ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಮಹಿಮೆಗೆ ಮಹಿಮ ಶ್ಲಾಘನೆ!

Last Updated 24 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. ಅವರು ಜನಸಾಮಾನ್ಯರಿಗೆ ಕೊಟ್ಟ ಭರವಸೆಯ ರೀತಿಯಲ್ಲಿ ನಡೆದುಕೊಂಡರೆ 20 ವರ್ಷ ಅಧಿಕಾರದಲ್ಲಿ ಇರೋದು ಗ್ಯಾರಂಟಿ!.ಹೀಗೆಂದು ಬಿಜೆಪಿ ‘ಮಹಿಮೆ’ಯನ್ನು ‘ಹೊಗಳಿ’ದವರು ಮಾಜಿ ಶಾಸಕ ಮಹಿಮ ಜೆ. ಪಟೇಲ್.
ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ನಡೆದುಕೊಳ್ಳಲಿ. ಆಗ ನಮಗೂ ಏನೂ ಹೇಳಲು ಉಳಿದಿರುವುದಿಲ್ಲ. ಯಡಿಯೂರಪ್ಪ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅದು ಇನ್ನಷ್ಟು ಆಗಬೇಕು ಎಂದು ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಕಾರ್ಯವೈಖರಿಗೆ ‘ಪ್ರಶಂಸೆ’ ವ್ಯಕ್ತಪಡಿಸಿದರು.

ಸರ್ಕಾರದ ‘ಸಾಧನಾ ಸ್ತುತಿ’ಯ ಸಾರಾಂಶ ಹೀಗಿದೆ...
ಯಡಿಯೂರಪ್ಪ ಬೈಸಿಕಲ್ ಮೇಲೆ ಓಡಾಡಿ ಪಕ್ಷ ಕಟ್ಟಿದವರು. ಅವರಿಗೆ ತಾವು ವಿಮಾನದಲ್ಲಿ ಓಡಾಡುತ್ತೇನೆಂಬ ಕಲ್ಪನೆಯೂ ಇರಲಿಕ್ಕಿಲ್ಲ. ಆದರೆ, ಈಗ ವಿಮಾನ ನಿಲ್ದಾಣ ನಿರ್ಮಿಸುತ್ತೇನೆ ಎನ್ನುತ್ತಿದ್ದಾರೆ. ಆದರೆ, ವಿಮಾನ ನಿಲ್ದಾಣಕ್ಕೆ ಹೋಗಲು ರಸ್ತೆಗಳೂ ಬೇಕು. ಮೊದಲು ರಾಜ್ಯದ ರಸ್ತೆ ಅಭಿವೃದ್ಧಿ ಮಾಡಲಿ. ರಸ್ತೆ ಅಭಿವೃದ್ಧಿ ನಿಗಮ ಮಾಡಿ, ಅದಕ್ಕೆ ` 25 ಸಾವಿರ ಕೋಟಿ ನಿಗದಿಪಡಿಸಿದ್ದಾರೆ. ಆದರೆ, ಕೇವಲ ` 3,000 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಖುಷ್ಕಿ ಜಮೀನಿನವರಿಗೆ ` 1,500 ಪರಿಹಾರ ಕೊಡಲಾಗುತ್ತಿದೆ. ಅಂತೆಯೇ ನೀರಾವರಿ ಜಮೀನಿನವರಿಗೂ ಕೊಡಲಿ. ಯಾಕೆಂದರೆ ಕೃಷಿಯಿಂದ ಬರುವ ಲಾಭ ಎಷ್ಟು ಎಂಬುದು ಅವರಿಗೂ ಗೊತ್ತಿದೆ ಎಂದರು.ಅಂಗನವಾಡಿಗಳಿಗೆ ಪೂರೈಸುವ ಆಹಾರ ಪ್ಯಾಕೆಟ್‌ಗಳು ಕಳಪೆಯಾಗಿವೆ. ಯಾರೋ ಅಧಿಕಾರಿಗಳು ಇದನ್ನೆಲ್ಲಾ ಹೇಳಿ ಯಾರಿಗೋ ಟೆಂಡರು ನೀಡಿ, ಮುಖ್ಯಮಂತ್ರಿಯ ದಿಕ್ಕು ತಪ್ಪಿಸಿದ್ದಾರೆ ಎಂದರು.

ಎಸ್.ಎಂ. ಕೃಷ್ಣ ಸರ್ಕಾರ ವಿದ್ಯುತ್ ಪೂರೈಕೆಗೆ ಶೇ. 11ರಷ್ಟು, ಗ್ರಾಮ ನೈರ್ಮಲ್ಯಕ್ಕೆ ಶೇ. 9, ಕುಡಿಯುವ ನೀರಿಗೆ ಶೇ. 40ರಷ್ಟು ಅನುದಾನ ನಿಗದಿಪಡಿಸಿತ್ತು. ಈಗಿನ ರೈತಪರ ಸರ್ಕಾರ ನೀರಾವರಿಗೆ ಕೇವಲ ಶೇ. 14, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಶೇ. 5, ವಿದ್ಯುತ್ ಪೂರೈಕೆಗೆ ಶೇ. 9ರಷ್ಟು ಅನುದಾನ ಕೊಟ್ಟಿದೆ. ಅಲ್ಲದೇ ಕೇಂದ್ರ ಸರ್ಕಾರದ ‘ಪುರ’ (ನಗರ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶಕ್ಕೆ ಒದಗಿಸುವುದು) ಯೋಜನೆಯನ್ನು ಸರಿಯಾಗಿ ಜಾರಿಗೆ ತಂದಿಲ್ಲ ಎಂದು ನುಡಿದರು.

ಸಿಎಂಗೆ ಅನುಭವದ ಕೊರತೆ’
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಡಳಿತ ಅನುಭವದ ಕೊರತೆಯಿದ್ದು, ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಮಹಿಮ ಜೆ. ಪಟೇಲ್ ಸಲಹೆ ನೀಡಿದರು.
ಪ್ರಾಮಾಣಿಕವಾಗಿ ಆಡಳಿತ ನಡೆಸಿದರೆ ಜನರೂ ಒಪ್ಪಿಕೊಳ್ಳುತ್ತಾರೆ ಎಂದರು.

ಮಠ ಮಾನ್ಯಗಳಿಗೂ ಕೊಡಿ: ರಾಜ್ಯದಲ್ಲಿ ಸುಮಾರು 4 ಸಾವಿರ ಮಠಗಳಿವೆ. ಪ್ರತಿಯೊಂದಕ್ಕೂ ತಲಾ ` 10 ಕೋಟಿ ಕೊಡಲಿ. ಅಂತೆಯೇ ದೇವಸ್ಥಾನಗಳಿಗೂ ಕೊಡಲಿ. ಅದರಲ್ಲಿ ಯಾವುದೇ ತಾರತಮ್ಯ ಬೇಡ ಎಂದು ಹೇಳಿದರು.ಗೃಹ ನಿರ್ಮಾಣ ಹಗರಣ: ಬೆಂಗಳೂರಿನಲ್ಲಿ 103 ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿಗಳಿವೆ. ಅವುಗಳ ನಿಯಮ ಪ್ರಕಾರ ಸೊಸೈಟಿಯ ಸದಸ್ಯರಿಗೆ ಮಾತ್ರ ಮನೆ ಕೊಡಬೇಕು ಎಂದರು.

ಈ ಎಲ್ಲ ಆರೋಪಗಳ ಬಗ್ಗೆ ಸಮಗ್ರವಾದ ಮಾಹಿತಿ ಕಲೆ ಹಾಕಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸುವುದಾಗಿ ಹೇಳಿದರು.ಪಾಲಿಕೆ ವಿರೋಧ ಪಕ್ಷದ ನಾಯಕ ದಿನೇಶ್ ಕೆ. ಶೆಟ್ಟಿ, ಬಿ.ಎಚ್. ವೀರಭದ್ರಪ್ಪ, ಬಿ.ಜಿ. ನಾಗರಾಜ್, ಶಿವಕುಮಾರ್, ಬಸವರಾಜ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT