ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಪದವಿ ಕಾಲೇಜು: ಶೇ 46 ಸೀಟು ಖಾಲಿ

Last Updated 18 ಜುಲೈ 2013, 5:27 IST
ಅಕ್ಷರ ಗಾತ್ರ

ವಿಜಾಪುರ: ಜಿಲ್ಲೆಯ ಏಳು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳ ಪೈಕಿ ಬಹುತೇಕ ಕಾಲೇಜುಗಳಲ್ಲಿ ಇನ್ನೂ ಅರ್ಧಕ್ಕಿಂತ ಹೆಚ್ಚು ಸೀಟುಗಳು ಖಾಲಿ ಉಳಿದಿವೆ. ಮಮದಾಪುರ ಕಾಲೇಜಿನಲ್ಲಿ ಬಿ.ಕಾಂ., ಬಿ.ಬಿ.ಎ., ಬಸವನ ಬಾಗೇವಾಡಿ ಕಾಲೇಜಿನಲ್ಲಿ ಬಿ.ಎಸ್ಸಿ. ಮತ್ತು ಬಿ.ಬಿ.ಎ. ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಪ್ರವೇಶವನ್ನೇ ಪಡೆದಿಲ್ಲ!

ಈ ಏಳು ಕಾಲೇಜುಗಳಲ್ಲಿ ವಿವಿಧ ಪದವಿ ಕೋರ್ಸ್‌ಗಳ ಪ್ರಥಮ ಸೆಮಿಸ್ಟರ್‌ಗೆ ಒಟ್ಟು 2770 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅವಕಾಶವಿದೆ. ಬುಧವಾರದ ವರೆಗೆ 1476 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದು, 1294 (ಶೇ.46) ಸ್ಥಾನ ಖಾಲಿ ಉಳಿದಿವೆ.
ಪಿಯುಸಿ ದ್ವಿತೀಯ ವರ್ಷ ಪಾಸಾದ ವಿದ್ಯಾರ್ಥಿಗಳು, ಬಿ.ಎ., ಬಿ.ಎಸ್ಸಿ, ಬಿ.ಕಾಂ., ಬಿ.ಬಿ.ಎ., ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್), ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ. ಮತ್ತಿತರ ಕೋರ್ಸ್‌ಗಳಿಗೆ ರೂ.750 ದಂಡದೊಂದಿಗೆ ಇದೇ 30ರ ವರೆಗೆ ಪ್ರವೇಶ ಪಡೆಯಬಹುದು.

ಜಿಲ್ಲೆಯಲ್ಲಿ ಸಹ ಶಿಕ್ಷಣ ಪದ್ಧತಿ ಇರುವ 70 ಪದವಿ ಕಾಲೇಜುಗಳಿದ್ದು, ಅವೆಲ್ಲವೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜನೆಗೊಳಪಟ್ಟಿವೆ. ವಿಜಾಪುರ ನಗರ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಗೊಳಸಂಗಿ, ಮಮದಾಪುರ, ಇಂಡಿ, ಸಿಂದಗಿ ಹೀಗೆ ಏಳು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಿವೆ.

`ವಿಜಾಪುರ ಸರ್ಕಾರಿ ಕಾಲೇಜಿನಲ್ಲಿ ಬಿ.ಎ., ಬಿ.ಎಸ್ಸಿ, ಬಿ.ಕಾಂ., ಬಿ.ಬಿ.ಎ. ಕೋರ್ಸ್‌ಗಳಿದ್ದು, ಪ್ರಥಮ ಸೆಮಿಸ್ಟರ್‌ನ 676 ಸೀಟುಗಳು ಲಭ್ಯ. ಬಿ.ಬಿ.ಎ. ಪ್ರವೇಶಕ್ಕೆ ಮಾತ್ರ ಕನಿಷ್ಠ ಶೇ.40ರಷ್ಟು ಅಂಕ ಕಡ್ಡಾಯ. ಪಿಯುಸಿ ದ್ವಿತೀಯ ವರ್ಷದಲ್ಲಿ ಉತ್ತೀರ್ಣರಾದ ಎಲ್ಲರೂ ಉಳಿದ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರು' ಎನ್ನುತ್ತಾರೆ ಪ್ರಾಚಾರ್ಯ ಪ್ರೊ.ಎ.ಟಿ. ಮುದುಕಣ್ಣವರ.

`ಪ್ರಥಮ ಸೆಮಿಸ್ಟರ್‌ನಲ್ಲಿ ಬಿ.ಎ. 600 ಸೀಟು ಭರ್ತಿಗೆ ಅವಕಾಶವಿದ್ದು, ಈ ವರೆಗೆ 203 ಸೀಟುಗಳು  ಮಾತ್ರ ಭರ್ತಿಯಾಗಿವೆ. ಬಿ.ಎಸ್ಸಿಗೆ 204 ಸೀಟುಗಳ ಪೈಕಿ 180 ಮತ್ತು ಬಿ.ಕಾಂ.ನಲ್ಲಿ ಲಭ್ಯವಿರುವ 120 ಪೈಕಿ 58 ಸೀಟುಗಳು ಖಾಲಿ ಇವೆ. ಬಿ.ಬಿ.ಎ.ದಲ್ಲಿ 60 ಸೀಟು ಲಭ್ಯವಿದ್ದು, 19 ವಿದ್ಯಾರ್ಥಿಗಳಷ್ಟೇ ಪ್ರವೇಶ ಪಡೆದಿದ್ದಾರೆ' ಎಂದು ಅವರು ವಿವರಿಸಿದರು.

`ಸಿಂದಗಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ., ಬಿ.ಕಾಂ., ಬಿ.ಬಿ.ಎ. ಕೋರ್ಸ್‌ಗಳಿವೆ. ಬಿ.ಎ. ಕೋರ್ಸ್‌ನ ಎಲ್ಲ ಸ್ಥಾನ ಭರ್ತಿಯಾಗಿದ್ದು, ಬಿ.ಕಾಂ.ಗೆ ಹೆಚ್ಚುವರಿ 20 ಸ್ಥಾನ ಲಭ್ಯ. ಬಿ.ಬಿ.ಎ.ಯ 60 ಸ್ಥಾನಗಳಲ್ಲಿ ಕೇವಲ 10 ಭರ್ತಿಯಾಗಿದ್ದು, ಇನ್ನೂ 50 ಸ್ಥಾನ ಲಭ್ಯ' ಎಂದು ಆ ಕಾಲೇಜಿನ ಪ್ರಾಚಾರ್ಯ ಪ್ರೊ.ಕೆ.ಎಲ್. ಬಜಂತ್ರಿ ಹೇಳಿದರು.

`ಮುದ್ದೇಬಿಹಾಳ ಕಾಲೇಜಿನಲ್ಲಿ ಬಿ.ಬಿ.ಎ. 30, ಬಿ.ಎಸ್ಸಿಯಲ್ಲಿ 45 ಸ್ಥಾನ ಲಭ್ಯ. ಪಿಯುಸಿಯಲ್ಲಿ ಶೇ.35ರಷ್ಟು ಅಂಕ ಪಡೆದಿದ್ದರೂ ಬಿ.ಬಿ.ಎ. ಪ್ರವೇಶ ನೀಡಲಾಗುತ್ತಿದೆ' ಎಂದು ಮುದ್ದೇ 0ಬಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಹೊಸಮನಿ ಹೇಳಿದರು.
`ಬಸವನ ಬಾಗೇವಾಡಿ ತಾಲ್ಲೂಕು ಗೊಳಸಂಗಿ ಪದವಿ ಕಾಲೇಜಿನಲ್ಲಿ ಬಿ.ಎ., ಬಿ.ಕಾಂ. ಪದವಿ ಕೋರ್ಸ್ ಗಳಿದ್ದು, ಬಿ.ಕಾಂ. ಇನ್ನೂ 23 ಸ್ಥಾನಗಳು ಖಾಲಿ ಇವೆ' ಎಂದು ಪ್ರಾಚಾರ್ಯೆ ಪ್ರೊ.ವಿಜಯಾ ಪುರೋಹಿತ ತಿಳಿಸಿದರು.

`ಬಸವನ ಬಾಗೇವಾಡಿ ಕಾಲೇಜಿನಲ್ಲಿ ಬಿ.ಎ. 125, ಬಿ.ಕಾಂ 45 ಸ್ಥಾನಗಳು ಖಾಲಿ ಉಳಿದಿವೆ. ಬಿಎಸ್ಸಿ ಮತ್ತು ಬಿಬಿಎಗೆ ಈ ವರೆಗೂ ಯಾರೂ ಪ್ರವೇಶ ಪಡೆದಿಲ್ಲ. ಈ ಕೋರ್ಸ್‌ಗಳಿಗೆ ಕನಿಷ್ಠ 15 ವಿದ್ಯಾರ್ಥಿಗಳಾದರೂ ಪ್ರವೇಶ ಪಡೆಯಲೇಬೇಕು ಎಂಬ ನಿಯಮ ಇದೆ' ಎನ್ನುತ್ತಾರೆ ಆ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಆರ್. ಜೋಶಿ.

ಇಂಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ. 100, ಬಿ.ಕಾಂ.ನ 16 ಸ್ಥಾನ ಖಾಲಿ ಉಳಿದಿವೆ.
`ಮಮದಾಪುರ ಕಾಲೇಜಿನಲ್ಲಿ ಬಿ.ಎ. ಪ್ರಥಮ ಸೆಮಿಸ್ಟರ್‌ನ 240 ಸ್ಥಾನ ಭರ್ತಿಯಾಗಿವೆ. ಬಿ.ಕಾಂ., ಬಿ.ಬಿ.ಎ. ಕೋರ್ಸ್‌ಗಳು ಮಂಜೂರಾಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಲಭ್ಯರಿಲ್ಲದ ಕಾರಣ ಆ ಕೋರ್ಸ್‌ಗಳನ್ನು ಆರಂಭಿಸಿಲ್ಲ' ಎನ್ನುತ್ತಾರೆ ಪ್ರಾಚಾರ್ಯೆ ಶ್ಯಾಮಲಾ ಎಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT