ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಇಕ್ಕಟ್ಟು

Last Updated 8 ಫೆಬ್ರುವರಿ 2016, 7:28 IST
ಅಕ್ಷರ ಗಾತ್ರ

ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟದ ಫಲವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಆರು ತಿಂಗಳಲ್ಲೇ ಮುಜುಗರ ಎದುರಾಯಿತು. ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ತಮ್ಮ ಸಂಪುಟದ ಸಹೋದ್ಯೋಗಿ ಸಂತೋಷ್‌ ಲಾಡ್‌ ಅವರಿಂದ ಸಿದ್ದರಾಮಯ್ಯ ರಾಜೀನಾಮೆ ಪಡೆದರು.

ಲಾಡ್‌ ಪಾಲುದಾರರಾಗಿರುವ ವಿ.ಎಸ್‌.­ಲಾಡ್‌ ಅಂಡ್‌ ಸನ್ಸ್‌ ಕಂಪೆನಿ ವಿರುದ್ಧ ಅರಣ್ಯ ಇಲಾಖೆಯು 2009 ಮತ್ತು 2010ರಲ್ಲಿ ಮೊಕದ್ದಮೆ ದಾಖಲಿಸಿತ್ತು. ಆ ದಾಖಲೆ­ಗಳನ್ನು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.­ಹಿರೇಮಠ ಬಿಡುಗಡೆ ಮಾಡಿ, ಕಂಪೆನಿ ಮಾಡಿರುವ ಎಲ್ಲಾ ಅಕ್ರಮ­ಗಳಿಗೂ ಸಮಾನ ಹೊಣೆ­ಗಾರರಾಗಿರುವ ಲಾಡ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದ್ದರು.

ಇದನ್ನೇ ಪ್ರತಿಪಕ್ಷಗಳು ಗಾಳವಾಗಿ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದರ ಪರಿಣಾಮ ಲಾಡ್‌ ಅವರು 2013ರ ನ.22ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಖಾಸಗಿ ಟಿವಿ ವಾಹಿನಿಯೊಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರ ಮನೆಗೆ ಹೋಗಿ  ಮಾರುವೇಷದ ಕಾರ್ಯಾಚರಣೆ ನಡೆಸಿತ್ತು. ಸಚಿವರ ಪತ್ನಿ ಹಣ ಇರುವ ಪ್ಯಾಕ್‌ ಪಡೆದರು ಎಂದು ಆರೋಪಿಸಲಾಗಿತ್ತು. ಇದನ್ನು 2015ರ ನ.6ರಂದು ಪ್ರಸಾರ ಮಾಡಲಾಯಿತು. ಈ ಘಟನೆ ನಂತರ ಸಚಿವರ ರಾಜೀನಾಮೆಗೆ ಒತ್ತಡ ಹೆಚ್ಚಾಯಿತು. ಸಚಿವರು ತಮ್ಮ ವಿರುದ್ಧದ ಆರೋಪ ಅಲ್ಲಗಳೆದರು. ಸದ್ಯ ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ.

ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರ  ವರ್ಗಾವಣೆಗೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ್‌ ವಿವಾದಕ್ಕೆ ಒಳಗಾದರು. ಸಾರ್ವಜನಿಕರಿಂದ ಒತ್ತಡ ಹೆಚ್ಚಾದ ಮೇಲೆ ಶೆಣೈ ವರ್ಗಾವಣೆಯನ್ನು ಗೃಹ ಇಲಾಖೆ ರದ್ದುಪಡಿಸಿತು.

4 ಬಾರಿ ಸಂಪುಟ ವಿಸ್ತರಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾವಿರ ದಿನದಲ್ಲಿ ನಾಲ್ಕು ಬಾರಿ ತಮ್ಮ ಸಂಪುಟವನ್ನು ವಿಸ್ತರಿಸಿದ್ದಾರೆ. ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದರು.

ಅದರ ನಂತರ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬಂತು. ಕೆಲವೇ ದಿನಗಳಲ್ಲಿ ಎಸ್‌.ಆರ್. ಪಾಟೀಲ್ ಸಂಪುಟ ಸೇರಿದರು.

2014ರ ಜನವರಿಯಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಆರ್‌.ರೋಷನ್‌ ಬೇಗ್‌ ಹಾಗೂ 2015ರ ಅಕ್ಟೋಬರ್‌ನಲ್ಲಿ ಪರಮೇಶ್ವರ್‌ ಸೇರಿದಂತೆ ನಾಲ್ಕು ಮಂದಿ ಸಂಪುಟ ಸೇರಿದರು.

ಸಂಪುಟ ಪುನರ್ ರಚಿಸಬೇಕು ಎನ್ನುವ ಸಿದ್ದರಾಮಯ್ಯ ಅವರ ಪ್ರಯತ್ನಕ್ಕೆ ಹೈಕಮಾಂಡ್‌ ಇನ್ನೂ ಒಪ್ಪಿಗೆ ನೀಡಿಲ್ಲ. ರಾಜ್ಯ ಸಚಿವರಾಗಿದ್ದ ಉಮಾಶ್ರೀ ಅವರಿಗೆ ಇತ್ತೀಚೆಗೆ ಸಂಪುಟ ದರ್ಜೆ ಸ್ಥಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT