ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಸರಿಯಲ್ಲ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಕ್ಕಳ ಅಭಾವವನ್ನು ಎದುರಿಸುತ್ತಿವೆ ಎನ್ನುವ ಕಾರಣ ನೀಡಿ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಕರ್ನಾಟಕ ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ ಎನ್ನುವ ವರದಿಗಳನ್ನು ಪತ್ರಿಕೆಗಳಲ್ಲಿ ನೋಡಿದ್ದೆೀವೆ. ಹಲವು ಪತ್ರಿಕೆಗಳು ಈ ನಿರ್ಧಾರವನ್ನು ಖಂಡಿಸಿ ಸಂಪಾದಕೀಯ ಬರೆದಿವೆ.  ನಾಡಿನ ಪ್ರಜ್ಞಾವಂತರು, ಶಿಕ್ಷಣ ತಜ್ಞರಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗಿದೆ.

ಒಂದು ಕಡೆ ಕನ್ನಡಕ್ಕೆ `ಶಾಸ್ತ್ರೀಯ ಭಾಷೆಯ~ ಸ್ಥಾನಮಾನ, ಮತ್ತೊಂದು ಕಡೆ `ಶಿಕ್ಷಣ ಹಕ್ಕು ಕಾಯ್ದೆಯ~ ಅನುಷ್ಠಾನ, ಮಗದೊಂದು ಕಡೆ ಕನ್ನಡ ಶಾಲೆಗಳಿಗೆ ಬೀಗ ಜಡೆಯುವ ತೀರ್ಮಾನ. ಇಂತಹ ಸನ್ನಿವೇಶದಲ್ಲಿ ಯಾವ ಸಾಧನೆಯನ್ನು ಮುಂದೆ ಮಾಡಿಕೊಂಡು ನಾಡಿನ ಜನ ಸಂಭ್ರಮಿಸುವುದು?

ಭಾಷೆಗೇನೊ ಶಾಸ್ತ್ರೀಯ ಸ್ಥಾನ-ಮಾನ. ಶಾಸ್ತ್ರೀಯವಾಗಿ ಕಲಿಯಲು ಶಾಲೆಗಳೇ ಇಲ್ಲದೇ ಹೋದರೆ ಭಾಷೆ ಉಳಿಯುವುದು ಹೇಗೆ? ಮುಚ್ಚಲು ಹೊರಟಿರುವ ಸರ್ಕಾರಿ ಶಾಲೆಗಳು ಕನ್ನಡ ಕಲಿಸುತ್ತಿರುವ ಶಾಲೆಗಳು. ಮೇಲಾಗಿ ಬಡವರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಶಾಲೆಗಳು. ಇವುಗಳನ್ನು ಮುಚ್ಚುವುದೆಂದರೆ ಕನ್ನಡಕ್ಕೂ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೂ ಒಟ್ಟಿಗೆ ಬೀಗ ಜಡಿದಂತೆ. ಶಾಲೆಗಳಿಗೆ ಬೀಗ ಜಡಿದ ಮೇಲೆ ಶಿಕ್ಷಣ ಹಕ್ಕು ಮಸೂದೆಯನ್ನು ಅನುಷ್ಠಾನಗೊಳಿಸುವುದು ಎಲ್ಲಿ? ಕಾಯ್ದೆಯನ್ನು ಬಗಲಲ್ಲಿಟ್ಟುಕೊಂಡು ಸಾಧಿಸುವುದಾದರೂ ಏನನ್ನು? ಬಡವರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅವಕಾಶವನ್ನು ಕಾಯ್ದಿರಿಸಿಕೊಂಡೇ, ಖಾಸಗಿ ಒಡೆತನಕ್ಕೆ ಇನ್ನೂ ಉತ್ತಮ ಭವಿಷ್ಯ ಮುಂದಿದೆ ಎನ್ನುವುದನ್ನು ಆಲೋಚಿಸಿಕೊಂಡೆ ನೀತಿ-ನಿರೂಪಕರು ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದರೆ ಎನ್ನುವ ಸಂಶಯ ಶಿಕ್ಷಣ ಪ್ರೇಮಿಗಳನ್ನು ಕಾಡಿದರೆ ಆಶ್ಚರ್ಯವಿಲ್ಲ.

ಸರ್ಕಾರಿ ಶಾಲೆಗಳನ್ನು ಕಡೆಗಣಿಸಿ ಖಾಸಗಿ ಶಾಲೆಗಳ ಭವಿಷ್ಯ ಉಜ್ವಲವಾಗಿರಲು ಬೇಕಾದಂತಹ ವಾತಾವರಣವನ್ನು ನಿರ್ಮಾಣ ಮಾಡಿದರೆ ಸಹಜವಾಗಿ ಹೆತ್ತವರು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸಾಲ-ಸೋಲ ಮಾಡಿಯಾದರೂ ಉತ್ತಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಆಸಕ್ತಿ ತೋರಿಸುತ್ತಾರೆ. ಶಿಥಿಲಗೊಂಡ ಸೇತುವೆಯ ಎದುರಿನಲ್ಲಿ ಪರ್ಯಾಯ ಸೇತುವೆಯೊಂದನ್ನು ನಿರ್ಮಿಸಿ ಎಷ್ಟೇ ಹಣ ನಿಗದಿ ಮಾಡಿದರೂ ಜನ ಹಣ ಪಾವತಿಸಿ ಉತ್ತಮ ಸೇತುವೆಯ ಮೇಲೆ ಓಡಾಡುತ್ತಾರೆಯೇ ಹೊರತು ಇನ್ನೇನು ಬೀಳುತ್ತದೆನ್ನುವ ಸೇತುವೆ ಮೇಲೆ ಸಂಚರಿಸಿ ಪ್ರಾಣ ಕಳೆದುಕೊಳ್ಳಲು ಬಯಸುವುದಿಲ್ಲ. ಇಂದಿನ ಶೈಕ್ಷಣಿಕ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಶಿಥಿಲಗೊಂಡ ಸೇತುವೆಗೆ ಪರ್ಯಾಯ ವ್ಯವಸ್ಥೆ ಬೇಕೆ ಬೇಕು. ಅದನ್ನು ರೂಪುಗೊಳಿಸಿ ಸಂಚಾರಕ್ಕೆ ಯೋಗ್ಯಗೊಳಿಸುವುದು ಜನಪರ ಕೆಲಸ. ಆದರೆ ಅದೇ ಕೆಲಸವನ್ನು ಖಾಸಗಿಗೆ ವಹಿಸಿ ಹಣ ವಸೂಲಿಗೆ ಪ್ರೋತ್ಸಾಹಿಸುವುದೆಂದರೆ ವ್ಯಾಪಾರಿ ಕೆಲಸ. ಸರ್ಕಾರ ನಿರ್ವಹಿಸಲು ಹೊರಟಿರುವುದು ಜವಾಬ್ದಾರಿಯನ್ನೋ ಇಲ್ಲವೇ ವ್ಯಾಪಾರವನ್ನೋ ಎನ್ನುವ ಪ್ರಶ್ನೆ ಶಿಕ್ಷಣ ಕ್ಷೇತ್ರದಲ್ಲಿ ಎಂದೋ ಮೂಡಿದೆ. ಇದೀಗ ಅದರ ಫೈನಲ್ ಶೋ ನಡೆಯುತ್ತಿದೆ.
ಶಿಕ್ಷಣ, ಆರೋಗ್ಯ, ಆಹಾರ, ಉದ್ಯೋಗ ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಸರ್ಕಾರದ್ದೆೀ ಹೊರತು ಖಾಸಗಿಯವರದಲ್ಲ. ಸಾರ್ವಜನಿಕ ಸೇವಾ ವಲಯಗಳನ್ನು ಮೊದಲು ಅಸ್ಥಿರಗೊಳಿಸುವುದು, ನಂತರ ಅದನ್ನೇ ನೆಪಮಾಡಿಕೊಂಡು `ಜೀರ್ಣೋದ್ಧಾರಕ್ಕೆ~ ಖಾಸಗಿಯವರನ್ನು ಆಹ್ವಾನಿಸುವುದು ಗುಟ್ಟಾಗಿರುವ ವಿಚಾರವೇನೂ ಅಲ್ಲ.

ಕಳೆದ ಎರಡು ದಶಕಗಳಿಂದಲೂ ಆಯ್ಕೆಯಾಗುತ್ತಿರುವ ಯಾವುದೇ ಸರ್ಕಾರದ ಆದ್ಯ ಕೆಲಸ ಯಾವುದೆಂದರೆ ಇದೇ. ಕೇಂದ್ರವಿರಲಿ, ರಾಜ್ಯವಿರಲಿ, ಖಾಸಗಿಯವರ ಪರವಾಗಿರುವ ಇವರ ಒಲವು ಸಾರ್ವಜನಿಕ ಕ್ಷೇತ್ರಕ್ಕಿಲ್ಲ. ಏಕೆಂದರೆ ಗೆದ್ದು ಬರುತ್ತಿರುವವರಲ್ಲಿ ಬಹುತೇಕರು ಒಂದಲ್ಲ ಒಂದು ರೀತಿಯಲ್ಲಿ  ಖಾಸಗಿ ಒಡೆತನದ ಮಾಲೀಕರಾಗಿರುವುದು. ಶಿಕ್ಷಣ ರಂಗದ ಖಾಸಗೀಕರಣ ರಾತ್ರೋ-ರಾತ್ರಿ ನಡೆಯುತ್ತಿರುವ ಪ್ರಕ್ರಿಯೆಯೂ ಅಲ್ಲ. ಅಲ್ಪಸ್ವಲ್ಪ ಪ್ರಮಾಣದಲ್ಲಿದ್ದ ಈ ಪರಂಪರೆ ದೇಶದಲ್ಲಿ ಉದಾರೀಕರಣ ನೀತಿಯನ್ನು  ಜಾರಿಮಾಡಿದ ನಂತರ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿ ಮಾರ್ಪಟ್ಟು ವೇಗ ಹೆಚ್ಚಿಸಿಕೊಂಡಿತು. ಕರ್ನಾಟಕದ ಮಟ್ಟಿಗಂತೂ ವೇಗನಿಯಂತ್ರಣ ಸಾಧ್ಯವಿಲ್ಲದ ಹಂತ ತಲುಪಿದೆ. ಹಂತ-ಹಂತವಾಗಿ ಜಾರಿಗೆ ಬರುತ್ತಿರುವ  ಖಾಸಗೀಕರಣ ಪ್ರಕ್ರಿಯೆಗಳನ್ನು ಹೀಗೇ ಒಪ್ಪುತ್ತಾ ಹೋದರೆ ನಿಲ್ಲುವುದಾದರೂ ಎಲ್ಲಿಗೆ? ಇಂದು  ಸರ್ಕಾರಿ ಶಾಲೆಗಳು, ನಾಳೆ ಸರ್ಕಾರಿ ಆಸ್ಪತ್ರೆಗಳು, ನಾಡಿದ್ದು ನ್ಯಾಯಬೆಲೆ ಅಂಗಡಿಗಳು. ಕೊನೆಗೆ ಸರ್ಕಾರಗಳು ನಮ್ಮ ಪಾಲಿಗೆ ಉಳಿಸುವುದಾದರೂ ಏನನ್ನು? ಮಠ-ಮಂದಿರಗಳನ್ನೆ?
ಏನೇ ಆದರೂ ಭಾರತದ ಸಾಕ್ಷರತಾ ಪ್ರಮಾಣ ಶೇಕಡಾ 75ನ್ನೂ ದಾಟದಿರುವ ಈ ಹಂತದಲ್ಲಿ ಶಿಕ್ಷಣದ ಮೇಲೆ ಬರೆ ಎಳೆಯುವ ಇಂಥಾ ನಿರ್ಧಾರಗಳು ದುರದೃಷ್ಟಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT