ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಆನೇಕಲ್: ಲಂಚವಿಲ್ಲದೇ ಯಾವುದೇ ಕೆಲಸಗಳು ಸರ್ಕಾರಿ ಕಚೇರಿಗಳಲ್ಲಿ ಆಗುತ್ತಿಲ್ಲ ಎಂದು ಸಿಂಡಿಕೇಟ್ ರೈತ ಸೇವಾ ಸಹಕಾರ ಬ್ಯಾಂಕ್‌ನ ನಿರ್ದೇಶಕ ಬಿ.ಜಿ.ಆಂಜಿನಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

 ತಾಲ್ಲೂಕಿನ ಮಾಯಸಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು,
ಕಂದಾಯ ಇಲಾಖೆಯಲ್ಲಿ ಖಾತೆ, ಭೂಪರಿವರ್ತನೆ, ದಾಖಲೆಗಳ ತಿದ್ದುಪಡಿ ಸೇರಿದಂತೆ ಪ್ರತಿ ಕೆಲಸಕ್ಕೂ ಇಂತಿಷ್ಟೆಂದು ಲಂಚ  ನಿಗದಿಯಾಗಿದೆ. ಇಲಾಖೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಡಲು ಮಧ್ಯವರ್ತಿಗಳು ಹೇರಳವಾಗಿದ್ದಾರೆ. ಅವರಿಗೆ ಲಂಚ ಮತ್ತು ಮಾಹಿತಿಗಳನ್ನು ನೀಡಿದರೆ ಕೆಲಸವಾದಂತೆ.

ಸಾಮಾನ್ಯ ಜನರು ಕೆಲಸ ಕಾರ್ಯಗಳಿಗಾಗಿ ಕಚೇರಿಗಳತ್ತ ಸುತ್ತಿದರೂ ಕೆಲಸಗಳು ಆಗುವುದಿಲ್ಲ. ಕೆರೆಗಳಲ್ಲಿ ಮಣ್ಣೆತ್ತುವ ಹಾಗೂ ಫಿಲ್ಟರ್ ಮರಳು ತಯಾರಿಸುವ ದಂಧೆ ತಾಲ್ಲೂಕಿನಲ್ಲಿ ಯಥೇಚ್ಚವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ. ಬಡ ಜನರಿಗೆ ಪಡಿತರ ಚೀಟಿಗಳ ವಿತರಣೆ ಸಮರ್ಪಕವಾಗಿಲ್ಲ ಎಂದು ಟೀಕಿಸಿದರು.  

ಅಧಿಕಾರಿಗಳು ಜನಸ್ಪಂದನಾ ಸಭೆಯಲ್ಲಿ ಕೇವಲ ಅರ್ಜಿಗಳನ್ನು ಪಡೆದು ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಕೇವಲ ಕಾಟಾಚಾರದ ಜನಸ್ಪಂದನಾ ಸಭೆಗಳಾಗಿವೆ, ಎಲ್ಲ ಅಧಿಕಾರಿಗಳು ಲಂಚ ಪಡೆಯುವುದಿಲ್ಲ ಎಂದು ಸಂಕಲ್ಪ ಮಾಡಬೇಕು ಇಲ್ಲವಾದಲ್ಲಿ ಜನಸ್ಪಂದನ ಸಭೆ ನಡೆಸುವುದೇ ಬೇಡ ಎಂದು ಹೇಳಿದರು.

ಸಭೆಯಲ್ಲಿ ನೆರೆದಿದ್ದ ಅಧಿಕಾರಿಗಳು ಈ ವಾಗ್ಧಾಳಿಯಿಂದಾಗಿ ಕಕ್ಕಬಿಕ್ಕಿಯಾದರು. ನಂತರ ತಹಶೀಲ್ದಾರ್ ಎಚ್.ಎನ್.ಶಿವೇಗೌಡ ಅವರು ಮಾತನಾಡಿ, ಭ್ರಷ್ಟಾಚಾರದ ಬಗ್ಗೆ ದೇಶದಲ್ಲಿ ಚರ್ಚೆ ನಡೆದಿದೆ. ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಸಾರ್ವಜನಿಕರು ಸಹಕಾರ ನೀಡಬೇಕು. ಲಂಚಕ್ಕೆ ಒತ್ತಾಯಿಸಿದ್ದಲ್ಲಿ ದೂರು ನೀಡಬೇಕು ಎಂದು ಸಲಹೆ ಮಾಡಿದರು,

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೇಜಶ್ರೀ ನಟರಾಜ್ ಮಾತನಾಡಿ, ಸಾರ್ವಜನಿಕರು ಲಂಚ ನೀಡದೇ ಕೆಲಸ ಮಾಡಿಸಿಕೊಳ್ಳಲು ಸಂಕಲ್ಪ ಮಾಡಬೇಕು, ಎಲ್ಲ ಅಧಿಕಾರಿಗಳು ಕೆಟ್ಟವರಲ್ಲ ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಜನರು ಶ್ರಮಿಸಬೇಕು. ಜನಪ್ರತಿನಿಧಿಗಳು ಒತ್ತಡ ಹೇರದೇ ಕಾನೂನಿನಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಬೇಕು. ಜನ ಜಾಗೃತರಾಗದೇ ಲಂಚ ನಿರ್ಮೂಲನೆ ಸಾಧ್ಯವಿಲ್ಲ ಎಂದು ನುಡಿದರು.

 ಜಿಲ್ಲಾ ಪಂಚಾಯಿತಿ ಸದಸ್ಯ  ಗೋಪಾಲಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭುವನ ಮಂಜುನಾಥ, ತಾಲ್ಲೂಕು ಪಂಚಾಯಿತಿ ಸದಸ್ಯ ಪಿಳ್ಳಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಡಾ.ವೀರಭದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆರ್.ಬಸವರಾಜ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT