ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಹಸ್ತಕ್ಷೇಪ ಬೇಡ

Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಹಿಂದಿದ್ದ ಸರ್ಕಾರದ ಎಡಬಿಡಂಗಿ ನೀತಿಯಿಂದಾಗಿ ಮೈಸೂರು ರಂಗಾಯಣದ ಚಟುವಟಿಕೆಗಳು ಬಹುಪಾಲು ನಿಷ್ಕ್ರಿಯವಾಗಿದ್ದವು. ಹೊಸ ಸರ್ಕಾರ `ರಂಗಸಮಾಜ'ಕ್ಕೆ ಸದಸ್ಯರನ್ನು ನೇಮಿಸುವ ಮೂಲಕ ರಂಗಾಯಣಕ್ಕೆ ಚಾಲನೆ ನೀಡಿದೆ.

ಉತ್ತಮ ನಟಿ, ನಟ, ನಾಟಕಕಾರ, ಕಲಾನಿರ್ದೇಶಕ, ಸಂಘಟಕರನ್ನೊಳಗೊಂಡ ರಂಗಸಮಾಜದ ಎಂಟು ಸದಸ್ಯರು ಕರ್ನಾಟಕದ ಎಲ್ಲಾ ಪ್ರದೇಶಗಳನ್ನು ಹೆಚ್ಚುಕಡಿಮೆ ಪ್ರತಿನಿಧಿಸಿದ್ದಾರೆ. ಹಾಗಾಗಿ `ಕರ್ನಾಟಕ ನಾಟಕ ರಂಗಾಯಣ'ಗಳನ್ನು ಚಾಲನೆಗೊಳಿಸುವ ನೀತಿ ನಿರೂಪಣಾ ಸಮಿತಿಯಂತಿರುವ ರಂಗಸಮಾಜಕ್ಕೆ ಇದೊಂದು ಸಮಂಜಸ ಆಯ್ಕೆ.

ಸಂಸ್ಕೃತಿ ಇಲಾಖೆ ಸಚಿವರು, ಆಯುಕ್ತರನ್ನೂ ಆಹ್ವಾನಿತ ಸದಸ್ಯರಾಗಿ ಹೊಂದಿರುವ ರಂಗಸಮಾಜವು ರಾಜ್ಯದ ಎಲ್ಲ ರಂಗಾಯಣಗಳ ನಿರ್ದೇಶಕರ ನೇಮಕಕ್ಕೆ ಮೂರು ಹೆಸರುಗಳನ್ನು ಸೂಚಿಸುವ ಅಧಿಕಾರವನ್ನೂ ಹೊಂದಿದೆ. ಮಂಗಳವಾರ ರಂಗಸಮಾಜದ ಪ್ರಥಮ ಸಭೆ ಬೆಂಗಳೂರಿನಲ್ಲಿ ನಡೆಯಿತು. ಇಲ್ಲಿ ತುರ್ತಾದ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮೈಸೂರು ರಂಗಾಯಣದ 18 ಕಲಾವಿದರ ಪೈಕಿ ತಲಾ ಆರು ಕಲಾವಿದರನ್ನು ಹೊಸದಾಗಿ ಶುರುವಾಗಿರುವ ಶಿವಮೊಗ್ಗ ಹಾಗೂ ಧಾರವಾಡಕ್ಕೆ ವರ್ಗಮಾಡಿದ್ದನ್ನೇ ದೊಡ್ಡ ವಿವಾದವಾಗಿ ಮಾಡಿದವರು ರಂಗಾಯಣದ ಕಲಾವಿದರು ಹಾಗೂ ನಿರ್ದೇಶಕರು. ವರ್ಗಾವಣೆ ನಿರ್ಣಯವನ್ನು ರಂಗಸಮಾಜವೇ ಕೈಗೊಂಡಿತ್ತು.

ನಾಲ್ಕು ಪ್ರಾದೇಶಿಕ ರಂಗಾಯಣಗಳು ಜನ್ಮತಾಳಬೇಕು ಎನ್ನುವುದು ರಂಗಾಯಣದ ರೂವಾರಿ ಬಿ.ವಿ.ಕಾರಂತರ ಆಶಯವೂ ಆಗಿದ್ದರಿಂದ, ಮೈಸೂರಿನ ಪರಿಣತ ಕಲಾವಿದರಿಗೆ ಧಾರವಾಡ ಹಾಗೂ ಶಿವಮೊಗ್ಗದಲ್ಲಿ ರಂಗಾಯಣವನ್ನು ಕಟ್ಟಿಬೆಳೆಸುವ ಅವಕಾಶವೂ ಇತ್ತು. ಅದನ್ನವರು ತಾವಾಗಿಯೇ ಕಳೆದುಕೊಂಡರು. ಹೊಸದಾಗಿ ಶುರುಮಾಡಿದ ರಂಗಾಯಣಗಳಲ್ಲಿ ಇಂತಹ ಪ್ರತಿಭೆಗಳನ್ನು ಬಳಸಿಕೊಳ್ಳುವ ಸಮರ್ಥ ನಿರ್ದೇಶಕರೂ ಇರಲಿಲ್ಲ, ಸರ್ಕಾರವೂ ಅದಕ್ಕೆ ಪೂರಕವಾಗಿ ಸ್ಪಂದಿಸಲಿಲ್ಲ. ಹಾಗಾಗಿ ಕಳೆದ ಕೆಲವು ತಿಂಗಳು ರಂಗಾಯಣಗಳು ಸ್ಥಗಿತಗೊಂಡಂತೆಯೇ ಇದ್ದವು. ಏನೇ ಇರಲಿ, ಈ ವಿವಾದಕ್ಕೆ ಮಂಗಳ ಹಾಡುವಂತೆ 12 ಕಲಾವಿದರನ್ನು ಇದೀಗ ಮೈಸೂರು ರಂಗಾಯಣಕ್ಕೆ ವಾಪಸು ಕರೆಸಿಕೊಳ್ಳಲಾಗಿದೆ.

ರಂಗಾಯಣಗಳನ್ನು ಮುನ್ನಡೆಸಲು ಸಮರ್ಥ ನಿರ್ದೇಶಕರು ಬೇಕು. ಸಾಂಪ್ರದಾಯಿಕ ಹಾಗೂ ಆಧುನಿಕ ಅಭಿನಯ ಸಿದ್ಧಾಂತಗಳ ಪರಿಚಯ ಅವರಿಗೆ ಇರಬೇಕು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಅಥವಾ ಅದಕ್ಕೆ ತತ್ಸಮಾನ ರಂಗಶಾಲೆಗಳಲ್ಲಿ ತರಬೇತಿ ಅಥವಾ ಅಭಿನಯ, ಸಂಘಟನೆಯಲ್ಲಿ ಸುದೀರ್ಘ ಅವಧಿಯ ಅನುಭವ ಹೊಂದಿದ ತಾಂತ್ರಿಕ ಪರಿಣತರೇ ಈ ಹುದ್ದೆಗೆ ಸೂಕ್ತ. ಮೈಸೂರು ರಂಗಾಯಣವನ್ನು ಇದುವರೆಗೂ ಅಂತಹ ಸಮರ್ಥರು ಮುನ್ನಡೆಸಿದ್ದಾರೆ. ಇದೀಗ ರಂಗಸಮಾಜವು ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಸೂಚಿಸಿರುವ ಮೂವರೂ ಅರ್ಹರೇ ಆಗಿದ್ದಾರೆ. ಸರ್ಕಾರ ಈ ಮೂವರಲ್ಲೇ ಒಬ್ಬರನ್ನು ಶೀಘ್ರ ನೇಮಕ ಮಾಡಬೇಕು. ಸಂಸ್ಕೃತಿ ಸಚಿವರೂ ಈ ನಿರ್ಣಯಕ್ಕೆ ಭಾಗಿಯಾಗಿದ್ದರಿಂದ ಮತ್ತಾವ ಹಸ್ತಕ್ಷೇಪವನ್ನೂ ಮಾಡಬಾರದು. ಹಿಂದೆ ಅಂತಹ ಹಸ್ತಕ್ಷೇಪ ಆಗಿದ್ದರಿಂದಲೇ ಯಾರಾದರೂ ರಂಗಾಯಣದ ನಿರ್ದೇಶಕರಾಗಬಹುದು ಎಂಬ ಸನ್ನಿವೇಶ ಉಂಟಾಗಿತ್ತು.

ಗುಲ್ಬರ್ಗ ರಂಗಾಯಣ ಸ್ಥಾಪನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ ಸರ್ಕಾರಿ ಆದೇಶ ಇನ್ನೂ ಆಗಿಲ್ಲ. ಹಾಗಾಗಿ ಸದ್ಯಕ್ಕೆ ಗುಲ್ಬರ್ಗ ರಂಗಾಯಣಕ್ಕೆ ನಿರ್ದೇಶಕರ ಹೆಸರನ್ನು ಸೂಚಿಸುವ ಅಧಿಕಾರವನ್ನು ರಂಗಸಮಾಜ ಹೊಂದಿಲ್ಲ. ಶೀಘ್ರವೇ ಮತ್ತೊಂದು ಸಭೆ ಸೇರಿ ಧಾರವಾಡ, ಶಿವಮೊಗ್ಗ ರಂಗಾಯಣಗಳಿಗೂ ಅರ್ಹರ ಹೆಸರುಗಳನ್ನು ಸೂಚಿಸಬೇಕು. ಅವರಲ್ಲೇ ಒಬ್ಬರ ಹೆಸರನ್ನು ಸರ್ಕಾರ ಒಪ್ಪಿ ಶೀಘ್ರ ನೇಮಕ ಮಾಡುವ ಮೂಲಕ ರಂಗಾಯಣಗಳಿಗೆ ಚಾಲನೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT