ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳಲ್ಲಿ `ನಮ್ಮ ಗ್ರಂಥಾಲಯ'

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೋಧನೆಗಿಂತ ಭಿನ್ನವಾದ ಮಾದರಿಯಲ್ಲಿ ಬುದ್ಧಿಮಾಂದ್ಯರಿಗೆ, ಅಂಗವಿಕಲರಿಗೆ ಮತ್ತು ಸಾಮಾನ್ಯ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿವಿಧ ಜಿಲ್ಲೆಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ `ನಮ್ಮ ಗ್ರಂಥಾಲಯ' ಎಂಬ ವಿನೂತನ ಯೋಜನೆಯನ್ನು ಸೋಮವಾರ ಆರಂಭಿಸಲಿದೆ.

ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಮತ್ತು ರಾಬರ್ಟ್ ಬಾಷ್ ಸಂಸ್ಥೆ ಸಹಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಚಿಕ್ಕಬಳ್ಳಾಪುರ, ದಾವಣಗೆರೆ, ವಿಜಾಪುರ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ `ನಮ್ಮ ಗ್ರಂಥಾಲಯ'ಕ್ಕೆ ಚಾಲನೆ ನೀಡಲಿದೆ. ಕಲಿಕಾ ದೋಷದಿಂದ ಬಳಲುತ್ತಿರುವ ಮಕ್ಕಳೂ ಸೇರಿದಂತೆ ಎಲ್ಲರಿಗೂ ವಿಭಿನ್ನ ಮಾದರಿಯಲ್ಲಿ ಶಿಕ್ಷಣ ನೀಡುವ ಗುರಿ ಈ ಮೂಲಕ ಈಡೇರಲಿದೆ.

ಪ್ರಥಮ ಹಂತದಲ್ಲಿ ಸೋಮವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ನಗರ, ಮಂಡಿಕಲ್, ಅಜ್ಜವಾರ, ನಂದಿ ಮತ್ತು ಪೆರೇಸಂದ್ರ ಸರ್ಕಾರಿ ಶಾಲೆಗಳಲ್ಲಿ ನೂತನ ಕಲಿಕಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆ. 13ರಂದು ದಾವಣಗೆರೆ ಜಿಲ್ಲೆಯ ನಗರ, ಆನೆಕೊಂಡ, ಲೋಕಿಕೆರೆ, ಬೆಳವನೂರು ಶಾಲೆಗಳಲ್ಲಿ ಶುರುವಾಗಲಿದೆ. ಆ. 14ರಂದು ವಿಜಾಪುರ ಜಿಲ್ಲೆಯ ದರ್ಗಾ, ಕೆ.ಸಿ.ನಗರ, ಕೆಎಚ್‌ಬಿ ಕಾಲೊನಿ, ತಿಕೋಟ ಮತ್ತು ಜೋರಾಪುರ ಪೇಟೆಯಲ್ಲಿ ನೂತನ ಗ್ರಂಥಾಲಯಗಳು ಉದ್ಘಾಟನೆಯಾಗಲಿವೆ.

ಹಳೆಯ ಮಾದರಿ ಸಾಂಪ್ರದಾಯಿಕ ಗ್ರಂಥಾಲಯಗಳಿಗಿಂತ ಭಿನ್ನವಾದ ಸ್ವರೂಪ, ಕಲಿಕಾ ವಿಧಾನ ಹೊಂದಿರುವ `ನಮ್ಮ ಗ್ರಂಥಾಲಯ'ದಲ್ಲಿ 1ರಿಂದ 8 ತರಗತಿ ಮಕ್ಕಳಿಗೆಂದೇ ಪ್ರತ್ಯೇಕ ಪುಸ್ತಕ, ವಸ್ತು, ಕಲಿಕಾ ಸಾಮಗ್ರಿ, ಜ್ಞಾನ ವೃದ್ಧಿಸುವ ಇತರ ವಸ್ತುಗಳು ಇರುತ್ತವೆ. ಮಕ್ಕಳು ಬಿಡುವಿನ ಸಮಯದಲ್ಲಿ ಪುಸ್ತಕ ಓದಬಹುದು, ಕಲಿಕಾ ಸಾಮಗ್ರಿ ಬಳಸಬಹುದು ಮತ್ತು ಶಿಕ್ಷಕರಿಂದ ಅಗತ್ಯ ಮಾರ್ಗದರ್ಶನ ಕೂಡ ಪಡೆಯಬಹುದು. ಪಠ್ಯೇತರ ಚಟುವಟಿಕೆ ಸ್ವರೂಪದಲ್ಲಿ ಹಲವು ಸಂಗತಿಗಳನ್ನು ಕಲಿಯಬಹುದು.

ಸಾಮಾನ್ಯ ಶಾಲೆಗಳಲ್ಲಿ ಕೆಲ ಮಕ್ಕಳು ಬುದ್ಧಿಮಾಂದ್ಯತೆ, ಅಂಗವೈಕಲ್ಯ ಮುಂತಾದ ಕಾರಣಗಳಿಂದ ಬಳಲುತ್ತಿರುತ್ತಾರೆ. ಸಾಮಾನ್ಯರಂತೆ ಅವರು ಸಹ ಶಿಕ್ಷಣದಲ್ಲಿ ಹೆಚ್ಚಿನ ಸಾಧನೆ ಮಾಡಲು ಬಯಸಿದರೂ ಬೌದ್ಧಿಕ, ದೈಹಿಕ ಸಮಸ್ಯೆಗಳಿಂದ ಸಾಧ್ಯವಾಗುವುದಿಲ್ಲ.

ಅಂತಹ ಮಕ್ಕಳಿಗೆಂದೇ ಪ್ರತ್ಯೇಕ ಗ್ರಂಥಾಲಯ ರೂಪಿಸಿದರೆ, ಸಾಮಾನ್ಯ ಮಕ್ಕಳ ಜೊತೆ ಅವರೂ ಹೊಸ ಸಂಗತಿಗಳನ್ನು ಕಲಿಯಬಹುದು. ಅವರಲ್ಲಿ ಕಾಡುವ ಹಿಂಜರಿಕೆ ಮನೋಭಾವ ನಿವಾರಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ ಪ್ರಸಾದ್ ತಿಳಿಸಿದರು.

ಮಕ್ಕಳಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ಓದುವ ಹವ್ಯಾಸ ವೃದ್ಧಿಯಾಗಿರುವ ಕುರಿತು ನಿಗಾ ವಹಿಸಲೆಂದೇ ಮೂರು ತಿಂಗಳಿಗೊಮ್ಮೆ ಪ್ರಗತಿ ವರದಿಯನ್ನು ಪರಿಶೀಲಿಸುತ್ತೇವೆ. ಗ್ರಂಥಾಲಯ ಆರಂಭವಾದ ನಂತರ ಮಕ್ಕಳಲ್ಲಿ ಆಗುವ ಬದಲಾವಣೆಗಳನ್ನು ದಾಖಲಿಸುತ್ತೇವೆ. ಮಕ್ಕಳು ಆಯಾ ಪುಸ್ತಕಗಳನ್ನು ಓದಿದ್ದಾರೆಯೇ ಅಥವಾ ಇಲ್ಲವೇ, ಕಲಿಕಾ ಸಾಮಗ್ರಿ ಬಳಕೆಯಾಗಿವೆಯೇ ಅಥವಾ ಇಲ್ಲವೇ ಎಂಬುದನ್ನೂ ಗಮನಿಸುತ್ತೇವೆ. ಅದರ ಆಧಾರದ ಮೇಲೆ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಪ್ರಮಾಣ ಅಳೆಯುತ್ತೇವೆ ಎಂದು `ಎಪಿಡಿ' ಸಂಸ್ಥೆಯ ಪ್ರತಿನಿಧಿ ಮುನಿನಾರಾಯಣ `ಪ್ರಜಾವಾಣಿ'ಗೆ ತಿಳಿಸಿದರು.

ಗ್ರಂಥಾಲಯದ ಬಳಕೆ ಸಂಪೂರ್ಣ ಉಚಿತವಾಗಿದ್ದು, ಮಕ್ಕಳು ಅಥವಾ ಅವರ ಪೋಷಕರಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ. ಆರಂಭಿಕ ಹಂತದ ರೂಪದಲ್ಲಿ ಮೂರು ಜಿಲ್ಲೆಗಳಲ್ಲಿ ನೂತನ ಯೋಜನೆಯನ್ನು ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲೂ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT