ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯ ಶ್ರಮಿಕ ಶಿಕ್ಷಕ

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವರಿಗೆ ವಿದ್ಯಾರ್ಥಿಗಳೇ ದೇವರು. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿಯೇ ಇವರಿಗೆ ಸ್ವರ್ಗ ಸುಖ, ಆ ನಿಟ್ಟಿನಲ್ಲಿ ಇವರದ್ದು ಹಗಲಿರುಳೂ ಶ್ರಮ. ಇಂಥ ಒಬ್ಬ ಅಪರೂಪದ ಶಿಕ್ಷಕ ಕಾಣಸಿಗುವುದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸೂಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಗಂಡು ಮಕ್ಕಳ ಶಾಲೆಯಲ್ಲಿ. ಅವರೇ, ಅಶೋಕ ರಂಗಪ್ಪ ಉಂಡಿ.

ಇವರ ಕಾರ್ಯವೈಖರಿಗೆ ಮನಸೋಲದ ಮಕ್ಕಳಿಲ್ಲ, ಪಾಲಕರಿಲ್ಲ. ಅಧಿಕಾರಿಗಳಿಲ್ಲ. ಜನಪ್ರತಿನಿಧಿಗಳಿಲ್ಲ. ಅಷ್ಟೊಂದು ಅಚ್ಚುಕಟ್ಟಾದ ಸೇವೆ ಇವರದ್ದು. ಹಲವು ವಿದ್ಯಾರ್ಥಿಗಳು ಕಬ್ಬಿಣದ ಕಡಲೆಕಾಯಿ ಎಂದೇ ತಿಳಿದುಕೊಂಡಿರುವ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಸುಲಭದಲ್ಲಿ ತಿಳಿಸಿಕೊಡುವಲ್ಲಿ ಇವರದ್ದು ಎತ್ತಿದ ಕೈ. ಕಠಿಣ ವಿಷಯಗಳ ಬಗ್ಗೆಯೇ ಮಕ್ಕಳು ಹೆಚ್ಚು ಗಮನ ಹರಿಸಿ, ಆ ವಿಷಯಗಳ ಪಠ್ಯಗಳನ್ನು ಪ್ರೀತಿಸುವಂತೆ ಮಾಡುವಲ್ಲಿ ಇವರು ಮುಂದು.

ಪಠ್ಯಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಜೀವಂತ ಪ್ರಾಣಿಗಳನ್ನು ತಂದು ಬೋಧನೆ ಮಾಡಿ ವಿದ್ಯಾರ್ಥಿಗಳು ಅಧ್ಯಯನದ ಕಡೆ ವಿಶೇಷ ಆಸ್ಥೆ ವಹಿಸುವಂತೆ ಮಾಡುವುದು ಇವರ ವಿಶೇಷತೆ. ಅಶೋಕ ಅವರ ಪ್ರಯೋಗಶೀಲತೆಯಿಂದ ಸೂಡಿ ಗ್ರಾಮದ ವಿದ್ಯಾರ್ಥಿಗಳೆಲ್ಲ ಬಾಲ ವಿಜ್ಞಾನಿಗಳಾಗಿದ್ದಾರೆ! ತಾಲ್ಲೂಕು, ಜಿಲ್ಲೆ, ವಿಭಾಗ, ರಾಜ್ಯ ಮಟ್ಟದ ವಿಜ್ಞಾನ ಪರೀಕ್ಷೆ ಮತ್ತು ಪ್ರಯೋಗ, ವಸ್ತು ಪ್ರದರ್ಶನಗಳಲ್ಲಿ ಈ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದಾರೆ.

ಯಶಸ್ಸಿನ ಗುಟ್ಟೇನು?
ಹಾವು, ಚೇಳು, ತೋಳ, ಉಡಾ, ಕಪ್ಪೆ ಮುಂತಾದ ಪ್ರಾಣಿಗಳನ್ನು ಜೀವಂತವಾಗಿ ಹಿಡಿಯುವ ಕಲೆಯನ್ನು ಮಕ್ಕಳಿಗೆ ಇವರು ಕರಗತ ಮಾಡಿಸುತ್ತಾರೆ. ಪ್ರಾಣಿಗಳ ಮೇಲೆ ಮಕ್ಕಳಿಂದಲೇ ಪ್ರಯೋಗ ಮಾಡಿಸುತ್ತಾರೆ. ಇದರಿಂದ ಮಕ್ಕಳಿಗೆ ವಿಷಯಗಳ ಮೇಲೆ ಹೆಚ್ಚಿನ ಆಸಕ್ತಿ ಹುಟ್ಟುತ್ತದೆ. ಕಲಿಕೆ ಪರಿಣಾಮಕಾರಿಯಾಗಿ ಯಶಸ್ಸು ಕಾಣುತ್ತಿದೆ.

ಬಿಡುವಿನ ಸಮಯದಲ್ಲಿ ಯೋಗಾಸನ, ಪ್ರಾಣಾಯಾಮ, ಧ್ಯಾನ ಹಾಗೂ ಕ್ರೀಡೆಗಳನ್ನೂ ಬೋಧಿಸುತ್ತಾರೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸ್ವಂತ ಹಣವನ್ನು ನೀಡುವುದು ಕೂಡ ಇವರ ಇನ್ನೊಂದು ವಿಶೇಷ ಗುಣ. ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷವೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಉಂಡಿ ಅವರು, ವಿವಿಧ ವಿಜ್ಞಾನ ಸಂಸ್ಥೆಗಳು ಹಾಗೂ ಪ್ರತಿಷ್ಠಾನಗಳ ಮೂಲಕ ‘ವಿಜ್ಞಾನ ಜಾತ್ರೆ’ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಇದರಲ್ಲಿ ಶಾಲೆಯ 200 ವಿಜ್ಞಾನ ಮಾದರಿಗಳು ಹಾಗೂ ವಿವಿಧ ವಿಜ್ಞಾನ ಸಂಸ್ಥೆ, ಪ್ರತಿಷ್ಠಾನಗಳ 500 ವಿಜ್ಞಾನ ಮಾದರಿಗಳ ಪ್ರದರ್ಶನದ ಜತೆಗೆ ಶಾಲಾ ಮಕ್ಕಳೇ ವಿಜ್ಞಾನ ಮಾದರಿಗಳ ಕುರಿತು ವಿಶ್ಲೇಷಣೆ ಮಾಡುವುದು ವಿಶೇಷ. ಪ್ರತಿಫಲನ ಮತ್ತು ಪ್ರಸರಣ, ನೈಜ ಪ್ರಾಣಿಗಳ ದೇಹಗಳ ಭಾಗಗಳು, ವಿದ್ಯುತ್‌ಜನಕ, ಸೂಜಿರಂಧ್ರ, ಬಿಂಬಗ್ರಾಯಿ, ಪ್ರತಿಫಲನ ನಿಯಮಗಳು, ಹಗಲು ರಾತ್ರಿ, ಚಂದ್ರನ ಕಲೆಗಳು, ಕಾಂತದ ನಿಯಮಗಳು ಮುಂತಾದ ವಿಜ್ಞಾನ ಮಾದರಿಗಳು ವಿಜ್ಞಾನ ಜಾತ್ರೆಯಲ್ಲಿ ರಾರಾಜಿಸುತ್ತವೆ.

ಜಿಲ್ಲೆ ಮಾತ್ರವಲ್ಲದೆ ನೆರೆಯ ಜಿಲ್ಲೆಯ ಶಿಕ್ಷಕ ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಉಂಡಿ ಅಚ್ಚುಮೆಚ್ಚಿನ ಶಿಕ್ಷಕ. ಶಿಕ್ಷಕ ಅಶೋಕ ಉಂಡಿ ಅವರ ಪ್ರತಿಭೆಯನ್ನು ಗುರುತಿಸಿ ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಜಿಲ್ಲಾ ಸಂಶೋಧನಾ ಸಲಹಾ ಸಮಿತಿಯ ಸದಸ್ಯರನ್ನಾಗಿ ಹಾಗೂ ‘ವಿಜ್ಞಾನ ಪಾರ್ಕ್’ ಸಮಿತಿಯ ಸದಸ್ಯರನ್ನಾಗಿ ಆಯ್ಕೆಮಾಡಿರು­ವುದು ಇವರ ಕಾರ್ಯಕ್ಷಮತೆಗೆ ಸಾಕ್ಷಿ.

ವ್ಯವಸ್ಥಿತ ಪ್ರಯೋಗಾಲಯ
ಶಿಕ್ಷಣ ಇಲಾಖೆ ಸೂಕ್ತ ಪ್ರೋತ್ಸಾಹ ನೀಡದಿದ್ದರೂ ಮಕ್ಕಳ ಕಲಿಕೆಯ ಹಿತ ದೃಷ್ಟಿಯಿಂದ ಶಾಲೆಗೆ ದೇಣಿಗೆ ರೂಪದಲ್ಲಿ ನೀಡುವ ಹತ್ತಿಪ್ಪತ್ತು ರೂಪಾಯಿಗಳೊಂದಿಗೆ ಸ್ವಂತ ಹಣ  ಹಾಕಿ ಶಾಲೆಯಲ್ಲಿ ವ್ಯವಸ್ಥಿತ ಪ್ರಯೋಗಾಲಯವನ್ನು ನಿರ್ಮಿಸಿದ್ದಾರೆ. ಹಸಿರು, ಬಳವಡಕ, ಮಣ್ಣಮುಕ್ಕ, ನಾಗರಹಾವು, ಕಪ್ಪು ಮತ್ತು ಕೆಂಪು ಬಣ್ಣದ ಚೇಳುಗಳನ್ನು ಜೀವಂತವಾಗಿರಿಸಲಾಗಿದೆ. ಎತ್ತು, ಎಮ್ಮೆ, ಮೇಕೆ, ಬಾತಕೋಳಿಗಳ ಹೃದಯಗಳು, ಎತ್ತು ಮೇಕೆಯ ಯಕೃತ್ತುಗಳು, ಎತ್ತು, ಎಮ್ಮೆ ಮರಿಯ ಕಣ್ಣುಗಳು, ಎತ್ತು, ಆಡುಗಳ ಮೂತ್ರ ಜನಕಾಂಗಗಳನ್ನು ರಾಸಾಯನಿಕಗಳೊಂದಿಗೆ ಗಾಜಿನ ಡಬ್ಬಗಳಲ್ಲಿ ಸಂಗ್ರಹಿಸಿಡಲಾಗಿದೆ.

ಪರಿಣಾಮಕಾರಿ ಕಲಿಕೆಗೆ ನೆರವಾಗಲು ವಿವಿಧ ಪ್ರಾಣಿಗಳ ಆಯ್ದ ಭಾಗಗಳನ್ನು ರಾಸಾಯನಿಕಗಳನ್ನು ಬೆರೆಯಿಸಿ ಸಂಗ್ರಹಿಸಿಡಲಾಗಿದೆ. ಗಣಿತಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ಸಹ ಪ್ರಯೋಗಾಲಯ ಒಳಗೊಂಡಿದೆ. ಶಿಕ್ಷಕ ಉಂಡಿ ಅವರು ಸಿದ್ಧಗೊಳಿಸಿರುವ ವಿಜ್ಞಾನ ಪ್ರಯೋಗಾಲಯ ವೀಕ್ಷಿಸಲು ರಾಜ್ಯದ ಮೂಲೆ, ಮೂಲೆಗಳಿಂದ ವಿದ್ಯಾರ್ಥಿಗಳು, ವಿವಿಧ ಪ್ರತಿಷ್ಠಾನ ಸಂಸ್ಥೆಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಶಸ್ತಿ, ಪುರಸ್ಕಾರಗಳು
ಶಿಕ್ಷಕ ಉಂಡಿ ಅವರ ಸಾಧನೆಗೆ ಅಗಣಿತ ಸಂಖ್ಯೆಯ ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. 2003-–04ರಲ್ಲಿ ಸ್ಥಳದಲ್ಲಿಯೇ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಗದಗ ತಾಲ್ಲೂಕಿಗೆ ಪ್ರಥಮ. 2003-–04 ರಿಂದ 2010 ರವರೆಗೆ ಸ್ಥಳದಲ್ಲಿಯೇ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ. ಇದೇ ವಿಷಯಕ್ಕೆ ಸಂಬಂಧಿಸಿದಂತೆ 2007 ರಲ್ಲಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಪಠ್ಯಕ್ಕೆ ಮಾತ್ರ ತಮ್ಮ ಕಾರ್ಯಚಟುವಟಿಕೆಯನ್ನು ಮೀಸಲಾಗಿರಿಸದೆ, ಓಟ ಹಾಗೂ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚಿದ್ದಾರೆ. ಕಲಿಕಾ ಬೋಧನೋಪಕರಣಗಳ ತಯಾರಿಕೆ ಪ್ರದರ್ಶನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ತಂದುಕೊಟ್ಟು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಹೆಗ್ಗಳಿಕೆ ಈ ಶಿಕ್ಷಕರದ್ದು.
-ಚಂದ್ರಕಾಂತ ಬಾರಕೇರ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT