ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಬಸ್‌ಗೆ `ಖಾಸಗಿ' ಡೀಸೆಲ್?

Last Updated 19 ಜನವರಿ 2013, 19:55 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ಸಗಟು ಖರೀದಿ ಡೀಸೆಲ್ ದರವನ್ನು ಲೀಟರ್‌ಗೆ ಸುಮಾರು 11 ರೂಪಾಯಿಯಷ್ಟು ಹೆಚ್ಚಿಸಿರುವುದು ಸಾರಿಗೆ ಸಂಸ್ಥೆಗಳ ಮೇಲೆ ವಿಪರೀತ ಹೊರೆ ಹಾಕಿದೆ. ಈ ಹಿನ್ನೆಲೆಯಲ್ಲಿ ಸಗಟು ಖರೀದಿಯನ್ನು ಸ್ಥಗಿತಗೊಳಿಸಿ, ಖಾಸಗಿ ಬಂಕ್‌ಗಳಿಂದಲೇ ಡೀಸೆಲ್ ಖರೀದಿಸುವ ಬಗ್ಗೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳು ಚಿಂತನೆ ನಡೆಸಿವೆ. ಆಯಾ ಡಿಪೊ ವ್ಯಾಪ್ತಿಯ ಬಸ್‌ಗಳಿಗೆ ಸ್ಥಳೀಯ ಬಂಕ್‌ಗಳಲ್ಲಿ ಡೀಸೆಲ್ ಹಾಕಿಸುವುದರಿಂದ ದರ ಏರಿಕೆಯ ಬಿಸಿಯಿಂದ ತಪ್ಪಿಸಿಕೊಳ್ಳಬಹುದು ಎನ್ನುವುದು ಇದರ ಹಿಂದಿನ ಲೆಕ್ಕಾಚಾರ.

ಇನ್ನೂ ನಿರ್ಧಾರ ಇಲ್ಲ: ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಆದರೆ ಕೇಂದ್ರ ಸರ್ಕಾರದ ಜನ ವಿರೋಧಿ ತೀರ್ಮಾನದಿಂದ ಎಲ್ಲ ಸಾರಿಗೆ ನಿಗಮಗಳೂ ನಷ್ಟಕ್ಕೆ ತುತ್ತಾಗಲಿವೆ ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಆರ್.ಅಶೋಕ ಹೇಳಿದರು.

ಖಾಸಗಿಯವರಿಗೆ ಅನುಕೂಲ ಮಾಡಲು ಸಗಟು ಖರೀದಿ ಮಾಡುವವರಿಗೆ ಬರೆ ಎಳೆಯುವ ತೀರ್ಮಾನವನ್ನು ಕೇಂದ್ರ  ತೆಗೆದುಕೊಂಡಿದೆ. ಖಾಸಗಿಯವರಿಗೆ ಪ್ರತಿ ಲೀಟರ್ ಡೀಸೆಲ್‌ಗೆ 50 ಪೈಸೆ ಹೆಚ್ಚಿಸಿದರೆ, ಸಗಟು ಖರೀದಿ ಮಾಡುವ ಸಾರಿಗೆ ಸಂಸ್ಥೆಗಳಿಗೆ ರೂ. 11.95ರಷ್ಟು ಹೆಚ್ಚಿಸಿದೆ. ಸರ್ಕಾರಿ ಸಂಸ್ಥೆಗಳನ್ನು ಮುಳುಗಿಸುವ ತೀರ್ಮಾನ  ಸರ್ಕಾರ ತೆಗೆದುಕೊಂಡಿದೆ ಎಂದರು.

ಕೇಂದ್ರಕ್ಕೆ ಪತ್ರ: ಡೀಸೆಲ್ ದರ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಸದ್ಯದಲ್ಲೇ ಪತ್ರ ಬರೆಯಲಾಗುವುದು. ಅವೈಜ್ಞಾನಿಕ ರೀತಿಯ ದರ ಏರಿಕೆಯಿಂದ ಆಗುವ ಪರಿಣಾಮಗಳ ಬಗ್ಗೆಯೂ ವಿವರಿಸಲಾಗುವುದು ಎಂದು ಅವರು ಹೇಳಿದರು.

ರೈಲ್ವೆಗೆರೂ. 2700 ಕೋಟಿ ಹೆಚ್ಚುವರಿ ಹೊರೆ
ನವದೆಹಲಿ (ಪಿಟಿಐ): ಡೀಸೆಲ್ ಬೆಲೆ ಏರಿಸುವ ಸರ್ಕಾರದ ನಿರ್ಧಾರದಿಂದಾಗಿ ಭಾರತೀಯ ರೈಲ್ವೆಯು ಭಾರಿ ಬೆಲೆ ತೆರಬೇಕಾಗಿದ್ದು ಪ್ರತಿ ವರ್ಷ ಇಲಾಖೆಗೆ ರೂ. 2700 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.

ಕಳೆದ ಆರ್ಥಿಕ ವರ್ಷದಲ್ಲಿ ರೈಲ್ವೆ ಇಲಾಖೆ ತೈಲಕ್ಕಾಗಿ ರೂ. 10 ಸಾವಿರ ಕೋಟಿ ಪಾವತಿಸಿದೆ. ಸೇನೆ, ರಸ್ತೆ ಸಾರಿಗೆ ಹಾಗೂ ಇತರ ಸಂಸ್ಥೆಗಳಿಗೆ ಹೋಲಿಸಿದಲ್ಲಿ ರೈಲ್ವೆ ಸಗಟು ರೂಪದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಡೀಸೆಲ್ ಖರೀದಿಸುತ್ತದೆ. ಪ್ರತಿ ವರ್ಷ 250 ಕೊಟಿ ಲೀಟರ್ ಡೀಸೆಲ್ ಬಳಸುತ್ತದೆ.

ಸದ್ಯದ ಬೆಲೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಪ್ರತಿ ವರ್ಷರೂ. 9000 ಕೋಟಿ ಇಂಧನಕ್ಕಾಗಿ ವೆಚ್ಚವಾಗಲಿದೆ. ಡೀಸೆಲ್ ಬೆಲೆ  ಏರಿಕೆಯಿಂದ ಪ್ರತಿ ವರ್ಷ ಈ ಮೊತ್ತ ಹೆಚ್ಚುತ್ತಲೇ ಸಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT