ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ನಿರ್ಲಕ್ಷ್ಯದಿಂದ ಖಾಸಗಿ ಶಾಲೆ ಹೆಚ್ಚಳ

ಮಾನವ ಹಕ್ಕುಗಳ ಸಂವಾದ ಕಾರ್ಯಕ್ರಮದಲ್ಲಿ ಶಿವಲಿಂಗಾನಂದ ಸ್ವಾಮೀಜಿ ಅಭಿಮತ
Last Updated 13 ಡಿಸೆಂಬರ್ 2013, 8:30 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ ಹಾಗೂ ಶಿಕ್ಷಕರ ನಿರ್ಲಕ್ಷ್ಯ ಇಂದು ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ’ ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶರಣ ಸಾಹಿತ್ಯ ಪರಿಷತ್ ಹಾಗೂ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಸಂಯುಕ್ತಾಶ್ರಯದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ಸಂವಾದ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು  ಮಾತನಾಡಿದರು.

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ನುರಿತ ಶಿಕ್ಷಕರು, ಪ್ರಾಧ್ಯಾಪಕರಿದ್ದರೂ ಇಂದಿನ ಮಕ್ಕಳ ಬುದ್ಧಿಮಟ್ಟ ಚುರುಕುಗೊಳಿಸುವ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಕೆಲಸ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವುದರಿಂದ ಅವುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಹದಿಹರೆಯದ ವಯಸ್ಸಿನಲ್ಲಿ ಮಾನಸಿಕ ಸಮತೋಲನವಿಲ್ಲದ ಕಾರಣ ವಿವಿಧ ತಪ್ಪುಗಳು ಸಂಭವಿಸುತ್ತವೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹರಿಬಿಟ್ಟರೆ ವಿವಿಧ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ. ಅದಕ್ಕೆ ಆಸ್ಪದ ನೀಡದಂತೆ ಪೋಷಕರು, ಶಿಕ್ಷಕರು ಹಾಗೂ ಗುರು–ಹಿರಿಯರ ಮಾರ್ಗದರ್ಶದಲ್ಲಿ ನಡೆಯಬೇಕು ಎಂದು  ಸಲಹೆ ನೀಡಿದರು.

ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ 125 ಕೋಟಿ ಜನಸಂಖ್ಯೆಯಿದ್ದು, ಅದರಲ್ಲಿ ಸುಮಾರು 50 ಕೋಟಿ ಮಂದಿಗೆ ಪ್ರಸ್ತುತ ಇಂದಿಗೂ ಶೌಚಾಲಯ ವ್ಯವಸ್ಥೆಯಿಲ್ಲ. ಚರಂಡಿ, ಸ್ವಚ್ಛತೆ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಆದ್ದರಿಂದ ಎಲ್ಲರೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಿಕೊಂಡು ಸಿಗದಿದ್ದ ಪಕ್ಷದಲ್ಲಿ ಕೇಳಿ ಪಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಪೊಲೀಸ್‌ ಠಾಣೆಗಳಿಗೆ ನಾಗರಿಕರು ಹೋಗಿ ದೂರು ನೀಡುವ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಗಳು ಸೌಜನ್ಯದಿಂದ ವರ್ತಿಸದಿದ್ದರೆ ಅದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಹಾಗೂ ಕಾನೂನಿನ ಬಗ್ಗೆ ಕನಿಷ್ಠ ತಿಳಿವಳಿಕೆಯಾದರು ಇರಬೇಕು. ಈ ಬಗ್ಗೆ ಪ್ರತಿಯೊಬರೂ ಮಾನವ ಹಕ್ಕುಗಳು ಹಾಗೂ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ದೇಶದಲ್ಲಿ ಕಾನೂನು ಎಂಬುದು ಪೊಲೀಸರಿಗೆ ಬೇರೆ ಸಾಮಾನ್ಯ ನಾಗರಿಕರಿಗೆ ಬೇರೆ ಎನ್ನುವಂಥ ವ್ಯತ್ಯಾಸವಿಲ್ಲ. ಎಲ್ಲರಿಗೂ ಒಂದೇ ಆಗಿದೆ. ತಮ್ಮ ಹಕ್ಕುಗಳಿಗೆ ಚ್ಯುತಿ ಉಂಟಾದ ಸಂದರ್ಭದಲ್ಲಿ ಅವುಗಳನ್ನು ಚಲಾಯಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಿ. ಬೋರಪ್ಪ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಅವಶ್ಯಕ. ಆದ್ದರಿಂದ ಜಿಲ್ಲಾಡಳಿತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಕ್ಕುಗಳ ಕುರಿತು ಕೈಪಿಡಿ ಹೊರತರುವ ಕೆಲಸ ಮಾಡಿದರೆ, ತಮ್ಮಿಂದ ಕೈಲಾದಷ್ಟು ಸಹಕಾರ ನೀಡುವ ಭರವಸೆ ನೀಡಿದರು.

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಿಯು ವಿದ್ಯಾರ್ಥಿಗಳಾದ ರೇಖಾರಾಣಿ, ಫಿಜಾ, ಕೃಷ್ಣಾವೇಣಿ. ರೇಖಾ, ಸಂಧ್ಯಾ, ಶಿವರಾಜ್, ಪ್ರವೀಣ್, ಶಿಲ್ಪಾ, ಮೋನಿಕಾ ಇತರರು ಕೇಳಿದ ಡಾ. ಸವಿತಾ ಹಾಲಪ್ಪ ಪ್ರಕರಣ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ, ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೆಷನ್ ಹಾವಳಿ, ಬಾಲ್ಯ ವಿವಾಹ ತಡೆಗಟ್ಟುವುದು ಹೇಗೆ? ಸೇರಿದಂತೆ ವಿವಿಧ ಪ್ರಶ್ನೆಗಳಿಗೆ ವಕೀಲ ಕುಮಾರ್‌ಗೌಡ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT