ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ವಜಾಕ್ಕೆ ಬಿಎಸ್‌ಆರ್ ಕಾಂಗ್ರೆಸ್ ಆಗ್ರಹ

Last Updated 13 ಡಿಸೆಂಬರ್ 2012, 7:48 IST
ಅಕ್ಷರ ಗಾತ್ರ

ಬೀದರ್:  `ಬಿಜೆಪಿ ಸರ್ಕಾರವು ಅಲ್ಪಮತಕ್ಕೆ ಕುಸಿದಿದ್ದು, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ನಿರ್ಮಾಣವಾಗಿರುವ ಕಾರಣ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಸರ್ಕಾರವನ್ನು ವಜಾ ಮಾಡಬೇಕು' ಎಂದು ಬಿಎಸ್‌ಆರ್ ಕಾಂಗ್ರೆಸ ಪಕ್ಷದ ಸ್ಥಾಪಕ ಅಧ್ಯಕ್ಷ, ಶಾಸಕ ಶ್ರೀರಾಮುಲು ಅವರು ಆಗ್ರಹಪಡಿಸಿದರು.

ನಗರದ ಗಣೇಶ ಮೈದಾನದಲ್ಲಿ ಬುಧವಾರ ನಡೆದ ಬಿಎಸ್‌ಆರ್ ಪಕ್ಷದ ಸಮಾವೇಶ ಮತ್ತು ಅಯಾಜ್ ಖಾನ್ ಅವರ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, 14 ಶಾಸಕರು ಬಹಿರಂಗವಾಗಿಕೆಜೆಪಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಶೆಟ್ಟರ್ ಸರ್ಕಾರ ಆ ಮಟ್ಟಿಗೆ  ಬೆಂಬಲ ಕಳೆದುಕೊಂಡಿದೆ' ಎಂದರು.

ಬಿಜೆಪಿ ಸರ್ಕಾರದ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಅವರು, ಕಳೆದ ನಾಲ್ಕು ವರ್ಷದಲ್ಲಿ ಸರ್ಕಾರ ಯಾವುದೇ ಸಾಧನೆ ಮಾಡಿಲ್ಲ. ಈ ಪಕ್ಷಕ್ಕೆ ಸರಿಯಾದ ಪಾಠ ಹೇಳುವ ಕಾಲ ಬಂದಿದೆ.ರಾಜ್ಯದ ಹಿತಾಸಕ್ತಿ ಕಾಪಾಡದ ರಾಷ್ಟ್ರೀಯ ಪಕ್ಷಗಳನ್ನು ಜನರು ಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದರು.ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್ ಮತ್ತು ನೂತನ ಕೆಜೆಪಿ ಸೇರಿ ಮೂರು ಪ್ರಾದೇಶಿಕ ಪಕ್ಷಗಳಿವೆ. ಬಡವರು, ಶೋಷಿತರು, ರೈತರ ಹೆಸರಿನಲ್ಲಿರುವ ತಮ್ಮ ಪಕ್ಷ ಜನಪರ ನಿಲುವು ಹೊಂದಿದ್ದು, ವಿವೇಚನೆಯಿಂದ ತಮ್ಮ ಹಕ್ಕು ಚಲಾಯಿಸಬೇಕು ಎಂದರು.

ಕೇಂದ್ರ ಸರ್ಕಾರ ತರಾಟೆಗೆ: ಕೇಂದ್ರದ ಯುಪಿಎ ಸರ್ಕಾರವನ್ನು ಟೀಕಿಸಿದ ಅವರು, ಯುಪಿಎ ಸರ್ಕಾರ ಎಫ್‌ಡಿಐ ಸಂಬಂಧಿತ ಮಸೂದೆಗೆ ಅನುಮೋದನೆ ಪಡೆಯಲು ಆತುರ ತೋರಿದೆ. ಆದರೆ, ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ ಪೂರಕವಾದ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆಯುವುದನ್ನು ಕಡೆಗಣಿಸಿದೆ ಎಂದು ಟೀಕಿಸಿದರು. ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿಯೇ ಸಂವಿಧಾನದ 317ನೇ ಕಲಂ ತಿದ್ದುಪಡಿ ಮಸೂದೆಗೂ ಅನುಮೋದನೆ ಪಡೆಯಬೇಕು ಎಂದು ಒತ್ತಾಯಿಸಿ, ತಾವು ಗುಲ್ಬರ್ಗದಲ್ಲಿ 2 ದಿನ ಸತ್ಯಾಗ್ರಹ ನಡೆಸಲು ತೀರ್ಮಾನಿಸಿರುವುದಾಗಿ ಹೇಳಿದರು.

ಆಯಾಜ್ ಖಾನ್ ಸೇರ್ಪಡೆ: ಇದೇ ಸಂದರ್ಭದಲ್ಲಿ ನಗರದ ನೂರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಅಯಾಜ್ ಖಾನ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಎಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಸೇರಿದರು.

`ಕಾಂಗ್ರೆಸ್‌ನಲ್ಲಿ ನಿಷ್ಠಾವಂತರಿಗೆ ಸ್ಥಾನವಿಲ್ಲ. ತಾವು 15 ವರ್ಷ ಪಕ್ಷದಲ್ಲಿದ್ದರೂ ತಮ್ಮನ್ನು ಕಡೆಗಣಿಸಲಾಯಿತು. ಹೀಗಾಗಿ, ಶ್ರೀರಾಮುಲು ಅವರ ಅಲ್ಪಸಂಖ್ಯಾತರ ಪರ ಒಲವು ಗಮನಿಸಿ ಆ ಪಕ್ಷ ಸೇರಲಾಯಿತು' ಎಂದು ಹೇಳಿದರು. ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಅಬುತ್ ಅಲಿ ರೆಹಮಾನ್, ಬಾಬು ನಾಯಕ ಹೊನ್ನಾ, ರೇಣುಕಾಪ್ರಸಾದ, ಪ್ರವೀಣ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT