ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಾಲೇಜುಗಳಲ್ಲಿ `ಅನ್ವೇಷಣಾ ಕೂಟ'

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಸಂಯೋಜನೆಗೆ ಒಳಪಟ್ಟಿರುವ ಕಾಲೇಜುಗಳಲ್ಲಿ ಅನ್ವೇಷಣೆ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ `ಅನ್ವೇಷಣಾ ಕೂಟ' (ಇನೋವೇಷನ್ ಕ್ಲಬ್) ರಚಿಸಲು ಉನ್ನತ ಶಿಕ್ಷಣ ಇಲಾಖೆ ಯೋಜಿಸಿದೆ.

ರಾಜ್ಯದಲ್ಲಿ 359 ಸರ್ಕಾರಿ ಹಾಗೂ 299 ಖಾಸಗಿ ಕಾಲೇಜುಗಳಿವೆ. ಸರ್ಕಾರಿ ಕಾಲೇಜುಗಳಾಗಲೀ ಅಥವಾ ವಿವಿಗಳ ಸಂಯೋಜನೆಗೆ ಒಳಪಟ್ಟಿರುವ ಕಾಲೇಜುಗಳಾಗಲಿ, ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸುವ ನಿಟ್ಟಿನಲ್ಲಿ `ಅನ್ವೇಷಣಾ ಕೂಟ'ಗಳನ್ನು ರಚಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು  ಸೂಚಿಸಲಾಗಿದೆ.

ಈಚೆಗೆ, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕುಲಪತಿಗಳು, ಕಾಲೇಜು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ `ಅನ್ವೇಷಣಾ ಕೂಟ'ಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಸಂಯೋಜನೆ ನೀಡುವ ಸಂದರ್ಭದಲ್ಲಿಯೇ ಅನ್ವೇಷಣಾ ಕೂಟಗಳನ್ನು ಕಡ್ಡಾಯವಾಗಿ ರಚಿಸುವಂತೆ ಕಾಲೇಜುಗಳಿಗೆ  ನಿಬಂಧನೆ ವಿಧಿಸಬೇಕು ಎಂದು ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಕೆಲ ವಿವಿಗಳಲ್ಲಿ ಪ್ರಯತ್ನ ಆರಂಭವಾಗಿದೆ ಎಂದು ಇಲಾಖೆಯ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಈ ಕ್ಲಬ್‌ಗಳು ವಿದ್ಯಾರ್ಥಿಗಳು ಹಾಗೂ ಬೋಧಕರನ್ನು ಒಳಗೊಂಡಿರಬೇಕು. ಆಗಾಗ ಚರ್ಚಾ ಕೂಟಗಳನ್ನು ನಡೆಸಬೇಕು. ವಾರಕ್ಕೊಮ್ಮೆ ಸಭೆ ನಡೆಸಿ, ತಮ್ಮ ಹೊಸ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ವಿವಿಧ ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸುವುದು ಹಾಗೂ ಸಂಶೋಧನೆಯಲ್ಲಿ ತೊಡಗಬಹುದು.

ವಿವಿಗಳು ನಡೆಸುವ ಸ್ಪರ್ಧೆಗಳಿಗೆ ಉತ್ಕೃಷ್ಟ ಯೋಜನೆಗಳನ್ನು ತಯಾರಿಸುವುದು ಮೊದಲಾದ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ. ಉದ್ದೇಶಿಸಿದಂತೆಯೇ ನಡೆದಲ್ಲಿ, ಪ್ರತಿ ಕಾಲೇಜಿನ ಪಾಧ್ಯಾಪಕರೂ ಕೂಡ ತರಗತಿಗಳಲ್ಲಿ ಪಾಠದ ಜತೆಗೆ, ವರ್ಷಕ್ಕೊಂದು ಸಂಶೋಧನಾ ಪ್ರಬಂಧ ಸಿದ್ಧಪಡಿಸಿ ಮಂಡಿಸುವುದು ಕಡ್ಡಾಯವಾಗಲಿದೆ.

`ಪ್ರಸ್ತುತ ಕಾಲೇಜು ಹಂತದಲ್ಲಿ ಸಂಶೋಧನೆಗೆ ನೀಡುತ್ತಿರುವ ಒತ್ತು ಸಾಲದಾಗಿದೆ. ಇದರಿಂದ ಸೃಜನಶೀಲತೆಯ ಕೊರತೆ ಕಂಡುಬರುತ್ತಿದೆ. ಬೋಧಕರು ಪಾಠ ಮಾಡುವುದಕ್ಕಷ್ಟೇ ಸೀಮಿತವಾಗಿದ್ದಾರೆ. ಇದನ್ನು ತಪ್ಪಿಸಿ, ಸೃಜನಶೀಲರನ್ನಾಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ' ಎಂದು ತಿಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜು ಶಿಕ್ಷಣ ಇಲಾಖೆಯ `ಸಿಇಕ್ಯೂಇ' (ಗುಣಮಟ್ಟ ಹಾಗೂ ಉತ್ಕೃಷ್ಟತೆಗಾಗಿ ನಿರಂತರ ಮೌಲ್ಯಮಾಪನ) ಕಾರ್ಯಕ್ರಮ ಅಧಿಕಾರಿ ಡಾ.ಶೇಷಗಿರಿ, `ಕಾಲೇಜುಗಳಲ್ಲಿ ಅನ್ವೇಷಣಾ ಕೂಟಗಳನ್ನು ರಚಿಸುವ ಸಂಬಂಧ ಚರ್ಚೆ ನಡೆದಿದೆ.

ವಿದ್ಯಾರ್ಥಿಗಳಲ್ಲಿ ಅನ್ವೇಷಣೆಯ ಮನೋಭಾವ ಬೆಳಸಲು ಕಾರ್ಯಕ್ರಮಗಳನ್ನು ಕಾಲೇಜು ಮಟ್ಟದಲ್ಲಿಯೇ ರೂಪಿಸಬೇಕಿದೆ. ಈ ಯೋಜನೆ ಜಾರಿಯ ವಿಚಾರ ಚರ್ಚೆಯ ಹಂತದಲ್ಲಿದೆ' ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT