ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ವಜಾ ಮಾಡುವ ಸಂದರ್ಭ ಎದುರಾಗಿಲ್ಲ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತಹ ಸಂದರ್ಭ ಎದುರಾಗಿಲ್ಲ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಸೋಮವಾರ ಇಲ್ಲಿ ಸ್ಪಷ್ಟಪಡಿಸಿದರು.
ಯುವಜನ ಸೇವಾ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆ ಕೋಶ ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2010-11ನೇ ಸಾಲಿನ ಎನ್‌ಎಸ್‌ಎಸ್ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಕ್ರಮ ಗಣಿಗಾರಿಕೆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೀರಾ ಎಂಬ ಪ್ರಶ್ನೆಗೆ, `ಅಂತಹ ಪರಿಸ್ಥಿತಿ ಇನ್ನೂ ಉದ್ಭವಿಸಿಲ್ಲ~ ಎಂದರು.

`ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಡಿ.ವಿ. ಸದಾನಂದಗೌಡ ಅವರು ಹೊಸ ಮುಖ್ಯಮಂತ್ರಿಗಳಾಗಿದ್ದಾರೆ. ಅವರಿಗೆ ಅವಕಾಶ ಕೊಡೋಣ. ಒಂದು ವೇಳೆ ಸದಾನಂದಗೌಡರು ಉತ್ತಮ ಆಡಳಿತ ನೀಡಿದಲ್ಲಿ ಈ ಹಿಂದೆ ರಾಜ್ಯದಲ್ಲಿ ಆಡಳಿತ ನೀಡಿ ಜನಮನ ಗೆದ್ದಂತಹ ನಾಯಕರ ಸಾಲಿಗೆ ಸೇರಬಹುದು~ ಎಂದರು.

ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರ ರಾಜೀನಾಮೆ ನಂತರ ಹೊಸ ಲೋಕಾಯುಕ್ತರ ನೇಮಕ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, `ತರಾತುರಿಯಲ್ಲಿ ಹೊಸ ಲೋಕಾಯುಕ್ತರ ನೇಮಕ ಮಾಡಲು ಸಾಧ್ಯವಾಗಲಾರದು. ಲೋಕಾಯುಕ್ತ ಸ್ಥಾನಕ್ಕೆ ಸೂಕ್ತ ಹಾಗೂ ಒಳ್ಳೆಯವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿದಲ್ಲಿ ಐದು ನಿಮಿಷ ಕೂಡ ವಿಳಂಬ ಮಾಡದೆ ಸಹಿ ಹಾಕುತ್ತೇನೆ.
 
ಆದರೆ, ಇಲ್ಲಿಯವರೆಗೆ ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಯಾರ ಹೆಸರು ಕೂಡ ನನಗೆ ಬಂದಿಲ್ಲ~ ಎಂದು ಹೇಳಿದರು.

`ಈ ಹಿಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಉತ್ತಮ ಕೆಲಸ ಮಾಡಿದ್ದಾರೆ. ದೇಶದಲ್ಲಿ ಜನಲೋಕಪಾಲ್ ನೇಮಕಕ್ಕೆ ಒತ್ತಡ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ದೇಶದಲ್ಲಿಯೇ ಒಳ್ಳೆಯ ಕೆಲಸ ಮಾಡುತ್ತಿದೆ.
 
ಸಂತೋಷ್ ಹೆಗ್ಡೆ ಹಾಕಿಕೊಟ್ಟ ಮಾರ್ಗದಲ್ಲಿಯೇ ಮುಂದೆ ಲೋಕಾಯುಕ್ತರಾಗಿ ನೇಮಕಗೊಳ್ಳುವಂಥವರು ತಮ್ಮ ಸೇವೆಯನ್ನು ಮುಂದುವರಿಸಿಕೊಂಡು ಹೋಗುವಂತಾಗಲಿ~ ಎಂದರು.

ಕಾನೂನು ಎಲ್ಲರಿಗೂ ಒಂದೇ: ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗುವ ಗಣ್ಯ ವ್ಯಕ್ತಿಗಳು ಜೈಲಿನಿಂದ ಬಚಾವಾಗಲು ಅನಾರೋಗ್ಯ ನೆಪದಲ್ಲಿ ಆಸ್ಪತ್ರೆ ಸೇರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, `ಕಾನೂನು ದೃಷ್ಟಿಯಲ್ಲಿ ಎಲ್ಲರೂ ಒಂದೇ. ಕಾನೂನಿಗೆ ಯಾರೂ ಚಿಕ್ಕವರು-ದೊಡ್ಡವರಲ್ಲ.
 
ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ವ್ಯವಸ್ಥೆಯ ದೌರ್ಬಲ್ಯವನ್ನು ಸರಿಪಡಿಸುವ ಕೆಲಸ ನಡೆಯಬೇಕಿದೆ. ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುವ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ~ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನ ಕುರಿತು ಕೇಳಿದಾಗ, `ಅವರ ಬಗ್ಗೆ ನನಗೇನೂ ವೈಯಕ್ತಿಕ ದ್ವೇಷವಿಲ್ಲ. ಲೋಕಾಯುಕ್ತ ವರದಿ ಮೇರೆಗೆ ನಾನು ಅವರ ವಿರುದ್ಧ ಆರೋಪ ಪಟ್ಟಿ ದಾಖಲಿಸಲು ಅನುಮತಿ ನೀಡಿದ್ದೇನಷ್ಟೇ. ಈ ವಿಚಾರದಲ್ಲಿ ಯಾವುದೇ ಒತ್ತಡಕ್ಕೆ ಮಣಿದಿಲ್ಲ. ಯಡಿಯೂರಪ್ಪ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಬಗ್ಗೆ ನಾನೇನೂ ಉತ್ತರಿಸಲಾರೆ~ ಎಂದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT