ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ವಿಸರ್ಜಿಸಿ: ಧನಂಜಯಕುಮಾರ್ ಆಗ್ರಹ

Last Updated 27 ಡಿಸೆಂಬರ್ 2012, 7:51 IST
ಅಕ್ಷರ ಗಾತ್ರ

ಕುಶಾಲನಗರ: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕು ಕಳೆದು ಕೊಂಡಿದ್ದು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸರ್ಕಾರವನ್ನು ವಿಸರ್ಜಿಸಿ ಜನಾದೇಶ ಪಡೆಯಲಿ ಎಂದು ಕೆಜೆಪಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ವಿ.ಧನಂಜಯಕುಮಾರ್ ಆಗ್ರಹಿಸಿದ್ದಾರೆ.

ಬುಧವಾರ ಇಲ್ಲಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ-ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಅಕ್ರಮವಾಗಿ ಸಂಪಾದಿಸಿರುವ ಆಸ್ತಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕು ಒತ್ತಾಯಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಒಳ ಒಪ್ಪಂದದಿಂದ ಸರ್ಕಾರ ಬಹುಮಾತ ಕಳೆದುಕೊಂಡಿದ್ದರೂ ವಿರೋಧ ಪಕ್ಷವಾದ ಕಾಂಗ್ರೆಸ್ ಬೆಳಗಾವಿ ಅಧೀವೇಶನದಲ್ಲಿ ವಿಶ್ವಾಸಮತ ಯಾಚನೆ ಮಾಡಲಿಲ್ಲ ಎಂದು ಟೀಕಿಸಿದರು.

ಮುಂದಿನ ಮೇ ತಿಂಗಳ ಮೊದಲ ವಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಎಲ್ಲ ಸಾಧ್ಯತೆಗಳಿದ್ದು, ಜನವರಿ 15 ರ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಅಲೆ ಬೀಸುವುದು ಖಚಿತ.  ಶಾಸಕರು ಮತ್ತು ಸಚಿವರು ಬಿಜೆಪಿ ತೊರೆದು ಕೆಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ ಎಂದರು.

ಈಗಾಗಲೇ 120 ಕ್ಷೇತ್ರಗಳಿಗೆ ಪಕ್ಷದಿಂದ ಸ್ಪರ್ಧಿಸುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಪ್ರಾದೇಶಿಕ ಸಮಸ್ಯೆಗಳನ್ನು ಸರಿಯಾಗಿ ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಹೇಳಿದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಜನ ಮನ್ನಣೆ ನೀಡುವುದಿಲ್ಲ ಎಂಬ ಆರೋಪ ಸುಳ್ಳು. ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೆ ಆಡಳಿತ ನಡೆಸುತ್ತಿವೆ. ಅದೇ ರೀತಿ ಕರ್ನಾಟಕದಲ್ಲೂ ಕೂಡ ಕೆಜೆಪಿ ಪ್ರಾಬಲ್ಯ ಮೆರೆಯಲಿದೆ ಎಂದರು.

ಈಗಿರುವ ಪ್ರಾದೇಶಿಕ ಪಕ್ಷ ಜೆಡಿಎಸ್ ಸೀಮಿತ ಪ್ರದೇಶಕ್ಕೆ ಮಾತ್ರ ಮೀಸಲಾಗಿದೆ. ಹಳೆ ಮೈಸೂರು ಭಾಗಕ್ಕೆ ಬಿಟ್ಟರೆ ರಾಜ್ಯದ ಇತರ ಭಾಗಗಳಲ್ಲಿ ಅದರ ಪ್ರಬಲ್ಯ ಏನು ಇಲ್ಲ. ಇಂತಹ ಪಕ್ಷದಿಂದ ರಾಜ್ಯ ಹಿತಕಾಯಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಜನಸಾಮಾನ್ಯ ಮತದಾರರು  ಈಗ ಯಡಿಯೂರಪ್ಪ ಪರವಾಗಿ ಒಲವು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಎಲ್ಲ ಸಮುದಾಯಗಳ ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಸುಮಾರು 3 ಲಕ್ಷ ಜನ ಕೆಜೆಪಿ ಸದಸ್ಯರಾಗಿದ್ದು, ರಾಜ್ಯದಲ್ಲಿ ಸುಮಾರು 25 ಲಕ್ಷ ಸದಸ್ಯರನ್ನು ಹೊಂದುವ ಮೂಲಕ ಕೆಜೆಪಿ ಪ್ರಬಲ ಪಕ್ಷವಾಗಿ ರೂಪುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿ.28 ರಂದು ಸಭೆ
ಮಡಿಕೇರಿಯಲ್ಲಿ ಡಿ.28 ರಂದು ಕೆಜೆಪಿ ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಮಿತಿ ರಚಿಸಲಾಗುವುದು. ಈಗ ಯಾವುದೇ ವ್ಯಕ್ತಿಗೆ ಪಕ್ಷದಲ್ಲಿ ಸ್ಥಾನ ನೀಡಿಲ್ಲ ಎಂದು ತಿಳಿಸಿದರು.

ಆದರೆ ಮಡಿಕೇರಿಯಲ್ಲಿ ಮಹಾದೇವಪ್ಪ ಅವರು ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ ಎಂದು ಅವರೇ ಸ್ವಯಂಘೋಷಣೆ ಮಾಡಿಕೊಂಡಿದ್ದಾರೆ. ಇಂಥದಕ್ಕೆ ಪಕ್ಷದಲ್ಲಿ ಇದಕ್ಕೆ ಅಸ್ಪದವಿಲ್ಲ ಎಂದು ಹೇಳಿದರು. ಜಿಲ್ಲೆಯ ವಿವಿಧ ಪಕ್ಷಗಳ ಮುಖಂಡರು ಕೆಜೆಪಿ ಸಂಪರ್ಕದಲ್ಲಿದ್ದಾರೆ. ಆದರೆ ಜಿಲ್ಲೆಯ ಸಚಿವ ಅಪ್ಪಚ್ಚು ರಂಜನ್ ಅವರು ಪಕ್ಷಕ್ಕೆ ಸೇರುವುದಾಗಿ ಹೇಳಿದರೂ ಅವರನ್ನು ಕೆಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು. ಈ ಸಂದರ್ಭ ಪಕ್ಷದ ಮುಖಂಡರಾದ ಪಟ್ಟಣ ಪಂಚಾಯಿತಿ ಸದಸ್ಯ ಎನ್.ಎನ್.ಶಂಭುಲಿಂಗಪ್ಪ, ಮೋಹನ್, ಇಸ್ಮಾಯಿಲ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT