ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ನೇಹ ಕ್ಲಿನಿಕ್

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಪ್ರೌಢಾವಸ್ಥೆಗೆ ಕಾಲಿಡುವವರ ತವಕ-ತಲ್ಲಣ, ಮಾನಸಿಕ ತಳಮಳಗಳಿಗೆ ಸ್ಪಂದಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ) ಅಡಿಯಲ್ಲಿ `ಸ್ನೇಹ ಕ್ಲಿನಿಕ್~ ಆರಂಭಿಸಲಾಗಿದೆ.

ಬಹುತೇಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಈ ಸೇವೆ ಲಭ್ಯ. 11ರಿಂದ 19 ವಯೋಮಾನದವರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಮತ್ತು ಸೂಕ್ತ ಮಾರ್ಗದರ್ಶನ ನೀಡಲು ಪ್ರತಿ ಗುರುವಾರ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ `ಸ್ನೇಹ ಕ್ಲಿನಿಕ್~ ನಡೆಸಲಾಗುತ್ತಿದೆ.
 
ಪ್ರೌಢಾವಸ್ಥೆಯ ಸ್ಥಿತಿಗತಿ ಅರಿಯಲು, ಮಾನಸಿಕ ಹಾಗೂ ದೈಹಿಕ ವ್ಯತ್ಯಾಸಗಳನ್ನು ತಿಳಿದುಕೊಳ್ಳಲು ಮತ್ತು ತುಮುಲಗಳನ್ನು ಎದುರಿಸುವುದು ಹೇಗೆ ಎಂಬುದನ್ನು `ಸ್ನೇಹ ಕ್ಲಿನಿಕ್~ನಲ್ಲಿ ಹೇಳಿಕೊಡಲಾಗುವುದು.

ಈ ಕ್ಲಿನಿಕ್‌ನಲ್ಲಿ ಹದಿಹರೆಯದ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಸೂಕ್ಷ್ಮವಾಗಿ ಗಮನಿಸಿ, ಆರೋಗ್ಯ ಕಾರ್ಯಕರ್ತರು ಆಪ್ತ ಸಮಾಲೋಚನೆ (ಕೌನ್ಸೆಲಿಂಗ್) ನಡೆಸುತ್ತಾರೆ. ದೇಹದ ಬೆಳವಣಿಗೆಯ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸಿಕೊಡುತ್ತಾರೆ. ಚಿಕಿತ್ಸೆ ಅಗತ್ಯವಿದ್ದಲ್ಲಿ ಪಡೆಯುವಂತೆ ಸಲಹೆಯನ್ನು ನೀಡುತ್ತಾರೆ.

ಪ್ರೌಢಾವಸ್ಥೆಯಲ್ಲಿ ವ್ಯಕ್ತಿಯ ಹಾರ್ಮೋನುಗಳಲ್ಲಿ ಏರುಪೇರುಗಳಾಗುತ್ತವೆ. ದೈಹಿಕ, ಮಾನಸಿಕ, ನಡವಳಿಕೆಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಸಂಯಮ ಮೀರದೆ, ಚಿಂತೆಗೆ ಒಳಗಾಗದೆ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ. ಆಗ ಉತ್ತಮ ಭವಿಷ್ಯ ಕಂಡುಕೊಳ್ಳಲಾಗುವುದು.
 
ಈ ನಿಟ್ಟಿನಲ್ಲಿ ಯುವಕ, ಯುವತಿಯರಿಗೆ ಚರ್ಮರೋಗ, ಗುಪ್ತಾಂಗಗಳಲ್ಲಿನ ಸಮಸ್ಯೆಗಳ ಬಗ್ಗೆ ಆಪ್ತ ಸಮಾಲೋಚನೆ ಮೂಲಕ ಪ್ರತ್ಯೇಕವಾಗಿ ಅರಿವು ಮೂಡಿಸುವ ಕಾರ್ಯವನ್ನು ಸ್ನೇಹ ಕ್ಲಿನಿಕ್‌ನಲ್ಲಿ ಮಾಡಲಾಗುತ್ತಿದೆ.

ಎಚ್‌ಐವಿ/ಏಡ್ಸ್‌ನಿಂದ ದೂರ ಇರುವುದು, ಯಾವ ವಯಸ್ಸಿನಲ್ಲಿ ಮದುವೆಯಾಗಬೇಕು. ಬಾಲ್ಯ ವಿವಾಹದಿಂದ ಆಗುವ ಸಮಸ್ಯೆಗಳೇನು ಮತ್ತಿತರ ವಿಷಯಗಳನ್ನು ಹೇಳಿಕೊಡಲಾಗುವುದು. ಹೊರ ರೋಗಿಗಳ ಜತೆ ಆಸ್ಪತ್ರೆಗೆ ಬಂದಾಗ `ಸಮಸ್ಯೆ~ ಹೇಳಿಕೊಳ್ಳಲು ಹಿಂಜರಿಕೆ ಅಥವಾ ಸಂಕೋಚ ಆಗಬಹುದು. ಹೀಗಾಗಿ ಪ್ರತ್ಯೇಕವಾಗಿ ಹರೆಯದ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುವ ಉದ್ದೇಶದಿಂದ ಸ್ನೇಹ ಕ್ಲಿನಿಕ್ ಆರಂಭಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಯುವತಿಯರಿಗೆ ಮಾಹಿತಿಯ ಕೊರತೆ ಇರುತ್ತದೆ. ಪೋಷಕರು ಎಲ್ಲ ಸಂಗತಿಗಳನ್ನು ಹೇಳಿಕೊಡುವುದು ಸಾಧ್ಯವೂ ಆಗುವುದಿಲ್ಲ. ಇದನ್ನು ನಿವಾರಿಸಲು ಆರೋಗ್ಯದ ಶಿಕ್ಷಣ ನೀಡಲು ಈ ಕ್ಲಿನಿಕ್ ಸಹಕಾರಿಯಾಗಿದೆ. ಹೆಚ್ಚಿನ ಮಂದಿ ಇದರಿಂದ ಲಾಭ ಪಡೆಯುತ್ತಿದ್ದಾರೆ.
 
ಎಆರ್‌ಎಸ್‌ಎಸ್ (ಅಡಲ್ಟ್ ರಿಪ್ರೊಡಕ್ಷನ್ ಸೆಕ್ಷ್ಯುಯೆಲ್ ಎಜುಕೇಷನ್) ಕಾರ್ಯಕ್ರಮದ ಅಡಿ ಕ್ಲಿನಿಕ್ ಅನ್ನು ಪ್ರತಿ ಗುರುವಾರ ನಡೆಸಲಾಗುತ್ತಿದೆ ಎಂದು ಎನ್‌ಆರ್‌ಎಚ್‌ಎಂ ಕಾರ್ಯಕ್ರಮ ಅಧಿಕಾರಿ ಡಾ.ನಾಗರಾಜ್ `ಪ್ರಜಾವಾಣಿ~ಗೆ ತಿಳಿಸಿದರು.

ಇದಕ್ಕಾಗಿ ಸ್ನೇಹ ಕ್ಲಿನಿಕ್‌ನಲ್ಲಿ ತಜ್ಞ ವೈದ್ಯರು ಸ್ನೇಹಿತರಂತೆ ಮಾರ್ಗದರ್ಶನ ಮಾಡುತ್ತಾರೆ. ಆರೋಗ್ಯಕರ ಸಮಾಜ ನಿರ್ಮಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಈ ಸಂಬಂಧ ಆಸ್ಪತ್ರೆಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT