ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಯೋಜನೆಗೆ ಕೋರ್ಟ್‌ತಡೆ

Last Updated 14 ಡಿಸೆಂಬರ್ 2012, 20:00 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ನ ಐತಿಹಾಸಿಕ ಕೆಂಪೇಗೌಡ ಗೋಪುರದ ಆಗ್ನೇಯ ದಿಕ್ಕಿನಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವ ಸರ್ಕಾರದ ಯೋಜನೆಗೆ ಹೈಕೋರ್ಟ್ ತಡೆ ನೀಡಿದೆ. ಲಾಲ್‌ಬಾಗ್‌ನಲ್ಲಿ ಯಥಾಸ್ಥಿತಿ ಕಾಪಾಡುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ ಶುಕ್ರವಾರ ಆದೇಶಿಸಿದೆ.

ಲಾಲ್‌ಬಾಗ್‌ನಲ್ಲಿ 80 ಲಕ್ಷ ರೂಪಾಯಿ ವೆಚ್ಚಮಾಡಿ, ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ತೋಟಗಾರಿಕಾ ಇಲಾಖೆಯ ಯೋಜನೆ ಆ ಪ್ರದೇಶದಲ್ಲಿ ಜೈವಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಈ ಯೋಜನೆಯನ್ನು ಕಾರ್ಯಗತಗೊಳಿಸಿದರೆ, `ಕರ್ನಾಟಕ ಉದ್ಯಾನಗಳು, ಆಟದ ಮೈದಾನಗಳು ಮತ್ತು ಬಯಲು ಪ್ರದೇಶಗಳ (ರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ'ಯನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ದೂರಿ, ವಕೀಲ ಎಸ್. ವಾಸುದೇವ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಯೋಜನೆಯನ್ನು ಸಾರ್ವಜನಿಕರು ವಿರೋಧಿಸಿದಾಗ, ಪರಿಸರವಾದಿಗಳು, ಸಸ್ಯ ವಿಜ್ಞಾನಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಸಮಿತಿಯ ಸದಸ್ಯರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿಲ್ಲ. ಸಮಿತಿ ನೀಡಿರುವ ವರದಿ ಏನು ಎಂಬುದೂ ತಿಳಿದಿಲ್ಲ ಎಂದು ವಾಸುದೇವ ಅವರು ಅರ್ಜಿಯಲ್ಲಿ ದೂರಿದ್ದಾರೆ.

ಲಾಲ್‌ಬಾಗ್ ಆವರಣದಲ್ಲಿರುವ ಕೆಂಪೇಗೌಡ ಗೋಪುರವನ್ನು ಪ್ರಾಚ್ಯವಸ್ತು ಇಲಾಖೆ, ಐತಿಹಾಸಿಕ ಸ್ಮಾರಕ ಎಂದು ಘೋಷಿಸಿದೆ. ಇದರ ಸುತ್ತ 300 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವುದು ತಪ್ಪು ಎಂದು ವಾಸುದೇವ ಅವರು ವಾದಿಸಿದರು. ವಿಚಾರಣೆಯನ್ನು ಜನವರಿ 16ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT