲರು ನ್ಯಾಯಾಧೀಶರೇ?: ಶಿವಮೊಗ್ಗದಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಡಿ.ಬಿ. ಚಂದ್ರೇಗೌಡ, ರಾಜ್ಯಪಾಲರ ವರ್ತನೆ ನೋಡಿದರೆ ಅವರು ಕೇಂದ್ರದ ಏಜೆಂಟ್ ಎಂಬುದು ದೃಢವಾಗುತ್ತದೆ. ರಾಜ್ಯದಲ್ಲಿ ಅವರು ನ್ಯಾಯಾಧೀಶರ ರೀತಿ, ತನಿಖಾ ಸಂಸ್ಥೆ ತರಹ  ಕೆಲಸ ಮಾಡುತ್ತಿರುವುದನ್ನು ನೋಡಿದರೆ ಇದಕ್ಕೆ ಕೇಂದ್ರದ ಪಿತೂರಿ ಕಾರಣ ಎಂದು ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದರು.

ಚಿಕ್ಕಮಗಳೂರು ವರದಿ: ಭಾರದ್ವಾಜ್ ಬಂದ ದಿನದಿಂದ ‘ಸ್ಪಷ್ಟಗುರಿ ಮತ್ತು ದಿಟ್ಟಹೆಜ್ಜೆ’ಯ ನಿಲುವು ಇರುವವರಂತೆ ವರ್ತಿಸುತ್ತಿದ್ದಾರೆ. ರಾಜ್ಯಪಾಲರ ಹುದ್ದೆಗೆ ಹೊಸ ವ್ಯಾಖ್ಯಾನ ಬರೆಯಲು ಯತ್ನಿಸುತ್ತಿದ್ದಾರೆ ಎಂದು ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ಛೇಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆಗೆ ರಾಜ್ಯಪಾಲರು ಪ್ರತಿಕ್ರಿಯಿಸುವ ಔಚಿತ್ಯವಾದರೂ ಏನು?’ ಎಂದು ಪ್ರಶ್ನಿಸಿದರು. ‘ದೆಹಲಿ ರ್ಯಾಲಿಗಿಂತ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಯೋಚಿಸಲಿ ಎಂಬ ರಾಜ್ಯಪಾಲರ ಮಾತು ಅವರ ಮನದಾಳದ ಇಂಗಿತ ಸ್ಪಷ್ಟಪಡಿಸಿದೆ’ ಎಂದರು.

ಬಳ್ಳಾರಿ ವರದಿ: ‘ಭಾರದ್ವಾಜ್ ಬ್ರೋಕರ್ ಇದ್ದಂತೆ. ಅವರಿವರ ಭ್ರಷ್ಟಾಚಾರವನ್ನು ಬಹಿರಂಗಪಡಿಸುವೆ; ಎಲ್ಲ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳುವ ರಾಜ್ಯಪಾಲರು ಭ್ರಷ್ಟಾಚಾರದ ದಾಖಲೆಗಳನ್ನು ಸಂಗ್ರಹಿಸುವ ವಿಶೇಷ ಅಂಗಡಿಯೊಂದನ್ನು ತೆರೆಯಲಿ’ ಎಂದು ಜನಾರ್ದನ ರೆಡ್ಡಿ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ರೆಡ್ಡಿ ಸಹೋದರರ ಹಿಂದೆ ಬಿದ್ದಿರುವ ರಾಜ್ಯಪಾಲರು ತಮ್ಮ ಹುದ್ದೆಗೆ ತಕ್ಕಂತೆ ಗಂಭೀರವಾಗಿ ಕೆಲಸ ಮಾಡುವುದನ್ನು ಬಿಟ್ಟು, ಬ್ರೋಕರ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇವರ ಭ್ರಷ್ಟಾಚಾರ ಕೆಲವೇ ದಿನಗಳಲ್ಲಿ ಈ ರಾಜ್ಯ ಮತ್ತು ದೇಶದ ಜನತೆಗೆ ಗೊತ್ತಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT