ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಮೂಗುದಾರ

ಪಕ್ಷ-ಸಚಿವರ ಮಧ್ಯೆ `ಸಮನ್ವಯ'ಕ್ಕೆ ಸಮಿತಿ: ದಿಗ್ವಿಜಯ್ ಘೋಷಣೆ
Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಪ್ರದೇಶ ಕಾಂಗ್ರೆಸ್ ನಡುವೆ ಸಮನ್ವಯ ಸಾಧಿಸಲು ಸಮಿತಿ ರಚಿಸಲಾಗುವುದು ಎಂದು ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಮಂಗಳವಾರ ಇಲ್ಲಿ ಪ್ರಕಟಿಸಿದರು. ಈ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಮೂಗುದಾರ ಹಾಕುವ ಸೂಚನೆ ನೀಡಿದರು.

ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪ್ರದೇಶ ಕಾಂಗ್ರೆಸ್‌ನ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, `ಸರ್ಕಾರ ಮತ್ತು ಪಕ್ಷದ ನಡುವಿನ ಸಂಬಂಧದ ಉಸ್ತುವಾರಿಯನ್ನು ಸಮನ್ವಯ ಸಮಿತಿ ನೋಡಿಕೊಳ್ಳಲಿದೆ. ಹಾಗೆಯೇ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವುದರ ಉಸ್ತುವಾರಿಗಾಗಿ ಪ್ರಣಾಳಿಕೆ ಅನುಷ್ಠಾನ ಸಮಿತಿಯನ್ನೂ ರಚಿಸಲಾಗುವುದು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚೆ ನಡೆಸಿದ ನಂತರ ಇವು ಅಸ್ತಿತ್ವಕ್ಕೆ ಬರಲಿವೆ' ಎಂದರು.

ಜಿಲ್ಲಾ ಮಟ್ಟದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಮಟ್ಟದಲ್ಲಿಯೂ ಸಮನ್ವಯ ಸಮಿತಿಗಳನ್ನು ರಚಿಸಲಾಗುವುದು. ಒಟ್ಟಾರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳಲ್ಲಿ ಕನಿಷ್ಠ ಶೇ 40ರಷ್ಟು ಪಡೆಯಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದರು.

ಕಠಿಣ ಕ್ರಮ: `ಭ್ರಷ್ಟಾಚಾರ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಕಠಿಣ ನಿಲುವುಗಳನ್ನು ತೆಗೆದುಕೊಂಡಿದೆ. ಇದು ರಾಜ್ಯದ ಸಚಿವರಿಗೂ ಅನ್ವಯಿಸುತ್ತದೆ. ಭ್ರಷ್ಟಾಚಾರದಲ್ಲಿ ಯಾರೇ ಸಿಕ್ಕಿಕೊಂಡರೂ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ' ಎಂದು ಎಚ್ಚರಿಸಿದರು.

`ಸಚಿವರ ಜಿಲ್ಲಾ ಪ್ರವಾಸದ ವೇಳೆ ಅವರನ್ನು ಹತ್ತಾರು ಕಾರುಗಳಲ್ಲಿ ಹಿಂಬಾಲಿಸುವುದು ಸರಿಯಲ್ಲ. ಈ ಬಗ್ಗೆ ಸಚಿವರು ಎಚ್ಚರವಹಿಸಬೇಕು. ದೊಡ್ಡ ದೊಡ್ಡ ಗಾತ್ರದ ಹೂವಿನ ಹಾರ ಹಾಕುವುದು ಕೂಡ ಸರಿಯಲ್ಲ' ಎಂದು ಅವರು ಹೇಳಿದರು.

ಬಿಟ್ಟುಹೋಗಿ: `ಜನಪರವಾಗಿ ಕೆಲಸ ಮಾಡಿ, ಇಲ್ಲವೇ ಬಿಟ್ಟು ಹೋಗಿ' ಎಂದು ಸಚಿವರನ್ನು ಉದ್ದೇಶಿಸಿ ನೇರವಾಗಿಯೇ ಸಿಂಗ್ ಹೇಳಿದರು.
ಪ್ರಭಾವ ಬೀರಲ್ಲ: `ರಾಜ್ಯದ ಉಸ್ತುವಾರಿಯಾದ ನಂತರ ಮೊದಲ ಬಾರಿಗೆ ನಗರಕ್ಕೆ ಬಂದ ನನಗೆ ಭಾರಿ ಸಂಖ್ಯೆಯ ಪೋಸ್ಟರ್, ಕಟೌಟ್ ಮತ್ತು ಬ್ಯಾನರ್‌ಗಳ ಮೂಲಕ ಅದ್ದೂರಿ ಸ್ವಾಗತ ಕೋರಿದ್ದೀರಿ. ಆದರೆ, ಈ ಪೋಸ್ಟರ್, ಬ್ಯಾನರ್‌ಗಳ ಮೂಲಕ ನನ್ನ ಮೇಲೆ ಪ್ರಭಾವ ಬೀರಲು ಸಾಧ್ಯ ಇಲ್ಲ' ಎಂದು ಸೂಚ್ಯವಾಗಿ ಹೇಳಿದರು.

`ವಿಮಾನ ನಿಲ್ದಾಣದಿಂದ ಇಲ್ಲಿಯವರೆಗೂ ರಸ್ತೆಯ ಎರಡೂ ಕಡೆ ಬ್ಯಾನರ್, ಕಟೌಟ್‌ಗಳನ್ನು ನಿಲ್ಲಿಸಲಾಗಿದೆ. ಇದರ ಅಗತ್ಯ ಏನಿತ್ತು' ಎಂದೂ ಮುಖಂಡರು ಮತ್ತು ಕಾರ್ಯಕರ್ತರನ್ನು ಪ್ರಶ್ನಿಸಿದರು. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆ ಕಡ್ಡಾಯ: ಬ್ಲಾಕ್ ಮತ್ತು ಜಿಲ್ಲಾ ಮಟ್ಟದ ಕಾಂಗ್ರೆಸ್ ಸಮಿತಿಗಳು ಪ್ರತಿ ತಿಂಗಳು ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಸತತವಾಗಿ ಮೂರು ಬಾರಿ ಪಕ್ಷದ ಸಭೆಗಳಿಗೆ ಗೈರುಹಾಜರಾಗುವ ಪದಾಧಿಕಾರಿಗಳ ಸದಸ್ಯತ್ವ ರದ್ದು ಮಾಡಬೇಕು ಅವರು ಸಲಹೆ ಮಾಡಿದರು. ಪಕ್ಷ ಸಂಘಟನೆಯನ್ನು ವ್ಯವಸ್ಥಿತವಾಗಿ ಮಾಡಲು ತೀರ್ಮಾನಿಸಲಾಗಿದೆ. ಸಚಿವರು ಜಿಲ್ಲಾ ಕೇಂದ್ರಗಳಿಗೆ ಹೋದ ಸಂದರ್ಭದಲ್ಲಿ ಕಡ್ಡಾಯವಾಗಿ ಪಕ್ಷದ ಕಚೇರಿಗೂ ಭೇಟಿ ನೀಡಬೇಕು. 2-3 ಗಂಟೆ ಪಕ್ಷದ ಕಾರ್ಯಕರ್ತರ ಜತೆ ಇರಬೇಕು. ಅವರ ಸಮಸ್ಯೆಗಳನ್ನೂ ಆಲಿಸಬೇಕು ಎಂದು ಅವರು ಹೇಳಿದರು.

`ಸಾಮಾಜಿಕ ಮಾಧ್ಯಮ ಇತ್ತೀಚೆಗೆ ಹೆಚ್ಚು ಜನಪ್ರಿಯ ಆಗುತ್ತಿದೆ. ಅದನ್ನು ಕಾಂಗ್ರೆಸ್ ಕೂಡ ಬಳಸಿಕೊಳ್ಳಬೇಕು. ಕನಿಷ್ಠ ಒಂದು ಲಕ್ಷ ಜನರನ್ನು ಈ ಮಾಧ್ಯಮದ ಮೂಲಕವೇ ತಲುಪಬೇಕು. ಇದಕ್ಕೆ ಪಕ್ಷದ ಸಹ ಸಂಘಟನೆಗಳ ಸಹಕರಿಸಬೇಕು' ಎಂದರು.

ಎಸ್‌ಎಂಎಸ್ ಮಾಡಿ:  `ನನ್ನ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಚ್ಛಿಸುವ ಮುಖಂಡರು, ಕಾರ್ಯಕರ್ತರು, ನನ್ನ ದೂರವಾಣಿ ಸಂಖ್ಯೆಗೆ ಎಸ್‌ಎಂಎಸ್ ಮಾಡಬಹುದು. ಇ-ಮೇಲ್‌ನಲ್ಲೂ ನಾನು ಲಭ್ಯ ಇರುತ್ತೇನೆ' ಎಂದು ಅವರು ವಿವರಿಸಿದರು.

ಅಧಿಕಾರ ಕೊಡಿ: `ಹಲವು ವರ್ಷಗಳ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದಕ್ಕಾಗಿ ಲಕ್ಷಾಂತರ ಕಾರ್ಯಕರ್ತರು ಬೆವರು ಸುರಿಸಿದ್ದಾರೆ. ಅಂತಹ ನಿಷ್ಠಾವಂತರಿಗೆ ಸಣ್ಣ ಪುಟ್ಟ ಅಧಿಕಾರ ನೀಡುವುದು ನಮ್ಮೆಲ್ಲರ ಜವಾಬ್ದಾರಿ...' ಹೀಗೆ ಹೇಳಿದ್ದು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್.ಮುನಿಯಪ್ಪ.

ಪ್ರದೇಶ ಕಾಂಗ್ರೆಸ್‌ನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಈ ಮುಖಂಡರು, ಆದಷ್ಟು ಬೇಗ ನಿಗಮ- ಮಂಡಳಿಗಳಿಗೆ ಪಕ್ಷದ ಕಾರ್ಯಕರ್ತರನ್ನು ನೇಮಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.

ಪರಮೇಶ್ವರ್ ಮಾತನಾಡಿ, `ರಾಜ್ಯದ ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಖ್ಯಮಂತ್ರಿ ಮೇಲೂ ಹೆಚ್ಚಿನ ಜವಾಬ್ದಾರಿ ಇದ್ದು, ಸ್ವಚ್ಛ ಮತ್ತು ದಕ್ಷ ಆಡಳಿತ ಕೊಡುವುದರ ಕಡೆ ಗಮನಹರಿಸಬೇಕು' ಎಂದರು.

`ಕಾರ್ಯಕರ್ತರಿಗೆ ಅಧಿಕಾರ ನೀಡಿದಾಗ ಅವರಲ್ಲಿ ಹುಮ್ಮಸ್ಸು ಹೆಚ್ಚಾಗುತ್ತದೆ. ಈ ಕಾರಣಕ್ಕೆ ಅಧಿಕಾರ ನೀಡಬೇಕು' ಎಂದು ಖರ್ಗೆ ಅಭಿಪ್ರಾಯಪಟ್ಟರು. ಕೇಂದ್ರ ಸಚಿವರಾದ ಆಸ್ಕರ್ ಫರ್ನಾಂಡಿಸ್, ಕೆ.ಎಚ್.ಮುನಿಯಪ್ಪ ಮಾತನಾಡಿದರು.

ದಿನ ಬಿಟ್ಟು ದಿನ ಹಾಲು: ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, `ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ (1ರಿಂದ 5ನೇ ತರಗತಿ) ದಿನ ಬಿಟ್ಟು ದಿನ ನಂದಿನಿ ಹಾಲು ನೀಡುವ ಯೋಚನೆ ಇದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT