ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗೆ ಜಯದೇವ ಮಾದರಿ

Last Updated 28 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ ಎಂಬಂತೆ ಜಯದೇವ ಹೃದ್ರೋಗ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದ್ದು ವೃತ್ತಿಗೆ ಗೌರವ ತಂದು ಕೊಡುವ ರೀತಿಯಲ್ಲಿ ಜಯದೇವ ಆಸ್ಪತ್ರೆ ಸಿಬ್ಬಂದಿ ನಡೆದುಕೊಳ್ಳುತ್ತಿರುವುದು ಸಂತಸದ ಸಂಗತಿ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನ ಶಸ್ತ್ರಚಿಕಿತ್ಸಾ ಸಂಕೀರ್ಣ, ದಂತ ಚಿಕಿತ್ಸಾ ಕೇಂದ್ರ ಹಾಗೂ ಫುಡ್‌ಕೋರ್ಟ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ವೈದ್ಯರು  ಹೆಚ್ಚು ಮೆರಿಟ್ ಪಡೆದಿರುವ ಪ್ರತಿಭಾವಂತ ವೈದ್ಯರಾಗಿದ್ದು, ಇವರು ಖಾಸಗಿ ಆಸ್ಪತ್ರೆಗಳ ವೈದ್ಯರು ನೀಡುವಷ್ಟೇ ಉತ್ತಮ ಗುಣಮಟ್ಟದ ಸೇವೆ ನೀಡಲು ಸಮರ್ಥರಿದ್ದಾರೆ. ಈ ವೈದ್ಯರಲ್ಲಿರುವ ನೈತಿಕತೆ ಹಾಗೂ ಸ್ಫೂರ್ತಿಯನ್ನು ಹೆಚ್ಚಿಸಿದರೆ ಜನ ಮೆಚ್ಚುವಂತೆ ಸರ್ಕಾರಿ ಆಸ್ಪತ್ರೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ’ ಎಂದು  ಹೇಳಿದರು.

‘ಹಳ್ಳಿಗಳ ಜೀವನ ಶೈಲಿ ಬದಲಿಸಿ ನೈರ್ಮಲ್ಯ ಕಾಪಾಡುವುದು ಮುಖ್ಯ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ರಾಜ್ಯದ ಪಂಚಾಯ್ತಿಗಳನ್ನು ಆರೋಗ್ಯ ಪಂಚಾಯ್ತಿಗಳನ್ನಾಗಿ ರೂಪಿಸುತ್ತಿದೆ. 10 ಗ್ರಾಮ ಪಂಚಾಯ್ತಿಗಳನ್ನು ಪ್ರಾಯೋಗಿಕ ಯೋಜನೆಗೆ ಆಯ್ದುಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ ‘ಸಂಸ್ಥೆಯಲ್ಲಿ ಪ್ರತಿದಿನ ಹತ್ತರಿಂದ 12 ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದ್ದು ನೂತನ ಮೂರು ಶಸ್ತ್ರಚಿಕಿತ್ಸಾ ಕೊಠಡಿಗಳ ಸೇರ್ಪಡೆಯಿಂದ ನಾವು ಪ್ರತಿದಿನ ಕನಿಷ್ಠ 16 ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸಾಧ್ಯವಾಗಿದೆ. ಒಟ್ಟು 5 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕೊಠಡಿಗಳನ್ನು ನಿರ್ಮಿಸಲಾಗಿದೆ’ ಎಂದು ಹೇಳಿದರು.

‘ಆಕ್ಸ್‌ಫರ್ಡ್ ದಂತ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎನ್.ವಿ.ಎಲ್. ನರಸಿಂಹರಾಜು ಅವರು ಉಚಿತ ದಂತ ಚಿಕಿತ್ಸಾಲಯವನ್ನು ಸ್ಥಾಪಿಸಿದ್ದು ಅಗತ್ಯವಾದ ಸಿಬ್ಬಂದಿಯನ್ನು ಒದಗಿಸಿದ್ದಾರೆ. ಹೃದ್ರೋಗಿಗಳು ಇಲ್ಲಿಯೇ ದಂತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ’ ಎಂದು ತಿಳಿಸಿದರು.

‘ಹೃದ್ರೋಗ ಮತ್ತು ದಂತ ಚಿಕಿತ್ಸೆಯ ನಡುವೆ ಮಹತ್ವದ ಸಂಬಂಧವಿದೆ. ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಮೊದಲು ಕವಾಟ ಬದಲಾವಣೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಯ ದಂತ ಪರೀಕ್ಷೆ ಅತ್ಯವಶ್ಯಕವಾಗಿದೆ. ಏಕೆಂದರೆ ರೋಗಿಯ ಹುಳುಕು ಹಲ್ಲು, ದಂತ ಸವೆತ ಇನ್ನಿತರ ಸೋಂಕುಗಳಿಂದ ಹೃದಯದ ಕವಾಟಗಳಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ’ ಎಂದರು.

‘ನೂತನ ಸಂಕೀರ್ಣದಲ್ಲಿ ಅಂಗಾಂಶ ಕವಾಟ ಬ್ಯಾಂಕ್‌ಗಳು ಹಾಗೂ ಹೃದಯ ಕಸಿ ಮಾಡುವ ವಿಭಾಗಗಳಿವೆ. ಇಲ್ಲಿಯವರೆಗೆ  ಕವಾಟ ಬದಲಾವಣೆ ಶಸ್ತ್ರ ಚಿಕಿತ್ಸೆಯಲ್ಲಿ ಕೃತಕ ಕವಾಟಗಳನ್ನು ಬಳಸಲಾಗುತ್ತಿತ್ತು. ಇದು ದುಬಾರಿ ಮಾತ್ರವಲ್ಲದೆ ಅವಕ್ಕೆ ರಕ್ತ ತಿಳಿಗೊಳಿಸುವ ಔಷಧಗಳನ್ನು ಬಳಸಬೇಕಾಗುತ್ತದೆ. ಸಂಸ್ಕರಿಸಿದ ಮಾನವ ಕವಾಟಗಳನ್ನು ಬಳಸುವುದರಿಂದ ಚಿಕಿತ್ಸಾ ವೆಚ್ಚವು ಗಣನೀಯವಾಗಿ ಇಳಿಕೆಯಾಗಲಿದೆ. ಫುಡ್‌ಕೋರ್ಟ್‌ನಲ್ಲಿ 250 ಮಂದಿ ಕೂರಲು ವ್ಯವಸ್ಥೆ ಕಲ್ಪಿಸಲಾಗಿದ್ದು ಕಡಿಮೆ ಬೆಲೆಗೆ ಶುಚಿರುಚಿಯ ಆಹಾರ ಒದಗಿಸಲಾಗುತ್ತಿದೆ’ ಎಂದು ಹೇಳಿದರು.

‘ಸಂಸ್ಥೆಯು 2010ರಲ್ಲಿ ಶೇ 250ರಷ್ಟು ಸರ್ವಾಂಗೀಣ ಅಭಿವೃದ್ಧಿ ಕಂಡಿದೆ. 17500 ಕ್ಯಾತ್‌ಲಾಬ್ ವಿಧಾನಗಳಲ್ಲಿ 10 ಸಾವಿರ ಆಂಜಿಯೋಗ್ರಾಂ ಹಾಗೂ 3200 ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಸಲಾಗಿದ್ದು ಇದು ರಾಷ್ಟ್ರೀಯ ದಾಖಲೆಯಾಗಿದೆ. 1600 ಬಲೂನು ವಾಲ್ವಲೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಿ ವಿಶ್ವ ದಾಖಲೆ ಸೃಷ್ಟಿಸಲಾಗಿದೆ. ವಾರ್ಷಿಕ 21 ಡಿಎಂ ಕಾರ್ಡಿಯಾಲಜಿ ಹಾಗೂ 12 ಎಂಸಿಎಚ್ ಕಾರ್ಡಿಯೊ ತೊರಾಸಿಕ್ ಸರ್ಜರಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲಾಗಿದೆ’ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ, ಶಾಸಕ ವಿಜಯಕುಮಾರ್ ಮಾತನಾಡಿದರು. ಆಕ್ಸ್‌ಫರ್ಡ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಎಸ್.ಎನ್.ವಿ.ಎಲ್. ನರಸಿಂಹರಾಜು, ಬಿಬಿಎಂಪಿ ಸದಸ್ಯ ಮುನಿಸಂಜೀವಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೈದ್ಯರಿಗೆ ಎಐಸಿಟಿ ದರ್ಜೆಯ ವೇತನ: ರಾಮದಾಸ್
ಬೆಂಗಳೂರು: ‘
ರಾಜ್ಯದ ವೈದ್ಯರಿಗೆ ಇದೇ ಏಪ್ರಿಲ್‌ನಿಂದ ಎಐಸಿಟಿಇ ದರ್ಜೆಯ ವೇತನ ನೀಡಲಾಗುತ್ತಿದ್ದು, ಇದಕ್ಕಾಗಿ ಸರ್ಕಾರ ಬಜೆಟ್‌ನಲ್ಲಿ 150 ಕೋಟಿ ರೂಪಾಯಿ ಹಣ ಮೀಸಲಿರಿಸಿದೆ. ಇದೇ ವೇಳೆ ಈ ವೇತನ ಪಡೆಯುವ ವೈದ್ಯರು ಖಾಸಗಿ ಪ್ರಾಕ್ಟೀಸ್ ನಡೆಸದಂತೆ ಷರತ್ತು ವಿಧಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.

 ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೂತನ ಶಸ್ತ್ರಚಿಕಿತ್ಸಾ ಸಂಕೀರ್ಣ, ದಂತ ಚಿಕಿತ್ಸಾ ಕೇಂದ್ರ ಹಾಗೂ ಫುಡ್‌ಕೋರ್ಟ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಏಳುದಿನಗಳ ಒಳಗಾಗಿ ಕಡತಗಳ ವಿಲೇವಾರಿಯನ್ನು ಮಾಡುವಂತೆ ನೂತನ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಇಲಾಖೆಯ ಕಾರ್ಯಗಳು ವಿಳಂಬವಾಗುವುದು ತಪ್ಪಲಿದೆ’ ಎಂದು ತಿಳಿಸಿದರು. ‘ಬಡ್ತಿ ಕಡತಗಳನ್ನು ಕ್ಷಿಪ್ರಗತಿಯಲ್ಲಿ ವಿಲೇವಾರಿ ಮಾಡಲಾಗುವುದು. ದೊಡ್ಡ ನೀರಿನ ಟ್ಯಾಂಕ್ ಶುಚಿಯಾಗಿದ್ದರೆ ನಲ್ಲಿಗಳಲ್ಲಿ ಬರುವ ನೀರು ಕೂಡ ಶುಚಿಯಾಗಿರುತ್ತದೆ. ಅದೇ ರೀತಿ ದೊಡ್ಡಮಟ್ಟದಲ್ಲಿ ಪಾರದರ್ಶಕತೆ ರೂಪಿಸಲಾಗುತ್ತಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT