ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಮುಜುಗರ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿಯಲ್ಲಿ ಅಂತರರಾಷ್ಟ್ರೀಯ ದರ್ಜೆಯ ಇನ್ನೊಂದು ವಿಮಾನ ನಿಲ್ದಾಣ ಸ್ಥಾಪಿಸಲು ರಾಜ್ಯ ಸರ್ಕಾರ ವಶಪಡಿಸಿಕೊಂಡಿದ್ದ 950 ಎಕರೆ ಭೂಮಿ ಪೈಕಿ 78 ರೈತರ 250 ಎಕರೆ ಭೂ ಸ್ವಾಧೀನ ಅಧಿಸೂಚನೆಯನ್ನೇ ಹೈಕೋರ್ಟ್ ರದ್ದು ಮಾಡಿದೆ.

ಭೂ ಸ್ವಾಧೀನ ಮಾಡಿಕೊಳ್ಳಬಾರದೆಂದು ಈ ರೈತರು ಸಲ್ಲಿಸಿದ್ದ ಅಹವಾಲು ಅರ್ಜಿಗಳನ್ನು ಆಲಿಸದೆ ಏಕಪಕ್ಷೀಯವಾಗಿ ಭೂ ಸ್ವಾಧೀನಪಡಿಸಿಕೊಂಡ ಕ್ರಮವನ್ನು ನಿಯಮಬಾಹಿರ ಎಂದು ಹೈಕೋರ್ಟ್ ತಳ್ಳಿಹಾಕಿದೆ. ರೈತರ ಆಕ್ಷೇಪಣೆಗಳನ್ನು ಕೇಳಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಭೂ ಸ್ವಾಧೀನ ಅಧಿಕಾರಿಗಳಿಗೆ ಸೂಚಿಸಿದೆ.
 
ಈ ಕ್ರಮ ರೈತರಿಗೆ ತಾತ್ಕಾಲಿಕ ನೆಮ್ಮದಿಯಷ್ಟೇ. ಗಣಿ ಗುತ್ತಿಗೆದಾರರೂ ಆದ ಬಳ್ಳಾರಿಯ ಮೂವರು ಮಾಜಿ ಮಂತ್ರಿಗಳು ನೂತನ ವಿಮಾನ ನಿಲ್ದಾಣ ಸ್ಥಾಪನೆಗೆ ಪಟ್ಟು ಹಿಡಿದು ಸರ್ಕಾರದ ಮೇಲೆ ರಾಜಕೀಯ ಒತ್ತಡ ಹೇರಿ ನಿಯಮಬಾಹಿರವಾಗಿ ಭೂ ಸ್ವಾಧೀನ ಮಾಡಿಸಿದ್ದರು.

ರೈತರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪ ರಾಜಕೀಯ ಒತ್ತಡಕ್ಕೆ ಮಣಿದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶ ನೀಡಿದ್ದರು.

ಭೂ ಸ್ವಾಧೀನ ಪ್ರಕ್ರಿಯೆ ವಿರುದ್ಧ ಸಂತ್ರಸ್ತ ರೈತರು ಅನೇಕ ದಿನ ಚಳವಳಿ ನಡೆಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್, ಎಡ ಪಕ್ಷಗಳು ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ಚಳವಳಿ ನಡೆಸಿದ್ದವು. ಸರ್ಕಾರ ಈ ಎಲ್ಲ ವಿರೋಧಗಳನ್ನು ಲೆಕ್ಕಿಸದೆ ಭೂ ಸ್ವಾಧೀನ ಮಾಡಿಕೊಂಡಿದ್ದಕ್ಕೆ ಈಗ ಮುಜುಗರದ ಪರಿಸ್ಥಿತಿ ಎದುರಿಸುವಂತಾಗಿದೆ.

ಬಳ್ಳಾರಿಯಲ್ಲಿ ಈಗಾಗಲೇ ಒಂದು ವಿಮಾನ ನಿಲ್ದಾಣವಿದೆ. ಅದು 1913ರಲ್ಲಿ 185 ಎಕರೆ ಪ್ರದೇಶದಲ್ಲಿ ನಿರ್ಮಾಣವಾದ ನಿಲ್ದಾಣ. ಬಳ್ಳಾರಿಯಿಂದ 30 ಕಿ. ಮೀ.ದೂರದ ತೋರಣಗಲ್‌ನಲ್ಲಿ ಜಿಂದಾಲ್ ಉಕ್ಕು ಕಾರ್ಖಾನೆಯ ಸುಸಜ್ಜಿತ ವಿಮಾನ ನಿಲ್ದಾಣವಿದೆ.

ಇಷ್ಟಿದ್ದರೂ ಅಂತರರಾಷ್ಟ್ರೀಯ ದರ್ಜೆಯ ಮತ್ತೊಂದು ವಿಮಾನ ನಿಲ್ದಾಣದ ಅಗತ್ಯ ಇದೆಯೇ ಎಂಬುದನ್ನು ಸರ್ಕಾರ ಯೋಚಿಸಲಿಲ್ಲ. ವಿಮಾನ ನಿಲ್ದಾಣಕ್ಕೆ ಗುರುತಿಸಿರುವ ಪ್ರದೇಶ ಬಳ್ಳಾರಿಯಿಂದ ಕೇವಲ 15 ಕಿ ಮೀ ದೂರದಲ್ಲಿದೆ.

950 ಎಕರೆ ನೀರಾವರಿ ಭೂಮಿಯನ್ನು ವಶಪಡಿಸಿಕೊಂಡು ಕೆಲವೇ ವ್ಯಕ್ತಿಗಳ ಅನುಕೂಲಕ್ಕಾಗಿ ಮೂರನೇ ವಿಮಾನ ನಿಲ್ದಾಣ ಮಾಡುವುದು ಬೇಡ ಎಂಬ ರೈತರ ಬೇಡಿಕೆಯಲ್ಲಿ ನ್ಯಾಯವಿದೆ ಎಂದು ಯಡಿಯೂರಪ್ಪ ಸರ್ಕಾರ ಭಾವಿಸಲೇ ಇಲ್ಲ.
 
ವಿಮಾನ ನಿಲ್ದಾಣಕ್ಕಾಗಿ ನೀರಾವರಿ ಭೂಮಿಯನ್ನು ವಶಮಾಡಿಕೊಂಡ ಕ್ರಮವೇ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಯಡಿಯೂರಪ್ಪ ಬಳ್ಳಾರಿ ಸಚಿವರ ತಾಳಕ್ಕೆ ಹೆಜ್ಜೆ ಹಾಕಿ ರೈತರ ಹಿತವನ್ನು ಕಡೆಗಣಿಸಿದ್ದು ಈ ತೀರ್ಪಿನಿಂದ ಸ್ಪಷ್ಟವಾಗಿದೆ.

ಬಳ್ಳಾರಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಕಳೆದ ಹತ್ತು ವರ್ಷಗಳಿಂದ ನಡೆದ ಗಣಿಗಾರಿಕೆಯಿಂದ ಕೃಷಿ, ತೋಟಗಾರಿಕೆ ಮತ್ತು ಜನಜೀವನದ ಮೇಲೆ ಅತ್ಯಂತ ಕೆಟ್ಟ ಪರಿಣಾಮಗಳಾಗಿವೆ.
 
ಅದನ್ನು ಸರಿಪಡಿಸುವ ಕನಿಷ್ಠ ಕಾಳಜಿಯನ್ನೂ ಬಿಜೆಪಿ ಸರ್ಕಾರ ತೋರಿಸಿಲ್ಲ. ಈಗಲಾದರೂ ಸರ್ಕಾರ ವಸ್ತುಸ್ಥಿತಿಯನ್ನು ಅರಿತು ವಿಮಾನ ನಿಲ್ದಾಣ ಯೋಜನೆ ಕೈಬಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT