ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಾಲೇಜಿನಲ್ಲಿ ತೇಗದ ವನ

Last Updated 27 ಅಕ್ಟೋಬರ್ 2011, 9:15 IST
ಅಕ್ಷರ ಗಾತ್ರ

ಗುಬ್ಬಿ: ಪರಿಸರ ಕಾಳಜಿ ಹೊತ್ತ ಗುಬ್ಬಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಆವರಣದಲ್ಲಿ ಬೆಳೆಸಿ ಪೋಷಿಸಿದ 800ಕ್ಕೂ ಅಧಿಕ ತೇಗ ಹಾಗೂ ಸಿಲ್ವರ್‌ವುಡ್ ಜಾತಿಯ ಮರಗಳು ಇಂದು ರೂ. 30 ಲಕ್ಷದ ಆಸ್ತಿಯಾಗಿ ಬೆಳೆದು ನಿಂತಿವೆ.

1951ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟಿಸಿದ ಮುನ್ಸಿಪಲ್ ಹೈಸ್ಕೂಲ್ ನಂತರದಲ್ಲಿ ಪದವಿ ಪೂರ್ವ ಕಾಲೇಜು ಕೂಡ ಆರಂಭವಾಯಿತು. ನಿಡಸಾಲೆ ಚನ್ನಂಜಪ್ಪ ದಾನ ನೀಡಿದ 10.38 ಎಕರೆ ಅಧಿಕ ಸ್ಥಳ ಇಂದು ಜಿಲ್ಲೆಯಲ್ಲಿ ಉತ್ತಮ ಹಾಗೂ ಸುಸಜ್ಜಿತ ಆಟದ ಮೈದಾನದಲ್ಲಿ ಒಂದಾಗಿದೆ.

1996ರಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ವಿದ್ಯಾರ್ಥಿಗಳು ನಿರ್ಮಿಸಿದ `ತೇಗದ ವನ~ ಇಂದು ಕಾಲೇಜಿನ ಆಸ್ತಿಯಾಗಿದೆ. ಕಾಲೇಜು ಕಟ್ಟಡ ಹಾಗೂ ವಿಶಾಲ ಮೈದಾನದ ಸುತ್ತ ನೆಟ್ಟ ಮರಗಳು ಸುಮಾರು 30 ಅಡಿಗಳ ಎತ್ತರಕ್ಕೆ ಬೆಳೆದ ನಿಂತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಕಾಲೇಜು ಆವರಣದ ಉದ್ಯಾನವನ ಗುಣಾತ್ಮಕ ಚಿಂತನೆಗೆ ಅವಕಾಶ ಕಲ್ಪಿಸಿದೆ.

ಸುಂದರ ವನ ನಿರ್ಮಿಸಿದ ವಿದ್ಯಾರ್ಥಿಗಳು ಔಷಧಿವನ ನಿರ್ಮಿಸುವ ಉತ್ಸಾಹದಲ್ಲಿ ಆಯುರ್ವೇದ ಚಿಕಿತ್ಸೆಗೆ ಬಳಸುವ ಸಸ್ಯ ಕ್ರೋಡೀಕರಿಸುವ ಸಿದ್ಧತೆ ನಡೆಸಿದ್ದಾರೆ. ಪರಿಸರ ಕಾಳಜಿಯ ಪ್ರಜ್ಞೆ ಬೆಳೆಸಿಕೊಂಡ ಪ್ರಾಧ್ಯಾಪಕ ವೃಂದ ಮಕ್ಕಳ ಉತ್ಸುಕತೆಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಕಾಲೇಜಿಗೆ ಭೂ ದಾನದ ಮೂಲಕ ಬಂದ ಬಸ್ತಿಕಟ್ಟೆ ಕಾವಲ್‌ನಲ್ಲಿನ 4.36 ಎಕರೆ ಜಮೀನಿನಲ್ಲಿ ತೋಟಗಾರಿಕೆ ನಡೆಸುವ ಮಹತ್ತರ ಉದ್ದೇಶ ಹೊಂದಿದ್ದಾರೆ.

ಪಠ್ಯೇತರ ಚಟುವಟಿಕೆಯಲ್ಲಿ ನಿರಂತರ ಸಾಧನೆಗೈದ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆ, ತರಬೇತಿ, ಶಿಬಿರಗಳಲ್ಲಿ ಪಾಲ್ಗೊಳ್ಳುವುದನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಆಸಕ್ತಿ ತೋರುವ ನಿಟ್ಟಿನಲ್ಲಿ ದಸರೆ ರಜೆಯಲ್ಲಿ ಪುನರಾವರ್ತಿತ ತರಗತಿ ನಡೆಸಿ, ಕಳೆದ 4 ತಿಂಗಳಿಂದ ಬೋಧಿಸಿದ್ದ ಪಾಠ ಪ್ರವಚನಗಳ ಪರೀಕ್ಷೆ ನಡೆಸಲಾಯಿತು. ಅಂಕ ಪಡೆದ ವಿದ್ಯಾರ್ಥಿಗಳನ್ನು ಶ್ರೇಣಿಯಾಧಾರದಲ್ಲಿ ವಿಂಗಡಿಸಿ ಅಧ್ಯಯನದಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕೌನ್ಸಲಿಂಗ್ ನಡೆಸಿ, ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.

ಸರ್ಕಾರಿ ಕಾಲೇಜು ಗ್ರಾಮೀಣ ಭಾಗದ 650 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಒಂದೇ ಕಟ್ಟಡದಲ್ಲಿ ನಡೆಯುತ್ತಿರುವುದರಿಂದ ಕೊಠಡಿ ಕೊರತೆ ಎದುರಾಗಿದೆ. ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ಹೆಚ್ಚುವರಿ ಕಟ್ಟಡ ನಿರ್ಮಿಸಿಕೊಡಬೇಕು ಎನ್ನುವುದು ವಿದ್ಯಾರ್ಥಿಗಳ ಮನವಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT