ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಅನುಮತಿ ಇಲ್ಲದೆ ಮಾಸ್ಟರ್ ಪ್ಲಾನ್ ಇಲ್ಲ

Last Updated 12 ಜನವರಿ 2012, 5:40 IST
ಅಕ್ಷರ ಗಾತ್ರ

ವಿಜಾಪುರ: `ಪರಿಹಾರ ಹಣ ನೀಡಲು ಸರ್ಕಾರ ಒಪ್ಪಿಗೆ ಸೂಚಿಸುವವರೆಗೂ ವಿಜಾಪುರ ನಗರದಲ್ಲಿ ಮಾಸ್ಟರ್ ಪ್ಲಾನ್ ಜಾರಿ ಮಾಡುವುದಿಲ್ಲ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.

`ವಿಜಾಪುರದ ರಸ್ತೆಗಳನ್ನು ಅಗಲೀಕರಣ ಹಾಗೂ ಸೌಂದರ್ಯೀಕರಣಗೊಳಿಸಿ ದೂಳು ಮುಕ್ತ ನಗರ ಮಾಡುವುದು ನಮ್ಮ ಬಯಕೆ. ಅದಕ್ಕಾಗಿ ನಗರೋ ತ್ಥಾನ ಯೋಜನೆಯಲ್ಲಿ 100 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಲಾಗುತ್ತಿದೆ~ ಎಂದರು.

`ಅಗತ್ಯ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳದೆ ಮಾಸ್ಟರ್ ಪ್ಲಾನ್ ಜಾರಿ ಮಾಡಿ ಕಟ್ಟಡಗಳನ್ನು ತೆರವುಗೊಳಿಸಿದರೆ ಆಸ್ತಿ ಮಾಲೀಕರು ಹಾನಿಗೀಡಾಗಲಿದ್ದಾರೆ. ಕೆಲವರು ನಿರ್ಗತಿಕರಾಗುತ್ತಾರೆ. ಮಾಸ್ಟರ್ ಪ್ಲಾನ್ ಜಾರಿ ಮಾಡುವಾಗ ಆಸ್ತಿಗಳ ಮಾಲೀಕರಿಗೆ ಪರಿಹಾರ ನೀಡುವ ಹಾಗೂ ತಕ್ಷಣ ರಸ್ತೆ ಅಭಿವೃದ್ಧಿ ಪಡಿಸುವ ಕೆಲಸವಾಗಬೇಕು. ಇದಕ್ಕೆ ಹಣ ನೀಡಲು ಸರ್ಕಾರ ಸಮ್ಮತಿಸಿದ ನಂತರವಷ್ಟೇ ಕೆಲಸ ಆರಂಭಿಸಬೇಕು~ ಎಂದು ಹೇಳಿದರು.

`ಮಾಸ್ಟರ್ ಪ್ಲಾನ್ ಜಾರಿಗೊಳಿಸಿರುವ ಗುಲ್ಬರ್ಗ ಮತ್ತಿತರ ನಗರಗಳಲ್ಲಿಯ ಸಾಧಕ ಬಾಧಕಗಳನ್ನು ಅಧ್ಯಯನ ನಡೆಸಬೇಕಿದೆ. ಸರ್ಕಾರದಿಂದ ಹಣವನ್ನೂ ಮಂಜೂರು ಮಾಡಿಸಬೇಕಿದೆ. ಈ ಎಲ್ಲ ವಿಷಯಗಳ ಬಗ್ಗೆ 30 ದಿನಗಳಲ್ಲಿ ಒಂದು ನಿರ್ಧಾರಕ್ಕೆ ಬರಲಾಗುವುದು~ ಎಂದರು.

`ವಿಜಾಪುರದ ಐದು ಪ್ರಮುಖ ರಸ್ತೆಗಳಲ್ಲಿ ಮಾಸ್ಟರ್ ಪ್ಲಾನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಪರಿಹಾರ ನೀಡಲು 162 ಕೋಟಿ ರೂಪಾಯಿ ಅನುದಾನ ಬೇಕು. ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಗೋದಾವರಿ ಹೋಟೆಲ್‌ನಿಂದ ರೈಲ್ವೆ ನಿಲ್ದಾಣದ ಮೇಲ್ಸೇತುವೆ ವರೆಗಿನ ಕಾಮಗಾರಿಯಲ್ಲಿ 424 ಖಾಸಗಿ, 50 ಸರ್ಕಾರಿ ಆಸ್ತಿಗಳನ್ನು ತೆರವುಗೊಳಿಸಬೇಕಾಗುತ್ತದೆ.

ಈ ರಸ್ತೆಯಲ್ಲಿ ಬರುವ ಜೋರಾಪುರ ಪೇಠೆಯ ನೀರಿನ ಟ್ಯಾಂಕ್ ಸಹ ಒಡೆಯಬೇಕಾಗುತ್ತದೆ. ಈ ಒಂದೇ ರಸ್ತೆಗೆ 23 ಕೋಟಿ ರೂಪಾಯಿ ಪರಿಹಾರ ನೀಡಬೇಕಾಗುತ್ತದೆ~ ಎಂದು ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಪೌರಾಯುಕ್ತ ರಾಜಶೇಖರ ಹೇಳಿದರು.

`100 ಕೋಟಿ ರೂಪಾಯಿ ವಿಶೇಷ ಅನುದಾನ ಕೋರಿ ಎರಡು ಬಾರಿ ಸಲ್ಲಿಸಿದ ಪ್ರಸ್ತಾವವನ್ನು ಸರ್ಕಾರ ತಿರಸ್ಕರಿಸಿದೆ. ಈ ಪ್ರಸ್ತಾವನೆಗೆ ಅನುಮೋದನೆ ಕೊಡಿಸಬೇಕು~ ಎಂದು ಅವರು ಮನವಿ ಮಾಡಿದರು.

`ಯಾವುದೇ ಕಾರಣಕ್ಕೂ ಸರ್ಕಾರ ಅನುಮತಿ ನೀಡುವವರೆಗೂ ಮಾಸ್ಟರ್ ಪ್ಲಾನ್ ಜಾರಿ ಮಾಡಬೇಡಿ. ಈ ಕುರಿತು ಶಾಸಕರು, ಸಂಸದರು ಸೇರಿ ಸಂಬಂಧಿಸಿದ ಸಚಿವರೊಂದಿಗೆ ಸಭೆ ನಡೆಸೋಣ~ ಎಂದು ಸಚಿವ ನಿರಾಣಿ ಅಧಿಕಾರಿಗಳಿಗೆ ಸೂಚಿಸಿದರು.

ವಿಜಾಪುರ ನಗರದಲ್ಲಿ 100 ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿ ನೀಡಿ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ ಮನವಿ ಮಾಡಿದರು.

ಎರಡು ವರ್ಷಗಳ ಹಿಂದೆ ಕೊರೆದಿರುವ 16 ಕೊಳವೆ ಬಾವಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್‌ಸೆಟ್ ಅಳವಡಿಸಿಲ್ಲ ಎಂದು ಅಧಿಕಾರಿಗಳು ಹೇಳಿದರು. ಭೂತನಾಳ ಕೆರೆಯಲ್ಲಿ ಈಗ ಕೇವಲ 6 ಅಡಿ ನೀರಿದೆ. ನಗರದಲ್ಲಿ ಕೊಳವೆಬಾವಿ ಕೊರೆಸುವ ಅಗತ್ಯವಿದೆ ಎಂದು ಜಲಮಂಡಳಿ ಅಧಿಕಾರಿ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಕಲ್ಲೂರ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT