ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕ ಎಲ್ಲಿ ಗೊತ್ತಾಕೈತ್ರಿ ರೈತರ ಕಷ್ಟಾ?

Last Updated 12 ಜೂನ್ 2012, 6:30 IST
ಅಕ್ಷರ ಗಾತ್ರ

ಕುಷ್ಟಗಿ:  `ತಿರಗಿ ಮಣ್ಣೆತ್ತಿನ ಅಮಾಸಿ ಬಂತ್ರಿ ಮಳಿ ಸುದ್ದಿನ ಇಲ್ಲ, ಇದ್ದ ಹೊಟ್ಟುಮೇವು ಖಾಲಿಯಾತು, ಕಟಗರ‌್ಗೆ ದನಾ ಮಾರಬಾಡ್ರಿ ಅಂತ ಸರ್ಕಾರ ಹೇಳ ಮಾತು ಖರೆ ಐತಿ, ಆದ್ರ ಏನ್ ಮಾಡದ್ರಿ ಗ್ವಾದ್ಲ್ಯಾಗ ಅಡ್ಡ ಮಲಗದೊಂದ ಬಾಕಿ ಐತಿ, ನೋಡ್ರಿ ಸರ ರೈತನ ಪರಿಸ್ಥಿತಿ ಎಲ್ಗೆ ಬಂದೈತಿ ಕೂರ‌್ಗಿ ಹೊಲಾ ಇದ್ರೂ ಎರಡೆತ್ತಿನ ಹೊಟ್ಟಿ ತುಂಬ್ಸಕಾಗವೊಲ್ದು.....~!

ಹೊಟ್ಟುಮೇವಿನ ಕೊರತೆಯಿಂದ ಹತಾಶೆಗೊಂಡು, ಮಳೆಗಾಲದ ಅನಿಶ್ಚಿತತೆ ಹಿನ್ನೆಲೆಯಲ್ಲಿ ಇಲ್ಲಿಯ ಜಾನುವಾರ ಸಂತೆಯಲ್ಲಿ ದಷ್ಟಪುಷ್ಟ ಎರಡು ಎತ್ತುಗಳನ್ನು ಮಾರಾಟಕ್ಕೆ ತಂದಿದ್ದ ತಾಲ್ಲೂಕಿನ ರ‌್ಯಾವಣಕಿ ಗ್ರಾಮದ ಈರಪ್ಪ ಬಸಪ್ಪ ಗೋಡಿನಾಳ ಎಂಬ ರೈತನ ಮನದಾಳದಿಂದ ಬಂದ ನೋವಿನ ನುಡಿ ಇದು.

ಎತ್ತುಗಳನ್ನು ಕೊಡಲು ಮನಸ್ಸಿಲ್ಲ, ಇಟ್ಟುಕೊಳ್ಳಲು ಮೇವಿಲ್ಲ, ಸರ್ಕಾರದ ಗೋಶಾಲೆಗೆ ತೆಗೆದುಕೊಂಡು ಹೋದರೆ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗುತ್ತದೆ. ಖರೀದಿಸುವುದಕ್ಕೆ ಮೇವು ಎಲ್ಲಿಯೂ ಇಲ್ಲ, ಒಂದೊಮ್ಮೆ ಹತ್ತಾರು ಸಾವಿರ ರೂ ಕೊಟ್ಟು ತಂದರೆ ಕೆಲ ದಿನಗಳಲ್ಲೇ ಖಾಲಿಯಾಗುತ್ತದೆ. ಹಾಗಾಗಿ ಹತ್ತು ಸಾವಿರ ರೂ ಕಡಿಮೆಯಾದರೂ ಸರಿ ಎತ್ತುಗಳನ್ನು ಮಾರುವುದು ಅನಿವಾರ್ಯವಾಗಿದೆ ಎಂದು ಸಂತೆಗೆ ಬಂದಿದ್ದ ಕೆಲ ರೈತರು ಅಳಲು ತೋಡಿಕೊಂಡರು.

ಆಕ್ರೋಶ: ಗೋಶಾಲೆ ತೆರೆದು ದನಕರುಗಳನ್ನು ಉಳಿಸುತ್ತೇವೆ ಎಂದು ಸರ್ಕಾರ ಹೇಳುತ್ತಿದೆ, ಎಲ್ಲೋ ಮೂಲೆಯಲ್ಲಿ ಗೋಶಾಲೆ ತೆರೆದರೆ ಅಲ್ಲಿಗೆ ರೈತರಿಗೆ ಹೋಗಿ ಇರಲು ಸಾಧ್ಯವೆ? ಇದೆಲ್ಲ ಕಣ್ಣೊರೆಸುವ ತಂತ್ರ ಎಂದೆ ಹುನುಗುಂದ ತಾಲ್ಲೂಕು ಗುಡೂರು ಗ್ರಾಮದ ರೈತ ಶಿವಲಿಂಗಪ್ಪ ಅಮರಾವತಿ ಆಕ್ರೋಶ ವ್ಯಕ್ತಪಡಿಸಿದರು.

ಕೇಳಿದಷ್ಟು ಬೆಲೆಗೆ: ಸಂತೆಯಲ್ಲಿ ಬಹುತೇಕ ರೈತರು ಜವಾರಿ ಎತ್ತು, ಆಕಳು, ಕರುಗಳನ್ನು ಮಾರಾಟಕ್ಕೆ ತಂದಿದ್ದು ಕಂಡುಬಂದಿತು. ಆದರೆ ಬೆರಳೆಣಿಕೆ ರೈತರು ಮಾತ್ರ ದನಗಳನ್ನು ಖರೀದಿಸಿದರೆ ದಷ್ಟಪುಷ್ಟವಾಗಿದ್ದ ದನಕರುಗಳನ್ನೂ ಸಹ ಕೇಳಿದಷ್ಟು ಬೆಲೆಗೆ ಕಸಾಯಿಖಾನೆಯವರ ಕೈಗೆ ಒಪ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT