ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಖಾಸಗಿ ಶಾಲೆ!

Last Updated 24 ಫೆಬ್ರುವರಿ 2011, 8:30 IST
ಅಕ್ಷರ ಗಾತ್ರ

ಚನ್ನಗಿರಿ: ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟ ಕಾನ್ವೆಂಟ್‌ಗಳಿಂದಾಗಿ ಅನೇಕ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವುದು ಇಂದು ಸಾಮಾನ್ಯ ಎನ್ನುವಂತಾಗಿದೆ. ಎಲ್ಲೆಂದರಲ್ಲಿ ಖಾಸಗಿ ಶಾಲೆ ತೆರೆಯಲು ಬೇಕಾಬಿಟ್ಟಿ ಅನುಮತಿ ನೀಡುತ್ತಿರುವ ಶಿಕ್ಷಣ ಇಲಾಖೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರಿ ಶಾಲೆಯ ಹೆಚ್ಚುವರಿ ಕಟ್ಟಡವನ್ನೇ ಖಾಸಗಿ ಕಾನ್ವೆಂಟ್‌ಗೆ ಬಾಡಿಗೆ ನೀಡಿದೆ.

ಇಂತಹ ಘಟನೆಗೆ ಸಾಕ್ಷಿಯಾಗಿರುವುದು ತಾಲ್ಲೂಕಿನ ಹಿರೇಮಳಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.ಗ್ರಾಮದ ಬಸ್‌ನಿಲ್ದಾಣದ ಬಳಿ ಮೊದಲು ಸರ್ಕಾರಿ ಶಾಲೆ ನಡೆಯುತ್ತಿದ್ದು, ಹೊಸ ಕಟ್ಟಡಕ್ಕೆ ಶಾಲೆ ಸ್ಥಳಾಂತರವಾದ ನಂತರ ಹಳೇ ಕಟ್ಟಡವನ್ನು ನಿರಂತರ ಕಲಿಕಾ ಕೇಂದ್ರಕ್ಕೆ ಹಾಗೂ ಗ್ರಂಥಾಲಯಕ್ಕೆ ಬಾಡಿಗೆ ನೀಡಲಾಗಿತ್ತು. ಐದು ವರ್ಷಗಳ ಹಿಂದೆ ಈ ಕಟ್ಟಡವನ್ನು ಖಾಸಗಿ ಶಿಕ್ಷಣ ಸಂಸ್ಥೆಯೊಂದಕ್ಕೆ ಬಾಡಿಗೆ ನೀಡಲಾಗಿದ್ದು, ಇಂದಿಗೂ ಸರ್ಕಾರಿ ಶಾಲೆಯ ಕಟ್ಟಡದಲ್ಲೇ ಖಾಸಗಿ ಕಾನ್ವೆಂಟ್ ನಡೆಸಲಾಗುತ್ತಿದೆ.

‘ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳಿದ್ದರೆ ಅದನ್ನು ಇತರೆ ಇಲಾಖೆಗಳಿಗೆ, ಅಂಗನವಾಡಿ ಕೇಂದ್ರಕ್ಕೆ, ಗ್ರಾಮೀಣ ಗ್ರಂಥಾಲಯಗಳಿಗೆ ನೀಡಬೇಕು ಎನ್ನುವುದು ನಿಯಮ. ಆದರೆ, ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದೇ ಪರದಾಡುತ್ತಿದ್ದರೂ, ಸರ್ಕಾರಿ ಶಾಲೆಗಳಿಗೆ ಪೈಪೋಟಿ ನೀಡುವ ಖಾಸಗಿ ಸಂಸ್ಥೆಯ ಶಾಲೆ ನಡೆಸಲು ಕೊಠಡಿಗಳನ್ನು ಬಾಡಿಗೆಗೆ ನೀಡಿರುವುದು ಆಶ್ಚರ್ಯಕರವಾದ ಸಂಗತಿಯಾಗಿದೆ’ ಎಂದು ಗ್ರಾಮದ ಹನುಮಂತಪ್ಪ, ರಂಗಸ್ವಾಮಿ ದೂರಿದರು.

‘ಕಳೆದ ಐದು ವರ್ಷದ ಹಿಂದೆ ತಿಂಗಳಿಗೆ ` 1000 ಬಾಡಿಗೆಗೆ ಖಾಸಗಿ ಕಾನ್ವೆಂಟ್‌ಗೆ ಸರ್ಕಾರಿ ಶಾಲೆಯ ಹಳೇ ಕಟ್ಟಡವನ್ನು ಬಾಡಿಗೆ ನೀಡಲಾಗಿತ್ತು. ಈಗ ಐದು ವರ್ಷದ ಅವಧಿ ಮುಗಿದಿದ್ದು, ಮತ್ತೆ ಒಂದು ವರ್ಷದ ಅವಧಿಗೆ ಬಾಡಿಗೆ ನೀಡಲು ತೀರ್ಮಾನಿಸಿದ್ದೇವೆ. ಇದಕ್ಕೆ ಶಿಕ್ಷಣ ಇಲಾಖೆಯೂ ಅನುಮತಿ ನೀಡಿದೆ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮದಲ್ಲಿ ಅಂಗನವಾಡಿ ನಡೆಸಲು ಸ್ವಂತ ಕಟ್ಟಡ ಇಲ್ಲ. ಆಗಲೋ ಈಗಲೋ ಬೀಳುವಂತಿರುವ ಬಾಡಿಗೆ ಕಟ್ಟಡದಲ್ಲಿ ಕಳೆದ ಎರಡು ವರ್ಷಗಳಿಂದ ಕೇಂದ್ರವನ್ನು ನಡೆಸಲಾಗುತ್ತಿದೆ. ಸ್ವಂತ ಕಟ್ಟಡ ನಿರ್ಮಿಸಿಕೊಡಲು ಶಿಶು ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ವಹಿಸಿದೆ. ಕೊನೆಯ ಪಕ್ಷ ಸರ್ಕಾರಿ ಶಾಲೆಯ ಈ ಹೆಚ್ಚುವರಿ ಕಟ್ಟಡವನ್ನು ಅಂಗನವಾಡಿ ಕೇಂದ್ರ ನಡೆಸಲು ಬಿಟ್ಟು ಕೊಟ್ಟರೆ ಉತ್ತಮ ಎನ್ನುವುದು ಅಂಗನವಾಡಿ ಮಕ್ಕಳ ಪೋಷಕರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT