ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗೆ ತತ್ವಾರ!

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ:  ರಾಜ್ಯದ ಜಿಲ್ಲಾ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿಯೂ ಔಷಧಿಗೆ ತತ್ವಾರ ಉಂಟಾಗಿದೆ! ಒಂಬತ್ತು ತಿಂಗಳಿಂದ ಆರೋಗ್ಯ ಇಲಾಖೆಯಿಂದ ಅಗತ್ಯ ಔಷಧಿ ಪೂರೈಕೆ ಆಗದಿರುವ ಹಿನ್ನೆಲೆಯಲ್ಲಿ, ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.

ರಾಜ್ಯದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ)ದ ಅಡಿಯಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯರಿಗೆ 14 ತಿಂಗಳಿಂದ ಔಷಧಿ ಕೊರತೆ ಆಗಿರುವ ಬಗ್ಗೆ `ಪ್ರಜಾವಾಣಿ~ಯಲ್ಲಿ ಪ್ರಕಟವಾಗಿದ್ದ ವರದಿ ಗಮನಿಸಿದ ಸರ್ಕಾರಿ ಆಸ್ಪತ್ರೆಗಳ ಕೆಲ ವೈದ್ಯರು, ತಮಗೂ ಏಪ್ರಿಲ್‌ನಿಂದ ಔಷಧಿ ಸರಬರಾಜಿನಲ್ಲಿ ತೊಂದರೆ ಉಂಟಾಗಿರುವುದರ ಬಗ್ಗೆ ಮಾಹಿತಿ ನೀಡಿದ್ದರು.

ಸಕಾಲಕ್ಕೆ ಟೆಂಡರ್ ಪ್ರಕ್ರಿಯೆ ನಡೆಸದೇ ಇರುವುದು, ಸಂಬಂಧಿಸಿದ ಅಧಿಕಾರಿಗಳ (ಆರೋಗ್ಯ ಸೇವೆ- ಲಾಜಿಸ್ಟಿಕ್ ವಿಭಾಗದಲ್ಲಿ)ನ್ನು ಪದೇ ಪದೇ ವರ್ಗಾವಣೆ ಮಾಡುತ್ತಿರುವುದು ಮತ್ತಿತರ `ತಾಂತ್ರಿಕ ಕಾರಣ~ಗಳಿಂದ ಆಸ್ಪತ್ರೆಗಳಿಗೆ ಔಷಧಿ ಪೂರೈಕೆಯಾಗಿಲ್ಲ. ಇದರಿಂದಾಗಿ ನಾವು ರೋಗಿಗಳ ಆಕ್ರೋಶಕ್ಕೆ ಗುರಿಯಾಗಬೇಕಾದ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದ್ದರು.

ಬಡ ಮತ್ತು ಮಧ್ಯಮ ವರ್ಗದವರು ಆರೋಗ್ಯ ಸಂಬಂಧಿ ಸೇವೆಗಳಿಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಅಲ್ಲಿ, ಉಚಿತ ಚಿಕಿತ್ಸೆ ಮತ್ತು ಔಷಧಿ ಸಿಗುತ್ತದೆ ಎಂಬುದು ಇದಕ್ಕೆ ಕಾರಣ. ಆದರೆ, ಜೀವನಾವಶ್ಯಕ ಔಷಧಿಗಳು ಸಹ ಸರಬರಾಜು ಆಗದೇ ಇರುವ ಹಿನ್ನೆಲೆಯಲ್ಲಿ, ರೋಗಿಗಳು ಔಷಧಿಗಳನ್ನು ಹೊರಗಿನ ಮೆಡಿಕಲ್ ಸ್ಟೋರ್‌ಗಳಲ್ಲಿ ದುಬಾರಿ ಬೆಲೆ ತೆತ್ತು ತರಬೇಕಾದ ಸ್ಥಿತಿ ಎದುರಾಗಿದೆ.

`ಪ್ರತಿ ವರ್ಷ ಆಸ್ಪತ್ರೆಗಳಿಗೆ ಏಪ್ರಿಲ್‌ನಲ್ಲಿ ಔಷಧಿಗಳನ್ನು ಪೂರೈಸಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಆದರೆ, ಕಳೆದ ವರ್ಷ ಇದ್ಯಾವುದೂ ಸಕಾಲಕ್ಕೆ ನಡೆಯಲಿಲ್ಲ.
 
 ನವೆಂಬರ್‌ಗೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಜನವರಿ ಅರ್ಧ ಕಳೆಯುತ್ತಿದ್ದರೂ ಔಷಧಿ ದೊರೆತಿಲ್ಲ. ಕೆಲ ಆಸ್ಪತ್ರೆಗಳಲ್ಲಿ, ಬಳಕೆದಾರರ ನಿಧಿಯನ್ನು ಬಳಸಿಕೊಂಡು ಸ್ಥಳೀಯವಾಗಿ ಒಂದಷ್ಟು ಔಷಧಿ ಖರೀದಿಸುತ್ತಿದ್ದಾರೆ. ಇದು `ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ~ಯಂತಾಗಿದೆ. ಹೀಗಾಗಿ, ಕೆಲವು ಸಂದರ್ಭಗಳಲ್ಲಿ ಔಷಧಿಯನ್ನು ಹೊರಗಿನಿಂದ ತರುವಂತೆ ಚೀಟಿ ಬರೆದುಕೊಡಬೇಕಾದ ಸ್ಥಿತಿ ಎದುರಾಗಿದೆ~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯಾಧಿಕಾರಿ ಒಬ್ಬರು ಮಾಹಿತಿ ನೀಡಿದರು.

`ಪ್ರಮುಖವಾಗಿ ಜೀವನಾವಶ್ಯಕ ಔಷಧಿಗಳಿಗೂ ತತ್ವಾರ ಉಂಟಾಗಿದೆ. ಗ್ಲೂಕೋಸ್‌ಗಳು, ಬ್ಯಾಂಡೇಜ್‌ಗಳು, ಕೈಗವಸು (ಗ್ಲೌಸ್), ರೋಗ ನಿರೋಧಕ ಔಷಧಿಗಳು (ಆಂಟಿಬಯೋಟಿಕ್), ಸಿರಿಂಜ್‌ಗಳು ಸಹ ಸರಬರಾಜಾಗಿಲ್ಲ. ಹಿರಿಯ ಅಧಿಕಾರಿಗಳು ಶೀಘ್ರವೇ ದೊರೆಯಲಿದೆ ಎನ್ನುತ್ತಿದ್ದಾರೆ. ನಿರಂತರವಾಗಿ, ಸ್ಥಳೀಯವಾಗಿ ಖರೀದಿಸಲು ಹಣಕಾಸು ಲಭ್ಯತೆ ಇರುವುದಿಲ್ಲ~ ಎಂದು ತಿಳಿಸುತ್ತಾರೆ ಅವರು.

ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾ ಆಸ್ಪತ್ರೆಗಳಿವೆ, ಹತ್ತಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇಲ್ಲಿ, ಔಷಧಿ ಕೊರತೆ ಉಂಟಾಗಿರುವುದು ನೇರವಾಗಿ ಬಡ ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಸಮಸ್ಯೆ ಪರಿಹರಿಸಿ ಔಷಧಿ ಪೂರೈಸಬೇಕು ಎಂಬ ಒತ್ತಾಯ ಅವರದು.

`ಕೆಲ ತಿಂಗಳಿಂದ ಔಷಧಿ ಸರಬರಾಜು ಸಮರ್ಪಕವಾಗಿಲ್ಲ. ನಾವು, ಸ್ಥಳೀಯವಾಗಿ 15 ದಿನಗಳಿಗೆ ಆಗುವಷ್ಟು ಕೆಲ ಔಷಧಿಗಳನ್ನು ಖರೀದಿಸುತ್ತಿದ್ದೇವೆ. ವಾಸ್ತವ ಸಂಗತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದೇವೆ. ಕೆಲ ದಿನಗಳ ಹಿಂದೆ, ಸ್ವಲ್ಪ ಔಷಧಿ ಬಂದಿದೆ. ಇಲಾಖೆ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಗೊತ್ತಾಗಿದೆ.

ಶೀಘ್ರವೇ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ~ ಎಂದು ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಪರಶುರಾಮಪ್ಪ ಪ್ರತಿಕ್ರಿಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT