ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ಒಕ್ಕಲಿಗರ ಪ್ರತಿಭಟನೆ

ಆದಿಚುಂಚನಗಿರಿ ಮಠದ ಮೇಲಿನ ದಾಳಿಗೆ ಖಂಡನೆ
Last Updated 24 ಜುಲೈ 2013, 6:43 IST
ಅಕ್ಷರ ಗಾತ್ರ

ತುಮಕೂರು: ಆದಿಚುಂಚನಗಿರಿ ಶಾಖಾ ಮಠದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಹಾಗೂ ಪಟ್ಟನಾಯಕನಹಳ್ಳಿ ಮಠದ ವಿವಾದ ಖಂಡಿಸಿ ಜಿಲ್ಲಾ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಒಕ್ಕಲಿಗರು ಬೃಹತ್ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಒಕ್ಕಲಿಗರು ನಗರದ ಟೌನ್‌ಹಾಲ್ ವೃತ್ತದಲ್ಲಿ ಜಮಾಯಿಸಿದರು. ಒಕ್ಕಲಿಗರ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದೌರ್ಜನ್ಯ ನಡೆಸುತ್ತಿವೆ, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಆದಿಚುಂಚನಗಿರಿ ಮಠಾಧೀಶರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ, ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ಮಠಾಧೀಶ ನಂಜಾವಧೂತ ಸ್ವಾಮೀಜಿ ಭಾವಚಿತ್ರಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು.

ಟೌನ್‌ಹಾಲ್ ವೃತ್ತದಲ್ಲಿ ತಮಟೆ ಬಡಿಯುತ್ತಾ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಒಕ್ಕಲಿಗರ ವಿರೋಧಿ ಎಂದು ಜರಿದರು. ನಗರಸಭೆ ಮುಂಭಾಗದ ಆವರಣದಲ್ಲಿ ಎಲೆರಾಂಪುರ ಕುಟಂಚಿಗರ ಮಠದ ಹನುಮಂತನಾಥ ಸ್ವಾಮೀಜಿ, ಕುಣಿಗಲ್‌ನ ಅರೆಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ಪ್ರತಿಭಟನಾಕಾರರೊಂದಿಗೆ ಸಾಕಷ್ಟು ಸಮಯ ಕಳೆದರು.

ನಗರದ ಟೌನ್‌ಹಾಲ್ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಒಕ್ಕಲಿಗ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಒಕ್ಕಲಿಗರ ಶ್ರದ್ಧಾ ಕೇಂದ್ರವಾದ ಆದಿಚುಂಚನಗಿರಿ ಮಠದ ಮೇಲೆ ದುರುದ್ದೇಶದಿಂದ ದಾಳಿ ನಡೆಸಲಾಗಿದೆ. ದಾಳಿ ಹಿಂದೆ ಸರ್ಕಾರದ ರಾಜಕೀಯ ಸಂಚು ಅಡಗಿದೆ. ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ವಿರುದ್ಧ ಪ್ರಬಲ ಜಾತಿಯ ಮುಖಂಡರು ಷಡ್ಯಂತ್ರ ರೂಪಿಸುತ್ತಿದ್ದಾರೆ. ಮಠದ ಆಸ್ತಿ ಕಬಳಿಸಲು ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಒಕ್ಕಲಿಗರನ್ನು ಮೂಲೆಗುಂಪು ಮಾಡುವ ಕೆಲಸ ನಡೆಯುತ್ತಿದೆ. ಒಕ್ಕಲಿಗ ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ವಿಧಾನಸೌಧದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭಾವಚಿತ್ರವನ್ನು ರಾಜಕೀಯ ಕಾರಣಗಳಿಗಾಗಿ ತೆಗೆಯಲಾಗಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ ಬಿ.ಸತ್ಯನಾರಾಯಣ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಚೌದ್ರಿಶಂಕರ್, ಉಪಾಧ್ಯಕ್ಷ ಕೆ.ಎಲ್.ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೊಂಡಜ್ಜಿ ವಿಶ್ವನಾಥ್, ಆನಂದರವಿ, ಸಿ.ಆರ್.ಉಮೇಶ್, ಸರ್ಪ ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಪರಮೇಶ್ವರಪ್ಪ, ಮುಖಂಡರಾದ ಯಲಚವಾಡಿ ನಾಗರಾಜ್, ಬೋರೇಗೌಡ, ಬ್ಯಾಟರಂಗೇಗೌಡ, ಬೆಳ್ಳಿಲೋಕೇಶ್ ನರಸೇಗೌಡ, ಸಂತೋಷ್ ಜಯಚಂದ್ರ, ಹನುಮಂತರಾಯಪ್ಪ, ಪುಟ್ಟೀರಪ್ಪ, ರಾಜಣ್ಣ, ದೊಡ್ಡಲಿಂಗಪ್ಪ, ಬೆಲವತ್ತ ಜಗದೀಶ್, ಭೈರವೇಶ್ವರಿ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಂಚಾರ ಅಸ್ತವ್ಯಸ್ತ: ಪ್ರತಿಭಟನೆಯಿಂದಾಗಿ ಬಿ.ಎಚ್.ರಸ್ತೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಶಾಂತಿಯುತ ಪ್ರತಿಭಟನೆಗೆ ಹೆಚ್ಚಿನ ಒತ್ತು ನೀಡಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT