ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಯಿಂದ ಜನ ಬಲು ದೂರ

ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ, ಮೂಲ ಸೌಕರ್ಯ ಸಮಸ್ಯೆ
Last Updated 29 ಡಿಸೆಂಬರ್ 2012, 6:03 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ಕೊರತೆ ಸೇರಿದಂತೆ ಇತರ ಮೂಲಸೌಕರ್ಯಗಳ ಸಮಸ್ಯೆಗಳಿಂದ ನರಳುತ್ತಿದ್ದ ನಗರದ ಜಿಲ್ಲಾ ಆಸ್ಪತ್ರೆಯು ಈಗ ಮತ್ತೆ ಹೊಸ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ.

ಆಸ್ಪತ್ರೆಯಲ್ಲಿರುವ ಕೆಲ ವೈದ್ಯರು ಮೇಲಿಂದ ಮೇಲೆ ರಜೆ ಹಾಕುತ್ತಿದ್ದರೆ, ಕೆಲವರು ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆಗಳಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲು ಬಯಸುತ್ತಾರೆ. ಈ ಎಲ್ಲದರ ಪರಿಣಾಮವಾಗಿ ಆಸ್ಪತ್ರೆಗೆ ಬರುತ್ತಿದ್ದ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬರುತ್ತಿದೆ.

ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗದೆಂದು ಸಂಬಂಧಿಕರು ತಮ್ಮ ಕುಟುಂಬದ ಅನಾರೋಗ್ಯಪೀಡಿತ ಸದಸ್ಯರನ್ನು ಕರೆತರುತ್ತಿದ್ದರು.

ಉದ್ದನೆಯ ಸಾಲುಗಳಲ್ಲಿ ನಿಂತು ವೈದ್ಯರಿಗಾಗಿ ದೀರ್ಘ ಕಾಲದವರೆಗೆ ಕಾಯುತ್ತಿದ್ದರು. ಆಸ್ಪತ್ರೆಯಲ್ಲಿನ ಕೌಂಟರ್‌ನಲ್ಲೇ ಟಿಕೆಟ್ ಪಡೆದು ನಿರ್ಗಮಿಸುತ್ತಿದ್ದರು. ಆದರೆ ಕೆಲ ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಗೆ ಬರುವುದರ ಬದಲು ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೊಗುತ್ತಿದ್ದಾರೆ. ಪ್ರತಿ ದಿನ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ರೋಗಿಗಳ ಸಂಖ್ಯೆಯು 300ರಿಂದ 500ಕ್ಕೆ ಇಳಿದಿದೆ. 

ಕೊರತೆಗಳ ನಡುವೆಯು ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆ ಕಾಡದಿರಲಿಯೆಂದು ಕೈಲಾದ ಸಹಾಯ ಮಾಡುತ್ತಿದ್ದಾರೆ. ದೂರದೂರದ ಗ್ರಾಮಗಳಿಂದ ಮತ್ತು ಬೇರೆ ಬೇರೆ ತಾಲ್ಲೂಕುಗಳಿಂದ ಬರುವ ರೋಗಿಗಳು ಸಂಬಂಧಪಟ್ಟ ವೈದ್ಯರನ್ನು ಕೇಳುತ್ತಾರೆ. ಅವರು ಆಸ್ಪತ್ರೆಯಲ್ಲಿ ಇಲ್ಲದಿರುವ ವಿಷಯ ಖಚಿತವಾದ ಕೂಡಲೇ ವೈದ್ಯರನ್ನು ಹುಡುಕಿಕೊಂಡು ಬೇರೆಡೆ ಹೋಗುತ್ತಾರೆ, ಅವರು ಖಾಸಗಿ ಆಸ್ಪತ್ರೆಯಲ್ಲಿದ್ದರೂ ಸರಿಯೇ, ಅಲ್ಲಿ ಅವರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುತ್ತಾರೆ. ಔಷಧಿ, ಗುಳಿಗೆಗಳನ್ನು ಹೊರಗಡೆ ಔಷಧಿ ಅಂಗಡಿಗಳಲ್ಲಿ ಖರೀದಿಸುತ್ತಾರೆ.

ಆಸ್ಪತ್ರೆಯ ಅವ್ಯವ್ಯವಸ್ಥೆ ಕುರಿತು ಅಲ್ಲಿನ ಸಿಬ್ಬಂದಿಗಳೇ ಬೇಸರ ವ್ಯಕ್ತಪಡಿಸುತ್ತಾರೆ. `ಇದು ಹೆಸರಿಗಷ್ಟೇ ಜಿಲ್ಲಾ ಆಸ್ಪತ್ರೆ. ಜಿಲ್ಲಾ ಆಸ್ಪತ್ರೆಯೆಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದ್ದರೂ ಹೆಸರಿಗೆ ಸಮನಾಗಿ ಯಾವುದೇ ರೀತಿಯ ಸ್ಥಾನಮಾನವು ಇದಕ್ಕೆ ದೊರೆತಿಲ್ಲ.

ಸ್ತ್ರೀರೋಗ ತಜ್ಞರು ಸೇರಿದಂತೆ ಇತರ ವೈದ್ಯ ತಜ್ಞರ ಕೊರತೆಯು ತೀವ್ರವಾಗಿದ್ದು, ವೈದ್ಯರಲ್ಲಿ ಒಬ್ಬರು ರಜೆ ಹಾಕಿದರೂ ಅಂದು ರೋಗಿಗಳಿಗೆ ಚಿಕಿತ್ಸೆ ದೊರೆಯುವುದಿಲ್ಲ. ಅದೇ ವೇಳೆ ದುರ್ಘಟನೆ ಸಂಭವಿಸಿ 20ಕ್ಕೂ ಹೆಚ್ಚು ಗಾಯಾಳುಗಳು ಒಮ್ಮೆಲೇ ಆಸ್ಪತ್ರೆಗೆ ಬಂದರೆ, ಅವರಿಗೆ ಚಿಕಿತ್ಸೆಯಷ್ಟೇ ಅಲ್ಲ, ಆರೈಕೆ ಮಾಡವ ವ್ಯವಧಾನವೂ ಇರುವುದಿಲ್ಲ' ಎಂದು ಅವರು ಹೇಳಿದರು.

`ದಿನದ 24 ಗಂಟೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಆಸ್ಪತ್ರೆಯಲ್ಲಿದ್ದರೆ, ಯಾವುದೇ ಸಮಸ್ಯೆ ಕಾಡುವುದಿಲ್ಲ. ಆದರೆ ಸಂಬಂಧಿಸಿದ ವೈದ್ಯರು ಹಗಲುಹೊತ್ತಿನಲ್ಲಿ ಸಿಗದೆ ಸಂಜೆ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಸಿಗುತ್ತಾರೆ ಎಂಬ ವಿಷಯವನ್ನು ದೃಢಪಡಿಸಿಕೊಂಡು ರೋಗಿಗಳು ಅಲ್ಲಿಗೆ ದೌಡಾಯಿಸುತ್ತಾರೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ರೋಗಿಗಳು ಹೆಚ್ಚು ಖರ್ಚು ಮಾಡಬೇಕಿಲ್ಲ. ಆದರೆ ಖಾಸಗಿ ಅಸ್ಪತ್ರೆಯಲ್ಲಿ ವೈದ್ಯರಿಗೆ ಯಾವುದನ್ನೂ ಪ್ರಶ್ನಿಸದೇ ಹಣ ಪಾವತಿಸಲೇಬೇಕು' ಎಂದು ಅವರು ಹೇಳಿದರು.

`ಆಸ್ಪತ್ರೆಯಲ್ಲಿ ತಿಂಗಳಿಗೆ 300 ಹೆರಿಗೆಗಳು ನಡೆಯುತ್ತವೆ. ಸ್ತ್ರೀರೋಗ ತಜ್ಞರು ರಜೆ ಹಾಕಿದ್ದರಿಂದ ಮತ್ತು ಇತರ ವೈದ್ಯರು ಕಾಣಸಿಗದ ಕಾರಣ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಸಹಜವಾಗಿ ಮೊರೆ ಹೋಗುತ್ತಾರೆ. ಇದನ್ನು ತಪ್ಪಿಸಬೇಕಿದ್ದರೆ, ಸರ್ಕಾರವು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಅಗತ್ಯ ಪ್ರಮಾಣದಲ್ಲಿ ನೇಮಿಸಬೇಕು. ದೀರ್ಘ ಕಾಲದ ರಜೆ ಹಾಕಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಶೀಘ್ರ ಆಸ್ಪತ್ರೆಗೆ ಬರುವಂತೆ ಮಾಡಬೇಕು' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT