ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಅಸ್ತಿತ್ವ ಪ್ರಶ್ನಿಸುವ ಪಿಲಕಲ್ ಗ್ರಾಮ

Last Updated 30 ನವೆಂಬರ್ 2011, 8:50 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನ 186 ಹಳ್ಳಿಗಳ ಪೈಕಿ ಶೇ. 60ರಷ್ಟು ಹಳ್ಳಿಗಳು ಮಾತ್ರ ಕೆಲ ಸೌಲಭ್ಯ ಪಡೆಯುವಲ್ಲಿ ಸಫಲವಾಗಿವೆ. ಇನ್ನುಳಿದ ಶೇ. 40 ಹಳ್ಳಿಗಳು ಕನಿಷ್ಠ ಸೌಲಭ್ಯಗಳನ್ನು ಕಾಣದೆ ಉಳಿದಿವೆ. ಇವುಗಳ ಪೈಕಿ ತೀರ ಹಿಂದುಳಿದಿರುವ ಗ್ರಾಮ ಪಿಲಕಲ್.

ಕೊತ್ತದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ `ಪಿಲಕಲ್~ ಕುಗ್ರಾಮ. ಈ ಹಿಂದೆ ಕೊತ್ತದೊಡ್ಡಿ, ಮಲ್ಕಂದಿನ್ನಿ, ಹೇಮನೂರು ಮತ್ತು ಕಾಟಮಳ್ಳಿ ಗ್ರಾಮಗಳಿಂದ ವಲಸೆ ಬಂದವರು ಈ ನೂತನ ಪಿಲಕಲ್ ಗ್ರಾಮದ ಅಸ್ತಿತ್ವಕ್ಕೆ ಕಾರಣರಾದರು. ಪಿಲಕಲ್ ಗ್ರಾಮದ ಅವಸ್ಥೆ ನೋಡುತ್ತಿದ್ದರೆ, ಈ ಗ್ರಾಮದಲ್ಲಿ ಸರ್ಕಾರದ ಅಸ್ವಿತ್ವ ತೋರಿಸುವ ಒಂದಿಷ್ಟೂ ಕುರುಹುಗಳು ಕಾಣ ಸಿಗುವುದಿಲ್ಲ.

ಗುಡ್ಡಗಾಡಿನ ನಡುವೆ ಇರುವ ಈ ಗ್ರಾಮ ದೇವದುರ್ಗ-ಸಿರವಾರ ಮುಖ್ಯ ರಸ್ತೆಯಿಂದ ಕೇವಲ ಮೂರು ಕಿ.ಮೀ. ದೂರದಲ್ಲಿದೆ.  ಗ್ರಾಮದ ಬಹುತೇಕ ಎಲ್ಲ ಕುಟುಂಬಗಳು ಕೃಷಿ ಅವಲಂಬಿಸಿವೆ. ಆಂದಾಜು 200 ಮತದಾರರನ್ನು ಹೊಂದಿರುವ ಗ್ರಾಮದಲ್ಲಿ 300 ಜನ ಸಂಖ್ಯೆಯ ಗಡಿ ತಲಪುತ್ತಿದ್ದರೂ ಇದುವರಿಗೂ ಆಡಳಿತ ನಡೆಸಿದ ಯಾವ ಸರ್ಕಾರವು ಈ ಗ್ರಾಮಕ್ಕೆ ಅಗತ್ಯ ಸೌಲಭ್ಯ ನೀಡುವ ಬಗ್ಗೆ ಗಮನ ಹರಿಸಿಲ್ಲ.

ವರ್ಷಪೂರ್ತಿ ಕುಡಿಯುವ ನೀರು, ರಸ್ತೆ, ಶೌಚಾಲಯ ಸೇರಿದಂತೆ ಇತರ ಹತ್ತು ಹಲವಾರು ಯೋಜನೆಗಳಿಗಾಗಿ ಸರ್ಕಾರದಂದ ಕೋಟಿಗಟ್ಟಲೇ ಹಣ ತಾಲ್ಲೂಕಿಗೆ ಹರಿದು ಬರುತ್ತದೆ. ಅಧಿಕಾರಿಗಳು ಮಾತ್ರ ಪಿಲಕಲ್ ಗ್ರಾಮವನ್ನು ಮರೆತು ಕುಳಿತಿರುವುದು ಎದ್ದು ಕಾಣುತ್ತದೆ. ಗ್ರಾಮಸ್ಥರಿಗೆ ಸೌಲಭ್ಯಗಳು ಎಂದರೆ ಏನು, ಯಾರನ್ನು ಕೇಳಬೇಕು ಎಂಬ ಬಗ್ಗೆ ಕನಿಷ್ಠ ಜ್ಞಾನ ಇಲ್ಲದೆ ಇರುವುದಕ್ಕೆ ಸಂಬಂಧಿಸಿದ ಅಧಿಕಾರಗಳ ಬೇಜವಾಬ್ದಾರಿ ಈ ಗ್ರಾಮಕ್ಕೆ ಭೇಟಿ ನೀಡಿದರೆ ಮಾತ್ರ ತಿಳಿಯುತ್ತದೆ.

ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗಾಗಿಯೇ ಹತ್ತು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ ಅವು ನಿಜ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎನ್ನುವುದಕ್ಕೆ ಈ ಗ್ರಾಮವೇ ಸಾಕ್ಷಿ.

ದುರದೃಷ್ಟ ಎಂದರೆ ಇದುವರೆಗೂ ಕೆಲವು ಇಲಾಖೆಯ ಅಧಿಕಾರಿಗಳು ಪಿಲಕಲ್ ಗ್ರಾಮವನ್ನೇ ನೋಡಿಲ್ಲ. ಇಲ್ಲಿನ ಕುಟುಂಬಗಳಿಗೆ ಪಡಿತರ ಚೀಟಿ ಇಲ್ಲ, ವೃದ್ಧರಿದ್ದರೂ ಕೇಳವವರಿಲ್ಲ. ಕುಡಿಯಲು ನೀರಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ಗ್ರಾಮದ ಪಕ್ಕದಲ್ಲಿ ಹರಿಯುವ ಹಳ್ಳದ ನೀರೇ ಗತಿ. ಕೆಲವು ಕಟುಂಬಗಳು ಜಮೀನಿನಲ್ಲಿ ಹಾಕಲಾಗಿರುವ ಬೋರ್‌ವೆಲ್‌ಗಳ ಮೂಲಕ ನೀರು ಪಡೆಯುತ್ತಿದ್ದಾರೆ. ಬೇಸಿಗೆ ಬಂದರೆ ಸಾಕು ನೀರಿಗೆ ಬರ.

ಅನಿವಾರ್ಯ ಎಂಬುವಂತೆ ಪಕ್ಕದ ಗ್ರಾಮದವರೆಗೂ ನಡೆದು ಹೋಗಿ ನೀರು ತರುವ ಪರಿಸ್ಥಿತಿ ಮಾತ್ರ ತಲಪುತ್ತಿಲ್ಲ.
ಅರ್ಧ ಕಾಮಗಾರಿ: ಗ್ರಾಮದ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ಮಕ್ಕಳಿದ್ದು ಕನಿಷ್ಠ ಕೊಠಡಿ ಇಲ್ಲ. ವರ್ಷದ ಹಿಂದೆ ಮಂಜೂರಾದ ಮೂರು ಶಾಲಾ ಕೊಠಡಿಗಳ ಕಾಮಗಾರಿ  ಸಂಬಂಧಿಸಿದವರ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿದೆ. ಅನಿವಾರ್ಯವಾಗಿ ಶಿಕ್ಷಕರು ಪ್ರತಿನಿತ್ಯ ನಾಲ್ಕು ಕಿ.,ಈ. ಕಾಲ್ನಡಿಗೆ ಮೂಲಕ ಗ್ರಾಮಕ್ಕೆ ಬಂದು ಆಂಜನೇಯ ದೇವಸ್ಥಾನದ ಬಯಲು ಕಟ್ಟೆಯ ಮೇಲೆ ಐದು ತರಗತಿಗಳಿಗೆ ಪಾಠ ಹೇಳುವ ಪರಿಸ್ಥಿತಿ ಇದೆ.

ದುರದೃಷ್ಟ: ಅಕ್ಷರ ದಾಸೋಹ ಯೋಜನೆ ಶಾಲೆಯಲ್ಲಿ ಅನುಷ್ಠಾನಗೊಂಡಿದೆ. ಅಡುಗೆ ಕೋಣೆ ಇಲ್ಲದ ಕಾರಣ ಅಡುಗೆ ಮಾಡುವವರು ಮನೆಯಲ್ಲಿಯೇ ದಿನನಿತ್ಯ ಬಿಸಿ ಊಟ ತಯಾರಿಸುತ್ತಾರೆ. ಪ್ರತಿನಿತ್ಯ ಮಕ್ಕಳೇ ಅಡುಗೆದಾರಳ ಮನೆಯಿಂದ ಬಿಸಿ ಊಟವನ್ನು ತಲೆ ಮೇಲೆ ಹೊತ್ತು ತಂದು ಊಟ ಮಾಡಬೇಕಾದ ಪರಿಸ್ಥಿತಿ ಇದೆ.
ಲೆಷ್ಟೊ ವರ್ಷಗಳ ನಂತರ ಕಳೆದ ಜೂನ್ ತಿಂಗಳಲ್ಲಿ ಗ್ರಾಮಕ್ಕೆ ಒಂದು ಅಂಗನವಾಡಿ ಕೇಂದ್ರ ಮಂಜೂರಾಗಿದೆ.

ಇಲ್ಲಿನ ಮಕ್ಕಳಿಗೂ  ಅದೇ ಆಂಜನೇಯ ದೇವಸ್ಥಾನದ ಕಟ್ಟೆಯ ಸುತ್ತಮುತ್ತ ಕೂರಿಸಿ ಹಾಕಿ ಪಾಠ ಹೇಳಬೇಕಾಗಿದೆ.
ವಿದ್ಯುತ್ ಸಮಸ್ಯೆ: ಗ್ರಾಮದ ರೈತರ ಜಮೀನುಗಳ ಬೋರ್‌ವೆಲ್‌ಗಳಿಗೆ  ಟ್ರಾನ್ಸ್‌ಫಾರ್ಮರ್ ಅಳವಡಿಸದೆ ಇರುವುದರಿಂದ ವಿದ್ಯುತ್ ಸಮಸ್ಯೆ ಎದುರಾಗಿ ರೈತರ ಬೆಳೆಗಳು ಹಾನಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT