ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಗಳೇ ಕನ್ನಡದ ಸಮಸ್ಯೆ: ಗೊರುಚ

Last Updated 17 ಅಕ್ಟೋಬರ್ 2012, 4:20 IST
ಅಕ್ಷರ ಗಾತ್ರ

ಬಳ್ಳಾರಿ: ಕನ್ನಡ ಸಮಗ್ರ ಏಳ್ಗೆಗೆ ವಿಶೇಷ ಯೋಜನೆ ರೂಪಿಸುವುದಾಗಿ ಸದಾ ಹುಸಿ ಭರವಸೆ ನೀಡುವ ಆಳುವ ಸರ್ಕಾರಗಳ ಬಗ್ಗೆ ಕನ್ನಡಿಗರಿಗೆ ನಂಬಿಕೆ ಹೊರಟುಹೋಗಿದೆ. ಕನ್ನಡ ಅಧೋಗತಿಗೆ ಕಾರಣವಾಗಿರುವ ಸರ್ಕಾರಗಳೇ ಕನ್ನಡಕ್ಕೆ ಸಮಸ್ಯೆಯಾಗಿವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.

ಲೋಹಿಯಾ ಪ್ರಕಾಶನ ಹಾಗೂ ನಾಡಹಬ್ಬ ಸಮಿತಿ ಸಹಯೋಗದಲ್ಲಿ ನಗರದ ರಾಘವ ಕಲಾ ಮಂದಿರದಲ್ಲಿ ಮಂಗಳವಾರ ಸಂಜೆ ಆರಂಭವಾದ ನಾಡಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು `ಪ್ರಸ್ತುತ~ ಎಂದು ಕರೆಯಲಾಗುವುದಿಲ್ಲ. ಅವು ಶಾಶ್ವತ. ಆಡಳಿತದ ಚುಕ್ಕಾಣಿ ಹಿಡಿದವರ ಧೋರಣೆಗಳಿಂದಾಗಿ ಕನ್ನಡದ ಸಮಸ್ಯೆಗಳನ್ನು ಹೇಳಿಕೊಳ್ಳುವದೇ `ಅಪ್ರಸ್ತುತ~ ಎಂಬ ಸ್ಥಿತಿ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಭಿಮಾನಪೂರ್ಣ ಹಿನ್ನೆಲೆಯ ಕನ್ನಡಿಗರ ಇಂದಿನ ಸ್ಥಿತಿಗತಿಯು ಅಸಹಾಯಕತೆಯನ್ನೇ ಬಿಂಬಿಸುತ್ತಿರುವುದು ಬೇಸರದ ಸಂಗತಿ ಎಂದ ಅವರು, ಕನ್ನಡದ ಪರಂಪರೆಯನ್ನು ಹಾಳುಗೆಡವುತ್ತಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಕನ್ನಡಿಗರು ಸಹಿಸಬಾರದು ಎಂದರು.

ರಾಜ್ಯ ನೈತಿಕ ಅವನತಿಯತ್ತ ಸಾಗಿದ್ದು, ಯುವ ಪೀಳಿಗೆಯ ಅಭಿರುಚಿ ಹಾಳಾಗಿ ಕೀಳು ಅಭಿರುಚಿ ಹೆಚ್ಚುತ್ತಿದೆ. ಕೆಲವು ಘಟನೆಗಳಿಗೆ ಸಂಬಂಧಿಸಿದಂತೆ ದನಿ ಎತ್ತಿ, ನಂತರ ನಿಷ್ಕ್ರಿಯವಾಗುವ ಕನ್ನಡ ಪರ ಸಂಘಟನೆಗಳು ಕನ್ನಡದ ಉಳಿವಿಗೆ ಸದಾ ಹೋರಾಡುವ ಅಗತ್ಯ ಇದೆ. ಮಾಧ್ಯಮಗಳಲ್ಲಿ ಕನ್ನಡದ ಕಗ್ಗೊಲೆಯಾಗುತ್ತಿದ್ದು, ಕನ್ನಡ ಪದಗಳ ಬದಲು ಇಂಗ್ಲಿಷ್ ಪದಗಳನ್ನೇ ಹೆಚ್ಚು ಬಳಸಲಾಗುತ್ತಿದೆ ಈ ಕುರಿತು ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಅವರು ತಿಳಿಸಿದರು.

1953ರ ಅಕ್ಟೋಬರ್ 1ರಂದು ಬಳ್ಳಾರಿ ಜಿಲ್ಲೆ ಮೈಸೂರು ಪ್ರಾಂತ್ಯದಲ್ಲಿ ವಿಲೀನಗೊಂಡಿದ್ದರಿಂದ ಪ್ರತಿ ವರ್ಷದ ಅಕ್ಟೋಬರ್ 1ರಂದೇ ಈ ಭಾಗದಲ್ಲಿ ನಾಡಹಬ್ಬ ಆಚರಿಸುವಂತಾಗಬೇಕು ಎಂದು ಅವರು ಹೇಳಿದರು.
ಕನ್ನಡಿಗರು ಕನ್ನಡದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವ ವಿಷಯಗಳು ಸಾಕಷ್ಟಿದ್ದರೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾಯವಾಗಿದೆ.

ಕನ್ನಡ ನಾಡನ್ನು ಆಳಿರುವ ಗಂಗರು, ಶಾತವಾಹನರು, ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರು, ಕದಂಬರು, ವಿಜಯನಗರದ ಅರಸರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಮಹಾಭಾರತ ಕಾವ್ಯದಲ್ಲೂ ಕನ್ನಡದ ಪ್ರಸ್ತಾಪವಿದೆ ಎಂದು ಅವರು ಹೇಳಿದರು.

ಸಮಗ್ರ ಕರ್ನಾಟಕ ರೂಪುಗೊಳ್ಳುವ ಮುನ್ನ ಹೈದರಾಬಾದ್ ಮತ್ತು ಮುಂಬೈ ಪ್ರಾಂತ್ಯದಲ್ಲಿದ್ದ ಕರ್ನಾಟಕದ ಭಾಗಗಳನ್ನು `ಕಲ್ಯಾಣ ಕರ್ನಾಟಕ~ ಮತ್ತು `ಕಿತ್ತೂರು ಕರ್ನಾಟಕ~ ಎಂದು ಕರೆಯಬೇಕಿದೆ. ಕನ್ನಡವು ಕನ್ನಡಿಗರ ನಿತ್ಯ ಸುಪ್ರಭಾತದ ಸ್ತೋತ್ರಮಂತ್ರವಾಗಿ ರೂಪುಗೊಳ್ಳಬೇಕಿದೆ ಎಂದು ಅವರು ಕೋರಿದರು.

ಜನರ ಕಷ್ಟ ನಿರ್ಲಕ್ಷಿಸುತ್ತ, ಅಧಿಕಾರದ ಅಮಲಿನಲ್ಲಿರುವ ನಿರ್ಲಜ್ಜ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ, `ಅಧಿಕಾರ ಚಿರಂಜೀವಿಯಲ್ಲ~ ಎಂಬುದನ್ನು ಜನರೇ ತಿಳಿಸಬೇಕು. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲೇ ಶಿಕ್ಷಣವನ್ನು ನೀಡುವ ವ್ಯವಸ್ಥೆ ಜಾರಿಗೆ ಬರದಿದ್ದರೆ ಕೆಲವೇ ವರ್ಷಗಳಲ್ಲಿ ಕನ್ನಡ ಇತಿಹಾಸದ ಪುಟ ಸೇರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬ್ರಿಟಿಷ್ ಅಧಿಕಾರಿಗಳೂ, ಪಾಶ್ಚಿಮಾತ್ಯರೂ ಕನ್ನಡ ಕಲಿತು, ಕನ್ನಡ ಉಳಿಸುವ ಕೆಲಸ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಕಲಿಯಬಹುದಾದ ಇಂಗ್ಲಿಷ್ ಅನ್ನು ಕಲಿಕೆಯ ಒಂದು ವಿಷಯವನ್ನಾಗಿಸಿದರೂ ಸಾಕು. ಅದು ಮಾಧ್ಯಮ ಆಗಬಾರದು ಎಂದು ಅವರು ಪ್ರತಿಪಾದಿಸಿದರು.

ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರೇಹಾಳ ಇಬ್ರಾಹಿಂ ಸಾಬ್, ವೈ.ಬಸವರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಮಾಲಾಶ್ರೀ ಕಣವಿ ಅವರು ಭಾವಗೀತೆ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT