ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವಿ.ವಿಗಳ ಮಹತ್ವ ಕುಗ್ಗಿಸುವ ಹುನ್ನಾರ

Last Updated 14 ಡಿಸೆಂಬರ್ 2012, 19:36 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ವಿಶ್ವವಿದ್ಯಾಲ ಯಗಳ ಸ್ಥಾಪನೆಗೆ ಅವಕಾಶ ನೀಡುವ ಮಸೂದೆಗಳನ್ನು ಅಂಗೀಕರಿಸಿರುವುದರ ಹಿಂದೆ ಸರ್ಕಾರಿ ವಿಶ್ವವಿದ್ಯಾಲಯಗಳ ಮಹತ್ವವನ್ನು ಕಡಿಮೆ ಮಾಡುವ ಹುನ್ನಾರ ಅಡಗಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಜ್ಯ ಘಟಕದ ಅಧ್ಯಕ್ಷ ಅನಂತನಾಯ್ಕ ದೂರಿದರು.

`ಖಾಸಗಿ ವಿ.ವಿ.ಗಳನ್ನು ವಿರೋಧಿಸಿ ಹಾಗೂ ಉನ್ನತ ಶಿಕ್ಷಣದ ಸವಾಲುಗಳು' ಕುರಿತು ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಎಸ್‌ಎಫ್‌ಐ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದ ಹಲವು ವಿ.ವಿ.ಗಳು ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ ಸೇರಿನಾನಾ ಸಮಸ್ಯೆಗಳನ್ನು ಎದುರಿಸುತ್ತಿವೆ. ಹೀಗಿದ್ದಾಗ ಖಾಸಗಿ ವಿ.ವಿ.ಗಳ ಸ್ಥಾಪನೆಗೆ ಅನುಮತಿ ನೀಡಲು ಹೊರಟಿರುವುದು ಸರಿಯಲ್ಲ. ಖಾಸಗಿ ವಿ.ವಿ.ಗಳನ್ನು ತೆರೆಯುವುದರಿಂದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. ರಾಜ್ಯಪಾಲರು ಯಾವುದೇ ಕಾರಣಕ್ಕೂ ಮಸೂದೆಗಳಿಗೆ ಅನುಮೋದನೆ ನೀಡಬಾರದು ಎಂದು ಒತ್ತಾಯಿಸಿದರು.

ಖಾಸಗಿಯವರಿಂದ ಸ್ಥಾಪಿಸಲ್ಪಡುವ ವಿ.ವಿ.ಗಳಿಗೆ ರಾಜ್ಯಪಾಲರ ಬದಲು, ಅವರದೇ ಸಂಸ್ಥೆಯ ವ್ಯಕ್ತಿಯೊಬ್ಬರು ಕುಲಾಧಿಪತಿಯಾಗಿನೇಮಕವಾಗುತ್ತಾರೆ. ಸಿಬ್ಬಂದಿ ನೇಮಕ, ಪ್ರವೇಶ, ಪಠ್ಯರಚನೆ, ಶುಲ್ಕನೀತಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಸಂಸ್ಥೆಯೇ ಮಾಡಲಿದೆ. ಈಗಾಗಲೇ ಚಾಲ್ತಿಯಲ್ಲಿರುವ ಖಾಸಗಿ ವಿ.ವಿ.ಗಳಲ್ಲಿ ಶುಲ್ಕ ಹೆಚ್ಚಳಕ್ಕೆ ಮಿತಿಯೇ ಇಲ್ಲದಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಗೊತ್ತಿದ್ದರೂ ಜಾಣಕುರುಡು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳ ಹಿತರಕ್ಷಣೆಯೇ ನಮ್ಮ ಗುರಿ ಎನ್ನುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಈ ಕುರಿತು ತುಟಿ ಬಿಚ್ಚಿಲ್ಲ.  ಉನ್ನತ ಶಿಕ್ಷಣ ಸಚಿವ ಸಿ.ಟಿರವಿ ಅವರು ಎಬಿವಿಪಿಯಿಂದಲೇ ಬಂದಿದ್ದು, ಆಡಳಿತ ಪಕ್ಷದ ಹಲವರ ವಿರೋಧದ ನಡುವೆಯೂ ತರಾತುರಿಯಿಂದ ಮಸೂದೆಗೆ ಅಂಗೀಕಾರ ನೀಡಿರುವುದರ ಹಿಂದೆ ವೈಯಕ್ತಿಕ ಹಿತಾಸಕ್ತಿ ಇದೆ ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಎಸ್‌ಎಫ್‌ಐನ ರಾಷ್ಟ್ರೀಯ ಅಧ್ಯಕ್ಷ ಡಾ.ವಿ.ಶಿವದಾಸನ್, ಶಿಕ್ಷಣಕ್ಕೆ ಒತ್ತು ನೀಡುವ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳೆರಡೂ ನಿರ್ಲಕ್ಷ್ಯ ಧೋರಣೆ ತಳೆದಿವೆ. ಗೋಹತ್ಯೆ ನಿಷೇಧ ಕುರಿತ ಮಸೂದೆಯನ್ನು ಅಂಗೀಕರಿಸುವ ಸರ್ಕಾರಕ್ಕೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಕಾಣುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯ ಕಾರ್ಯದರ್ಶಿ ಹುಳ್ಳಿ ಉಮೇಶ್, ರಾಜ್ಯ ವಿ.ವಿ ಉಪಸಮಿತಿ ಸಂಚಾಲಕ ಯುವರಾಜ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT