ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಸಾವಿರ ದಿನ ಆಚರಣೆಯಲ್ಲಿ ಏನು ವಿಶೇಷ?

Last Updated 21 ಫೆಬ್ರುವರಿ 2011, 9:05 IST
ಅಕ್ಷರ ಗಾತ್ರ

ಉಡುಪಿ: ಯಾರು ಕೂಡ ಸಾವಿರ ದಿನಗಳನ್ನು ಅಧಿಕಾರದಲ್ಲಿ ಪೂರೈಸಬಹುದು. ಅದು ಮುಖ್ಯವಲ್ಲ, ಆದರೆ ಮುಖ್ಯಮಂ–ತ್ರಿ ಕುರ್ಚಿಯಲ್ಲಿ ಕುಳಿತವರು ಯಾವ ಸಾಧನೆ ಮಾಡುತ್ತಾರೆ ಅದು ಮುಖ್ಯ, ಯಡಿಯೂರಪ್ಪ ಅಂತಹ ಯಾವ ಸಾಧನೆ ಮಾಡಿದ್ದಾರೆ. ಇವರು ಒಬ್ಬ ಮುಖ್ಯಮಂತ್ರಿ ಅಷ್ಟೆ ಎಂದು ಹಿರಿಯ ರಾಜಕಾರಣಿ ಹಾಗೂ ಜೆಡಿಎಸ್ ಮುಖಂಡ ಎಸ್.ಬಂಗಾರಪ್ಪ ಇಲ್ಲಿ ಲೇವಡಿ ಮಾಡಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ 1000 ದಿನಗಳ ಸಾಧನಾ ಸಮಾವೇಶದ ಕುರಿತು ಮಾಧ್ಯಮದವರ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.‘ಯಾರು ಎಷ್ಟು ದಿನ ಅಧಿಕಾರ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ, ಯಾವ ರೀತಿ ಸಾಧನೆ ಮಾಡುತ್ತಾರೆ ಎನ್ನುವುದು ಮುಖ್ಯ. ಸಿಎಂ ಕುರ್ಚಿ ಮೇಲೆ ಕುಳಿತ ತಕ್ಷಣ ಮುಖ್ಯಮಂತ್ರಿ ಆಗುವುದಿಲ್ಲ. ಕುಳಿತವರು ಸಾಧನೆ ಮೂಲಕ ಗೌರವ ತರುವ ಕೆಲಸ ಮಾಡಬೇಕು’ ಎಂದರು.

‘ಕೇಂದ್ರ ಬಜೆಟ್‌ಗೂ ಮುನ್ನವೇ ಮುಖ್ಯಮಂತ್ರಿ ಕೃಷಿ ಬಜೆಟ್ ಮಂಡಿಸಲು ಉದ್ದೇಶಿಸಿರುವ ಬಗ್ಗೆ ಪ್ರಶ್ನಿಸಿದಾಗ, ಸಾಮಾನ್ಯವಾಗಿ ಕೇಂದ್ರ ಬಜೆಟ್ ಬಳಿಕ ರಾಜ್ಯ ಬಜೆಟ್ ಮಂಡಿಸುವುದು ಸಂಪ್ರದಾಯ. ಯಾಕೆಂದರೆ ಅಲ್ಲಿ ಹಂಚಿಕೆ ಮಾಡಿರುವ ಅನುದಾನ ಪರಿಗಣಿಸಿ ಇಲ್ಲಿ ಅಗತ್ಯವಿರುವ ಕಡೆ ಅನುದಾನ ಹಂಚಿಕೆ ಮಾಡಲು ಸಹಾಯವಾಗುತ್ತದೆ. ಆದರೆ ಯಡಿಯೂರಪ್ಪನವರಿಗೆ ಬಜೆಟ್‌ನ ಸಾಮಾನ್ಯ ಜ್ಞಾನವೂ ಇಲ್ಲ. ಹೀಗಾಗಿ ತರಾತುರಿಯಲ್ಲಿ ಬಜೆಟ್ ಮಂಡಿಸಲು ಹೊರಟಿದ್ದಾರೆ’ ಎಂದು ಲೇವಡಿ ಮಾಡಿದರು.

‘ಜೆಡಿಎಸ್ ಸರ್ವನಾಶ ಮಾಡುವುದಾಗಿ ಮುಖ್ಯಮಂತ್ರಿ ಕೆಲವೆಡೆ ಹೇಳುತ್ತಿದ್ದಾರಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೂ ಯಾರನ್ನೂ ನಾಶ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ಒಂದೊಂದು ಕಡೆ ಒಂದೊಂದು ರೀತಿ ಹೇಳುತ್ತಿದ್ದಾರೆ. ಕೆಲವೆಡೆ ಕಾಂಗ್ರೆಸ್ ನಾಶ ಮಾಡುತ್ತೀನಿ ಅಂತಾರೆ, ಇನ್ನು ಕೆಲವೆಡೆ ಜೆಡಿಎಸ್ ನಾಶ ಮಾಡುತ್ತೇನೆ ಎನ್ನುತ್ತಾರೆ. ಅದೆಲ್ಲಕ್ಕಿಂತ ಬಿಜೆಪಿಯೇ ನಾಶವಾದರೆ? ಅದನ್ನು ಚುನಾವಣೆಯಲ್ಲಿ ಜನ ತೋರಿಸುತ್ತಾರೆ, ಈಗಲೇ ಸರ್ಕಾರ ತನ್ನ ಭ್ರಷ್ಟಾಚಾರಗಳಿಂದ ಬಸವಳಿದಿದೆ ಎಂದು ಕುಟುಕಿದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಸಾಧ್ಯತೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಬಂಗಾರಪ್ಪ, ನನ್ನ ಪ್ರಕಾರ ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಲಕ್ಷಣವೇನೂ ಕಂಡು ಬರುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಹಾಗೂ ಮಾಜಿ ಶಾಸಕ ಯು.ಆರ್.ಸಭಾಪತಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT